ಬೆಂಗಳೂರು, ಜ.13 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಹಾವಳಿ ಮತ್ತೆ ಹೆಚ್ಚಾಗಿದೆ. ಏಪ್ರಿಲ್- ಮೇ ತಿಂಗಳಿನಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ, ಸಂಕ್ರಾಂತಿ ನೆಪದ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು, ಅವರ ಹಿಂಬಾಲಕರು ತಮ್ಮ ಪ್ರಚಾರಕ್ಕಾಗಿ ಫ್ಲೆಕ್ಸ್, ಬ್ಯಾನರ್ ಕಂಡ ಕಂಡಲ್ಲಿ ಹಾಕಿ ಬೆಂಗಳೂರಿನ ಸೌಂದರ್ಯವನ್ನು ಹಾಳುಗೆಡುವುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಧಾನಿಯ ಕೇಂದ್ರ ಭಾಗದಲ್ಲಿ, ಮೆಜಿಸ್ಟಿಕ್, ರಾಜರಾಜೇಶ್ವರಿನಗರ, ಯಶವಂತಪುರ, ಮೈಸೂರು ರಸ್ತೆ, ಚಾಮರಾಜಪೇಟೆ, ಬಸವನಗುಡಿ, ಚಿಕ್ಕಪೇಟೆ, ಕೆ.ಆರ್.ಮಾರ್ಕೇಟ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಅನಧಿಕೃತ ಜಾಹೀರಾತು ಹಾವಳಿ ಹೆಚ್ಚಾಗಿದೆ. ಸಂಕ್ರಾಂತಿ ಹಬ್ಬದ ನೆಪದಲ್ಲಿ ರಾಜಕಾರಣಿಗಳು, ಅವರ ಹಿಂಬಾಲಕರು ವಾರ್ಡ್ ರಸ್ತೆ, ರಸ್ತೆಗಳಲ್ಲಿ, ಸರ್ಕಲ್ ಗಳಲ್ಲಿ ತಮ್ಮ ನೆಚ್ಚಿನ ನಾಯಕರು, ಪುಡಿ ಮುಖಂಡರುಗಳ ಫೋಟೊಗಳನ್ನು, ಬ್ಯಾನರ್, ಬಂಟಿಂಗ್ಸ್ ಗಳನ್ನು ಹಾಕಿ ಅಲ್ಲಿನ ಸ್ಥಳಗಳನ್ನು ಹಾಳುಗೆಡುವುತ್ತಿದ್ದಾರೆ. ಕೆಲವು ಕಡೆಗಳಲ್ಲಿ ರಸ್ತೆ ತಿರುವಿನ ಭಾಗದಲ್ಲೇ 20-30 ಅಡಿ ಎತ್ತರ ಕಟೌಟ್ ಹಾಕುವ ಕೆಟ್ಟ ಪರಿಪಾಠ ಮುಂದುವರೆದಿದೆ. ಇದು ಪಾದಚಾರಿಗಳು, ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯಿದೆ.
ಹೈಕೋರ್ಟ್ 2018ರಿಂದಲೂ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಸೇರಿದಂತೆ ಅನಧಿಕೃತವಾಗಿ ಜಾಹೀರಾತು ಹಾಕುವುದನ್ನು ನಿಷೇಧಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಪಾಲನೆ ಮಾಡುವಂತೆ ಹಲವು ಬಾರಿ ಬಿಬಿಎಂಪಿಗೆ ಹಾಗೂ ಅಲ್ಲಿನ ಅಧಿಕಾರಿಗಳಿಗೆ ಸಾಕಷ್ಟು ಎಚ್ಚರಿಕೆ, ಚಾಟಿ ಬೀಸಿದ್ದರೂ, ದಪ್ಪ ಚರ್ಮದ ಬಿಬಿಎಂಪಿ ಭ್ರಷ್ಟ, ಸೊಂಬೇರಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿ ಆ ಜಾಹೀರಾತುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಕೆಲವು ಕಡೆಗಳಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಮೀಸಲಾದ ವಾರ್ತಾ ಇಲಾಖೆಯ ಹೋರ್ಡಿಂಗ್ ಗಳ ಮೇಲೆಯೂ ಅನಧಿಕೃತ ಜಾಹೀರಾತುಗಳನ್ನು ಅವಳವಡಿಸಲಾಗುತ್ತಿದೆ. ಗೋಡೆ, ರಸ್ತೆ, ಮರ, ಕಾಂಪೌಂಡ್, ವೃತ್ತ ಎಲ್ಲವೂ ಆಯ್ತು. ಇದರ ಜೊತೆಗೆ ವಿಜಯನಗರ, ಗೋವಿಂದರಾಜ ನಗರ ಮತ್ತಿತರ ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಆಟೋಗಳ ಹಿಂಭಾಗ ಜಾಹೀರಾತು ಹಾಕಿಸುತ್ತಿದ್ದಾರೆ. ಇದಕ್ಕೆಲ್ಲ ಯಾರ ಅನುಮತಿಯಿದೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಬಿಬಿಎಂಪಿ ಜಾಹೀರಾತು ವಿಭಾಗ ಅಧಿಕಾರಿಗಳಿಗ್ಯಾಕೆ ಈ ಪಾಟಿ ಅಸಡ್ಡೆ? :
ನಗರದಲ್ಲಿ ಅನಧಿಕೃತ ಜಾಹೀರಾತು ತೆರವು ಸಂಬಂಧ ಬಿಬಿಎಂಪಿಯು ವಲಯವಾರು ಎಷ್ಟು ಜಾಹೀರಾತುಗಳನ್ನು ತೆರವುಗೊಳಿಸಿದೆ? ಎಷ್ಟು ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ ಕ್ರಮ ಕೈಗೊಂಡಿದೆ? ಹಾಗೂ ಕಾನೂನು ಉಲ್ಲಂಘಿಸಿದವರಿಗೆ ಎಷ್ಟು ದಂಡ ವಿಧಿಸಲಾಗಿದೆ? ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ (Assistant Commissioner) ಶ್ರೀಧರ್ ಮೂರ್ತಿಯವರನ್ನು ಬೆಂಗಳೂರು ವೈರ್ ಪ್ರಶ್ನಿಸಿದಾಗ ಅವರು, ನಾನು ಯಾವ ಮಾಹಿತಿಯನ್ನು ಕೊಡುವುದಿಲ್ಲ. ಮಾಹಿತಿ ಬೇಕಿದ್ದರೆ ಹಿರಿಯ ಅಧಿಕಾರಿಗಳನ್ನು ಕೇಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಬಿಎಂಪಿಯಲ್ಲಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರ ಹುದ್ದೆಯ ಮಾಹಿತಿ ಅಧಿಕಾರಿ ಹುದ್ದೆ. ಅಲ್ಲದೆ ಅದೊಂದು ಗೆಜೆಟೆಡ್ ಪೋಸ್ಟ್. ಅನಧಿಕೃತ ಜಾಹೀರಾತು ಅಳವಡಿಕೆ ವಿಚಾರ ಸಾಮಾನ್ಯ ಜನರ ಮೇಲೆ, ನಗರದ ಸೌಂದರ್ಯದ ಮೇಲೆ ಹಾಗೂ ಅದಕ್ಕಿಂತ ಹೆಚ್ಚಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ರಮುಖ ವಿಚಾರ. ಈ ವಿಚಾರದ ಕುರಿತಂತೆ ಸಾರ್ವಜನಿಕ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುವ ಕೆಲಸವನ್ನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ನಿರ್ವಹಿಸಲಿಲ್ಲ ಅಂದರೆ ಹೇಗೆ? ಇದು ಹೋಗಲಿ, ಜಾಹೀರಾತು ವಿಭಾಗದ ವಿಶೇಷ ಆಯುಕ್ತರಾದ ದೀಪಕ್ ಅವರಿಗೂ ಕರೆ ಮಾಡಿದಾಗ ಕನಿಷ್ಠ ಫೋನ್ ಎತ್ತುವುದಿರಲಿ, ಮಾಧ್ಯಮಗಳು ಕಳುಹಿಸಿದ ಸಂದೇಶಕ್ಕೂ ಪ್ರತಿಕ್ರಿಯೆ ಕೊಡಲಿಲ್ಲ.
ಹೈಕೋರ್ಟ್ ನಲ್ಲಿದೆ ನ್ಯಾಯಂಗ ನಿಂದನೆ ಅರ್ಜಿ ಪ್ರಕರಣ :
ಕಳೆದ ವರ್ಷದ ನವೆಂಬರ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ, ನಗರದಲ್ಲಿ ಅನಧಿಕೃತ ಜಾಹೀರಾತು ಹಾವಳಿ ತಡೆಗಟ್ಟುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿದ್ದರು. ಈ ಅರ್ಜಿಯು ಹೈಕೋರ್ಟ್ ನಲ್ಲಿ ಇನ್ನು ವಿಚಾರಣೆ ಹಂತದಲ್ಲಿದೆ. ಹೀಗಿದ್ದರೂ ಪಾಲಿಕೆಯ ಜಾಹೀರಾತು ವಿಭಾಗದ ಅಧಿಕಾರಿಗಳಾಗಲಿ, ವಾರ್ಡ್ ಮಟ್ಟದಲ್ಲಿ ಎಇಇ, ಕಂದಾಯ ಅಧಿಕಾರಿಗಳಾಗಲಿ ತಲೆ ಕೆಡೆಸಿಕೊಳ್ಳುತ್ತಿಲ್ಲ. ಪಾಲಿಕೆಯಲ್ಲಿ ಪ್ರತಿ ವಲಯಕ್ಕೊಬ್ಬರು ವಿಶೇಷ ಆಯುಕ್ತರು ನೇಮಿಸಿದ್ದರೂ, ಅವರ ಗಮನಕ್ಕೆ ಅನಧಿಕೃತ ಜಾಹೀರಾತು ಅಳವಡಿಕೆ ವಿಚಾರ ಬಂದಿದ್ದರೂ ಡೋಂಟ್ ಕೇರ್ ಮನಸ್ಥಿತಿಯಲ್ಲಿದ್ದಾರೆ ಎಂದು ನಾಗರೀಕರು ದೂರುತ್ತಿದ್ದಾರೆ.
ರಸ್ತೆ ವಿಭಜಕದಲ್ಲೂ ಅಪಾಯಕಾರಿ ಫ್ಲೆಕ್ಸ್ ಅಳವಡಿಕೆ ನಿಂತಿಲ್ಲ :
ಹಲವು ಕಡೆಗಳಲ್ಲಿ ರಸ್ತೆ ವಿಭಜಕಗಳ ಮಧ್ಯೆ ಅಪಾಯಕಾರಿಯಾಗಿ ಫ್ಲೆಕ್ಸ್ ಅಳವಡಿಕೆ ಮಾಡುತ್ತಿರುವುದು, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಚಾಲಕರ ಪಾಲಿಗೆ ಪ್ರಾಣಕ್ಕೆ ಸಂಚಕಾರ ತರುವಂತಿದೆ. ನಗರದಲ್ಲಿ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವ ಮುನ್ನ ಬಿಬಿಎಂಪಿ ಸಿಬ್ಬಂದಿ ಇಂತಹ ಫ್ಲೆಕ್ಸ್ ಗಳನ್ನು ತ್ವರಿತಗತಿಯಲ್ಲಿ ತೆರವು ಮಾಡಬೇಕಾದ ಅವಶ್ಯಕತೆಯಿದೆ.
ಏಪ್ರಿಲ್- ಮೇ ತಿಂಗಳಿನಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿರುವ ಹಾಲಿ, ಮಾಜಿ ಶಾಸಕರು, ಹೊಸ ಟಿಕೆಟ್ ಆಕಾಂಕ್ಷಿಗಳು ತಮ್ಮ ಹಿಂದಿನ ಸಾಧನೆಗಳನ್ನು ಬಿಂಬಿಸುವ, ತಮ್ಮ ಹಿರಿಯ ನಾಯಕರಿಗೆ ಶುಭ ಕೋರುವ, ಹುಟ್ಟು ಹಬ್ಬದ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕುವ ಚಾಳಿ ಮತ್ತೆ ವ್ಯಾಪಕವಾಗಿ ಎಲ್ಲೆಡೆ ಹೆಚ್ಚಾಗಿದೆ.
ಮಾಧ್ಯಮಗಳು, ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ರೀತಿಯಲ್ಲಿ ಅನಧಿಕೃತ ಜಾಹೀರಾತುಗಳ ಬಗ್ಗೆ ಆಕ್ಷೇಪ, ಟೀಕೆ ವ್ಯಕ್ತಪಡಿಸಿದಾಗ, ಕಣ್ಣೊರೆಸುವಂತೆ ಪಾಲಿಕೆ ಅಧಿಕಾರಿಗಳು ಬಿರುಸಿನಿಂದ ನಾಲ್ಕೈದು ದಿನ ಅನಧಿಕೃತ ಅಡ್ವಟೈಸ್ ಮೆಂಟ್ ಗಳನ್ನು ತೆಗೆದು ಹಾಕುವ ಕೆಲಸ ಮಾಡಿ, ಆನಂತರ ಯಥಾ ಪ್ರಕಾರ ಸುಮ್ಮನಾಗುತ್ತಾರೆ.
‘ನಗರದ ಸೌಂದರ್ಯ ಹಾಗೂ ಪರಿಸರಕ್ಕೆ ಮಾರಕವಾಗಿರುವ ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಿಸಿ ಹೈಕೋರ್ಟ್ ಆದೇಶವನ್ನು ಜಾರಿಗೆ ತರುವ ಉದ್ದೇಶ ಬಿಬಿಎಂಪಿಗೆ ಇದ್ದಂತಿಲ್ಲ. ಸ್ಥಳೀಯ ಮಟ್ಟದಲ್ಲಿ ರಾಜಕಾರಣಿಗಳಿಂದ ಶಿಫಾರಸ್ಸು, ಅವರ ಒತ್ತಡದ ಕಾರಣದಿಂದ ವರ್ಗಾವಣೆಯಾಗಿ ಆಯಕಟ್ಟಿನ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು, ಅಲ್ಲಿನ ಜನಪ್ರತಿನಿಧಿಗಳು, ಅವರ ಹಿಂಬಾಲಕರು ಸಾರ್ವಜನಿಕ ಸ್ಥಳದಲ್ಲಿ ಹಾಕಿದ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಕಟೌಟ್ ಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುವುದಿಲ್ಲ. ಹೈಕೋರ್ಟ್ ಆದೇಶವಿದ್ದಾಗ್ಯೂ, ರಾಜಕಾರಣಿಗಳು ಮತ್ತವರ ಪಟಾಲಮ್ ಕಾನೂನು ಬಾಹೀರವಾಗಿ ಹೀಗೆ ಜಾಹೀರಾತು ಅಳವಡಿಸಿ ಪ್ರಚಾರ ತೆಗೆದುಕೊಳ್ಳುವುದು ತಪ್ಪು. ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಿಸುವಲ್ಲಿ ವಿಫಲರಾದ ಜಾಹೀರಾತು ವಿಭಾಗದ ಹೊಣೆ ಹೊತ್ತ ಬೇಜವಾಬ್ದಾರಿ ಅಧಿಕಾರಿಗಳನ್ನು ಪಾಲಿಕೆ ಬೇರೆಡೆ ವರ್ಗಾವಣೆ ಮಾಡಿದರೆ ಉತ್ತಮ.’
ಸಾಯಿದತ್ತ, ಸಾಮಾಜಿಕ ಕಾರ್ಯಕರ್ತರು