ಬೆಂಗಳೂರು, ಜ.13 www.bengaluruwire.com : ವಿಧಾನಸೌಧದ ಮುಂಭಾಗ ಮಹಾನ್ ಮಾನವತವಾದಿ, ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಮತ್ತು ಬೆಂಗಳೂರು ಮಹಾನಗರ ನಿರ್ಮಾತೃ ಶ್ರೀ ಕೆಂಪೇಗೌಡರವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಸಂಬಂಧ ಶುಕ್ರವಾರ ನಡೆದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ನಾಡಿನಲ್ಲಿ ಹುಟ್ಟಿ, ನಾಡಿನಲ್ಲಿ ದೊಡ್ಡ ಕ್ರಾಂತಿ ಮಾಡಿದ ಸಾಮಾಜಿಕ, ಆರ್ಥಿಕ, ವೈಚಾರಿಕ ಕ್ರಾಂತಿಯನ್ನು 12ನೇ ಶತಮಾನದಲ್ಲಿ ಹೊತ್ತಿಸಿ ಇಡೀ ಜಗತ್ತಿಗೇ ಒಂದು ದರ್ಶನವನ್ನು ನೀಡಿದ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಹಾಗೂ ಬೆಂಗಳೂರು ನಾಡನ್ನು ಕಟ್ಟಿದ ನಾಯಕರು, ಜನಹಿತಕ್ಕಾಗಿ ಕೆರೆಕಟ್ಟೆ, ಊರುಕೇರಿ, ಮಾರುಕಟ್ಟೆಗಳನ್ನು ಕಟ್ಟಿ ಮಾದರಿ ಆಡಳಿತ ನಡೆಸಿದ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಇಂದು ವಿಧಾನಸೌಧದ ಮುಂದೆ ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದಂತೆ ಇಂದು ಈ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿದ್ದೇವೆ. ಈ ಇಬ್ಬರು ಮಹಾನ್ ಪುರುಷರ ಆಧ್ಯಾತ್ಮಿಕ ಚಿಂತನೆ, ಆಡಳಿತ ಈ ಶಕ್ತಿಸೌಧದ ಮೂಲಕ ಇಡೀ ನಾಡಿಗೆ ಹರಿಯಬೇಕು. ಈ ಮೂಲಕ ಕರ್ನಾಟಕ ಸಮಗ್ರ, ಸಾಮರಸ್ಯ ಇರುವಂತಹ, ಇಡೀ ಭಾರತದಲ್ಲಿ ಕರ್ನಾಟಕ ಶ್ರೇಷ್ಠವಾದ ರಾಜ್ಯವಾಗಬೇಕು. ಈ ಮಹಾತ್ಮರ ಪ್ರೇರಣೆ, ವಿಚಾರಗಳು ವಿಧಾನಸೌಧದಲ್ಲಿ ನೆಲೆಸಲಿ. ಕೇವಲ ಒಂದು ಒಂದೂವರೆ ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ನೆರವೇರಿಸಲಿದ್ದೇವೆ ಎಂದು ಹೇಳಿದರು.
ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ, ಶ್ರೀ ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರುಗಳಾದ ಆರ್.ಅಶೋಕ್, ಎಸ್.ಟಿ ಸೋಮಶೇಖರ್, ಗೋವಿಂದ ಕಾರಜೋಳಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಭಾಗವಹಿಸಿದ್ದರು.