ಬೆಂಗಳೂರು, ಜ.12 www.bengaluruwire.com : ನಗರದಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶ ವಿದೇಶಿ ಪ್ರಾಣಿ ಪಕ್ಷಿಗಳನ್ನು ಬುಧವಾರ ರಕ್ಷಣೆ ಮಾಡಲಾಗಿದೆ.
ಸಾಕು ಪ್ರಾಣಿಗಳ ಮಾರಾಟಗಾರರಿಗೆ ಕಡ್ಡಾಯವಾಗಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ (KAWB)ಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ನಗರದ ಬಹುತೇಕ ಸಾಕು ಪ್ರಾಣಿ ಮಾರಾಟಗಾರರು ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಸಂಸ್ಥೆಗಳು ಪಶುಸಂಗೋಪನೆ ಇಲಾಖೆ ಹಾಗೂ ಬಿಬಿಎಂಪಿ ಪಶುಪಾಲನಾ ವಿಭಾಗಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಬಿಬಿಎಂಪಿಯ ಪಶುಪಾಲನಾ ವಿಭಾಗ, ಪಶುಸಂಗೋಪನೆ ಇಲಾಖೆ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿಗಳ ನೇತೃತ್ವದಲ್ಲಿ ಏಕಕಾಲಕ್ಕೆ ನಗರದ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಸಾಕು ಪ್ರಾಣಿ ಹಾಗೂ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ನಡೆಸಲು ಶಿವಾಜಿನಗರ, ಜೆ.ಪಿ.ನಗರ, ಪುಟ್ಟೇನಹಳ್ಳಿ, ಬಸವನಗುಡಿ ಮತ್ತಿತರ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಏಳು ತಂಡಗಳನ್ನು ರಚನೆ ಮಾಡಿಕೊಂಡು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ 16 ಜಾತಿಯ 1,344 ದೇಶೀಯ ಮತ್ತು ವಿದೇಶಿ ಪ್ರಾಣಿ, ಪಕ್ಷಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಾಯಿ ಸಾಕಣೆ ಮಾರುಕಟ್ಟೆ ನಿಯಮಗಳು 2017, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯಿದೆ 1960 ಹಾಗೂ ಪೆಟ್ ಶಾಪ್ ನಿಯಮಗಳು 2018 ರ ಅಡಿಯಲ್ಲಿ ರೂಪಿಸಲಾದ ವಿವಿಧ ನಿಯಮಗಳನ್ನು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದಿದೆ. ದಾಳಿಯ ಸಮಯದಲ್ಲಿ ಬಹುತೇಕ ಅಂಗಡಿಗಳಲ್ಲಿ ಅನೇಕ ಪಕ್ಷಿಗಳನ್ನು ಒಂದೇ ಪಂಜರದಲ್ಲಿ ಇರಿಸಿರುವುದು, ಪಕ್ಷಿಗಳು ಮತ್ತು ಪ್ರಾಣಿಗಳ ಸ್ಥಳ ಮತ್ತು ತಾಜಾ ಗಾಳಿಗಾಗಿ ಅವುಗಳು ಕಷ್ಟಪಡುತ್ತಿರುವುದು ಕಂಡುಬಂದಿದೆ. ಹಲವು ಕಡೆಗಳಲ್ಲಿ ಸೂಕ್ತ ರೀತಿ ಆ ಮೂಕ ಪ್ರಾಣಿ- ಪಕ್ಷಿಗಳಿಗೆ ಆಹಾರ ಪೂರೈಕೆ ಇಲ್ಲದಿರುವುದು, ಶುಚಿತ್ವ ಇಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ ಆಯುಕ್ತೆ ಅಶ್ವತಿ ತಿಳಿಸಿದ್ದಾರೆ.
“ಸಾರ್ವಜನಿಕರು ಅಂಗಡಿಗಳಿಗೆ ತೆರಳಿದಾಗ ಸಾಕುಪ್ರಾಣಿ ಮಾರಾಟಗಾರರ ಪರವಾನಗಿಯನ್ನು ಮೊದಲು ಪರಿಶೀಲಿಸಬೇಕು. ಸಾಕುಪ್ರಾಣಿಗಳ ಖರೀದಿಯ ನಿಯಮಗಳನ್ನು ಗಮನಿಸಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ನೋಂದಾಯಿತ ತಳಿಗಾರರು ಮತ್ತು ಸಾಕುಪ್ರಾಣಿ ಅಂಗಡಿಗಳಿಂದ ಮಾತ್ರ ಖರೀದಿ ಮಾಡುವಂತೆ ನಾವು ಒತ್ತಾಯಿಸುತ್ತೇವೆಂದು” ಅಶ್ವತಿ ತಿಳಿಸಿದ್ದಾರೆ.
ನಾಯಿ ಮರಿಗಳನ್ನು ಮಾರಾಟ ಮಾಡುವಾಗ ಕನಿಷ್ಠ 45 ದಿನಗಳಾದರೂ ತಾಯಿಯ ಬಳಿಯಿರಬೇಕು. ಆದರೆ, ಅನೇಕ ಅಂಗಡಿಗಳಲ್ಲಿ ನಾಯಿ ಮರಿಗಳು ತನ್ನ ತಾಯಿಯ ಹಾಲನ್ನು ಕುಡಿಯಲು ಬಿಡದೆ ಸಣ್ಣ ಮರಿಗಳನ್ನೇ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಕೆಲವೆಡೆ ಸೂಕ್ತ ವ್ಯವಸ್ಥೆ, ಆಹಾರ, ನೀರು ಇಲ್ಲದೆ ಪಕ್ಷಿಗಳು ಹಾಗೂ ನಾಯಿಗಳು ಸತ್ತಿರುವುದು, ಕೊಳೆತು ಬಿದ್ದಿರುವುದೂ ಕೂಡ ಕಂಡು ಬಂದಿತ್ತು. ಇನ್ನೂ ಕೆಲವೆಡೆ ಅಂಗಡಿ ಮಾಲೀಕರು ಪ್ರಾಣಿಗಳೂ ಗಾಯಗೊಂಡಿದ್ದರೂ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡದಿರುವುದು ಗಮನಕ್ಕೆ ಬಂದಿದೆ. ಹೀಗೆ ವಶಪಡಿಸಿಕೊಂಡ ಕೆಲವು ಜಾತಿಗಳ ಪಕ್ಷಿಗಳಲ್ಲಿ ಆಫ್ರಿಕನ್ ಗಿಳಿಗಳು, ಪಾರ್ಟ್ರಿಡ್ಜ್, ಲವ್ ಬರ್ಡ್ಸ್, ಫಿಂಚ್ಗಳು, ಟರ್ಕಿಗಳು, ಕಾಕಟಿಯಲ್ಗಳು, ಆಫ್ರಿಕನ್ ಕಾಗೆಗಳು ಮತ್ತು ಕೆಂಪು ಇಯರ್ಡ್ ಸ್ಲೈಡರ್ಗಳು ಸೇರಿವೆ.
ಪ್ರಾಣಿ ರಕ್ಷಣಾ ಗೃಹಕ್ಕೆ ಸಂರಕ್ಷಿಸಿದ ಜೀವಿಗಳ ಸ್ಥಳಾಂತರ :
ದೇಶೀಯ ಜಾತಿಗಳಲ್ಲಿ ಪಾರಿವಾಳಗಳು, ಮೊಲಗಳು, ಬಾತುಕೋಳಿಗಳು, ಹ್ಯಾಮ್ಗಳು, ನಾಯಿಗಳು, ಬೆಕ್ಕುಗಳು ಮತ್ತು ಇಲಿಗಳಿವೆ. ರಕ್ಷಿಸಿದ ಎಲ್ಲಾ ಪ್ರಾಣಿಗಳನ್ನು ಕಾನೂನಿನ ಪ್ರಕಾರ ಮಾನ್ಯತೆ ಪಡೆದ ಸೌಲಭ್ಯಗಳಿರುವ ಪ್ರಾಣಿ ರಕ್ಷಣಾ ಗೃಹದಲ್ಲಿ ಇರಿಸಲಾಗಿದೆ. ದೂರುಗಳಿದ್ದಲ್ಲಿ ಸಾರ್ವಜನಿಕರು 24×7 +91 82771 00200 ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಪಶುಸಂಗೋಪನೆಯ ಅಧಿಕೃತ ಟ್ವಿಟರ್ ಖಾತೆಗೆ ಟ್ವೀಟ್ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.