ಬೆಳಗಾವಿ, ಜ.11 www.bengaluruwire.com : ವಿಧಾನಸಭಾ ಚುನಾವಣೆಗೆ ತಮ್ಮ ಪ್ರಭಾವ, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್ ನಾಯಕರು (Congress leaders) ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ (BJP Governments) ವಿರುದ್ಧ ಪ್ರಜಾಧ್ವನಿ ಯಾತ್ರೆ (Prajadhvani Yatre) ಮೂಲಕ ಮತ್ತೊಂದು ಸುತ್ತಿನ ಹೋರಾಟವನ್ನು ಬುಧವಾರ ಇಲ್ಲಿಂದ ಆರಂಭಿಸಿದ್ದಾರೆ.
ಪ್ರಜಾಧ್ವನಿ ಯಾತ್ರೆ ಸಾಂಕೇತಿಕವಾಗಿ ಹಿರಿಯ ನಾಯಕರು ರಸ್ತೆಯಲ್ಲಿ ಪೊರಕೆಯಿಂದ ಕಸ ಗುಡಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಈ ಯಾತ್ರೆಗಾಗಿ ಎರಡು ಬಸ್ ಗಳು ಅಣಿಯಾಗಿದ್ದು ಕಾಂಗ್ರೆಸ್ ಹಿರಿಯ ನಾಯಕರು 21 ಜಿಲ್ಲೆಗಳಲ್ಲಿ ಸಂಚರಿಸಿ ಎರಡೂ ಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದಿಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬೆಳಗಾವಿ ವೀರಸೌಧದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮೊಂದಿಗೆ ಪವಿತ್ರ ಪಂಪಾ ಸರೋವರದ ಜಲವನ್ನು ತೆಗೆದುಕೊಂಡು ಯಾತ್ರೆಯನ್ನು ನಾಯಕರು ಆರಂಭಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಬೆಳಗಾವಿಯಲ್ಲಿ ಪಂಪ ಸರೋವರದಿಂದ, ಈ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಕೆಟ್ಟ ಸರ್ಕಾರವೆಂಬ ಕೊಳೆಯನ್ನು ತೊಡೆದು ಹಾಕಲು ಸಾಂಕೇತಿಕವಾಗಿ ಇಲ್ಲಿನ ಬಾವಿಯ ಜಲವನ್ನು ಸಾಂಕೇತಿಕವಾಗಿ ತೆಗೆದು ಈ ರಾಜ್ಯಸರ್ಕಾರದಲ್ಲಿನ ಭ್ರಷ್ಟಾಚಾರ ತೊಳೆಯಲು, ಕೆಟ್ಟ ಆಡಳಿತವನ್ನು ಹೋಗಲಾಡಿಸಲು ಹೊರಟಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿಶೀಲ ಕರ್ನಾಟಕವನ್ನು ನಿರ್ಮಾಣ ಮಾಡುತ್ತೇವೆ ಎಂದು ರಾಜ್ಯದ ಜನರಿಗೆ ನಮ್ಮ ಬಗ್ಗೆ ವಿಶ್ವಾಸವಿದೆ’ ಎಂದು ಹೇಳಿದರು.
‘ಇಂದು ಆರಂಭವಾಗಿರುವ ಯಾತ್ರೆ ಈ ತಿಂಗಳು ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸ ಮಾಡಲಿದೆ. ನಂತರ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ. ಪ್ರಮುಖ ನಾಯಕರು ಬಸ್ ನಲ್ಲಿ ತೆರಳುತ್ತೇವೆ. ಎಲ್ಲಾ ನಾಯಕರು ಬಸ್ ನಲ್ಲಿ ಸಾಗಲು ಸಾಧ್ಯವಿಲ್ಲ. ಆಯಾ ಸ್ಥಳಕ್ಕೆ ಹೋದಾಗ ಕೆಲವು ನಾಯಕರು ಉಳಿದ ನಾಯಕರೊಂದಿಗೆ ಸೇರಿಕೊಳ್ಳುತ್ತಾರೆ. 20 ಜಿಲ್ಲೆಗಳಲ್ಲೂ ನಾನು, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್, ಆ ಭಾಗದ ಶಾಸಕರು ಇರುತ್ತಾರೆ. ಕೆಲವರು ಕಾರ್ಯಕ್ರಮದ ಆಯೋಜನೆಯಲ್ಲಿ ನಿರತರಾಗುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸಬರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಹೊಸ ನೀರು, ಹೊಸ ಚಿಗುರು ಬಗ್ಗೆ ಕಾಂಗ್ರೆಸ್ ಸದಾ ಆಲೋಚನೆ ಮಾಡುತ್ತಿರುತ್ತದೆ. ನಮ್ಮ ಪ್ರಜಾಧ್ವನಿ ಯಾತ್ರೆಯ ಮೂಲಕ ಜನರ ಬದುಕಿನಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ತಿಳಿಸಲಿದೆ’ ಎಂದು ಡಿ.ಕೆ.ಶಿವಕುಮಾರ್ ಎಂದರು.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಭಾರತೀಯ ಜನತಾ ಪಕ್ಷದ ಸರ್ಕಾರದ ವಿರುದ್ಧ ಜನರ ಮುಂದೆ ಆರೋಪ ಪಟ್ಟಿಯನ್ನು ಮುಂದಿಡುತ್ತಿದ್ದೇವೆ. ಏಕೆಂದರೆ ಇಡೀ ಸರ್ಕಾರ ದುರಾಡಳಿತ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅವರನ್ನು ಪ್ರಶ್ನೆ ಮಾಡಿದರೆ, ಅವರ ಮೇಲೆ ಮೊಕದ್ದಮೆ ಹಾಕುವುದು, ಹೆದರಿಸುವ ಕೆಲಸ, ಬಂಧಿಸುತ್ತಿದ್ದಾರೆ. ಇವರ ದ್ವೇಷದ ರಾಜಕಾರಣದಿಂದ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಹಿಂದುಳಿದವರು, ರೈತರು ಸೇರಿದಂತೆ ಹಲವರು ಆತಂಕದಿಂದ ಬದುಕುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಬೆಳಗಾವಿಯಿಂದ ಇವರ ಪಾಪದ ಕೊಳೆಯನ್ನು, ಭ್ರಷ್ಟಾಚಾರವನ್ನು ತೊಲಗಿಸಲು ನಾವು ಪವಿತ್ರ ಜಲ ಹಾಕಿ ಪೊರಕೆ ಹಿಡಿದು ತೊಳೆದು ಸಾಂಕೇತಿಕವಾಗಿ ಹೋರಾಟ ಆರಂಭಿಸಿದ್ದೇವೆ’ ಎಂದು ತಿಳಿಸಿದರು.
‘ಬೆಳಗಾವಿ ಒಂದು ಐತಿಹಾಸಿಕ ಸ್ಥಳ. ಮಹಾತ್ಮಾ ಗಾಂಧೀಜಿ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಆ ಜಾಗದಲ್ಲೇ ಇವತ್ತು ನಾವು ಪ್ರಜಾಧ್ವನಿ ಯಾತ್ರೆಯನ್ನು ಆರಂಭಿಸುತ್ತಿದ್ದೇವೆ. ತಾವು, ಡಿಕೆ.ಶಿವಕುಮಾರ್, ಸುರ್ಜೇವಾಲಾ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಆರ್.ವಿ.ದೇಶಾಪಾಂಡೆಯವರು ಈ ಐತಿಹಾಸಿಕ ಸ್ಥಳದಿಂದ ಯಾತ್ರೆ ಆರಂಭಿಸುತ್ತಿದ್ದೇವೆ‘ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ವಿವರಿಸಿದರು.
ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ನಂತರ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸಿನಿಂದಲೇ ಪಾಲ್ಗೊಂಡಿದ್ದಾರೆ.