ವಾರಣಾಸಿ, ಜ.11 www.bengaluruwire.com : ವಿಶ್ವದ ಅತಿ ಉದ್ದದ ನದಿ ವಿಹಾರ ಎಂಬ ಖ್ಯಾತಿಗೆ ಪಾತ್ರವಾಗಿರುವ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ (Ganga Vilas Luxury Cruise) ಮಂಗಳವಾರ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ರಾಮನಗರ ಬಂದರನ್ನು ತಲುಪಿದೆ. ವರದಿಗಳ ಪ್ರಕಾರ, ಈ ಕ್ರೂಸ್ ಡಿಸೆಂಬರ್ 22 ರಂದು ಕೋಲ್ಕತ್ತಾದಿಂದ ಹೊರಟು, ಜ.7 ರಂದು ವಾರಣಾಸಿಗೆ ತಲುಪಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ತಡವಾಗಿ ಇಲ್ಲಿಗೆ ಬಂದು ಸೇರಿದೆ.
‘ಪ್ರಪಂಚದ ಕೆಲವು ಪ್ರಬಲ ನದಿಗಳ ಮೇಲೆ ಭಾರತದ ಪ್ರಾಚೀನ ಪರಂಪರೆಯ ಮೂಲಕ ಸಾಗುವ ‘ಎಂವಿ ಗಂಗಾ ವಿಲಾಸ್ ಕ್ರೂಸ್ ಯಾತ್ರೆ’ಗೆ ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.’ ಈ ಕುರಿತಂತೆ ಗಂಗಾ ವಿಲಾಸ್ ಕ್ರೂಸ್ ಯಾತ್ರೆಯ ಬಗ್ಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರಬಾನಂದ ಸೋನುವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಈ ಟ್ವಿಟರನ್ನು ಬುಧವಾರ ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭಾರತದ ವೈವಿಧ್ಯತೆಯ ಸುಂದರ ಅಂಶಗಳನ್ನು ಅನ್ವೇಷಿಸಲು ಒಂದು ಅನನ್ಯ ಅವಕಾಶವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಗಂಗಾಲ ವಿಲಾಸ ಕ್ರೂಸ್ ಪ್ರಯಾಣಿಸಲಿದೆ. ಕ್ರೂಸ್ 18 ಸೂಟ್‌ಗಳೊಂದಿಗೆ 80 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಗಂಗಾ ವಿಲಾಸ್ ಕ್ರೂಸ್ ಪ್ರಯಾಣದ ಬಗ್ಗೆ :
ಈ ಕ್ರೂಸ್ 51 ದಿನಗಳ ಕಾಲ ಸಾಹಸಮಯ ಪ್ರಯಾಣವನ್ನು ಬೆಳಸಲಿದೆ ಮತ್ತು 15 ದಿನಗಳ ಕಾಲ ಬಾಂಗ್ಲಾದೇಶದ ಮೂಲಕ ಹಾದುಹೋಗುತ್ತದೆ. ಇದರ ನಂತರ ಅಸ್ಸಾಂನ ಬ್ರಹ್ಮಪುತ್ರ ನದಿಯ ಮೂಲಕ ದಿಬ್ರುಗಢವನ್ನು ತಲುಪಲಿದೆ. ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ ಮೂಲಕ 3,200 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ವರದಿಗಳ ಪ್ರಕಾರ, ಇದು ಐಷಾರಾಮಿ ಟ್ರಿಪಲ್ ಡೆಕ್ (ಮೂರು ಅಂತಸ್ತುಗಳನ್ನು ಹೊಂದಿರುವ) ಕ್ರೂಸ್ ವಾರಣಾಸಿಯಿಂದ ಅಸ್ಸಾಂನ ದಿಬ್ರುಗಢ್‌ಗೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಮತ್ತು ಬಾಂಗ್ಲಾದೇಶದ ಒಟ್ಟು 27 ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ. ಈ ಯಾತ್ರೆಯಲ್ಲಿ ಗಂಗಾ, ಭಾಗೀರಥಿ, ಹೂಗ್ಲಿ, ಮೇಘನ, ಜಮುನ, ಪದ್ಮ ಹಾಗೂ ಬ್ರಹ್ಮಪುತ್ರ ಪ್ರಮುಖ ನದಿಗಳಲ್ಲಿಯೂ ಕ್ರೂಸ್ ಸಂಚರಿಸಲಿದೆ.
50 ಪ್ರವಾಸಿ ತಾಣಗಳಿಗೆ ಕ್ರೂಸ್ ಭೇಟಿ :
ಬಗ್ಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಇಲಾಖೆಯ ಮಾಹಿತಿ ಪ್ರಕಾರ, ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ, ಅಸ್ಸಾಂನ ಗುವಾಹಟಿ, ಬಿಹಾರದ ಪಾಟ್ನಾ ಮತ್ತು ಜಾರ್ಖಂಡ್‌ನ ಸಾಹಿಬ್‌ಗಂಜ್‌ನಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಈ ಯಾತ್ರೆಯಲ್ಲಿ ಪ್ಲಾನ್ ಮಾಡಲಾಗಿದೆ.
ಗಂಗಾ ವಿಲಾಸ್ ವಿಶ್ವದ ಅತಿ ಉದ್ದದ ನದಿ ವಿಹಾರ ಎಂಬುದನ್ನು ಗಮನಿಸಬೇಕು. ಈ ಗಂಗವಿಲಾಸ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲ ಮತ್ತು 1.4 ಮೀಟರ್ ಡ್ರಾಫ್ಟ್ನೊಂದಿಗೆ ಆರಾಮವಾಗಿ ನದಿಯಲ್ಲಿ ಸಾಗುತ್ತದೆ. ಈ ಹಡಗಿನಲ್ಲಿ ಒಟ್ಟು ಮೂರು ಡೆಕ್‌ಗಳು ಮತ್ತು 18 ಸೂಟ್‌ಗಳನ್ನು ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ಈ ಕ್ರೂಸ್ ಹೊಂದಿದೆ.