ಬೆಂಗಳೂರು, ಜ.10 www.bengaluruwire.com : ರಾಜಧಾನಿಯಲ್ಲಿ ಬೆಳಗ್ಗೆ ಬೆಳಗ್ಗೆಯೇ ನಡೆಯಬಾರದ ಅನಾಹುತವೊಂದು ನಡೆದು ಹೋಗಿದೆ. ನಿರ್ಮಾಣ ಹಂತದ ನಮ್ಮ ಮೆಟ್ರೋ ಕಾಮಗಾರಿಯ ಪಿಲ್ಲರ್‌ನ ಕಬ್ಬಿಣದ ರಾಡುಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದ (Bengaluru Metro pillar falled On Two Wheeler) ಪರಿಣಾಮ ಮಹಿಳೆ ಮತ್ತು ಆಕೆಯ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ತೇಜಸ್ವಿನಿ (28) ಮತ್ತು ಒಂದೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ ದುರ್ದೈವಿಗಳು. ಅದೃಷ್ಟವಶಾತ್ ಗಂಭೀರ ಸ್ಥಿತಿಯಲ್ಲಿರುವ ಮತ್ತೊಂದು ಸಣ್ಣ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್‌ನ ಲೋಹದ ರಾಡ್ಗಳು ರಸ್ತೆ ಮೇಲೆ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿದೆ.
ಕಲ್ಯಾಣ್ ನಗರದಿಂದ ಎಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ಅಂದರೆ ಕೆ.ಆರ್ ಪುರಂನಿಂದ ಹೆಬ್ಬಾಳದ ನಡುವೆ ಮೆಟ್ರೊ ಕಾಮಗಾರಿ ನಡೆಯುತ್ತಿರುವ (ಪಿಲ್ಲರ್ ಸಂಖ್ಯೆ :218) ಕಡೆ ಪಿಲ್ಲರ್ ನಿರ್ಮಾಣಕ್ಕೆ ಕಟ್ಟಿದ್ದ ಕಬ್ಬಿಣದ ರಾಡ್ ಗಳು ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಲೋಹಿತ್ ಕುಮಾರ್, ಆತನ ಪತ್ನಿ ತೇಜಸ್ವಿನಿ ಹಾಗೂ ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುರಾದೃಷ್ಟವಶಾತ್ ತಾಯಿ ಮತ್ತು ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಧಾರವಾಡ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್, ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಮಕ್ಕಳ ಜೊತೆ ನಾಗವಾರದಲ್ಲಿ ನೆಲೆಸಿದ್ದರು. ಲೋಹಿತ್ ಅವರು ತಮ್ಮ ಪತ್ನಿ ಕೆಲಸ ಮಾಡುತ್ತಿದ್ದ ಮಾನ್ಯತಾ ಟೆಕ್ ಪಾರ್ಕ್ ಮೋಟೋರೋಲಾ ಕಂಪನಿಗೆ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್ಗೆ ಬಿಡಲು ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.
ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಏಕಾ ಏಕಿಯಾಗಿ ಬಿದ್ದಿದ್ದು ಎಲ್ಲರಿಗೂ ಗಾಯಗಳಾಗಿದ್ದವು. ಗಾಯಾಳುಗಳ ಪೈಕಿ ತೇಜಸ್ವಿನಿ ಮತ್ತು ಓರ್ವ ಪುತ್ರ ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ಇವರಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು.
ಮೃತರ ಕುಟುಂಬಕ್ಕೆ ಮೆಟ್ರೊ 20 ಲಕ್ಷ ರೂ. ಪರಿಹಾರ :
ಇನ್ನೊಂದೆಡೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಸ್ಥಳಕ್ಕೆ ಭೇಟಿ ನೀಡಿ, ದುರ್ಘಟನೆಯಲ್ಲಿ ಮೃತಪಟ್ಟ ಮಹಿಳೆ ಹಾಗೂ ಅವರ ಮಗನ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ಘೋಷಿಸಿದರು. ಅಲ್ಲದೆ ಲೋಹಿತ್ ಕುಮಾರ್ ಹಾಗೂ ಗಂಭೀರ ಪರಿಸ್ಥಿತಿಯಲ್ಲಿರುವ ಮಗುವಿನ ಆಸ್ಪತ್ರೆ ಕರ್ಚನ್ನು ಬಿಎಂಆರ್ ಸಿಎಲ್ (BMRCL) ಭರಿಸಲಿದೆ. ಈ ರೀತಿ ಅವಘಡ ಆಗಬಾರದಿತ್ತು ಎಂದು ವಿಷಾದಿಸಿದರು.
ಆಗ್ಲೂ ಅನುಮಾನ ಬಂದಿಲ್ವಾ..!?
ನಿನ್ನೆ ರಾತ್ರಿ ಕೂಡ ಇದೇ ಸ್ಥಳದಿಂದ ಫೋಟೋ ಕಳಿಸಲಾಗಿತ್ತು. ಮಂಗಳವಾರ ಬೆಳಗ್ಗೆಯೂ ಬಿಎಂ ಆರ್ ಸಿ ಎಲ್ ಟೀಮ್ ಇದೇ ಸ್ಥಳದಲ್ಲಿ ಕಂಬಿಯ ಫೋಟೋ ಕೂಡ ಕಳಿಸಿತ್ತು. ಬಿಎಂ ಆರ್ ಸಿಎಲ್ ಸೇಫ್ಟಿ ಟೀಮ್ ಹಾಗೂ NCC ಸೇಫ್ಟಿ ಟೀಮ್ ನ ಎಂಜಿನಿಯರ್ಸ್ ರಿಂದ ಇಂದು ಬೆಳಗ್ಗೆ 9.30 ಕ್ಕೆ ಪರಿಶೀಲನೆ ನಡೆಸಲಾಗಿತ್ತು. ಆಗ ಈ ಪಿಲ್ಲರ್ ಬೀಳುವ ಕನಿಷ್ಠ ಮುನ್ಸೂಚನೆಯೂ ಇವರಿಗೆ ಸಿಗಲಿಲ್ವಾ? ಯಾವ ಸೀಮೆಯ ಸುರಕ್ಷತೆಯನ್ನು ನಮ್ಮಮೆಟ್ರೋ ಹಾಗೂ ಗುತ್ತಿಗೆ ಪಡೆದ ಕಂಪನಿ ಮಾಡಿಕೊಂಡಿದೆ ಅಂತ ಇದರಿಂದಲೇ ತಿಳಿಯಬಹುದು.
ಮೆಟ್ರೋ ಪಿಲ್ಲರ್ ದುರಂತ ಆಗಿದ್ದು ಹೇಗೆ ಗೊತ್ತಾ? :
ಘಟನೆ ನಡೆದಾಗ ಪಿಲ್ಲರ್ ಮೇಲಿದ್ದ ನಾಲ್ಕು ಜನ ಕಾರ್ಮಿಕರು ಕೂಡ ಕೆಳಗೆ ಬಿದ್ದಿದ್ದಾರೆ. ಆದರೆ ಅವರಿಗೆ ಗಾಯ ಆಗಿಲ್ಲ. ಕಂಬಿ ವಾಲುವ ಮುನ್ಸೂಚನೆ ಸಿಗ್ತಾ ಇದ್ದಂತೆ ನಾಲ್ವರು ಕಾರ್ಮಿಕರು ಕೆಳಗೆ ಹಾರಿದರು. ಪಿಲ್ಲರ್ ರಾಡ್ ಕುಸಿಯುವ ಮುನ್ನಾ ನಾಲ್ಕು ಜನ ಮೇಲೆ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪಿಲ್ಲರ್ ಸುರಕ್ಷತೆಯ ಅಳವಡಿಕೆಯ ಕೆಲಸ ನಡೆಯುತ್ತಿತ್ತು. ಆಗ ನಿಧಾನವಾಗಿ ಕಂಬಿ ಬಾಗಲು ಶುರುವಾಗಿದೆ. ತಕ್ಷಣ ಸಿಬ್ಬಂದಿ ಜಂಪ್ ಮಾಡಿದ್ದಾರೆ. ಅದು ಕೂಡಲೇ ರಸ್ತೆಗೆ ಕುಸಿದು ಬಿದ್ದಿದೆ.
ಕಾಮಗಾರಿ ಸ್ಥಳದಲ್ಲಿ ಐಐಎಸ್ ಸ್ಸಿಯಿಂದ ಗುಣಮಟ್ಟ ಪರೀಕ್ಷೆ :
ನಮ್ಮ ಮೆಟ್ರೋ ಭಾರತೀಯ ವಿಜ್ಞಾನ ಸಂಸ್ಥೆಯ ಮೊರೆ ಹೋಗಿದೆ. ನಾಳೆಯೇ ಭಾರತೀಯ ವಿಜ್ಞಾನ ಸಂಸ್ಥೆಯಿಂದ ದುರ್ಘಟನೆಯ ಸ್ಥಳದಲ್ಲಿ ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಯಲಿದೆ. ಆದರೆ ಅದರ ವರದಿ ಬರಲು ಸ್ವಲ್ಪ ಸಮಯ ಹಿಡಿಯಲಿದೆ. ಇದಕ್ಕಾಗಿ ಎರಡು ದಿನ ಕಾಮಗಾರಿ ಸ್ಥಗಿತಗೊಳಿಸಲಿದ್ದೇವೆ ಎಂದು ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕುಸಿದು ಬಿದ್ದ ಪಿಲ್ಲರ್ ರಾಡ್ಗಳ ತೆರವು :
2021ರಿಂದ ತೆಲಂಗಾಣದ ಹೈದ್ರಾಬಾದ್ ಮೂಲದ ಕಂಪನಿ (NCC) ಕಂಪನಿಯು ಇಲ್ಲಿ ಕಾಮಗಾರಿ ನಡೆಸುತ್ತಾ ಬಂದಿದೆ. ಸದ್ಯ ಕುಸಿದು ಬಿದ್ದ ನಿರ್ಮಾಣ ಹಂತದ ಪಿಲ್ಲರ್ ರಾಡ್ಗಳನ್ನು ತೆರವು ಮಾಡಲಾಗುತ್ತಿದೆ. ಗ್ಯಾಸ್ ಕಟರ್ ಮೂಲಕ ರಾಡ್ಗಳನ್ನು ಮೆಟ್ರೋ ಪಿಲ್ಲರ್ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕಟ್ ಮಾಡಿ ತೆಗೆಯುತ್ತಿದ್ದಾರೆ. 2 ರಿಂದ 3 ಗ್ಯಾಸ್ ಕಟರ್ ಬಳಸಿ ಬೃಹತ್ ಪಿಲ್ಲರ್ ತೆರವು ಮಾಡಲಾಗುತ್ತಿದ್ದು, ನಂತರ ಕ್ರೈನ್ ಸಹಾಯದ ಮೂಲಕ ಪಿಲ್ಲರ್ ತೆರವು ಮಾಡಲಾಗುತ್ತದೆ.