ಬೆಂಗಳೂರು, ಜ.9 www.bengaluruwire.com : ಜನಪ್ರತಿನಿಧಿಗಳ ಆಡಳಿತವಿರಲಿ, ಆಡಳಿತಾಧಿಕಾರಿಗಳ ಆಡಳಿತವಿರಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಪಾಲಿಕೆ ಗುತ್ತಿಗೆದಾರರಿಗೆ ಹಣ ಪಾವತಿ ವಿಚಾರದಲ್ಲಿ ಅನ್ಯಾಯವಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ 25 ತಿಂಗಳ ಕಾಮಗಾರಿಗಳ ಬಿಲ್ಲಿ ಹಣಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘ ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆದಾರರು ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಕಾಮಗಾರಿಗಳನ್ನು ಸ್ಧಗಿತಗೊಳಿಸುವುದಾಗಿ ಹೇಳಿದ್ದಾರೆ. ಇದರಿಂದ ನಗರದಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಮೊತ್ತದ 250 ಪ್ಯಾಕೇಜ್ ಕಾಮಗಾರಿಗಳು ನಿಲ್ಲಲಿದೆ. ಇದರಿಂದಾಗಿ ಈಗಾಗಲೇ ಕಾಮಗಾರಿ ವಿಳಂಬದಿಂದ ರಸ್ತೆಯಲ್ಲಿ ಸಂಚರಿಸಲು ತೊಂದರೆಪಡುತ್ತಿರುವ ವಾಹನ ಸವಾರರು, ಸಾರ್ವಜನಿಕರಿಗೆ ಗುತ್ತಿಗೆದಾರರ ಪ್ರತಿಭಟನೆಯಿಂದ ಮತ್ತಷ್ಟು ತೊಂದರೆ ಎದುರಾಗುವ ಆತಂಕ ಎದುರಾಗಿದೆ.
ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ್, ‘ಈಗಾಗಲೇ 25 ತಿಂಗಳಿಂದ ಕಾಮಗಾರಿ ಬಿಲ್ಲುಗಳ ಹಣ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದರೂ ಸಹ ಇದುವರೆವಿಗಿನ ನಮ್ಮ ಮನವಿಗೆ ಯಾವುದೇ ರೀತಿಯಲ್ಲಿ ತಾವು ಸ್ಪಂದಿಸಿರುವುದಿಲ್ಲ. ಗುತ್ತಿಗೆದಾರರು ಬ್ಯಾಂಕ್ ಸಾಲ ಮಾಡಿ, ಪಾಲಿಕೆಯಿಂದ ಸೂಕ್ತ ಕಾಲಾವಧಿಯಲ್ಲಿ ಬಿಲ್ ಪಾವತಿಯಾಗದ ಕಾರಣ, ಬ್ಯಾಂಕ್ ಸಾಲದ ಕಂತು ಕಟ್ಟಲು ಕಷ್ಟವಾಗಿದೆ. ಅಲ್ಲದೆ ಹೊರಗಿನಿಂದ ದುಡ್ಡ ತಂದು ಸುರಿದು ಕೆಲಸ ನಿರ್ವಹಿಸಿದವರಿಗೆ ಸಾಕಷ್ಟು ತೊಂದರೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ನಿರ್ವಹಿಸಿದ ಕಾಮಗಾರಿಗಳಿಗೆ ಪಾಲಿಕೆ ಹಣಕಾಸು ಇಲಾಖೆಯಿಂದ 25 ತಿಂಗಳು ಕಳೆದರೂ ಸೂಕ್ತ ಕಾಲಾವಧಿಯಲ್ಲಿ ಬಿಲ್ ಪಾವತಿ ಆಗುತ್ತಿಲ್ಲ. ಇದರ ಜೊತೆಗೆ ರಾಜ್ಯ ಸರ್ಕಾರವು ಬಿಬಿಎಂಪಿ ನೀಡುವ ನಗರೋತ್ಥಾನ ಮತ್ತಿತರ ಅದಾನಗಳನ್ನು ಪ್ಯಾಕೇಜ್ ಟೆಂಡರ್ ಕರೆದು ಎಲ್ಲಾ ವರ್ಗದ ಗುತ್ತಿಗೆದಾರರಿಗೆ ಅನ್ಯಾವಾಗುತ್ತಿದೆ. ಹೀಗಾಗಿ ಗುತ್ತಿಗೆ ನೋಂದಣಿ ಮಾಡಿಕೊಂಡ ಎಲ್ಲಾ ವರ್ಗದ ಕಾಂಟ್ರಾಕ್ಟರ್ ಗಳಿಗೆ ಅನುಕೂಲವಾಗುವ ಅನುಪಾತದಂತೆ ಟೆಂಡರ್ ಕರೆಯಬೇಕೆಂದು ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ತನಿಖೆಯ ನೆಪದಲ್ಲಿ ವಿಳಂಬ ನೀತಿಯನ್ನು ತಪ್ಪಿಸಿ, ಪಾಲಿಕೆಯ ಕಾಮಗಾರಿಗಳ ತನಿಖೆ ನೆಪದಲ್ಲಿ ಅಧಿಕಾರಿಗಳಿಂದ ಕಾಮಗಾರಿ ಚಾಲನೆಯ ಸಮಯದಲ್ಲಿ ಅಳತೆ, ಗುಣಮಟ್ಟ, ತನಿಖೆ ನಡೆಸುವುದು ಮತ್ತು ಹೆಚ್ಚುವರಿ ಟೇಬಲ್ ಕಡಿಮೆ ಮಾಡಿ ತನಿಖೆಯ ಸ್ವರೂಪವನ್ನು ಸರಳೀಕರಣಗೊಳಿಸುವಂತೆ ಸಾಕಷ್ಟು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಪ್ರತಿಭಟನಾ ಕಾರರು ಮುಖ್ಯ ಆಯುಕ್ತರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ಬೇಡಿಕೆ ಈಡೇರುವ ತನಕ ನಗರದಾದ್ಯಂತ ಪಾಲಿಕೆ ಗುತ್ತಿಗೆ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ ಹೋರಾಟ ಮುಂದುವರೆಸುವುದಾಗಿ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಗುತ್ತಿಗೆದಾರರ ಸಂಘದ ಸದಸ್ಯರು ಪಾಲಿಕೆ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪಾಲಿಕೆ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ಆಗಮಿಸಿ, ಪ್ರತಿಭಠನಾ ನಿರತರ ಅಹವಾಲನ್ನು ಆಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು. ಆದರೂ ಸಂಘದ ಸದಸ್ಯರು ಅದಕ್ಕೆ ಸಮಾಧಾನಗೊಳ್ಳಲಿಲ್ಲ.
‘ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸರಿಯಾಗಿ ಯಾವುದೇ ಭರವಸೆ ನೀಡಲಿಲ್ಲ. ಪಾಲಿಕೆ ತೆರಿಗೆ ಸಂಗ್ರಹದ ನಂತರ ಬಿಲ್ ಪಾವತಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಗುತ್ತಿಗೆ ನೌಕರರು ನಿರ್ವಹಿಸಿದ ಕಾಮಗಾರಿಗಳ ತನಿಖೆ ವಿಳಂಬ ಕುರಿತು ಸರಿಯಾಗಿ ತಿಳಿಸಿಲ್ಲ. ಈ ಎಲ್ಲಾ ಹಿನ್ನಲೆಯಲ್ಲಿ ಗುತ್ತಿಗೆದಾರರ ಸಂಘದ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸುತ್ತೇವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದ್ದಾರೆ.