ಬೆಂಗಳೂರು, ಜ.8 www.bengaluruwire.com : ಕಣ್ಣು ಹಾಯಿಸಿದಷ್ಟು ದೂರ ಬಣ್ಣ ಬಣ್ಣಗಳ ಚಿತ್ತಾರ, ದೃಶ್ಯಕಾವ್ಯದಂತೆ ಕಂಡುಬಂದ ಕಲಾಕೃತಿಗಳು….ಅದನ್ನು ಕಾಣಲು ಬಂತು ಜನಸಾಗರ.
ಹೌದು ಇದು ಭಾನುವಾರ ನಗರದ ಚಿತ್ರಕಲಾ ಪರಿಷತ್ ಏರ್ಪಡಿಸಿದ್ದ 20ನೇ ಚಿತ್ರಸಂತೆಯ ಕರಾಮತ್ತು. ಒಂದಕ್ಕಿಂತ ಒಂದು ಕಲಾಕೃತಿಗಳು ಕಲಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದಿದ್ದವು. ಹೀಗಾಗಿ ಶಿವಾನಂದ ವೃತ್ತದಿಂದ ಹಿಡಿದು ಅಶೋಕ ಹೋಟೆಲ್ ವರೆಗೆ ಒಂದು ಕಿ.ಮೀ ದೂರದವರೆಗೆ ಕಣ್ಣುಗಳಿಗೆ ಹಬ್ಬ ನೀಡುವ ಕಲಾಕೃತಿಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿತ್ತು.
ಬೆಳಗ್ಗೆಯಿಂದ 8.30 ರಿಂದಲೇ ಚಿತ್ರಕಲಾ ಪರಿಷತ್ ರಸ್ತೆ ತುಂಬಿ ಹೋಗಿತ್ತು. ಈ ಬಾರಿ 1500 ಕಲಾವಿದರು ಭಾಗವಹಿಸಿದ್ದರು. ಅದರಲ್ಲಿ 150 ಕಲಾವಿದರಿಗೆ ಹೆಚ್ಚಿನ ಸ್ಥಳಾವಕಾಶ ಮಾಡಿಕೊಡಲಾಗಿದೆ. ಕೇರಳ, ಪಶ್ಚಿಮಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸಾ, ಮಹರಾಷ್ಟ್ರ, ಉತ್ತರಪ್ರದೇಶ ಹಾಗೂ ಕರ್ನಾಕಟದ ಬಹುತೇಕ ಎಲ್ಲ ಜಿಲ್ಲೆಗಳ ಕಲಾವಿದರು ಪಾಲ್ಗೊಂಡಿದ್ದಾರೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕಳೆದ ಬಾರಿ ಕರೋನಾ ಪ್ರಭಾವ ಇದ್ದ ಕಾರಣ ಚಿತ್ರಸಂತೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿದ್ದರು. ಈ ಬಾರಿ 4 ಲಕ್ಷಕ್ಕೂ ಹೆಚ್ಚು ಜನ ಚಿತ್ರಸಂತೆಯಲ್ಲಿ ಭಾಗವಹಿಸುವ ಅಂದಾಜಿದೆ. ಹೀಗಾಗಿ ಈ ರಸ್ತೆಗಳು ಇಂದು ಬಂದ್ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಮೋಲ್ಡ್ ಕಾಪರ್ ಮೆಟಲ್ ಕಲಾಕೃತಿ, ಅಕ್ರಾಲಿಕ್, ವಾಟರ್ ಕಲರ್ ಪೈಂಟಿಂಗ್, ತೈಲವರ್ಣಚಿತ್ರ, ಮಧುಬನಿ, ಹೀಗೆ ವಿವಿಧ ರಾಜ್ಯಗಳ ಸಾವಿರಾರು ರೀತಿಯ ಕಲಾಕೃತಿಗಳನ್ನು ಇಡಲಾಗಿತ್ತು.
ಅಶೋಕ ಹೋಟೆಲ್ ನಿಂದ ಹಿಡಿದು ಶಿವಾನಂದ ಸರ್ಕಲ್ ತನಕ ಸ್ಟಾಲ್ ಗಳಿವೆ. ಹಾಗೆಯೇ ಕ್ರೆಸೆಂಟ್ ರಸ್ತೆ, ಸೇವಾದಳ ಸ್ಕೂಲ್ ರಸ್ತೆ, ದೊಡ್ಡ ಕಾಲಿ ನಿವೇಶನದಲ್ಲಿ 40 ಮಳಿಗೆ ಹಾಕಿದೆ. ಇವತ್ತು ಒಂದೇ ದಿನ 2 ರಿಂದ 3 ಕೋಟಿ ವ್ಯವಹಾರ ನಡೆಯಬಹುದು. 100 ರೂನಿಂದ 5 ಲಕ್ಷ ರೂ.ಗಳ ತನಕ ಕಲಾಕೃತಿಗಳಿವೆ ಎಂದು ಚಿತ್ರಕಲಾ ಪರಿಷತ್ ಪ್ರೊಫೆಸರ್ ಆರ್.ಎಚ್.ಕುಲಕರ್ಣಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ದಿವ್ಯಾಂಗ 16 ಕಲಾಕಾರರು ಭಾಗವಹಿಸಿದ್ದಾರೆ. ಒಟ್ಟಾರೆ 2300 ಮಂದಿ ತಮ್ಮ ಕಲಾಕೃತಿಗಳ ಮಾರಾಟಕ್ಕೆ ಚಿತ್ರಕಲಾ ಪರಿಷತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 1500 ಕಲಾಕಾರರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಅವರಿಗೆಲ್ಲ ಸೂಕ್ತ ವ್ಯವಸ್ಥೆಯನ್ನ ಮಾಡಿದ್ದೇವೆ. ರಸ್ತೆ ಮೇಲೆ 1200 ಸ್ಟಾಲ್ ಗಳು ಇವೆ ಎಂದು ಕುಲಕರ್ಣಿ ಹೇಳಿದ್ದಾರೆ.
ಜನಪದ ಕಲಾಪ್ರಕಾರದ ಚಿತ್ರಕಲಾಕೃತಿ :
ಹಾವೇರಿಯ ಕಲಾವಿದ ಕರಿಯಪ್ಪ ಅಕ್ರಾಲಿಕ್ ಕ್ಯಾನ್ ವಾಸ್ ತಬಲ, ವೀಣೆ , ಯಕ್ಷಗಾನ, ಕಿನ್ನರಿಜೋಗಿ, ವೈಲಿನ್ ಸೇರಿದಂತೆ ಜಾನಪದ ಹಾಗೂ ಸಂಗೀತದ ವಿವಿಧ ಕಲಾ ಪ್ರಕಾರಗಳನ್ನು ಬಹುವರ್ಣದ ಚಿತ್ರಗಳನ್ನು ಚಿತ್ರೀಕರಿಸಿದ್ದಾರೆ. ಇದಕ್ಕೆ 25 ಸಾವಿರ ರೂಪಾಯಿಯಿಂದ ಒಂದೂವರೆ ಲಕ್ಷ ರೂ. ತನಕ ದರ ನಿಗಧಿಪಡಿಸಿದ್ದಾರೆ.
ಕಣ್ಮನ ಸೆಳೆದ ಬಿಹಾರದ ಮದುಬನಿ ಆರ್ಟ್ :
ಬಿಹಾರದ ಚಿತ್ರಕಲಾವಿದ ಅಶೋಕ್ ಕುಮಾರ್, ನೈಸರ್ಗಿಕ ಬಣ್ಣಗಳಿಂದ ಬ್ರಶ್, ಪೈಟಿಂಗ್ ಬಳಸದೆ, ಸಾಂಪ್ರದಾಯಿಕ ನಿಬ್ ಪೆನ್ ನಿಂದ ಚಿತ್ರ ಬಿಡಿಸಿ, ಬೆಂಕಿಕಡ್ಡಿಗಳನ್ನು ಪೈಂಟ್ ಬ್ರಶ್ ರೀತಿ ಬಳಸಿ ಮಧುಬನಿ ಪ್ರಕಾರದ ಚಿತ್ರಗಳನ್ನು ರಚಿಸಿದ್ದಾರೆ. ಇದು ನೋಡಲು ಬಹಳ ಆಕರ್ಷಕವಾಗಿದೆ. 500 ರೂ.ಗಳಿಂದ 25 ಸಾವಿರ ರೂ. ಮೌಲ್ಯದ ತನಕ ಚಿತ್ರಗಳು ಇಲ್ಲಿವೆ.
ಮರಳು ಮಣ್ಣಿನಲ್ಲಿ ಅರಳಿದ ಚಿತ್ರ ಸೊಬಗು :
ಕೆಲವು ಕಲಾವಿದರು ಸ್ಥಳದಲ್ಲಿಯೇ ಕಲಾಸಕ್ತರ ಸ್ಕೆಚ್ ಬಿಡಿಸಿಕೊಡುತ್ತಿದ್ದರು. ಚೆನ್ನೈನ ಕಲಾವಿದ ರಾಜು ಶುದ್ಧ ಮರಳು ಹಾಗೂ ಅಂಟು ಬಳಸಿದ ಹುಲಿ, ಬುದ್ಧ, ಗಣೇಶ, ಶಿವ ಮತ್ತಿತರ ಕಲಾಕೃತಿಗಳು ಎರಡು ಸಾವಿರದಿಂದ 12 ಸಾವಿರದ ತನಕ ಮರಾಟವಾಗುತ್ತಿದ್ದವು.
ಈ ತೈಲವರ್ಣ ಚಿತ್ರಗಳಿಗೆ ಬಹಳ ಬೇಡಿಕೆ :
ರಾಜ ರವಿವರ್ಮ ಶೈಲಿನ ಭಾರತದ ಸಾಂಪ್ರದಾಯಿಕ ಶೈಲಿಯ ಚಿತ್ರಗಳನ್ನು ಉತ್ತರಪ್ರದೇಶದ ಮೊಹಿತ್ ವರ್ಮ ಮತ್ತು ಅವರ ತಂದೆ ಅಶೋಕ್ ವರ್ಮ ಇಬ್ಬರು ಸೇರಿ ತೈಲವರ್ಣ ಚಿತ್ರಗಳನ್ನು ರಚಿಸಿದ್ದಾರೆ. 5-6 ಅಡಿಯ ಲೈಫ್ ಸೈಜ್ ಚಿತ್ರ ರಚಿಸಲು ಒಂದೊಂದು ತಿಂಗಳು ಹಿಡಿಯುತ್ತೆ. ಇಲ್ಲಿನ ತೈಲವರ್ಣ ಚಿತ್ರಗಳು 25 ಸಾವಿರ ರೂ.ಗಳಿಂದ 5 ಲಕ್ಷ ರೂ. ತನಕ ಬೆಲೆಯಿದೆ.
ಕಲಾವಿದ ಮೋಹಿತ್ ವರ್ಮ ತಮ್ಮ ಕಲಾಕೃತಿಯೊಂದಿಗೆ
ಧಾರವಾಡದ ಕುಮಾರ ಕಾಟೇನಹಳ್ಳಿಯವರು ಅಮೂರ್ತದ ನಿಸರ್ಗ ಚಿತ್ರಣವನ್ನು ಬಹಳ ಆಕರ್ಷಕವಾಗಿ ಚಿತ್ರಿಸಿದ್ದಾರೆ. ಅಕ್ರಾಲಿಕ್ ಮತ್ತು ಕ್ಯಾನ್ವಾಸ್ ಬಣ್ಣಗಳನ್ನು ಬಳಸಿ ವಿವಿಧ ವಾತಾವರಣದಲ್ಲಿ ನಿಸರ್ಗದಲ್ಲಿನ ಸೂರ್ಯನ ಬೆಳಕು, ನದಿ, ಬೆಟ್ಟಗಳ ಸೊಬಗನ್ನು ತಮ್ಮ ಚಿತ್ರಕಲೆಯಲ್ಲಿ ಹಿಡಿದಿಟ್ಟಿದ್ದಾರೆ.
ಚಿತ್ರಕಲಾ ಪರಿಷತ್ ಹೀಗೆ ವ್ಯವಸ್ಥೆ ಕಲ್ಪಿಸಿತ್ತು :
ಹೊರ ರಾಜ್ಯಗಳಿಂದ ಬರುವವರಿಗೆ ಉಚಿತವಾಗಿ ಎಲ್ಲಾ ಸೌಕರ್ಯ ಕಲ್ಪಿಸಲಾಗಿತ್ತು. ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಚಿತ್ರಕಲಾ ಪರಿಷತ್ ಒಳಗಡೆ ತಮ್ಮ ಚಿತ್ರಕಲೆ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರಿಗೆ, ಪೊಲೀಸ್, ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ. ಕೋವಿಡ್ ಹಿನ್ನಲೆ ಮಾಸ್ಕ್ ಹಾಕುವುದು ಹಾಗೂ ಸ್ಯಾನಿಟೇಷನ್ ಕಡ್ಡಾಯ ಮಾಡಲಾಗಿದೆ ಎಂದು ಚಿತ್ರಕಲಾಪರಿಷತ್ ತಿಳಿಸಿದೆ. ಆದರೆ ಬಹುತೇಕ ಮಂದಿಮಾಸ್ಕ್ ಇಲ್ಲದೆ ಅಡ್ಡಾಡುವುದು ಸಾಮಾನ್ಯವಾಗಿತ್ತು.
ಭದ್ರತೆಯ ದೃಷ್ಟಿಯಿಂದ 130 ರಷ್ಟು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. 400 ಮಂದಿ ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ವಾಕಿಟಾಕಿನೊಂದಿಗೆ ಕೆಲಸ ನಿರ್ವಹಿಸಿದರು. ರಾತ್ರಿ ಚಿತ್ರಸಂತೆ ಮುಗಿದ ಮೇಲೆ 11 ಗಂಟೆಗೆಲ್ಲ ಸಂಪೂರ್ಣ ಸ್ವಚ್ಛತೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಚಿತ್ರಸಂತೆ ಯಶಸ್ವಿಯಾಗಿ ಮಾಡಲು ಚಿತ್ರಕಲಾ ಪರಿಷತ್ ಇಷ್ಟೆಲ್ಲ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ ಚಿತ್ರಸಂತೆ ಎಲ್ಲಾ ಕಲಾವಿದರಿಗೆ ಅರ್ಪಣೆ ಮಾಡಲಾಗಿತ್ತು. ಈ ವರ್ಷ ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ಚಿತ್ರಸಂತೆ ಆಯೋಜಿಸಲಾಗಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ್, ಓಡಿಶಾ, ಸಿಕ್ಕಿಂಸೇರಿದಂತೆ18 ರಿಂದ 20 ರಾಜ್ಯಗಳ ಕಲಾವಿದರು ಈ ಚಿತ್ರಸಂತೆಯಲ್ಲಿ ಭಾಗಿಯಾಗಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.