ಬೆಂಗಳೂರು, ಜ.7 www.bengaluruwire.com : ಗಾಂಧಿ ಬಜಾರ್ 70 ಅಡಿ ರಸ್ತೆಯನ್ನು 20 ಅಡಿಗೆ ಕಡಿಮೆ ಮಾಡಿ ಪಾದಚಾರಿ ಮಾರ್ಗಗಳನ್ನಾಗಿ ಪರಿವರ್ತಿಸಿ ಬಿಬಿಎಂಪಿಯು ಕಾಮಗಾರಿ ನಡೆಸುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ‘ಗಾಂಧಿ ಬಜಾರ್ ಉಳಿಸಿ ಹೋರಾಟ ಸಮಿತಿ‘ ಎಂಬ ಘೋಷಣೆಯಡಿ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ. ವೆಂಕಟೇಶ್ ತಿಳಿಸಿದರು.
ಬೆಂಗಳೂರು ದಕ್ಷಿಣದಿಂದ ಉತ್ತರ ಭಾಗಕ್ಕೆ ಸಂಪರ್ಕಿಸುವ ಗಾಂಧಿ ಬಜಾರ್ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿ ಪಾದಚಾರಿ ಮಾರ್ಗ ಮಾಡುತ್ತಿರುವುದರಿಂದ 125 ವರ್ಷಗಳಿಗೂ ಹೆಚ್ಚು ಸಮಯದಿಂದ ಇಲ್ಲಿ ನೆಲೆಸಿರುವ, ವಿವಿಧ ವ್ಯಾಪಾರ ವ್ಯವಹಾರ ನಡೆಸಿ ಜೀವನ ರೂಪಿಸಿಕೊಂಡವರಿಗೆ ಅಲ್ಲದೆ ಬೆಂಗಳೂರಿನ ವಿವಿಧ ಭಾಗಗಳ ಜನಸಾಮಾನ್ಯರಿಗೆ ಈ ಯೋಜನೆಯಿಂದ ತೊಂದರೆಯಾಗಲಿದೆ ಎಂದು ಅವರು ದೂರಿದರು.
ಹಳ್ಳಿ ಮಕ್ಕಳ ಸಂಘಟನೆ, ನೈಜ ಹೋರಾಟಗಾರರ ವೇದಿಕೆ, ಜನಾಧಿಕಾರ ಸಂಘರ್ಷ ಪರಿಷತ್, ಮಾಹಿತಿ ಅಧ್ಯಯನ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ‘ಪ್ರಜಾ’ ನ್ಯಾಯವೇದಿಕೆ’ ಸದಸ್ಯರು ಶುಕ್ರವಾರ ಗಾಂಧಿಬಜಾ ರ್‌ನಲ್ಲಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ, ಅಂಗಡಿಗಳ ವ್ಯಾಪಾರಸ್ಥರು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಆಲಿಸಿದರು. ರಸ್ತೆ ಅಗಲ ಕಡಿಮೆ ಮಾಡುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡರು.
ನಗರದ ಅತಿ ಹಳೆಯ ಪ್ರದೇಶವಾದ, ಸಿಲಿಕಾನ್ ಸಿಟಿಯ ಸಂಸ್ಕೃತಿಯನ್ನು ಹೊದ್ದುನಿಂತ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿ ಎಲೆಕ್ಟ್ರಾನಿಕ್ ಗೇಟ್ ಗಳನ್ನು ಹಾಕಿ, ಇಲ್ಲಿನ ನಿವಾಸಿಗಳಿಗೆ ಪಾಸ್‌ಗಳನ್ನು ವಿತರಿಸಿ ಅವರ ವಾಹನಗನ್ನು ಮಾತ್ರ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿಯು ಲಭ್ಯವಾಗಿದೆ. ಇದರಿಂದ ಈ ಭಾಗದ ನಿವಾಸಿಗಳ ಸ್ವಾಂತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂದು ‘ಪ್ರಜಾ’ ನ್ಯಾಯವೇದಿಕೆ’ ಸದಸ್ಯರು ಆರೋಪಿಸಿದರು. ಇದೆ ಎಂಬ ಮಾಹಿತಿ ಇದೆ. ಇದರಿಂದ ಹಾಜರಿದ್ದರು.
ಬಿಬಿಎಂಪಿಯು ಕೋಟ್ಯಾಂತರ ರೂಪಾಯಿ ಹಣ ಕರ್ಚು ಮಾಡಿ ಕಾಮಗಾರಿ ನಡೆಸುತ್ತಿದ್ದರೂ ಇಲ್ಲಿ ನಡೆಸುತ್ತಿರುವ ಕಾಮಗಾರಿ ವಿವರದ ಫಲಕವನ್ನೂ ಅಳವಡಿಸಿಲ್ಲ. ನಾಗರಿಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ನಡೆಸುತ್ತಿರುವ ಕ್ರಮ ಖಂಡನೀಯ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಸರಾಜ ಮಠದ ಸ್ವಾಮೀಜಿ, ಪೊಲೀಸ್ ಮಾಜಿ ಕಮಿಷನರ್ ಭಾಸ್ಕರ್ ರಾವ್, ರಾಮಕೃಷ್ಣಾಶ್ರಮದ ಮಠದ ಸ್ವಾಮೀಜಿ ಜನರ ಪರವಾಗಿ ನಿಂತು ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾಗಿ ಸಂಘಟನೆಯ ಸದಸ್ಯರು ಮಾಹಿತಿ ನೀಡಿದರು.
ವಿವಿಧ ಸಂಘಟನೆಗಳ ಸದಸ್ಯರಾದ ಪ್ರಕಾಶ್ ಬಾಬು, ವಿಶ್ವನಾಥ್, ನಾಗೇಶ್ವ ಬಾಬು, ವಾಸುದೇವಮೂರ್ತಿ, ಶಂಕರ್, ಲೋಕೇಶ್, ಆದರ್ಶ ಅಯ್ಯರ್, ಸ್ಥಳೀಯ ವ್ಯಾಪಾರಿಗಳ ಒಕ್ಕೂಟ ಹಾಗೂ ಕ್ಷೇಮಾಭಿವೃದ್ಧಿ ಸಂಘದ ಗುರುಪ್ರಸಾದ್, ವೆಂಕಟೇಶ್, ಬೆಣ್ಣೆ ಸುಧೀಂದ್ರ ಸೇರಿದಂತೆ ಮತ್ತಿತರರು ಪರಿಶೀಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.