ಬೆಂಗಳೂರು, ಜ.6 www.bengaluruwire.com : ಯಕ್ಷ ಕಲಾ ಅಕಾಡೆಮಿಯು, ಇದೇ ಜನವರಿ 7ರಂದು ಸಂಜೆ 5.30ಕ್ಕೆ, ನಗರದ ಜೆಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ “ಸುಭದ್ರಾ ಕಲ್ಯಾಣ ” ಎಂಬ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಯಕ್ಷಗಾನ ಪ್ರದರ್ಶನ ಸಾರ್ವಜನಿಕರಿಗೆ ಉಚಿತವಾಗಿರುತ್ತದೆ.
ದೇಶ, ವಿದೇಶಗಳಲ್ಲಿ ಯಕ್ಷಗಾನ ಕಾರ್ಯಕ್ರಮ ಹಾಗೂ ಕಾರ್ಯಾಗಾರಗಳನ್ನೂ ನಡೆಸಿ ಕೊಟ್ಟಿರುವ, ಸುಮಾರು ನಲವತ್ತು ವರ್ಷಗಳ ಅನುಭವ ಇರುವ ಯಕ್ಷ ಗುರು ಕೆ.ಕೃಷ್ಣಮೂರ್ತಿ ತುಂಗರು ಡಾ.ಕೋಟ ಶಿವರಾಮ ಕಾರಂತರ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನಲವತ್ತು ವರ್ಷಗಳ ಹಿಂದೆ ಯಕ್ಷಗಾನವನ್ನು ಗುರುಕುಲ ಪದ್ಧತಿಯಲ್ಲಿ ಕಲಿತವರು. ಅವರ ನಿರ್ದೇಶನದಲ್ಲಿ, ಎರಡೂವರೆ ದಶಕಗಳಿಂದ ಕಾರ್ಯಕ್ರಮ ನೀಡುತ್ತಿರುವ ಯಕ್ಷಕಲಾ ಅಕಾಡೆಮಿಯು “ಸುಭದ್ರಾ ಕಲ್ಯಾಣ ” ಪ್ರಸಂಗವನ್ನು ಸಾದರಪಡಿಸಲಿದೆ.
“ಸುಭದ್ರಾ ಕಲ್ಯಾಣ ” ಪ್ರಸಂಗ :
ಮಹಾಭಾರತದಲ್ಲಿ ಅರ್ಜುನ 1 ವರ್ಷದ ತೀರ್ಥಯಾತ್ರೆಯಲ್ಲಿ 8 ತಿಂಗಳು ಮುಗಿಸಿ, ಇನ್ನು ಕೊನೆಯ 4 ತಿಂಗಳು ಬಾಕಿಯಿರುತ್ತದೆ. ಆಗ ದ್ವಾರಕೆಗೆ ಬರುತ್ತಾನೆ, ಹಿಂದೆ ಸುಭದ್ರೆಗೂ ಹಾಗೂ ಅರ್ಜುನನಿಗೂ ಪ್ರೀತಿ ಅಂಕುರಿಸಿರುತ್ತದೆ. ಆ ಕಾರಣಕ್ಕಾಗಿ ಸಾಧ್ಯವಾದರೆ ಆಕೆಯನ್ನು ವಿವಾಹವಾಗುವ ಆಲೋಚನೆಯಿತ್ತು. ಈ ವಿಚಾರ ಕೃಷ್ಣನಿಗೆ ಗೊತ್ತಾಗಿ ಅರ್ಜುನನ್ನು ವಿಚಾರಿಸುತ್ತೇನೆ. ಇಷ್ಟು ಹೊತ್ತಿಗಾಗಲೇ ಅರ್ಜುನ ಸನ್ಯಾಸಿಯ ವೇಷ ಧರಿಸಿರುತ್ತಾನೆ. ಆಗ ಕೃಷ್ಣನು, ಅರ್ಜುನನಿಗೆ, ನಿನ್ನ ಮನಸ್ಸಿನ ಸಂಕಲ್ಪ ಈಡೇರುತ್ತೆ. ದ್ವಾರಕಯ ಹೊರಗಿರುವ ಕಾಡಿನಲ್ಲೇ ಇರು ಎಂದು ಹೇಳಿ ಹೊರಟು ಹೋಗುತ್ತಾನೆ. ಇತ್ತ ವನಪಾಲಕರು ಬಂದು ಯಾರು ನೀವು? ಎಂದು ವಿಚಾರಿಸುತ್ತಾರೆ. ಆದರೆ ತಮ್ಮ ಬಳಿ ಮಾತನಾಡುತ್ತಿಲ್ಲ ಎಂದು ರಾಜ ಬಲರಾಮನಿಗೆ ತಿಳಿಸುತ್ತಾರೆ.
ಆಗ ಬಲರಾಮ ಸನ್ಯಾಸಿ ವೇಷದಲ್ಲಿರುವ ಅರ್ಜುನನ್ನು ನೋಡಲು ಬರುತ್ತಾನೆ. ಆದರೆ ಬಲರಾಮನಿಗೆ ಸನ್ಯಾಸಿ ವೇಷದಲ್ಲಿರುವ ಅರ್ಜನನ ಬಗ್ಗೆ ಗೊತ್ತಾಗಿರಲಿಲ್ಲ. ಆ ನಂತರದಲ್ಲಿ ಅರಮನೆಯ ಪಕ್ಕದಲ್ಲಿನ ಉದ್ಯಾನವನದಲ್ಲಿ ಅರ್ಜನನ್ನು ಕರೆದೊಯ್ದು, ಆತನ ಸೇವೆಗೆ ಬಲರಾಮನ ಸುಭದ್ರೆಗೆ ನಿಯೋಜಿಸುತ್ತಾನೆ ಬಲರಾಮ. ಕೊನೆಯಲ್ಲಿ ಅರ್ಜುನನೊಂದಿಗೆ ಸುಭದ್ರೆ ಜೊತೆ ವಿವಾಹವಾಗುತ್ತದೆ. ಈ ಪ್ರಸಂಗವನ್ನು ಯಕ್ಷಕಲಾ ಅಕಾಡೆಮಿಯ ಕಲಾವಿದರು “ಸುಭದ್ರಾ ಕಲ್ಯಾಣ ” ಯಕ್ಷಗಾನದಲ್ಲಿ ಪ್ರದರ್ಶಿಸಲಿದ್ದಾರೆ.
ಯಾರೆಲ್ಲ ಕಾರ್ಯಕ್ರಮದಲ್ಲಿ ಭಾಗಿ? :
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್, ಹಿರಿಯ ರಂಗ ಕರ್ಮಿ ಹಾಗೂ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಸದಸ್ಯರೂ ಆಗಿರುವ ಬಿ.ವಿ. ರಾಜಾರಾಮ್, ಹಾಗೂ ಭಾರತೀಯ ವಿದ್ಯಾ ಭವನದ ಜಂಟಿ ನಿರ್ದೇಶಕಿಯೂ ಆಗಿರುವ ನಾಗಲಕ್ಷ್ಮೀ ಕೆ.ರಾವ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.