ಬೆಂಗಳೂರು, ಜ.6 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ 25 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿರುವ ಪಾಲಿಕೆಯಲ್ಲಿ 82 ಲಕ್ಷ ಮತದರಾರಿದ್ದಾರೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂತಿಮ ಮತದಾರರ ಪಟ್ಟಿ ತಯಾರಿಸಿದಾಗ ನಗರದ ಈ ವಿಧಾನಸಭಾ ಕ್ಷೇತ್ರಗಳಲ್ಲಿನ ಕರಡು ಪಟ್ಟಿಗೆ ಹೋಲಿಸಿದರೆ, 80 ಸಾವಿರ ಮತದಾರರು ಹೆಚ್ಚಾಗಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 25 ವಿಧಾನಸಭಾ ಕ್ಷೇತ್ರದಲ್ಲಿನ ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಉಳಿದ ಮೂರು ಕ್ಷೇತ್ರಗಳ ಮತದಾರರ ಪಟ್ಟಿಯು ಶೇ.100ರಷ್ಟು ಪರಿಷ್ಕರಣೆ ಮಾಡುತ್ತಿರುವುದರಿಂದ ಜ.15ರಿಂದ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿನ 25 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 82,29,375 ಮತದಾರರಿದ್ದು, ಆ ಪೈಕಿ 42,65,140 ಪುರುಷ ಮತದಾರರು ಹಾಗೂ 39,62,712 ಮಹಿಳಾ ಮತದಾರರಿದ್ದಾರೆ. 18 ರಿಂದ 19 ವಯೋಮಾನದ ಯುವಜನತೆ 80 ಸಾವಿರ ಜನಸಂಖ್ಯೆಯಿದ್ದರೂ, ಕೇವಲ 48,542 ಜನರು ಮಾತ್ರ ಮತಪಟ್ಟಿ ಸೇರ್ಪಡೆಯಾಗಿದ್ದಾರೆ. ಮುಂದಿನ ಮಾರ್ಚ್ ನಲ್ಲಿ 18 ವರ್ಷ ತುಂಬುವ ಯುವಕ, ಯುವತಿಯಲರು ಕೂಡ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಲು ಅವಕಾಶವಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಈ 25 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ 6,50,532 ಮಂದಿ ಮತದಾರರಿದ್ದರೆ, 2,01,287 ರಷ್ಟು ಅತಿ ಕಡಿಮೆ ಮತದಾರರು ರಾಜಾಜಿನಗರದಲ್ಲಿರುವುದು ಕಂಡು ಬಂದಿದೆ. ನಗರದಲ್ಲಿ 1.5 ಲಕ್ಷ ವಿಶೇಷ ಚೇತನರ ಪೈಕಿ 34,941 ದಿ ಮಾತ್ರ ಪಟ್ಟಿಯಲ್ಲಿದ್ದಾರೆ. ಉಳಿದವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಪ್ರತಿ ವಾರ್ಡಿನಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆವತಿಯಿಂದ ನೋಡೆಲ್ ಅಧಿಕಾರಿಯನ್ನು ನೇಮಿಸಿ ಉಳಿದವರನ್ನು ಪಟ್ಟಿಗೆ ಸೇರಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದರು.
9,182 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ 9,085 ಮಂದಿಯಷ್ಟೇ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಉಳಿದವರನ್ನು ಪಟ್ಟಿಗೆ ಸೇರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಭಿಯಾನ ನಡೆಸಲಾಗುವುದು. ನಗರದಲ್ಲಿ ಒಟ್ಟು 7,721 ಮತಗಟ್ಟೆಗಳಿವೆ. 2,929 ಸಾಕ್ಷರತಾ ಕ್ಲಬ್ ಗಳು ಶಾಲಾ- ಕಾಲೇಜು ಸೇರಿದಂತೆ ಹಲವಡೆಗಳಲ್ಲಿ ಸ್ಥಾಪಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಶೇ.55.47ರಷ್ಟು ಮಾತ್ರ ಮತದಾರರಿದ್ದಾರೆ ಎಂದು ತುಷಾರ್ ಗಿರಿನಾಥ್ ವಿವರಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿ ರಾಜ್ಯದ ಚುನಾವಣಾ ಆಯೋಗದ ವೆಬ್ ಸೈಟ್ : http://www.ceokarnataka.kar.nic.in ಹಾಗೂ ಬಿಬಿಎಂಪಿಯ ವೆಬ್ ಸೈಟ್ www.bbmp.gov.in ನಲ್ಲಿ ಪ್ರಕಟ ಮಾಡಲಾಗಿದೆ. ಮತದಾರರ ಪಟ್ಟಿ ನಿರಂತರವಾಗಿ ಪರಿಷ್ಕರಣೆ ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಮತದರರ ಪಟ್ಟಿಯಲ್ಲಿ ಸೇರ್ಪಡೆ, ತಿದ್ದುಪಡಿ ಹಾಗೂ ಸ್ಥಳಾಂತರ ಮತ್ತು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕಾರ್ಯ ಜಾರಿಯಲ್ಲಿರುತ್ತದೆ.
ಈ ಸಂದರ್ಭದಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ದಯಾನಂದ್, ಡಾ.ಹರೀಶ್ ಕುಮಾರ್, ಜಗದೀಶ್ ನಾಯ್ಕ್, ವೆಂಕಟಾಚಲಪತಿ ಹಾಗೂ ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಉಮೇಶ್ ಉಪಸ್ಥಿತರಿದ್ದರು.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮತ್ತಿತರ ಕಾರ್ಯಗಳಿಗೆ ಮೊಬೈಲ್ ತಂತ್ರಾಂಶ Voter Helpline App ಹಾಗೂ www.nvsp.in ಪೋರ್ಟೆಲ್, 1950 ಸಹಾಯವಾಣಿ, www.voterportal.eci.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.