ಬೆಂಗಳೂರು, ಜ.5 www.bengaluruwire.com : ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊಟ್ಟ ಮೊದಲ ಮೈಸೂರು – ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನ.12ರಿಂದ ಪೂರ್ಣ ರೀತಿಯ ಸೇವೆ ಆರಂಭಿಸಿ ಡಿ.29ರ ತನಕದ 48 ದಿನಗಳಲ್ಲಿ ಒಟ್ಟು 1,41,127 ಜನರು ಈ ಹೈಫೈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆ ಮೂಲಕ ನೈರುತ್ಯ ರೈಲ್ವೆಯು ಈ ಹೊಸ ರೈಲು ಸೇವೆಯಿಂದ 10.21 ಕೋಟಿ ರೂ. ಆದಾಯವನ್ನು ಸಂಗ್ರಹಿಸಿದೆ.
ಚೆನ್ನೈ ನಿಂದ ಹೊರಟು ಬೆಂಗಳೂರಿನ ಮೂಲಕ ಮೈಸೂರು ನಡುವೆ ಹೋಗಿಬರುವ ಓಡಾಡುವ ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಹೋಲಿಸಿದರೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನ ದರ ತುಸು ಹೆಚ್ಚೇ ಎನಿಸಿದರೂ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣಿಸಿದರೆ ಪ್ರಯಾಣಿಕರು ತಲುಪುವ ಗಮ್ಯ ಸ್ಥಾನ ಬಂದಿದ್ದೇ ತಿಳಿದಿರುವಷ್ಟು ಸಲೀಸಾಗಿ ತಮ್ಮ ಸ್ಥಾನಕ್ಕೆ ತಲುಪುತ್ತಾರೆ.
ಹೀಗಾಗಿಯೇ ನವೆಂಬರ್ ತಿಂಗಳಿನಲ್ಲಿ ಕೇವಲ 16 ದಿನಗಳ ರೈಲು ಸೇವೆಯನ್ನು ಒದಗಿಸಿದ ನೈರತ್ಯ ರೈಲ್ವೆಯ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಒಟ್ಟು 46,129 ಮಂದಿ ಪ್ರಯಾಣಿಸಿದ್ದಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ 29ನೇ ತಾರೀಖಿನ ವರೆಗೆ ಒಟ್ಟು 94,998 ಮಂದಿ ಮೈಸೂರು ಚೆನ್ನೈ ನಡುವೆ ಪ್ರಯಾಣಿಸಿದ್ದಾರೆ. ಕಳೆದ ನವೆಂಬರ್ 11ರಂದು ಮೈಸೂರು ಮತ್ತು ಡಾ.ಎಂಜಿಆರ್ ಚನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್ 11ರಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ್ದರು.
ನವೆಂಬರ್ 12ರಿಂದ ಡಿ.29ರ 48 ದಿನಗಳ ಅವಧಿಯಲ್ಲಿ ಬೆಂಗಳೂರು ಮೂಲಕ ಚೆನ್ನೈ- ಮೈಸೂರು ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚರಿಸುತ್ತಿದ್ದರೂ, ಬೆಂಗಳೂರಿನಂದ ಚೆನ್ನೈಗೆ ನಡುವೆ ಮಾತ್ರ ಸಂಚರಿಸುವ ಪ್ರಯಾಣಿಕರೇ ಹೆಚ್ಚಾಗಿದ್ದಾರೆ. ಈ ಅವಧಿಯಲ್ಲಿ ಒಟ್ಟು 77,953 ಮಂದಿ ಈ ಸೇವೆಯನ್ನು ಬಳಸಿಕೊಂಡಿದ್ದಾರೆ. ಇದಾದ ಬಳಿಕ ಬೆಂಗಳೂರು ಹಾಗೂ ಮೈಸೂರು ನಡುವೆ ಒಟ್ಟು 47,742 ಜನರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಚೆನ್ನೈ ನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಚೆನ್ನೈಗೆ ನೇರವಾಗಿ ತೆರಳುವ ಪ್ಯಾಸೆಂಜರ್ ಸಂಖ್ಯೆ ಕೇವಲ 15,452 ಆಗಿರುವುದು ರೈಲ್ವೆ ಇಲಾಖೆ ವಿಶ್ವಾಸನೀಯ ಮೂಲಗಳು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.
‘ಕೆಲಸದ ದಿನಗಳಲ್ಲಿ ಶೇ.65 ರಿಂದ 70ರಷ್ಟು ರೈಲಿನ ಸೀಟುಗಳು ತುಂಬಿರುತ್ತದೆ. ಆದರೆ ವಾರಾಂತ್ಯದಲ್ಲಿ ಈ ರೈಲಿನ ಸೀಟುಗಳು ಪೂರ್ತಿ ಭರ್ತಿಯಾಗಿರುತ್ತದೆ. ಪ್ರಯಾಣಿಕರಿಂದಲೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಗೆ ಉತ್ತಮ ಸ್ಪಂದನೆ ದೊರೆತಿದೆ’ ಎನ್ನತ್ತಾರೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮ.
ವಂದೇ ಭಾರತ್ ರೈಲು ಸಾಗುವ ವೇಳಾಪಟ್ಟಿಯೇನು? :
ಪ್ರತಿದಿನ ಬೆಳಗಿನ ಜಾವ 5.50ಕ್ಕೆ ಚೆನ್ನೈನ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಡುವ ವಂದೇ ಭಾರತ್ ರೈಲು (Train No.20607) ಬೆಳಗ್ಗೆ 7.21ಕ್ಕೆ ಕಟಪಾಡಿಗೆ ಬರಲಿದೆ. ಪುನಃ ಕಟಪಾಡಿಯಿಂದ 7.25ಕ್ಕೆ ಹೊರಡುವ ರೈಲು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ 10.15ಕ್ಕೆ ಬರುತ್ತದೆ. ಅಲ್ಲಿ 5 ನಿಮಿಷಗಳ ಕಾಲ ತಂಗಿ ಪುನಃ 10.20ಕ್ಕೆ ಮೈಸೂರಿನತ್ತ ಹೊರಡುತ್ತದೆ. ಹೀಗೆ ಹೊರಡುವ ರೈಲು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಾಗಿ 2 ಗಂಟೆಗಳಲ್ಲಿ ಅಂದರೆ 12.20ಕ್ಕೆ ಮೈಸೂರಿಗೆ ತಲುಪಲಿದೆ. ಪುನಃ ಮೈಸೂರು ರೈಲ್ವೆ ನಿಲ್ದಾಣದಿಂದ ವಂದೇ ಭಾರತ್ ರೈಲು (Train No.20608) ವಾಪಸ್ ಬಂದ ಮಾರ್ಗದಲ್ಲಿ ಮಧ್ಯಾಹ್ನ 1.05ಕ್ಕೆ ಚೆನ್ನೈನತ್ತ ನಿರ್ಗಮಿಸುತ್ತದೆ.
ರೈಲ್ವೆ ಟಿಕೆಟ್ ದರ ವಿವರ (ಕ್ಯಾಟರಿಂಗ್ ಸೇವೆ ಸೇರಿ) :
ಇಲ್ಲಿಂದ | ಇಲ್ಲಿಗೆ | ಎಸಿ ಚೇರ್ (ರೂ.ಗಳಲ್ಲಿ) | ಎಕ್ಸಿಕ್ಯೂಟಿವ್ ಆಸನ (ರೂ.ಗಳಲ್ಲಿ) |
ಚೆನ್ನೈ | ಮೈಸೂರು | 1,200 | 2,295 |
ಮೈಸೂರು | ಚೆನ್ನೈ | 1,365 | 2,485 |
ಚೆನ್ನೈ | ಕೆಎಸ್ ಆರ್ ಬೆಂಗಳೂರು | 995 | 1885 |
ಕೆಎಸ್ ಆರ್ ಬೆಂಗಳೂರು | ಚೆನ್ನೈ | 940 | 1835 |
ಕೆಎಸ್ ಆರ್ ಬೆಂಗಳೂರು | ಮೈಸೂರು | 515 | 985 |
ಮೈಸೂರು | ಕೆಎಸ್‌ಆರ್ ಬೆಂಗಳೂರು | 730 | 1215 |
ವಂದೇ ಭಾರತ್ ಎಕ್ಸಪ್ರೆಸ್ ರೈಲಿನಲ್ಲಿರುವ ಸೌಕರ್ಯಗಳು :
ವಂದೇ ಭಾರತ್ ಎಕ್ಸಪ್ರೆಸ್ ರೈಲು, ವಿಮಾನಯಾನದಂತಹ ಐಷಾರಾಮಿ ಸೌಕರ್ಯ ಮತ್ತು ಆ ರೀತಿಯ ಪ್ರಯಾಣದ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಆನ್ ಬೋರ್ಡ್ ವೈ-ಫೈ ಇನ್ಫೊಟೈನ್ಮೆಂಟ್, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಕಣ್ಣಿಗೆ ಮುದ ನೀಡುವ ಇಂಟೀರಿಯರ್, ಟಚ್ ಫ್ರೀ ಸೌಕರ್ಯಗಳೊಂದಿಗೆ ಜೈವಿಕ ನಿರ್ವಾತ ಶೌಚಾಲಯಗಳು, ಪ್ರತಿ ಸೀಟಿನ ಕೆಳಗೆ ಎಲ್‌ಇಡಿ ಲೈಟಿಂಗ್ ಚಾರ್ಜಿಂಗ್ ಪಾಯಿಂಟ್, ವೈಯಕ್ತಿಕ ಟಚ್ ಆಧಾರಿತ ರೀಡಿಂಗ್ ಲೈಟ್‌ಗಳು, ಅಗೋಚರ ರೋಲರ್ ತೆರೆಗಳು, ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ತೆರಳುವಾಗ ಆಟೋಮೆಟಿಕ್ ಆಗಿ ತೆಗೆಯುವ ಸ್ಲೈಡಿಂಗ್ ಬಾಗಿಲುಗಳು ಸೇರಿದಂತೆ ಮುಂತಾದ ಉನ್ನತ ಪ್ರಯಾಣಾದ ಸೌಕರ್ಯಗಳನ್ನು ಈ ರೈಲು ಹೊಂದಿದೆ.
180 ಡಿಗ್ರಿ ತಿರುಗುವ ಐಷಾರಾಮಿ ಸೀಟುಗಳು :
ರೈಲಿನಲ್ಲಿರುವ ಎಕ್ಸಿಕ್ಯುಟಿವ್ ಕೋಚ್‌ಗಳು 180 ಡಿಗ್ರಿ ರೋಟೇಟಿಂಗ್ ಆಗುವ ಆಸನಗಳನ್ನು ಹೊಂದಿರುವುದು ವಿಶೇಷವಾಗಿದೆ. ವಿಶೇಷಚೇತನ ಸ್ನೇಹಿ ರೈಲಾಗಿರುವ ವಂದೇ ಭಾರತ್ ನಲ್ಲಿ ಬ್ರೈಲ್ ಅಕ್ಷರಗಳಲ್ಲಿ ಸೀಟ್ ಸಂಖ್ಯೆಗಳೊಂದಿಗೆ ಸೀಟ್ ಹ್ಯಾಂಡಲ್‌ಗಳನ್ನು
ಒದಗಿಸಲಾಗಿದೆ.
ಬೋಗಿಗಳಲ್ಲಿ ದೊಡ್ಡ ಗಾಜಿನ ಕಿಟಕಿಗಳಿದ್ದು ರೈಲಿನ ಸೌಂದರ್ಯವನ್ನು ಹೆಚ್ಚಿಸಿದೆ. ಈ ದೊಡ್ಡ ಗಾಜುಗಳು ಎರಡು ದಪ್ಪ ಪದರಗಳನ್ನು ಹೊಂದಿದ್ದು, ರೈಲಿನ ಹೊರಭಾಗದಲ್ಲಿ ಪ್ರತಿಫಲಿತ ಲ್ಯಾಮಿನೇಟೆಡ್ ಗ್ಲಾಸ್ ಹಾಗೂ ಒಳಭಾಗದಲ್ಲಿ ಟೆಂಪರ್ಡ್ ಸುರಕ್ಷತಾ ಗಾಜುಗಳನ್ನು ಅಳವಡಿಸಲಾಗಿದೆ. ಇದರಿಂದ ರೈಲಿನ ಹೊರಗಿನ ಶಬ್ದಗಳು ಒಳಭಾಗದಲ್ಲಿ ಕೇಳಿಸುವುದಿಲ್ಲ. ಆಧುನಿಕ ರೈಲು ಸೆಟ್‌ನ ಒಟ್ಟಾರೆ ಥೀಮ್‌ಗೆ ಅನುಗುಣವಾಗಿ ರೈಲಿನ ಬಣ್ಣ ಮತ್ತು ಒಳಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡು ಡ್ರೈವರ್ ಕ್ಯಾಬ್ ಕೋಚ್‌ಗಳನ್ನು ಹೊಂದಿದೆ. ರೈಲಿನ ಎರಡೂ ತುದಿಗಳಲ್ಲಿಂದಲೂ ಲೊಕೋ ಪೈಲಟ್ ರೈಲನ್ನು ಚಲಾಯಿಸುವ ಸೌಲಭ್ಯ ಹೊಂದಿದೆ. ಇದರಿಂದ ಅಂತಿಮ ರೈಲ್ವೇ ನಿಲ್ದಾಣಗಳಲ್ಲಿ ತ್ವರಿತವಾಗಿ ತಿರುಗುವ ಸಮಯವನ್ನು ಉಳಿಸುತ್ತದೆ.
ತುರ್ತು ಸಂದರ್ಭಕ್ಕಾಗಿ ‘ಎಮೆರ್ಜೆನ್ಸಿ ಟಾಕ್ –ಬ್ಯಾಕ್’ ಯೂನಿಟ್ :
ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ರೈಲಿನ ಚಾಲಕರೊಂದಿಗೆ ಮಾತನಾಡಲು ‘ಎಮೆರ್ಜೆನ್ಸಿ ಟಾಕ್ –ಬ್ಯಾಕ್’ ಯೂನಿಟ್ ಅನ್ನು ಸೂಕ್ತವಾದ ಕಡೆ ಅಳವಡಿಸಲಾಗಿದೆ. ಅದೇ ರೀತಿ ರೈಲಿನೊಳಗೆ ಪ್ರವೇಶದ ಬಾಗಿಲುಗಳು (Plug Doors) ರೈಲು ನಿಲ್ದಾಣದಿಂದ ರೈಲು ಹೊರಡಲು ಪ್ರಾರಂಭವಾದಾಗಲೆಲ್ಲ ಹಾಗೂ ಮುಂದಿನ ನಿಲ್ದಾಣದಲ್ಲಿ ಇಳಿಯುವ ತನಕ ಸ್ವಯಂಚಾಲಿತವಾಗಿ ಮುಚ್ಚಿರುತ್ತದೆ. ಹಾಗಾಗಿ ಚಲಿಸುವ ರೈಲಿನಿಂದ ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ಸಾಧ್ಯತೆಗಳಿರುವುದಿಲ್ಲ. ಇನ್ನು ಹವಾನಿಯಂತ್ರಿತ ವ್ಯವಸ್ಥೆಯಿರುವ ರೈಲಿನಲ್ಲಿ ಪ್ರಯಾಣಿಕರಿಗೆ ತಮ್ಮ ಸೀಟಿನ ಮೇಲ್ಬಾಗ ವಿಮಾನದಲ್ಲಿರುವಂತೆ ಲಗೇಜ್ ರ್ಯಾಕ್ ಅಳವಡಿಸಲಾಗಿದೆ. ಪ್ರೀಜರ್, ಆಹಾರ ಬಿಸಿ ಮಾಡುವ ಯಂತ್ರ, ವಾಟರ್ ಬಾಯ್ಲರ್ ಹಾಗೂ ಆಹಾರ ಬಡಿಸಲು ಟ್ರಾಲಿಯಂತಹ ಸಲಕರಣೆಯೊಂದಿಗೆ ಮೊದಲೇ ಸಿದ್ದಪಡಿಸಿಟ್ಟಿರುವ ಆಹಾರವನ್ನು ಸಂಗ್ರಹಿಸಲು, ತಯಾರಿಸಲು ಹಾಗೂ ಪ್ರಯಾಣಿಕರಿಗೆ ಬಡಿಸಲು ಪ್ಯಾಂಟ್ರಿ ಕಂಪಾರ್ಟ್ ಮೆಂಟ್
ಉದ್ದ ಮೂತಿಯ ಡ್ರೈವರ್ ಕ್ಯಾಬಿನ್ ವಿಶೇಷ :
ಡ್ರೈವರ್ ಕ್ಯಾಬಿನ್ ಏರೋಡೈನಾಮಿಕ್’ ಆಕಾರ (ನೋಸ್ ಕೋನ್) ಗಾಳಿಯ ಎಳೆತವನ್ನು ಕಡಿಮೆ ಮಾಡುವ ಮೂಲಕ ರೈಲಿನ ಚಲನೆಗೆ ಅಗತ್ಯವಾದ ಹೆಚ್ಚಿನ ಶಕ್ತಿಯನ್ನು ಗಮನಾರ್ಹವಾಗಿ ಉಳಿಸುತ್ತದೆ. ಇದು ರೈಲಿಗೆ ವಿಶೇಷವಾದ ನೋಟ ಹಾಗೂ ಹೈಟೆಕ್ ಸೇವೆಯನ್ನು ಪ್ರತಿಬಿಂಬಿಸುವಂತಿದೆ.
16 ಬೋಗಿಯ ಟ್ರೈನ್ ನಲ್ಲಿ 1128 ಪ್ರಯಾಣಿಕರ ಆಸನ :
ಈ ಎಕ್ಸಪ್ರೆಸ್ ರೈಲು ಸೆಟ್ 430 ಟನ್ ತೂಗುತ್ತದೆ. 1,128 ಪ್ರಯಾಣಿಕರ ಆಸನ ಸಾಮರ್ಥ್ಯದೊಂದಿಗೆ 16 ಪ್ರಯಾಣಿಕ ಬೋಗಿಗಳನ್ನು(Coaches) ಹೊಂದಿದೆ. ಇದರಲ್ಲಿ ಎರಡು ವಿಭಾಗಗಳು ಪ್ರಥಮ ದರ್ಜೆಯ ಭಾಗಗಳಾಗಿವೆ. ಈ ಎಕ್ಸಿಕ್ಯೂಟಿವ್ ಬೋಗಿಗಳಲ್ಲಿ ತಲಾ 52 ಆಸನಗಳಿವೆ. ಉಳಿದ ಕೋಚ್ ಗಳಲ್ಲಿ ತಲಾ 78 ಆಸನಗಳಾಗಿವೆ.
ಬೆಂಗಳೂರು ಮತ್ತು ಮೈಸೂರು ನಡುವೆ ರೈಲಿನ ಗರಿಷ್ಠ ಅನುಮತಿಸಿರುವ ವೇಗವು ಗಂಟೆಗೆ 100 ಕಿ.ಮೀ ಮತ್ತು ಬೆಂಗಳೂರು ಮತ್ತು ಚೆನ್ನೈ ನಡುವೆ 110 ಕಿ.ಮೀ ಆಗಿದೆ. ಬೆಂಗಳೂರಿನಿಂದ ಮೈಸೂರು ನಡುವಿನ ವೇಗವನ್ನು ಗಂಟೆಗೆ 110 ಕಿಮೀ ಮತ್ತು ಚೆನ್ನೈನಿಂದ ಬೆಂಗಳೂರು ನಡುವಿನ ವೇಗವನ್ನು ಗಂಟೆಗೆ 130 ಕಿ.ಮೀಗೆ ಹೆಚ್ಚಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ನೈರುತ್ಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ :
ವಂದೇ ಭಾರತ್ ಗಂಟೆಗೆ ಗರಿಷ್ಠ 180 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು 54.6 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪುತ್ತದೆ. ದಿನ ಪರ್ಯಾಯ ಕೋಚ್‌ಗಳು ರೈಲನ್ನು ಎಳೆಯಲು ಟಾಕ್ಷನ್ ಮೋಟಾರ್‌ಗಳನ್ನು ಹೊಂದಿವೆ. ಇದು ಈ ವೇಗವರ್ಧನೆ ಮತ್ತು ಕ್ಷೀಣತೆಗೆ ಸಹಾಯ ಮಾಡುತ್ತದೆ. ಇದು ಪ್ರಯಾಣಿಕರಿಗೆ ತುಂಬಾ ಆರಾಮದಾಯಕವಾಗಿರುತ್ತದೆ, ಏಕೆಂದರೆ ಅವರು ಯಾವುದೇ ಜರ್ಕ್ ಅನ್ನು ಅನುಭವಿಸುವುದಿಲ್ಲ. ಕೈಗಾರಿಕಾ ಕೇಂದ್ರವಾದ ಚೆನ್ನೈ ಮತ್ತು ತಾಂತ್ರಙ್ಞನದ ಹಬ್ ಬೆಂಗಳೂರು ಹಾಗು ವಿಶ್ವ ಪ್ರಸಿದ್ದ ಸಾಂಸ್ಕೃತಿಕ ಪ್ರವಾಸಿ ನಗರ ಮೈಸೂರು ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯು ಮಹತ್ತರ ಹೆಜ್ಜೆಯಾಗಿದೆ.
ವಂದೇ ಭಾರತ್ ರೈಲ್ವೆ ಸೇವೆಗೆ ಪ್ರಯಾಣಿಕರು ಏನಂತಾರೆ? :
‘ತಾವು ಚೆನ್ನೈನಿಂದ ಮೈಸೂರಿಗೆ ಪ್ರಯಾಣ ಮಾಡುವ ಆರಂಭದಲ್ಲಿ ವಂದೇ ಭಾರತ್ ಟ್ರೈನ್ ಒಳಗಿನ ಎಕ್ಸಿಕ್ಯುಟಿವ್ ಸೀಟು ಇಷ್ಟೊಂದು ಆರಾಮದಾಯಕ ಹಾಗೂ ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ ಅಂತ ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದೆ. ಆದರೆ ಈ ರೈಲಿನಲ್ಲಿನ ಪ್ರಯಾಣ ಮಾಡಿದ ಮೇಲೆ ಭಾರತೀಯ ರೈಲ್ವೆಯ ಇತರ ರೈಲುಗಳಿಗಿಂತ ಈ ರೈಲಿನ ಪ್ರಯಾಣ ವಿಭಿನ್ನ ಅನುಭವ ನೀಡಿದೆ. ರೈಲ್ವೆ ಇಲಾಖೆ ಈ ರೀತಿ ಇನ್ನಷ್ಟು ರೈಲು ಸೇವೆಗಳನ್ನು ಇತರೆಡೆಯೂ ವಿಸ್ತರಿಸಲಿ’ ಎಂದು ಬೆಂಗಳೂರು ವೈರ್ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು ಪ್ರಯಾಣಿಕರಾದ ನಮ್ರತಾ.
‘ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹೆಸರು ಬಹಳ ಸೊಗಸಾಗಿದೆ ಹಾಗೂ ದೇಶದ ಬಗ್ಗೆ ಹೆಮ್ಮೆಯನ್ನು ಮೂಡಿಸುವಂತಿದೆ. ಅತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಎಸಿಚೇರ್ ಕಾರ್ ಸೀಟ್ ನಲ್ಲಿ ಪ್ರಯಾಣಿಸುವಾಗ ಬೆಂಗಳೂರಿನ ಮೆಟ್ರೊ ರೈಲಿನ ಹೋದ ಅನುಭವ ನೀಡಿತು. ಇಲ್ಲಿನ ಸೇವೆ ಗುಣಮಟ್ಟವನ್ನು ಮುಂದೆಯೂ ಹೀಗೆ ಮುಂದುವರೆಸಿಕೊಂಡು ಹೋದರೆ ಮೈಸೂರು- ಚೆನ್ನೈ ನಡುವಿನ ಸೆಮಿ ಹೈಸ್ಪೀಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂದು ಮೆಕಾನಿಕಲ್ ಎಂಜಿನಿಯರ್ ವಾಸುದೇವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.