ಬೆಂಗಳೂರು, ಜ.4 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿಗಳನ್ನು ತಡೆಗಟ್ಟುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು 2022ನೇ ಸಾಲಿನಲ್ಲಿ ಒಟ್ಟು 22 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, 40 ರೌಡಿಗಳ ವಿರುದ್ಧ ಬಾಂಡ್ ಗಳ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 13 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಒಟ್ಟು 3,100 ಮಂದಿಯ ವಿರುದ್ಧ ಭದ್ರತಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿದ್ದು, ಷರತ್ತು ಉಲ್ಲಂಘನೆ ಮಾಡಿದ 34 ರೌಡಿಗಳನ್ನು ಕಾರಾಗೃಹಕ್ಕೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಕಳೆದ ವರ್ಷ (2022) 172 ಕೊಲೆ ಕೇಸ್ ಗಳನ್ನು ಪತ್ತೆಹಚ್ಚಲಾಗಿದೆ. ದಾಖಲಾದ 23 ದರೋಡೆ ಪ್ರಕರಣಗಳ ಪೈಕಿ 22 ಕೇಸ್ ಬೇಧಿಸಿದ್ದೇವೆ. 154 ಸರಗಳ್ಳತನ ಪ್ರಕರಣಗಳ ಪೈಕಿ 134 ಕೇಸ್ ಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಜೈಲಿಗಟ್ಟಲಾಗಿದೆ. 701 ಮನೆಗಳ್ಳತನ ಕೇಸ್ ಗಳಲ್ಲಿ 299 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ನಗರದಾದ್ಯಂತ 2022ರಲ್ಲಿ 5,066 ವಾಹನ ಕಳ್ಳತನ ಪ್ರಕರಣ ದಾಖಲಗಿವೆ. ಅವುಗಳಲ್ಲಿ 1,189 ಪ್ರಕರಣಗಳನ್ನು ಬಯಲಿಗೆಳೆದಿದ್ದೇವೆ. ಕಳ್ಳತನ ಪ್ರಕರಣ 2511 ನಡೆದಿದ್ದು 561 ಪ್ರಕರಣ ಪತ್ತೆ ಮಾಡಲಾಗಿದೆ. 421 ಜೂಜು, 201 ಕ್ರಿಕೇಟ್ ಬೆಟ್ಟಿಂಗ್ ಕೇಸ್ ದಾಖಲಿಸಲಾಗಿದೆ. ಸೈಬರ್ ಪ್ರಕರಣದಲ್ಲಿ 8,773 ಕೇಸ್ ದಾಖಲಾಗಿದ್ದು 7,734 ಪ್ರಕರಣ ಪತ್ತೆಯಾಗಿದ್ದು 13.06 ಕೋಟಿ ರೂ. (13,06,65,134 ₹) ಹಣ ತಡೆಹಿಡಿಯಲಾಗಿದೆ.
ನಂತರ ಮಾತನಾಡಿದ ಸಂಚಾರ ವಿಭಾಗ ವಿಶೇಷ ಆಯುಕ್ತ ಸಲೀಂ, ಕಳೆದ ಐದು ವರ್ಷದಲ್ಲಿ ನಗರದಲ್ಲಿ ನಡೆದ ಒಟ್ಟು ಅಪಘಾತ ಪ್ರಮಾಣದಲ್ಲಿ 2018 ಕ್ಕೆ ಹೋಲಿಸಿದರೆ ಶೇ.17 ರಷ್ಟು ಇಳಿಕೆ ಯಾಗಿದೆ. ಸಂಚಾರ ವಿಭಾಗದಲ್ಲಿ 2022ರ ಇಸವಿಯಲ್ಲಿ ನೇರವಾಗಿ ಹಾಗೂ ಕ್ಯಾಮರಾ ಮೂಲಕ ಒಟ್ಟು 1,04,65,124 ಸಂಚಾರ ಉಲ್ಲಂಘನೆ ಪ್ರಕರಣಗಳ ದಾಖಲಾಗಿದೆ. ಸಂಚಾರಿ ಪೊಲೀಸರಿಂದ ನೇರವಾಗಿ 8,27,690 ಪ್ರಕರಣ ದಾಖಲು ಮಾಡಿದ್ದರೆ, ಕ್ಯಾಮರಾಗಳ ಮೂಲಕ 96,20,595 ಪ್ರಕರಣ ರಿಜಿಸ್ಟರ್ ಆಗಿದೆ. ಇದರಿಂದ 2022 ರ ಅಂತ್ಯದ ವರೆಗೆ 179 ಕೋಟಿ ರೂ. (179,24,88,190₹) ಒಟ್ಟು ದಂಡದ ಮೊತ್ತ ಸಂಗ್ರಹವಾಗಿದೆ ಎಂದರು.
ಸಿಲಿಕಾನ್ ಸಿಟಿಯಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಅಪಘಾತ ಪ್ರಕರಣಗಳು ಏರಿಕೆಯಾಗುತ್ತಿದೆ. ಒಟ್ಟು 3827 ಅಪಘಾತಗಳು ನಡೆದಿದ್ದು, ಆ ಪೈಕಿ 777 ಮೃತಪಟ್ಟಿದ್ದರೆ, 748 ಮಾರಣಾಂತಿಕವಾಗಿದ್ದವು. 3079
ಸಾಮಾನ್ಯ ಅಪಘಾತಗಳಾಗಿದ್ದರೆ, 3235
ಗಾಯಗೊಂಡಿದ್ದಾರೆ.
ಸಿಸಿಬಿ ಜಂಟಿ ಕಮಿಷನರ್ ಶರಣಪ್ಪ,ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.