ಗಾಂಧಿನಗರ, ಡಿ.30 www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಮೋದಿ (100) ಶುಕ್ರವಾರ ಮುಂಜಾನೆ, ಅಹ್ಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪ್ರಧಾನಿ ಮೋದಿಯವರು ಅತ್ಯಂತ ಪ್ರೀತಿಸುವ ಅವರ ತಾಯಿಯ ಅಗಲಿಕೆಯ ಬಗ್ಗೆ ದೇಶಾದ್ಯಂತ ಗಣ್ಯರು, ಪ್ರಧಾನಿಯವರ ಕ್ಯಾಬಿನೆಟ್ ಸಚಿವರು, ದೇಶವಿದೇಶಗಳ ಗಣ್ಯರು ಸೇರಿದಂತೆ ಕೋಟ್ಯಾಂತರ ನಾಗರೀಕರು ಸಾಂತ್ವಾನ ಹೇಳಿದ್ದಾರೆ.
ಅಗಲಿದ ತಮ್ಮ ತಾಯಿ ಹೀರಾಬೇನ್ ಮೋದಿಯವರ ಪಾರ್ಥೀವ ಶರೀರಕ್ಕೆ ಹೂಗುಚ್ಛ ವಿರಿಸಿ, ಅಂತಿಮ ವಿಧಿ ವಿಧಾನ ಕಾರ್ಯವನ್ನು ಪ್ರಧಾನಿ ಮೋದಿ ನೆರವೇರಿಸಿದರು. ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಸ್ಪೂರ್ತಿಯ ಸೆಲೆಯಾದ ತಾಯಿ ಹೀರಾಬೇನ್ ಅವರನ್ನು ತುಂಬಾ ನೋವಿನಿಂದಲೇ ಬಾರದ ಲೋಕಕ್ಕೆ ಭಾರವಾದ ಮನಸ್ಸಿನಿಂದಲೇ ಪ್ರಧಾನಿ ಮೋದಿ ಕಳುಹಿಸಿಕೊಟ್ಟರು.
ಇದಕ್ಕೂ ಮುನ್ನ,ತಾವು ಅತ್ಯಂತ ಗೌರವಿಸುವ ಹಾಗೂ ಪ್ರೀತಿಸುವ ತಮ್ಮ ತಾಯಿ ಅಗಲಿಕೆಯ ಕೆಲಹೊತ್ತಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, ‘ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ಅಮ್ಮ ನಾನು ನಿನ್ನಲ್ಲಿ ಯಾವಾಗಲೂ ಆ ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ.” ಎಂದು ಅರ್ಥಪೂರ್ಣ ಸಾಲುಗಳನ್ನು ಬರೆದಿದ್ದಾರೆ.
“ಅವರ 100 ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಅವರು ಹೇಳಿದ್ದರೂ, ಎಲ್ಲಾ ವೇಳೆಯಲ್ಲೂ ಜ್ಞಾಪಕವಿಟ್ಟುಕೋ , ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧತೆಯಿಂದ ಜೀವನ ಮಾಡು, ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಜೀವನವನ್ನು ಶುದ್ಧತೆಯಿಂದ ಬದುಕಿರಿ ಎಂದು ಅವರು ಹೇಳಿದ್ದರು.” ಎಂದು ತಮ್ಮ ತಾಯಿ ಹೇಳಿದ ಮಾತುಗಳನ್ನು ಟ್ವಿಟರ್ ನಲ್ಲಿ ಬಹಳ ನೋವಿನಿಂದ ದಾಖಲಿಸಿದ್ದಾರೆ.
ಹೀರಾಬೇನ್ ಮೋದಿ ಅವರಿಗೆ ಚಿಕಿತ್ಸೆ ನೀಡಿದ ಯುಎನ್ ಮೆಹ್ತಾ ಇನ್ಸಿಟ್ಯೂಟ್ ಆಫ್ ಕಾರ್ಡಿಯಾಲಜಿ ಹಾಗೂ ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, “ಯುಎನ್ ಮೆಹ್ತಾ ಹಾರ್ಟ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ಹೀರಾಬೇನ್ ಮೋದಿ 30-12-2022 ರಂದು ಮುಂಜಾನೆ 3.30ಕ್ಕೆ ನಿಧನ ಹೊಂದಿದರು.” ಎಂದು ತಿಳಿಸಿದೆ.