ಬೆಂಗಳೂರು, ಡಿ.29 www.bengaluruwire.com : ಕರೋನಾ ಸೋಂಕು ಹರಡುವ ಭೀತಿಯ ನಡುವೆಯೇ ಎಲ್ಲರೂ ಹೊಸ ವರ್ಷ 2023ರನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ. 2022ರ ಅಂತ್ಯದಲ್ಲಿರುವ ಸಂದರ್ಭದಲ್ಲಿ ಈ ವರ್ಷ ಗೂಗಲ್ ಇಂಡಿಯಾ(Google India) ದಲ್ಲಿ ಅತಿಹೆಚ್ಚು ಟ್ರೆಂಡಿಂಗ್ (Trending) ಆಗಿರೋ ವಿಷಯಗಳು ಯಾವುದು? ಜನರು ಗೂಗಲ್ ನಲ್ಲಿ ಯಾವುದನ್ನು ಹುಡುಕಲು ಹೆಚ್ಚು ಕಾತುರರಾಗಿದ್ದರು? ಇಲ್ಲಿದೆ ಕುತೂಹಲಕಾರಿ ಅಂಶಗಳು.
ಟಾಪ್-5 ಸರ್ಚಸ್ ವಿಷಯಗಳು :
ಭಾರತದಲ್ಲಿ 2022ರಲ್ಲಿ ಗೂಗಲ್ ನಲ್ಲಿ ಜನರು ಅತಿಹೆಚ್ಚು ಹುಡುಕಾಟ ನಡೆಸಿದ ಟಾಪ್-5 ಸರ್ಚಸ್ (Searches) ಯಾವುದು ಗೊತ್ತಾ? 1) ಇಂಡಿಯನ್ ಪ್ರಿಮಿಯರ್ ಲೀಗ್ (Indian Premier League), 2) ಕೋವಿನ್ (COWIN), 3) ಫೀಫಾ ವರ್ಲ್ಡ್ ಕಪ್ (FIFA WORLD CUP), 4) ಏಷ್ಯಾ ಕಪ್ (ASIA CUP), 5) ಐಸಿಸಿ ಟಿ20 ವರ್ಲ್ಡ್ ಕಪ್ (ICC T20 WORLD CUP) ಎಂಬ ಕ್ರೀಡಾ ವಿಚಾರಗಳ ಬಗ್ಗೆ ಅತಿಹೆಚ್ಚು ಹುಡುಕಾಟ ನಡೆಸಿದ್ದರು ಎಂದು ಗೂಗಲ್ ಟ್ರೆಂಡ್ ತಿಳಿಸಿದೆ.
ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳು ಯಾವುದು? :
2022 ಇಸವಿಯಲ್ಲಿ ಭಾರತೀಯರು ಗೂಗಲ್ ನಲ್ಲಿ ಹುಡುಕಿದ ಟಾಪ್-1 ಚಿತ್ರಗಳಲ್ಲಿ ‘ಬ್ರಹ್ಮಾಸ್ತ್ರ : ಭಾಗ ಒಂದು’ ಚಲನ ಚಿತ್ರವು ಮೊದಲ ಸ್ಥಾನದಲ್ಲಿದೆ(Brahmhastra : Part One Shiva). 2) ಕೆಜಿಎಫ್ – 2 ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಜಗತ್ತಿನಾದ್ಯಂತ ತೆರೆಕಂಡ ಯಶಸ್ವಿ ಕನ್ನಡ ಚಲನಚಿತ್ರ (K.G.F : Chapter 2) 3) 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ನರಮೇಧವನ್ನು ಚಿತ್ರೀಕರಿಸಿರುವ ಚಿತ್ರ ‘ಕಾಶ್ಮೀರಿ ಫೈಲ್ಸ್’ (The Kashmir Files) 4) ನೆಟ್ಟಿಗರು ಅತಿಹೆಚ್ಚು ಸರ್ಚ್ ಮಾಡಿದ ನಾಲ್ಕನೇ ಚಿತ್ರ ಎಸ್.ಎಸ್.ರಾಜಮೌಳಿ ನಿರ್ದೇಶನ ತೆಲುಗಿನ ಚಿತ್ರ ‘ಆರ್ ಆರ್ ಆರ್’ ಆಗಿದೆ (RRR) 5) ಇನ್ನು ಕನ್ನಡ ಭಾಷೆಯ ‘ಕಾಂತಾರ’ (Kantara) ಬಾಕ್ಸ್ ಆಫೀಸ್ ಗಳಿಕೆ ಹಾಗೂ ಚಿತ್ರರಸಿಕರನ್ನು ಅತಿಹೆಚ್ಚು ಸೆಳೆದ ಚಿತ್ರವಾಗಿದ್ದು, ಗೂಗಲ್ ನಲ್ಲಿ 20222ರಲ್ಲಿ ಅತಿಹೆಚ್ಚು ಸರ್ಚ್ ಮಾಡಿದ ಐದನೇ ಚಲನಚಿತ್ರವಾಗಿದೆ.
ಅತಿ ಹೆಚ್ಚು ಸರ್ಚ್ ಮಾಡಿರುವ ವ್ಯಕ್ತಿಗಳು ಯಾರು?:
1) ನೂಪುರ್ ಶರ್ಮ (Nupur Sharma) ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದು, ಟಿವಿ ಚಾನಲ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಜಕೀಯ ಮುಖಂಡರಾಗಿದ್ದಾರೆ. 2) ದ್ರೌಪದಿ ಮುರ್ಮು (Droupadi Murmu ಬುಡಕಟ್ಟು ಪಂಗಡಕ್ಕೆ ಸೇರಿದ ) ದೇಶದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿದ್ದಾರೆ. ಗೂಗಲ್ ನಲ್ಲಿ ಅತಿಹೆಚ್ಚು ಸರ್ಚ್ ಮಾಡಿದ ಎರಡನೇ ವ್ಯಕ್ತಿಯಾಗಿದ್ದಾರೆ. 3) ರಿಶಿ ಸುನುಕ್ (Rishi Sunak) ಭಾರತೀಯ ಮೂಲದ ಬ್ರಿಟನ್ ಪ್ರಧಾನಿಯಾಗಿದ್ದಾರೆ. 4) ಲಲಿತ್ ಮೋದಿ (Lalit Modi) ದೇಶದ ದೊಡ್ಡ ಬ್ಯುಸಿನೆಸ್ ಮೆನ್ ಹಾಗೂ ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ. 5) ನಟಿ ಸುಶ್ಮಿತಾಸೇನ್ (Sushmita Sen) 5ನೇ ಅತಿಹೆಚ್ಚು ಸರ್ಚ್ ಮಾಡಿದ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ.
ಟಾಪ್-5 ಸುದ್ದಿಗಳು ಯಾವುದು? :
1) ಲತಾ ಮಂಗೇಷ್ಕರ್ ಸಾವನ್ನಪ್ಪಿರುವ ವಿಷಯ (Lata Mangeshkar passing) 2) ಭಾರತೀಯ ರ್ಯಾಪರ್ ಮತ್ತು ಹೋರಾಟಗಾರ ಸಿಧು ಮೂಸೆ ವಾಲಾ ಸಾವಿನ ವಿಚಾರ (Sidhu Muse wala passing) 3) ರಷ್ಯಾ ಮತ್ತು ಉಕ್ರೇನ್ ಯುದ್ಧ (Russia Ukraine War) 4) ಉತ್ತರಪ್ರದೇಶ ಚುನಾವಣಾ ಫಲಿತಾಂಶ (Uttarpradesh Election Results) 5) ಭಾರತದಲ್ಲಿ ಕೋವಿಡ್19 ಪ್ರಕರಣಗಳು (Covid-19 Cases In India)
ಟಾಪ್-5 ಪ್ರಶ್ನೆಗಳು :
ನೆಟ್ಟಿಗರು ಯಾವ ವಿಚಾರಕ್ಕೆಲ್ಲಾ ಹೆಚ್ಚು ತಲೆ ಕೆಡೆಸಿಕೊಂಡು ಗೂಗಲ್ ನಲ್ಲಿ ಪ್ರಶ್ನೆ ಹಾಕಿದ್ದಾರೆ ಅಂತ ತಿಳಿದರೆ ನಿಮಗೆ ಆಶ್ಚರ್ಯ ಆಗಬಹುದು. ಅಂತಹ ಟಾಪ್-5 ಪ್ರಶ್ನೆಗಳು ಯಾವುದೆಂದರೆ : 1) ಅಗ್ನಿಪಥ್ ಯೋಜನೆ ಎಂದರೇನು? (What Is Agneepath Schmeme?), 2) ನ್ಯಾಟೊ ಎಂದರೇನು? (What is NATO?), 3) ಎನ್ ಎಫ್ ಟಿ ಎಂದರೇನು? (What Is NFT?) 4) ಪಿಎಫ್ ಐ ಎಂದರೇನು? (What Is PFI?) 5) 4ರ ಸ್ಕ್ವೇರ್ ರೂಟ್ ಯಾವುದು? (What Is The Square Root Of 4?)
ಕೇಂದ್ರ ಸರ್ಕಾರ 2022ರಲ್ಲಿ ಜಾರಿಗೆ ತಂದ ಅಗ್ನಿಪಥ್ ಯೋಜನೆಯು ಕಮಿಷನ್ಡ್ ರ್ಯಾಂಕ್ ಕೆಳಗಿನ ಹುದ್ದೆಗಳಿಗೆ ಭೂಸೇನೆ, ವಾಯು ಸೇನೆ ಹಾಗೂ ನೌಕಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಲು ದೇಶದ ಯುವಜನರಿಗೆ ಅವಕಾಶ ನೀಡುವ ಯೋಜನೆಯಾಗಿದೆ. ಈ ಯೋಜನೆ ಬಗ್ಗೆ ಗೂಗಲ್ ನಲ್ಲಿ ಅತಿಹೆಚ್ಚು ಜನರು ಹುಡುಕಾಟ ನಡೆಸಿದ್ದಾರೆ. ಇನ್ನು ಟಾಪ್-2 ಸ್ಥಾನದ ಸರ್ಚಸ್ ನಲ್ಲಿ ಸ್ಥಾನಪಡೆದಿರುವ ವಿಷಯ ನ್ಯಾಟೋ ಪದವಾಗಿದೆ. ಉತ್ತರ ಅಟ್ಲಾಂಟಿಂಕ್ ಒಪ್ಪಂದ (NATO) ಎಂದರೆ 28 ಯೂರೋಪಿಯನ್ ದೇಶಗಳೂ ಹಾಗೂ 2 ಉತ್ತರ ಅಮೆರಿಕ ರಾಷ್ಟ್ರಗಳು ಸೇರಿದಂತೆ 30 ಸದಸ್ಯ ದೇಶಗಳು ಮಿಲಿಟರಿ ಹಾಗೂ ರಾಜಕೀಯ ವಿಚಾರದಲ್ಲಿ ಅಂತರ ಸರ್ಕಾರೀ ಮೈತ್ರಿ ಮಾಡಿಕೊಂಡಿರುವ ಒಪ್ಪಂದವಾಗಿದೆ.
ಟಾಪ್-3ನೇ ಸ್ಥಾನದಲ್ಲಿರುವ ಎನ್ ಎಫ್ ಟಿ ಎಂದರೆ, ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ವ್ಯವಹರಿಸುವ ಕ್ರಿಪ್ಟೋ ಕರೆನ್ಸಿ ಮಾದರಿಯ ಡಿಜಿಟಲ್ ಆಸ್ತಿಯಾಗಿದೆ. ಟಾಪ್-4ನೇ ಸ್ಥಾನದಲ್ಲಿ ಪಿಎಫ್ ಐ ಎಂದರೇನು ಎಂದು ಬಹಳಷ್ಟು ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಪ್ಯೂಪುಲರ್ ಫ್ರಂಟ್ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಪಿಎಫ್ ಐ ದೇಶದಲ್ಲಿನ ಇಸ್ಲಾಮಿಕ್ ರಾಜಕೀಯ ಸಂಘಟನೆಯಾಗಿದೆ. ಈ ಸಂಘಟನೆಯನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆ, ಕಾನೂನು ಬಾಹಿರ ಕೃತ್ಯ ಕಾಯ್ದೆಯಡಿ 2022ರ ಸೆಪ್ಟೆಂಬರ್ 28ರಿಂದ 5 ವರ್ಷಗಳ ಕಾಲ ನಿಷೇಧ ಹೇರಿದೆ. ಇನ್ನು ಟಾಪ್-5 ಸರ್ಚ್ ನಲ್ಲಿ ಗಣಿತದ ವಿಷಯವಾಗಿರುವ 4ರ ಸ್ಕ್ರೇರ್ ರೂಟ್ ಯಾವುದು ಎಂಬ ಪ್ರಶ್ನೆಯನ್ನು ಹೆಚ್ಚಿನ ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.
ಹೇಗೆ? ಎಂಬ ಆರಂಭಿಕ ಪ್ರಶ್ನೆಯೊಂದಿಗೆ ಹುಡುಕಿದ ಟಾಪ್-5 ವಿಷಯಗಳು :
- ಹೇಗೆ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು? (How to Download Vaccination Certificate?), 2) ಪಿಟಿಆರ್ ಸಿ ಚಲನ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ? (How To Download PTRC Challen?), 3) ಹೇಗೆ ಪೋರ್ನ್ ಸ್ಟಾರ್ ಮಾರ್ಟಿನ್ ಪಾನೀಯವನ್ನು ಕುಡಿಯುವುದು? (How To Drink Pornstar martini?) 4) ಇ-ಶ್ರಮ್ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ? (How To Make E-SHRAM Card?) 5) ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಬೇಧಿ ನಿಲ್ಲಿಸುವುದು ಹೇಗೆ? (How To Stop Motions During Pregnancy?) ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
2022ರ ಇಸವಿಯಲ್ಲಿ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೆಚ್ಚಿನ ಜನರು ಹುಡುಕಿದ್ದು, ಈ ವಿಷಯವು ಟಾಪ್-1 ಸ್ಥಾನ ಪಡೆದಿದೆ. ಇನ್ನು ವೃತ್ತಿಪರ ತೆರಿಗೆ ನೋಂದಣಿ ಪ್ರಮಾಣಪತ್ರ ಪಡೆಯುವ ಚಲನ್ ಹೇಗೆ ಡೌನ್ ಲೋಡ್ ಮಾಡಿಕೊಳ್ಳಬಹುದೆಂದು ಅತಿಹೆಚ್ಚಾಗಿ ಹುಡುಕಿದ ವಿಷಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಬ್ರಿಟನ್ ನಲ್ಲಿ ಅತಿಹೆಚ್ಚು ಖ್ಯಾತಿ ಪಡೆದಿರೋ ಕಾಕ್ ಟೈಲ್ ಪೋರ್ನ್ ಸ್ಟಾರ್ ಮಾರ್ಟಿನ್ ಪಾನೀಯವನ್ನು ಹೇಗೆ ಕುಡಿಯುವುದು ಎಂದು ಗೂಗಲ್ ನಲ್ಲಿ ಅತಿಹೆಚ್ಚು ಮಂದಿ ಹುಡುಕಿದ್ದಾರೆ. ಇನ್ನು ಟಾಪ್-5 ವರ್ಗದಲ್ಲಿ 4ನೇ ಸ್ಥಾನಪಡೆದಿರುವ ಇ-ಶ್ರಮ ಕಾರ್ಡ್ ಕುರಿತ ಪ್ರಶ್ನೆಯಾಗಿದೆ. ಇದೊಂದು ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ ರೂಪಿಸಿದ ಯೋಜನೆಯಾಗಿದೆ. ಇ-ಶ್ರಮ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸಲಿದೆ. ಇನ್ನು ಐದನೇ ಪ್ರಶ್ನೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಬೇಧಿ ನಿಲ್ಲಿಸುವ ಪರಿಹಾರವೇನು? ಎಂದು ಹಲವರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.