ಬೆಂಗಳೂರು, ಡಿ.28 www.bengaluruwire.com : ಭಾರತೀಯ ಸೇನೆಯು ಮುಂದಿನ ಜನವರಿ 15ರಂದು ನಗರದಲ್ಲಿ 75ನೇ ಭಾರತೀಯ ಸೇನಾದಿನ ಪರೇಡ್ ಗೆ ಪೂರ್ವಭಾವಿಯಾಗಿ ಯೋಧರು, ಕರ್ನಾಟಕವೂ ಸೇರಿದಂತೆ 8 ರಾಜ್ಯಗಳಲ್ಲಿ 75 ಕುಗ್ರಾಮಗಳಿಗೆ ಡಿ.30ರಂದು ತೆರಳಿ ‘ಗ್ರಾಮ ಸೇವೆ – ದೇಶ ಸೇವೆ’ ವಿಷಯದಡಿ, ರಕ್ಷಣಾ ಇಲಾಖೆಯ ಅಗ್ನಿಪಥ್ ಯೋಜನೆಯ ಕುರಿತು ಜಾಗೃತಿ ಅಭಿಯಾನ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.
ರಾಷ್ಟ್ರ ನಿರ್ಮಾಣಕ್ಕೆ ತನ್ನ ಬದ್ಧತೆ ತೋರುವ ನಿಟ್ಟಿನಲ್ಲಿ, ಸದರ್ನ್ ಕಮಾಂಡ್‌ನ ಆಶ್ರಯದಲ್ಲಿ ಭಾರತೀಯ ಸೇನೆಯು ಮಹಾರಾಷ್ಟ್ರ, ಗುಜರಾತ್, ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ 75 ದೂರದ ಹಳ್ಳಿಗಳಿಗೆ ತೆರಳಲಿದೆ.
ಹೀಗೆ ಭೇಟಿ ನೀಡುವ ಹಳ್ಳಿಗಳಲ್ಲಿ ‘ಗ್ರಾಮ ಸೇವೆ – ದೇಶ ಸೇವೆ’ ಎಂಬ ವಿಷಯದಡಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಅಗ್ನಿಪಥ್ ಯೋಜನೆಯ ಕುರಿತು ಜಾಗೃತಿ ಅಭಿಯಾನಗಳನ್ನು ಆಯೋಜಿಸಲಿದೆ. ಇದರ ಜೊತೆಗೆ ಸ್ವಚ್ ಭಾರತ್ ಅಭಿಯಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೇನಾ ಯೋಧರು ಗ್ರಾಮಸ್ಥರೊಂದಿಗೆ ಸೇರಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಲಿದ್ದಾರೆ ಎಂದು ರಕ್ಷಣಾ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಳ್ಳಿಗಳಲ್ಲಿ ವಾಲಿಬಾಲ್, ಖೋ ಖೋ ಹಾಗೂ ಕಬಡ್ಡಿಗಾಗಿ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಿ, ಅಲ್ಲಿಯ ಹಳ್ಳಿಯ ಯುವಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸೌಹಾರ್ದ ಪಂದ್ಯಗಳನ್ನು ಆಡಲಿದ್ದಾರೆ. ಆ ಪ್ರದೇಶದಲ್ಲಿರುವ ವೀರನಾರಿಯರನ್ನು ಗುರ್ತಿಸಿ ಅವರನ್ನು ಅಭಿನಂದಿಸಿ, ಅವರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಲಿದ್ದಾರೆ. ಹಳ್ಳಿಗಳಿಗೆ ಭೇಟಿ ನೀಡುವ ಸೇನಾ ಸಿಬ್ಬಂದಿ ಸ್ಥಳೀಯರೊಂದಿಗೆ ಊಟ ಮಾಡಿ, ರಾಷ್ಟ್ರದ ಕಡೆಗೆ ಏಕತೆ ಮತ್ತು ಪ್ರಜ್ಞೆಯ ಸಂದೇಶವನ್ನು ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ರಾಷ್ಟ್ರದೆಡೆಗಿನ ತನ್ನ ಜವಾಬ್ದಾರಿಗಳ ಭಾಗವಾಗಿ, ಭಾರತೀಯ ಸೇನೆಯು ಈ ಹಳ್ಳಿಗಳ ಯೋಗಕ್ಷೇಮ, ಅಭಿವೃದ್ಧಿ ಮತ್ತು ಪ್ರಗತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ. ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ, ಆ ಹಳ್ಳಿಗರ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಮುಖದಲ್ಲಿ ನಗುವನ್ನು ಮೂಡಿಸುವ ನಿಟ್ಟಿನಲ್ಲಿ ಸೇನೆಯು ಇಟ್ಟಿರುವ ಒಂದು ಸಣ್ಣ ಹೆಜ್ಜೆಯಾಗಿದೆ. ಈ ದೊಡ್ಡ ಅಭಿಯಾನವು ಬೆಂಗಳೂರಿನಲ್ಲಿ ಆಯೋಜಿಸಲಾಗುವ 75 ನೇ ಆರ್ಮಿ ಡೇ ಪರೇಡ್‌ನ ಪೂರ್ವಭಾವಿಯಾಗಿ ಯೋಜಿಸಲಾದ ಕಾರ್ಯಕ್ರಮಗಳ ಸರಣಿಯಲ್ಲಿ ಮೂರನೆಯದಾಗಿದೆ.