ಬೆಂಗಳೂರು, ಡಿ.27 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಹಿನ್ನಡೆ ಸಾಧಿಸಿದೆ ಎಂಬ ಆರೋಪದ ನಡುವೆಯೇ ಕರೋನಾ ಸೋಂಕು ಕಂಡು ಬರುವ ಮುನ್ನ ಹಾಗೂ ನಂತರ 2019-20ರ ಆರ್ಥಿಕ ವರ್ಷದಿಂದ 2022-23ನೇ ಸಾಲಿನ ನವೆಂಬರ್ 25ರ ತನಕ ನಗರದಲ್ಲಿ ಒಟ್ಟಾರೆ 11,119 ಕೋಟಿ ರೂ. ಆಸ್ತಿ ಸಂಗ್ರಹಿಸಲಾಗಿದೆ.
ಈ ನಾಲ್ಕು ವರ್ಷಗಳಲ್ಲಿ ವಸತಿ, ವಸತಿಯೇತರ, ವಸತಿ ಮತ್ತು ವಸತಿಯೇತರ ಎರಡನ್ನೂ ಒಳಗೊಂಡಿರುವ ಕಟ್ಟಡ ಹಾಗೂ ಕೈಗಾರಿಕಾ ಕಟ್ಟಡಗಳಿಂದ ಬಿಬಿಎಂಪಿಯ ಕಂದಾಯ ಇಲಾಖೆ ವಿಭಾಗದವರು ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದಾರೆ.
2019-20 ರಿಂದ 2022-23ರ ಇಸವಿ ತನಕ ಸಂಗ್ರಹವಾದ ಒಟ್ಟು ಆಸ್ತಿ ತೆರಿಗೆ (ಕೋಟಿ ರೂ.ಗಳಲ್ಲಿ) :
ಕ್ರಮ ಸಂಖ್ಯೆ | ವರ್ಷ | ವಸತಿ ಕಟ್ಟಡ | ವಸತಿಯೇತರ | ವಸತಿ + ವಸತಿಯೇತರ | ಕೈಗಾರಿಕೆ |
1) | 2019 – 20 | 953.52 | 1326.44 | 247.50 | 80.54 |
2) | 2020 – 21 | 941.59 | 1458.96 | 245.58 | 75.96 |
3) | 2021 – 22 | 984.68 | 1592.23 | 266.14 | 85.19 |
4) | 2022 – 23 | 873.88 | 1381.05 | 251.12 | 77.10 |
ನಾಲ್ಕು ವರ್ಗಗಳ ಪೈಕಿ ವಸತಿಯೇತರ ಕಟ್ಟಡಗಳಿಂದ ಈ 4 ವರ್ಷಗಳಲ್ಲಿ 5,758.68 ಕೋಟಿ ರೂ.ಗಳಷ್ಟು ಅತಿಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದರ ನಂತರದ ಸ್ಥಾನ ಪಡೆದಿರುವ ವಸತಿ ಕಟ್ಟಡಗಳಿಂದ ಪಾಲಿಕೆಯು ಒಟ್ಟು 3,753.67 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇನ್ನು ವಸತಿ ಹಾಗೂ ವಸತಿಯೇತರ ಸ್ವರೂಪದ ಎರಡನ್ನು ಒಳಗೊಂಡ ಕಟ್ಟಡಗಳಿಂದ ಒಟ್ಟು 1,010.34 ಕೋಟಿ ರೂ.ಗಳನ್ನು ಬಿಬಿಎಂಪಿಯು ಸಂಗ್ರಹಿಸಿದೆ. ಕೈಗಾರಿಕೆಗಳಿಂದ ಈ ನಾಲ್ಕು ವರ್ಷಗಳಲ್ಲಿ 318.79 ಕೋಟಿ ರೂ.ಗಳನ್ನಷ್ಟೆ ಸಂಗ್ರಹಿಸಲು ಪಾಲಿಕೆಗೆ ಸಾಧ್ಯವಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಂತಿನಗರ ಶಾಸಕರ ಎನ್.ಎ.ಹ್ಯಾರೀಸ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಉತ್ತರ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಾಯ್ದೆ-2020 ಬರುವ ಮುನ್ನ ಕೆಎಂಸಿ ಕಾಯ್ದೆ 1976ರ ಪ್ರಕರಣ 108 (ಎ) ಹಾಗೂ ಅದರಡಿಯಲ್ಲಿ ರಚಿಸಲಾದ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಾಯ್ದೆ 2020ರನ್ನು ರಚಿಸಲಾಗಿದೆ. ಈ ಕಾಯ್ದೆ 144ನೇ ಪ್ರಕರಣದ ಅನ್ವಯ ಆಸ್ತಿ ತೆರಿಗೆ ಸಂಗ್ರಹಣೆ ಮಾಡಲಾಗುತ್ತಿದೆ. ಕೆಎಂಸಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಚರಾಸ್ಥಿಗಳನ್ನು ಮಾತ್ರ ಮುಟ್ಟುಗೋಲು ಹಾಕಲು ಮಾತ್ರ ಅವಕಾಶವಿತ್ತು. ಆದರೆ ಈಗ ಹೊಸ ಕಾಯ್ದೆ ಅನ್ವಯ ಚರ- ಸ್ಥಿರಾಸ್ಥಿ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ಮುಖ್ಯಮಂತ್ರಿಗಳನ್ನು ಉತ್ತರ ನೀಡಿದ್ದಾರೆ.
ಕ್ರಮ ಸಂಖ್ಯೆ | ವರ್ಷ | ಮೊತ್ತ (ಕೋಟಿ ರೂ.ಗಳಲ್ಲಿ) |
1) | 2019-20 | 2686.29 |
2) | 2020-21 | 2781.45 |
3) | 2021-22 | 3010.40 |
4) | 2022-23 | 2641.68 |
2019-20ರಿಂದ ಕೋವಿಡ್ ಗೆ ಮುನ್ನ ಹಾಗೂ ಕರೋನಾ ಸೋಂಕು ವ್ಯಾಪಕವಾಗಿ ಹರಡಿದ 2020, 2021ರಲ್ಲಿ ವರ್ಷದಿಂದ ವರ್ಷಕ್ಕೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಮರ್ನಾಹವಾಗಿ ಏರಿಕೆ ಕಂಡು ಬಂದಿದೆ. 2019-20ರ ಇಸವಿಯಲ್ಲಿ ಪಾಲಿಕೆಯು ಒಟ್ಟಾರೆಯಾಗಿ 2,686.29 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದರೆ, 2020-21ರಲ್ಲಿ 2,781.45 ಹಾಗೂ 2021-22ರಲ್ಲಿ 3010.40 ಕೋಟಿ ರೂ.ಗಳಷ್ಟು ತೆರಿಗೆ ಆದಾಯ ಹರಿದು ಬಂದಿತ್ತು. 2022-23ರ ನವೆಂಬರ್ 25 ವರೆಗೆ 2,641.68 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆ ಅಧಿಕಾರಿ, ಸಿಬ್ಬಂದಿ ನಗರದ ಆಸ್ತಿ ಮಾಲೀಕರಿಂದ ಸಂಗ್ರಹಿಸಿದ್ದಾರೆ.