ಬೆಂಗಳೂರು, ಡಿ.26 www.bengaluruwire.com : ರಾಜಧಾನಿಯ ಸಾರಿಗೆ ಸಂಪರ್ಕದ ಜೀವಾಳಗಳಲ್ಲೊಂದಾದ ನಮ್ಮ ಮೆಟ್ರೊ (Namma Metro)ನಲ್ಲಿ ಕಳೆದ ವರ್ಷ ಕರೋನಾ ಸೋಂಕಿನಿಂದಾಗಿ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿದಿತ್ತು. ಆದರೆ 2022 ಇಸವಿಯಲ್ಲಿ ನವೆಂಬರ್ ತನಕ 13.86 ಕೋಟಿ ಜನರು ಮೆಟ್ರೋನಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ (BMRCL) ಸಂಸ್ಥೆಗೆ 338.79 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.
2020, 2021ರಲ್ಲಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕರೋನಾ ಸೋಂಕು ರಣಕೇಕೆ ಹಾಕಿ ಲಾಕ್ ಡೌನ್, ಕೋವಿಡ್ ನಿರ್ಬಂಧ ಮತ್ತಿತರ ಕಾರಣಗಳಿಂದಾಗಿ ನಮ್ಮ ಮೆಟ್ರೊ ಆದಾಯ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡು ಬಂದಿತ್ತು. 2021ರಲ್ಲಿ 5.56 ಕೋಟಿ ಪ್ರಯಾಣಿಕರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದರು. ಇದರಿಂದಾಗಿ ಬಿಎಂಆರ್ ಸಿಎಲ್ ಗೆ ಒಟ್ಟಾರೆ 142.19 ಕೋಟಿ ರೂ. ಹಣ ಆದಾಯದ ರೂಪದಲ್ಲಿ ಹರಿದು ಬಂದಿತ್ತು. 2021 ಹಾಗೂ 2022ರ ಎರಡು ವರ್ಷಗಳನ್ನು ಗಮನಿಸಿದಾಗ 2021ರಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ 43 ರಿಂದ 47 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಏಪ್ರಿಲ್ 30.9 ಲಕ್ಷ, ಮೇ ತಿಂಗಳಿನಲ್ಲಿ ಲಾಕ್ ಡೌನ್ ನಿಂದಾಗಿ ಮೋಟ್ರೊ ಓಡಾಟ ಕಂಪ್ಲೀಟ್ ನಿಂತು ಹೋಗಿತ್ತು. ಇನ್ನು ಜೂನ್ ತಿಂಗಳಿನಲ್ಲಿ ಕೇವಲ 4.2 ಲಕ್ಷ ಜನರು ಮೆಟ್ರೊ ಬಳಸಿದ್ದರು. ಕೋವಿಡ್19 ಸೋಂಕು ಕಡಿಮೆಯಾಗುತ್ತಾ ಬಂದ ಕಾರಣ ಅದೇ ವರ್ಷದ ಜುಲೈ ನಲ್ಲಿ 34.5 ಲಕ್ಷ ಜನರು ಮೆಟ್ರೊ ರೈಲಿನಲ್ಲಿ ಓಡಾಡಿದ್ದರು (ಒಟ್ಟಾರೆ ಈ 4 ತಿಂಗಳ ಅವಧಿಯಲ್ಲಿ 69.6 ಲಕ್ಷ ಪ್ರಯಾಣಿಸಿದ್ದಾರೆ) .
ಇದರಿಂದಾಗಿ ಮೆಟ್ರೋ ಮಾಸಿಕ ಆದಾಯಕ್ಕೆ ಸಾಕಷ್ಟು ಪೆಟ್ಟು ನೀಡಿತ್ತು. ಕೋವಿಡ್ ಸೋಂಕು ಹರಡುವಿಕೆ ಭಯ ಹಾಗೂ ಹವಾನಿಯಂತ್ರಣ ವ್ಯವಸ್ಥೆ ಹಾಗೂ ಜನಸಂದಣಿಯಿಂದ ಪ್ರಯಾಣಿಕರು ಮೆಟ್ರೊ ರೈಲು ಸಾರಿಗೆಯಿಂದ ದೂರವೇ ಉಳಿದಿದ್ದರು. 2021ರ ಇಸವಿಯಲ್ಲಿ ನಮ್ಮ ಮೆಟ್ರೊಗೆ ಏಪ್ರಿಲ್ ನಿಂದ ಜುಲೈ ತಿಂಗಳವರೆಗೆ ಸಾಕಷ್ಟು ಆದಾಯ ನಷ್ಟ ಉಂಟಾಗಿತ್ತು. ಒಟ್ಟಾರೆ 17.25 ಕೋಟಿ ರೂ. ಮಾತ್ರ ಆದಾಯ ಸಂಗ್ರವಾಗಿತ್ತು.
ಇನ್ನು 2021ರ ಇಸವಿಗೆ ಹೋಲಿಸಿದರೆ 2022ರಲ್ಲಿ ಮೆಟ್ರೊ ಬಳಸುವವರ ಪ್ರಮಾಣ ಹೆಚ್ಚಿದಂತೆ, ಬಿಎಂಆರ್ ಸಿಎಲ್ ಆದಾಯವೂ ಹೆಚ್ಚುತ್ತಾ ಬಂದಿದೆ. ಕಳೆದ ವರ್ಷದ ಏಪ್ರಿಲ್, ಮೇ, ಜೂನ್ ಹಾಗೂ ಜುಲೈ ಗೆ ಹೋಲಿಸಿದರೆ 2022ರಲ್ಲಿ ಇದೇ ಅವಧಿಯಲ್ಲಿ ಒಟ್ಟು 5.19 ಕೋಟಿ ಜನರು ಮೆಟ್ರೊ ಬಳಸಿದ್ದರ ಪರಿಣಾಮ ನಮ್ಮ ಮೆಟ್ರೊಗೆ ಬರೋಬ್ಬರಿ 127.98 ಕೋಟಿ ರೂ. ಸಂಪಾದನೆಯಾಗಿತ್ತು.
ನಗರದಲ್ಲಿ 2011ರ ಅಕ್ಟೋಬರ್ ನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದಾಗ ಪ್ರಯಾಣಿಕರ ಸಂಖ್ಯೆ ಅಷ್ಟೇನು ಇರಲಿಲ್ಲ. ಆದರೆ ದಿನೇ ದಿನೇ ತನ್ನ ಕಾರ್ಯಾಚರಣೆ ಜಾಲವನ್ನು ಹೆಚ್ಚಿಸಿಕೊಂಡು ಪ್ರಯಾಣಿಕರು ಕೊನೆ ಹಂತದ ತಮ್ಮ ಗಮ್ಯ ಸ್ಥಾನಕ್ಕೆ ತಲುಪುವ ತನಕ ಬಿಎಂಟಿಸಿ ಬಸ್ ಬಳಸಿಕೊಂಡು ಸಾರಿಗೆ ಸೇವೆ ಒದಗಿಸಿದ ಪರಿಣಾಮ ನಮ್ಮ ಮೆಟ್ರೊನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ 52 ಮೆಟ್ರೊ ಸ್ಟೇಷನ್ ಹಾಗೂ 56.1 ಕಿ.ಮೀ ಮೆಟ್ರೊ ಜಾಲವನ್ನು ನಮ್ಮ ಮೆಟ್ರೊ ಹೊಂದಿದೆ.