ವರ್ಚುವಲ್ ಉದ್ಯೋಗ ಮೇಳಗಳ ಮೂಲಕ ಉದ್ಯೋಗಾಕಾಂಕ್ಷಿಗಳು ಮತ್ತು ಕಂಪನಿಗಳನ್ನು ಸಂಪರ್ಕಿಸಲು ರಾಜ್ಯ ಸರ್ಕಾರವು ರಾಷ್ಟ್ರದಲ್ಲೇ ಮೊದಲ ಬಾರಿಗೆ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಕರ್ನಾಟಕ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KSDC), ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದೊಂದಿಗೆ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ (KSCP) ಅನ್ನು ಪ್ರಾರಂಭಿಸಿದೆ. ಇದು ರಾಜ್ಯದ ಪ್ರತಿಭೆಗಳನ್ನು ಒಂದೆಡೆ ಬೆಸೆಯಲು ವೇದಿಕೆ ಒದಗಿಸಲಿದೆ. ಹಾಗೂ ವಿವಿಧ ಉದ್ಯೋಗ ನಿರೀಕ್ಷೆಗಳು ಮತ್ತು ಕೌಶಲ್ಯ ಅವಕಾಶಗಳನ್ನು ಸಂಪರ್ಕಿಸುವ ಸಮಗ್ರ ವೆಬ್ ಪ್ಲಾಟ್‌ಫಾರ್ಮ್ ಆಗಿದೆ.
“ಇಂಡಸ್ಟ್ರಿ ಕನೆಕ್ಟ್ ಪ್ರೋಗ್ರಾಂ” ಅಡಿಯಲ್ಲಿ ಕೈಗಾರಿಕಾ ತರಬೇತಿ ಪಾಲುದಾರರ ಮೂಲಕ ಔದ್ಯೋಗಿಕ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಮತ್ತು ಉದ್ಯೋಗವನ್ನು ನೀಡಲು ರಾಜ್ಯ ಸರ್ಕಾರವು ಪೋರ್ಟಲ್ ಜೊತೆಗೆ “ಉದ್ಯಮ ಸಂಪರ್ಕ ಕೋಶ” ವನ್ನು ಸ್ಥಾಪಿಸಿದೆ.
ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ (ಕೌಶಲ್ಕರ್) 2022 :
ಕರ್ನಾಟಕದಲ್ಲಿ ಸಾಮರ್ಥ್ಯ ಅಪರಿಮಿತವಾಗಿದೆ. ಆದರೆ ಅದನ್ನು ಕೌಶಲ್ಯಯುತ ಯುವ ಜನರು ಮಾತ್ರ ಸಮರ್ಪಕವಾಗಿ ಬಳಸಿಕೊಳ್ಳಬಹುದು. ರಾಜ್ಯದಲ್ಲಿ ಶೇಕಡಾ 55 ರಷ್ಟು ಜನರು ಕೆಲಸ ಮಾಡುವ ವಯಸ್ಸಿನವರಾಗಿದ್ದು, 1.18 ಕೋಟಿಗೂ ಹೆಚ್ಚು ಜನರು 20-29 ವರ್ಷ ವಯೋಮಾನದವರಾಗಿದ್ದಾರೆ. ಆದ್ದರಿಂದ, ರಾಜ್ಯದಲ್ಲಿ ಸಾಂಪ್ರದಾಯಿಕ ಕೌಶಲ್ಯಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ “ಒಂದು ಜಿಲ್ಲೆ ಒಂದು ಕೌಶಲ್ಯ” ಅಭಿಯಾನವನ್ನು ಜಾರಿಗೊಳಿಸಲಾಗುತ್ತಿದೆ. ಸರ್ಕಾರದ ಧ್ಯೇಯವು “ಸರಿಯಾದ ಕೌಶಲ್ಯಗಳೊಂದಿಗೆ ಎಲ್ಲರಿಗೂ ಉದ್ಯೋಗಗಳನ್ನು ಒದಗಿಸುವುದು; ಯುವ ಉದ್ಯಮವನ್ನು ಸಿದ್ಧಪಡಿಸುವುದಾಗಿದೆ.
ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ (KSCP) ಎಂಬ ಡಿಜಿಟಲ್ ನೆಟ್‌ವರ್ಕ್ ಅನ್ನು ಶೈಕ್ಷಣಿಕ ಸಂಸ್ಥೆಗಳು, ವಿವಿಧ ಕೌಶಲ್ಯ ಸಂಸ್ಥೆಗಳು, ಸಂಭಾವ್ಯ ಕೆಲಸಗಾರರು ಮತ್ತು ಸಂಭಾವ್ಯ ಉದ್ಯೋಗದಾತರನ್ನು ಸಂಪರ್ಕಿಸುವ ಮಾರ್ಗವಾಗಿದೆ. ಮಹತ್ವಾಕಾಂಕ್ಷಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ತಮ್ಮ ಕೌಶಲ್ಯದ ಅಂತರವನ್ನು ಗುರುತಿಸಲು ಮತ್ತು ಪೋರ್ಟಲ್‌ನ ಆನ್‌ಲೈನ್ ಕೋರ್ಸ್‌ಗಳನ್ನು ಬಳಸಿಕೊಂಡು ತರಬೇತಿ ಕಾರ್ಯಕ್ರಮಗಳಿಗೆ ಸೈನ್ ಅಪ್ ಮಾಡಲು ಸಾಧ್ಯವಾಗುತ್ತದೆ. ತರಬೇತಿಯ ಜೊತೆಗೆ, ಅವರು ಪೋರ್ಟಲ್ ನಲ್ಲಿ ವಿವಿಧ ಕಂಪನಿಗಳಿಗೆ ಖಾಲಿಯಿರುವ ಕೆಲಸಗಳಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಸ್ಕಿಲ್ ಕನೆಕ್ಟ್ ಪೋರ್ಟಲ್ ವ್ಯಾಪ್ತಿ ವಿಶಾಲ ಮತ್ತು ಬೃಹತ್ ಪ್ರಮಾಣವಾಗಿದೆ :
“ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ವ್ಯಾಪ್ತಿ ವಿಶಾಲ ಮತ್ತು ಬೃಹತ್ ಪ್ರಮಾಣದ್ದಾಗಿದೆ. ರಾಜ್ಯದ ಡಿಜಿಟಲ್ ಆರ್ಥಿಕತೆಗೆ ದೊಡ್ಡ ಜಿಗಿತ ನೀಡಲು ಸಹಕಾರಿಯಾಗಿದೆ. ಕೆಎಸ್‌ಸಿಪಿಯು ಉದ್ಯೋಗಗಳನ್ನು ಉತ್ತೇಜಿಸುತ್ತದೆ ಮತ್ತು ಕರ್ನಾಟಕದ ಸಂಪೂರ್ಣ ಉದ್ಯಮ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳಿಗೆ ಚಾಲನೆ ನೀಡುತ್ತದೆ ಮತ್ತು ವಿವಿಧ ಪಾಲುದಾರರು ತಮ್ಮ ಸಾಮರ್ಥ್ಯಗಳು ಮತ್ತು ಸಮಸ್ಯೆಯ ಅಂಶಗಳನ್ನು ಮುಕ್ತ, ಕಲಿಕೆ ಮತ್ತು ಅಭಿವೃದ್ಧಿಯನ್ನು ಮೌಲ್ಯೀಕರಿಸುವ ವಾತಾವರಣದಲ್ಲಿ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ, ತಾಂತ್ರಿಕ ಪ್ರಗತಿಗೆ ಕಾರಣವಾಗಲಿದೆ. ನಮ್ಮ ಮೌಲ್ಯಯುತ ಸಂಸ್ಕೃತಿ ಮತ್ತು ಖ್ಯಾತಿಯನ್ನು ನಾವೀನ್ಯತೆಯ ಹಾಟ್‌ಸ್ಪಾಟ್ ಆಗಿ ಕ್ರೋಢೀಕರಿಸುತ್ತದೆ. ಇಂಟರ್ನ್‌ಶಿಪ್ ಅವಕಾಶಗಳನ್ನು ಪಡೆಯಲು ಪೋರ್ಟಲ್ ಸುಮಾರು 65 ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ.
– ಡಾ.ಸಿ.ಎನ್ ಅಶ್ವಥ್ ನಾರಾಯಣ್, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು
ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಮುಖ್ಯಾಂಶಗಳು :
ಯೋಜನೆಯ ಹೆಸರು : | ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ |
ಯಾರು ಪ್ರಾರಂಭಸಿದ್ದು? : | ಕರ್ನಾಟಕ ಸರ್ಕಾರ |
ಯಾವ ವರ್ಷ? : | 2022 |
ಇದರ ಗುರಿ : | ಯುವಕರಿಗೆ ಕೌಶಲ್ಯಗಳನ್ನು ಕಲಿಯಲು ಮತ್ತು ಕೆಲಸ ಪಡೆಯಲು |
ಅಧಿಕೃತ ವೆಬ್‌ಸೈಟ್ : | https://skillconnect.kaushalkar.com/ |
ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ 2022 ರ ಉದ್ದೇಶ :
- ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ನ ಮುಖ್ಯ ಉದ್ದೇಶ, ಕರ್ನಾಟಕವನ್ನು ಐಟಿ ಕ್ಯಾಪಿಟಲ್‌ನಿಂದ ಸ್ಕಿಲ್ ಕ್ಯಾಪಿಟಲ್ ಆಗಿ ಪರಿವರ್ತಿಸುವುದು.
- ವೈವಿಧ್ಯಮಯ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಮೂಲಕ, ವಲಯವಾರು ನಿರ್ದಿಷ್ಟ ಉದ್ಯೋಗಗಳನ್ನು ಸೃಷ್ಟಿಸಲು ಒತ್ತು ನೀಡಲಾಗುತ್ತದೆ.
ನವೀಕೃತ ಪೋರ್ಟಲ್ ಬಲಯುತ ರಾಷ್ರ ನಿರ್ಮಾಣಕ್ಕೆ ಸಹಕಾರಿ :
“ಕರ್ನಾಟಕವು ಯಾವಾಗಲೂ ಅಸಾಧಾರಣ ಪ್ರತಿಭೆಯಿಂದ ಕೂಡಿದ ರಾಜ್ಯವಾಗಿದೆ. ನಾವು ಅಂತಹ ಪ್ರತಿಭೆಗಳಿಗೆ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಮುಖಾಂತರ ಹಲವು ಅವಕಾಶಗಳಿಗೆ ಹೆಚ್ಚು ನೇರ ಪ್ರವೇಶವನ್ನು ಒದಗಿಸಬಹುದು. ಕೌಶಲ್ಯ ಹೊಂದಿದ ಪ್ರತಿಭೆಗಳು ಹಾಗೂ ಉದ್ಯಮದ ನಡುವಿನ ಸಂಭಾಷಣೆಗಳನ್ನು ಸುವ್ಯವಸ್ಥಿತಗೊಳಿಸಬಹುದು. ಉದ್ಯೋಗಿಗಳು ಮತ್ತು ಉದ್ಯಮದ ಬೇಡಿಕೆಯ ಅಂತರವನ್ನು ಕಡಿಮೆ ಮಾಡಲು ನವೀಕೃತ ಪೋರ್ಟಲ್ ಸಹಾಯ ಮಾಡುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ರೂಪಿಸುವುದಲ್ಲದೆ ಆ ಮೂಲಕ ಸ್ವಸ್ಥ ಸಮಾಜ ಮತ್ತು ಬಲಯುತ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಿದೆ.
– ಡಾ.ಎಸ್.ಸೆಲ್ವಕುಮಾರ್, ಪ್ರಧಾನ ಕಾರ್ಯದರ್ಶಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸ್ಕಿಲ್ ಕನೆಕ್ಟ್ ಪೋರ್ಟಲ್ ವಿಶೇಷತೆಗಳೇನು? :
ನೂತನವಾಗಿ ಪರಿಷ್ಕರಿಸಿದ ಈ ಪೋರ್ಟಲ್ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ ವಿಡಿಯೊ ರೆಸ್ಯೂಮ್, ಸೈಕೋಮೆಟ್ರಿಕ್ ಮತ್ತು ತಾಂತ್ರಿಕ ಮೌಲ್ಯಮಾಪನ, ಒನ್ ಆನ್ ಒನ್ ಮೆಂಟರಿಂಗ್ ಸೆಷನ್‌ಗಳು ಮತ್ತು ವೆಬಿನಾರ್‌ಗಳ ಮೂಲಕ ವೃತ್ತಿ ಮಾರ್ಗದರ್ಶನ, ಅಭ್ಯರ್ಥಿಗಳ ಕೌಶಲ್ಯ ಅಂತರದ ವಿಶ್ಲೇಷಣೆಯನ್ನು ಒದಗಿಸಲು ಆಕಾಂಕ್ಷಾ ಎಂಜಿನ್ ಹೊಂದಿದೆ. ಇ-ಕೌಶಲ್ಯ ಮೂಲಕ ಉದ್ಯಮ-ಸಂಬಂಧಿತ ಕೋರ್ಸ್‌ಗಳು, ಉದ್ಯೋಗಾಕಾಂಕ್ಷಿಗಳ ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್(Infosys Springboard), ಮೈಕ್ರೋಸಾಫ್ಟ್ (Microsoft), ಐಬಿಎಮ್ IBM, ಹಿಟಾಚಿ ಮತ್ತು ಇನ್ನೂ ಹೆಚ್ಚಿನ ಕಂಪನಿಗಳ ಆನ್ ಲೈನ್ ಮೂಲಕ ಕೋರ್ಸ್ ಗಳನ್ನು ಮಾಡಬಹುದು. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ನಿಗಮ ಅವುಗಳ ಜೊತೆ ಪಾಲುದಾರಿಕೆಗಳನ್ನು ಮಾಡಿಕೊಂಡಿದೆ. ಐಟಿಐ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಮತ್ತು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಸಹ ಈ ಪೋರ್ಟಲ್ ನಲ್ಲಿ ಲಭ್ಯವಿದೆ.
ಸಂಬಂಧಿತ ಉನ್ನತ ಕೌಶಲ್ಯದ ಮಾಡ್ಯೂಲ್‌ಗಳು ಮತ್ತು ಉದ್ಯೋಗಗಳನ್ನು ಹುಡುಕುವುದರ ಜೊತೆಗೆ, ಅಭ್ಯರ್ಥಿಗಳು ತಮ್ಮ ಪ್ರೊಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಮತ್ತು ನಿರೀಕ್ಷಿತ ಉದ್ಯೋಗದಾತರೊಂದಿಗೆ ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಲು ಅರ್ಥಗರ್ಭಿತ ವೇದಿಕೆಯನ್ನು ಒದಗಿಸಲಿದೆ. ಅಭ್ಯರ್ಥಿಗಳು ಅಪಲೋಡ್ ಮಾಡಿದ ವಿವರಗಳನ್ನು ಉದ್ಯಮ ಪ್ರಮಾಣಿತ ಸೈಕೋಮೆಟ್ರಿಕ್ ಮೌಲ್ಯಮಾಪನಗಳಿಂದ ಪರೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇತರ ಅಭ್ಯರ್ಥಿಗಳೊಂದಿಗೆ ಆನ್‌ಲೈನ್ ಚರ್ಚಾ ವೇದಿಕೆಗಳಿಗೆ ಸೇರಲು ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ಸೌಲಭ್ಯವಿದೆ.
ಉದ್ಯೋಗಕ್ಕಾಗಿ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸಂಯೋಜಿಸುವ ಉದ್ದೇಶ :
“ಉದ್ಯೋಗ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಹಾಗೂ ಕೆಎಸ್‌ಡಿಸಿಯ ಉದ್ದೇಶಗಳಿಗೆ ಪೂರಕವಾಗಿ ಕರ್ನಾಟಕದ ಯುವಕರಿಗೆ ಸಹಾಯ ಮಾಡುವುದಕ್ಕೆ ಬದ್ಧರಾಗಿದ್ದೇವೆ. ಮುಂಬರುವ ವರ್ಷಗಳಲ್ಲಿ ಉದ್ಯೋಗಗಳು, ಇಂಟರ್ನ್‌ಶಿಪ್‌ಗಳು ಮತ್ತು ಪಾವತಿಸಿದ ಅವಕಾಶಗಳ ಹಿನ್ನಲೆಯಲ್ಲಿ ನಾವು 10 ದಶಲಕ್ಷ ಅವಕಾಶಗಳನ್ನು ಕಲ್ಪಿಸುತ್ತೇವೆ. ರಾಜ್ಯದಲ್ಲಿ 20 ದಶಲಕ್ಷ ಉದ್ಯೋಗಾಕಾಂಕ್ಷಿಗಳನ್ನು ತಲುಪುವ ನಿಟ್ಟಿನಲ್ಲಿ ಸುಮಾರು ಒಂದು ಲಕ್ಷ ಅಭ್ಯರ್ಥಿಗಳು ಕೌಶಲ್ಯ ಮೌಲ್ಯಮಾಪನಕ್ಕೆ ಒಳಗಾಗುವ ನಿರೀಕ್ಷೆಯಿದೆ. ಉದ್ಯೋಗ ಮತ್ತು ಉದ್ಯೋಗ ಬೆಂಬಲಕ್ಕಾಗಿ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ಬಳಸಲು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಕ್ರಮೇಣವಾಗಿ ಸಂಯೋಜಿಸುವುದು ದೀರ್ಘಾವಧಿಯ ಗುರಿಯಾಗಿದೆ.
– ಅಶ್ವಿನ್ ಡಿ ಗೌಡ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ಸುಮಾರು 25,000 ಅರ್ಜಿದಾರರಿಗೆ ತರಬೇತಿ :
22 ಖಾಸಗಿ ಕೈಗಾರಿಕೆಗಳೊಂದಿಗೆ ಬಾಡಿಗೆ, ತರಬೇತಿ ಮತ್ತು ನಿಯೋಜನೆ ಮಾದರಿಯಡಿಯಲ್ಲಿ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮ ಒಪ್ಪಂದ ಮಾಡಿಕೊಂಡಿದೆ. ಸುಮಾರು 25,000 ಅಭ್ಯರ್ಥಿಗಳು ಅವರ ಕೌಶಲ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ಮತ್ತು ಉದ್ಯೋಗವನ್ನು ಈ ಮೂಲಕ ಪಡೆಯುತ್ತಿದ್ದಾರೆ. “ಈ ನಿಟ್ಟಿನಲ್ಲಿ, ಸರ್ಕಾರವು ದೇಶದಲ್ಲಿ ಮೊದಲ ಬಾರಿಗೆ ಈ ವಿಶಿಷ್ಟ ಕೌಶಲ್ಯ ಸಂಪರ್ಕ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದರ ಜೊತೆಗೆ ರಾಜ್ಯದ ಭವಿಷ್ಯ ಮತ್ತು ರಾಜ್ಯದ ಯುವಜನತೆ ದೃಷ್ಟಿಯಲ್ಲಿಟ್ಟುಕೊಂಡು, ಉದ್ಯಮದ ಸಂಪರ್ಕ ಕೋಶವು ಭವಿಷ್ಯದ ಕೌಶಲ್ಯಗಳಾದ ಇಂಟರ್ನೆಟ್ ಆಫ್ ಥಿಂಗ್ಸ್ (IoT), ಆಟೊಮೇಷನ್ ಮತ್ತು ಕೃತಕ ಬುದ್ಧಿಮತ್ತೆ (Artificial Intelligence) ಯಂತಹ ಕ್ಷೇತ್ರಗಳಲ್ಲಿ ತರಬೇತಿ ನೀಡಲು ದಿಟ್ಟ ಕ್ರಮ ಕೈಗೊಂಡಿದೆ. ಒಟ್ಟಿನಲ್ಲಿ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಯೋಗ ಆಕಾಂಕ್ಷಿಗಳು, ಉದ್ಯೋಗದಾರರ ನಡುವಿನ ಸುಭದ್ರ ಕೊಂಡಿಯಾಗಿ ರಾಜ್ಯವನ್ನು ಕೌಶಲ್ಯ ಪ್ರತಿಭೆಗಳ ಅಗರವಾಗಿಸಲು ಮುನ್ನಡಿಯಿಟ್ಟಿದೆ.
ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ನೋಂದಣಿ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಯ ನೋಂದಣಿಗಾಗಿ ಕೆಳಗಿನ ಹಂತಗಳನ್ನು ಅನುಸರಿಸಿ:
- ಸ್ಕಿಲ್ ಕನೆಕ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
- ಮುಖಪುಟದಲ್ಲಿ ಮೇಲಿನ ಮೆನು ಬಾರ್‌ನಲ್ಲಿರುವ ಅಭ್ಯರ್ಥಿಗಳ ಆಯ್ಕೆಗೆ ಹೋಗಿ. ಅದರ ಮೇಲೆ ಕ್ಲಿಕ್ ಮಾಡಿ
- ಡ್ರಾಪ್-ಡೌನ್ ಮೆನು ಕಾಣಿಸಿಕೊಳ್ಳುವುದನ್ನು ನೀವು ನೋಡುತ್ತೀರಿ. ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಫಾರ್ಮ್‌ನ ಹೊಸ ಪುಟವು ಪರದೆಯ ಮೇಲೆ ಕಾಣಿಸುತ್ತದೆ.
- ಅಲ್ಲಿ ನೀವು ನಾಲ್ಕು ಆಯ್ಕೆಗಳನ್ನು ನೋಡುತ್ತೀರಿ.
- ಕೌಶಲ್ಯ
- ಶಿಷ್ಯವೃತ್ತಿ
- ಉದ್ಯೋಗ
- ಸ್ವಯಂ ಉದ್ಯೋಗ
- ಬಯಸಿದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಅದರ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಮುಂದುವರಿಯಿರಿ.