ಬೆಂಗಳೂರ, ಡಿ.19 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿನ ಪ್ರತಿಯೊಂದು ಕಟ್ಟಡಗಳಿಗೆ ಹಾಕಿರುವ 10 ವರ್ಷಗಳ ಹಿಂದಿನ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ (Device Language Message Specification – DLMS) ಡಿಜಿಟಲ್ ಮಾಪನಗಳಿಗೆ ಉಚಿತವಾಗಿ ಬದಲಾಯಿಸಲಾಗುತ್ತಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಹೇಳುತ್ತಿದೆ. ಆದರೆ ಆ ಮೀಟರ್ ಬದಲಾಯಿಸಲು ಗ್ರಾಹಕರಿಂದ ಗುತ್ತಿಗೆ ಸಂಸ್ಥೆಯವರು ಹಣ ಪಡೆಯುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬಂದಿವೆ.
ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ (Device Language Message Specification – DLMS) ಡಿಜಿಟಲ್ ಮಾಪನಗಳಿಗೆ ಬದಲಾಯಿಸುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿತ್ತು. 6.22 ಲಕ್ಷಕ್ಕೂ ಅಧಿಕ ಡಿಎಲ್ ಎಮ್ಎಸ್ ಡಿಜಿಟಲ್ ಮೀಟರ್ ಗಳನ್ನು ಬೆಸ್ಕಾಂ ತನ್ನ ಗ್ರಾಹಕರ ಕಟ್ಟಡಗಳಿಗೆ ಅಳವಡಿಸಿದೆ. ಆದರೆ ಹೀಗೆ ಮೀಟರ್ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಹೊಸ ಮೀಟರ್ ಅಳವಡಿಸಲು ಬರುವ ಗುತ್ತಿಗೆ ಸಂಸ್ಥೆಯ ಬಳಿ ಸೂಕ್ತ ಉಪಕರಣಗಳಿರುವುದಿಲ್ಲ. ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಸೂಕ್ತ ರೀತಿ ಉತ್ತರಿಸುತ್ತಿಲ್ಲ. ಹಲವು ಕಡೆ ಮೀಟರ್ ಬದಲಾವಣೆಗೆ 150 ರೂ.ಗಳಿಂದ 400 ರೂ. ತನಕ ಹಣ ಪಡೆಯುತ್ತಿದ್ದಾರೆ ಎಂದು ಗ್ರಾಹಕರು ಹಾಗೂ ಬೆಂಗಳೂರು ವೈರ್ ಓದುಗರು ದೂರುತ್ತಿದ್ದಾರೆ.
ಇನ್ನೊಂದೆಡೆ ಹಳೆಯ ಮೀಟರ್ ಅನ್ನು ಹೊಸ ಡಿಜಿಟಲ್ ಮೀಟರ್ ಗೆ ಬದಲಾಯಿಸಿದ ಬಳಿಕ ಗ್ರಾಹಕರ ಮನೆಯ ಕರೆಂಟ್ ಬಿಲ್ ಒಂದಕ್ಕೆ ಎರಡರಷ್ಟಾಗಿದೆ ಎಂದು ಸಾಮಾನ್ಯ ಜನರು ಬೆಂಗಳೂರು ವೈರ್ ಜೊತೆ ನಮ್ಮ ಅಳಲು ತೋಡಿಕೊಂಡಿದ್ದಾರೆ.
ರವಿ ಎಂಬ ಗ್ರಾಹಕರು, ಹೊಸ ಡಿಜಿಟಲ್ ಮೀಟರ್ ಗೆ ಬದಲಾಯಿಸಿದ ಬಳಿಕ ನಮಗೆ ಬರುವ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ಹಲವು ವರ್ಷಗಳಿಂದ ಇದ್ದ ಮೀಟರ್ ಅನ್ನುಹೊಸ ಡಿಜಿಟಲ್‌ಮೀಟರ್ ಗೆ ಏಕಾಏಕಿ ಬದಲಾಯಿಸಿರುವುದು ಸರಿಯಲ್ಲ. ಹೊಸ ವಿದ್ಯುತ್ ಬಿಲ್ ನೋಡಿ ಆಶ್ಚರ್ಯವಾಯಿತು. ಸರ್ಕಾರ ಸಾಮಾನ್ಯ ಜನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ತೊಂದರೆ ಕೊಡುವುದಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ನಮ್ಮಲ್ಲಿ ಎರಡು ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳಿದ್ದಾಗ ತಿಂಗಳಿಗೆ 1,400 ರೂ. ನಿಂದ 1,700 ರೂ.ತನಕ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಹೊಸ ಡಿಎಲ್ ಎಮ್ಎಸ್ ಡಿಜಿಟಲ್ ಮೀಟರ್ ಅಳವಡಿಸಿದ ಬಳಿಕ 4,400 ರೂ. ವಿದ್ಯುತ್ ಶುಲ್ಕ ಬರುತ್ತಿದೆ ಎಂದು ಚಂದ್ರಕುಮಾರ್ ಎಂಬ ಗ್ರಾಹಕ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ನಿಗಧಿತ ಲೋಡ್ ಗಿಂತ ಓವರ್ ಲೋಡ್ ವಿದ್ಯುತ್ ಬಳಸಿದರೆ ಬಿಲ್ ಹೆಚ್ಚಳ :
ಈ ಹಿಂದೆ ಸಿಂಗಲ್ ಫೇಸ್, ತ್ರಿಫೇಸ್ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಪಡೆದ ನಂತರ ಫ್ರಿಡ್ಜ್, ವಾಷಿಂಗ್ ಮೆಷಿನ್, ಹವಾನಿಯಂತ್ರಣ ಉಪಕರಣ ಹೀಗೆ ಹಲವು ಎಲೆಕ್ಟ್ರಾನಿಕ್ ಉಪಕರಣ ಖರೀದಿಸಿದ ಬಳಿಕ ಬೆಸ್ಕಾಂ ನಿಂದ ಪಡೆದ ಲೋಡ್ ಗಿಂತ ಹೆಚ್ಚು ವಿದ್ಯುತ್ ಅನ್ನು ಬಳಕೆ ಮಾಡಿದಾಗ ಸಹಜವಾಗಿ ಪ್ರತಿ ಕಿಲೋ ವ್ಯಾಟ್ ಗೆ 115 ರೂ. ಸ್ಥಾಪಿತ ಶುಲ್ಕ ಮಾಸಿಕ ಬಿಲ್ ಜೊತೆಗೆ ಸೇರ್ಪಡೆಯಾಗುತ್ತದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೊಸ ಮೀಟರ್ ಕಾರ್ಯ ಸಾಮರ್ಥ್ಯ ಬಗ್ಗೆ ಅನುಮಾನವಿದ್ದರೆ ಹೀಗೆ ಮಾಡಿ :
ಈ ಹಿಂದೆ ಸಣ್ಣ ಪ್ರಮಾಣದ ವಿದ್ಯುತ್ ಬಳಕೆಯಾದರೆ ಹಳೆಯ ಮೀಟರ್ ನಲ್ಲಿ ದಾಖಲಾಗುತ್ತಿರಲಿಲ್ಲ. ಡಿಎಲ್ ಎಂಎಸ್ ಡಿಜಿಟಲ್ ಮೀಟರ್ ಸಣ್ಣ ವಿದ್ಯುತ್ ಬಳಕೆಯನ್ನು ದಾಖಲಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವಿದ್ಯುತ ಬಿಲ್ ಹೆಚ್ಚು ಬರುತ್ತಿರಬಹುದು. ಹೊಸದಾಗಿ ಅಳವಡಿಸುತ್ತಿರುವ ಡಿಜಿಟಲ್ ಮೀಟರ್ ನಲ್ಲಿ ದೋಷಗಳಿಲ್ಲ. ಒಂದೊಮ್ಮೆ ಗ್ರಾಹಕರಿಗೆ ತಮ್ಮ ಕಟ್ಟಡದಲ್ಲಿರುವ ಮೀಟರ್ ದೋಷವಿದೆ ಎಂದು ಅನಿಸಿದಲ್ಲಿ ಹತ್ತಿರದ ಉಪವಿಭಾಗದ ಕಚೇರಿಗೆ ಅರ್ಜಿ ಸಲ್ಲಿಸಿ ಸೂಕ್ತ ಶುಲ್ಕ ಕಟ್ಟಿದರೆ, ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿರುವ “ಮೀಟರ್ ಟೆಸ್ಟಿಂಗ್” ಅಧಿಕಾರಿಗಳು ತಮ್ಮೊಂದಿಗೆ ಸ್ಟಾಂಡರ್ಡ್ ಪವರ್ ಮೀಟರ್ ತಂದು ಪರಿಶೀಲನೆ ನಡೆಸಿ ಮೀಟರ್ ಸಾಮರ್ಥ್ಯದ ಬಗ್ಗೆ ಪ್ರಮಾಣಪತ್ರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಗೆ ತೆರಿಗೆ, ವೈರಿಂಗ್ ಮತ್ತು ಅಳವಡಿಕೆ ವೆಚ್ಚ ಸೇರಿ 1,497 ರಿಂದ 1,507 ರೂಪಾಯಿ ಮತ್ತು 3 ಫೇಸ್ ಮೀಟರ್ ಗೆ 3,612 ರಿಂದ 3,652 ರೂಪಾಯಿಗಳಾಗಲಿದ್ದು ಈ ವೆಚ್ಚವನ್ನು ಬೆಸ್ಕಾಂ ಭರಿಸುತ್ತದೆ ಎಂದು ಬೆಸ್ಕಾಂ ತಿಳಿಸಿದೆ. ಮೀಟರ್ ಅಳವಡಿಕೆ ಕಾರ್ಯವನ್ನು ರಾಜೇಶ್ವರಿ ಇಲೆಕ್ಟ್ರಿಕಲ್ಸ್ ಮತ್ತು ವಿ.ಆರ್. ಪಾಟೀಲ್ ಎಲೆಕ್ಟ್ರಿಕಲ್ಸ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.
ಎಲೆಕ್ಟ್ರೋ ಮೆಕಾನಿಕಲ್ ಮೀಟರ್‌ಗಳು ಮತ್ತು ಸ್ಥಾಯೀವಿದ್ಯುತ್ತಿನ ಮೀಟರ್‌ಗಳ ಅನುಕೂಲಗಳು ಮತ್ತು ಅನಾನುಕೂಲಗಳು ಈ ಕೆಳಗಿನಂತಿವೆ:
ಎಲೆಕ್ಟ್ರೋಮೆಕಾನಿಕಲ್ ಮೀಟರ್‌ಗಳ ಅನಾನುಕೂಲಗಳು:
• ಎಲೆಕ್ಟ್ರೋಮೆಕಾನಿಕಲ್ ಮೀಟರ್‌ಗಳು ನಿಖರತೆಯ ವರ್ಗ 2.0.
• ಎಲೆಕ್ಟ್ರೋಮೆಕಾನಿಕಲ್ ಮೀಟರ್‌ಗಳು DLMS ಅಲ್ಲದ ಅನುಸರಣೆಗಳಾಗಿವೆ.
• ಕಡಿಮೆ ಲೋಡ್‌ಗಳು ಮತ್ತು ಕಡಿಮೆ ವೋಲ್ಟೇಜ್‌ಗಳಿದ್ದಾಗ ಈ ಮೀಟರ್ ಗಳಲ್ಲಿ ಸರಿಯಾಗಿ ರೆಕಾರ್ಡ್ ಆಗುವುದಿಲ್ಲ.
• ಈ ಮೀಟರ್ ಗಳು ಬಾಗಿದ ಸಂದರ್ಭದಲ್ಲಿ ಹಾಗೂ ಇನ್ನಿತರ ಪರಿಸ್ಥಿತಿಯಲ್ಲಿ ಹಾನಿಯಾಗುತ್ತದೆ.
• ನಿರಂತರ ಓವರ್‌ಲೋಡ್, ಏರಿಳಿತಗಳು ಅಥವಾ ಇತರ ಕಾರಣದಿಂದ ಮೀಟರ್ ಸುಡುವ ಸಾಧ್ಯತೆಯಿರುತ್ತದೆ.
• ಮೀಟರ್ ಒಳಗೆ ಘರ್ಷಣೆಯಿಂದಾಗಿ ಅವುಗಳ ಯಾಂತ್ರಿಕ ಭಾಗಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ.
• ತಾಪಮಾನ, ಆರ್ದ್ರತೆ ಮತ್ತು ಕಂಪನದಂತಹ ಅನೇಕ ಪರಿಸರ ಬದಲಾವಣೆಗಳಿಗೆ ಎಲೆಕ್ಟ್ರೋಮೆಕಾನಿಕಲ್ ಮೀಟರ್ ಸಂವೇದನಾಶೀಲವಾಗಿದೆ.
• ಭವಿಷ್ಯದಲ್ಲಿನ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡು ಮಾಡುವ/ ಹೊಸ ನಾವೀನ್ಯತೆಗೆ ಸೂಕ್ತವಾಗಿಲ್ಲ.
• ಸಕ್ರಿಯವಾಗಿ ಬಳಕೆಯಾಗುವ ವಿದ್ಯುತ್ ಶಕ್ತಿಯನ್ನು ಮಾತ್ರ ಅಳೆಯಲು ಸಾಧ್ಯವಾಗುತ್ತದೆ. ಮನೆಯಲ್ಲಿ ಜೀರೋ ಕ್ಯಾಂಡಲ್ ಬಲ್ಬ್, ಫೊಟೋಗಳಿಗೆ ಹಾಕುವ ಸಣ್ಣ ಎಲ್ ಇಡಿ ದೀಪಗಳನ್ನು ಈ ಮೀಟರ್ ನಲ್ಲಿ ದಾಖಲಾಗುವುದಿಲ್ಲ.
• ದಾಖಲಾದ ವಿದ್ಯುತ್ ಬೇಡಿಕೆ, ತತ್‌ಕ್ಷಣದ ವಿದ್ಯುತ್ ಶಕ್ತಿ, ವೋಲ್ಟೇಜ್, ಕರೆಂಟ್ ಮತ್ತು ಇತರ ವಿದ್ಯುತ್ ನಿಯತಾಂಕಗಳನ್ನು ಅಳೆಯಲು ಸಾಧ್ಯವಿಲ್ಲ.
• ವಿದ್ಯುತ್‌ನ ಕಳ್ಳತನ/ದುರುಪಯೋಗಕ್ಕೆ ಒಳಗಾಗುವುದು.
• ಈ ವಿದ್ಯುತ್ ಮಾಪನದ ಕಾರ್ಯಾಚರಣೆಗಾಗಿ ಗಣನೀಯ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತದೆ (ಸಾಮಾನ್ಯವಾಗಿ ಪ್ರತಿ ಫೇಸ್ ಗೆ 2W ಬಳಕೆಯಾಗುತ್ತೆ).
ಸ್ಥಾಯೀವಿದ್ಯುತ್ತಿನ ಮೀಟರ್ ಅಥವಾ ಡಿಜಿಟಲ್ ಮೀಟರ್ ಅನುಕೂಲಗಳು ಹೀಗಿವೆ:
• ಸ್ಥಾಯೀವಿದ್ಯುತ್ ಮೀಟರ್‌ಗಳು ನಿಖರತೆ ವರ್ಗ 1.0. ಆಗಿದೆ
• ಸ್ಥಾಯೀವಿದ್ಯುತ್ತಿನ ಶಕ್ತಿ ಮೀಟರ್‌ಗಳು DLMS ಗೆ ಪೂರಕವಾಗಿದೆ.
• ದಾಖಲಾದ ಬೇಡಿಕೆ, ತತ್‌ಕ್ಷಣದ ಶಕ್ತಿ, ವೋಲ್ಟೇಜ್, ಕರೆಂಟ್ ಮತ್ತು ಇತರ ವಿದ್ಯುತ್ ನಿಯತಾಂಕಗಳನ್ನು ಅಳೆಯಲು ಸಾಧ್ಯವಾಗುತ್ತದೆ.
• ಕಡಿಮೆ ಲೋಡ್‌ಗಳನ್ನು ಮತ್ತು ಕಡಿಮೆ ವೋಲ್ಟೇಜ್‌ಗಳಲ್ಲೂ ವಿದ್ಯುತ್ ಬಳಕೆ ಅಳೆಯಲು ಸಾಧ್ಯವಾಗುತ್ತದೆ.
• ಮೀಟರ್ ದೃಢತೆ ಹೊಂದಿದೆ.
• ಯಾವುದೇ ಘರ್ಷಣೆಯ ನಷ್ಟಗಳಾಗುವುದಿಲ್ಲ.
• ಮೀಟರ್‌ನ ಕಾರ್ಯಾಚರಣೆಯು ಕಡಿಮೆ ಶಕ್ತಿಯನ್ನು ಬಳಸುತ್ತದೆ.
• ಹೆಚ್ಚಿನ ರೆಸಲ್ಯೂಶನ್ ಹೊಂದಿದೆ.
• ವಿದ್ಯುತ್‌ನ ಕಳ್ಳತನ/ದುರುಪಯೋಗಕ್ಕೆ ಸಾಧ್ಯವಿಲ್ಲ.