ಬೆಂಗಳೂರು, ಡಿ.19 www.bengaluruwire.com : ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿದೆ.
ಹಿಂದೂ ದೇವಾಲಯಗಳಿಗೆ ಆಗಮಿಸುವವರು ಅನವಶ್ಯಕವಾಗಿ ಮೊಬೈಲ್‌ನಲ್ಲಿ ಮಾತನಾಡುವುದು, ಗರ್ಭಗುಡಿಯಲ್ಲಿನ ದೇವರ ಫೊಟೊಗಳನ್ನು ತೆಗೆಯುವುದು, ದೇವರಿಗೆ ಬೆನ್ನು ತೋರಿಸಿ ಸೆಲ್ಫಿ ಕ್ಲಿಕ್ಕಿಸುವ ಕ್ರಿಯೆಯಲ್ಲಿ ತೊಡಗಿರುತ್ತಾರೆ. ಇದರಿಂದ ದೇವಸ್ಥಾನದಲ್ಲಿ ಪೂಜೆ, ಜಪ-ತಪ, ಹೋಮ- ಹವನ, ಅಭಿಷೇಕ, ದೇವಸ್ಥಾನದ ಧಾರ್ಮಿಕ ಆಚರಣೆಗಳು ನಡೆಯುವಾಗ ಮೊಬೈಲ್ ಬಳಕೆ ಮಾಡಿದರೆ ಪೂಜೆಯ ಏಕಾಗ್ರತೆ ತಪ್ಪಿ ಹೋಗುತ್ತದೆ ಎಂದು ಒಕ್ಕೂಟದಿಂದ ಸಚಿವರನ್ನು ಭೇಟಿ ಮಾಡಿದ ಮನವರಿಕೆ ಮಾಡಿಕೊಟ್ಟಿದೆ.
ಭಕ್ತಿಯಿಂದ ಪೂಜೆಗಾಗಿ ಬರುವ ಭಕ್ತಾದಿಗಳಿಗೆ ದೇವಸ್ಥಾನದ ವ್ಯವಸ್ಥೆಯ ಬಗ್ಗೆ ತಪ್ಪು ಭಾವನೆ ಬರುವ ಸಾಧ್ಯತೆಯಿರುತ್ತದೆ. ಅಲ್ಲದೆ ತಪ್ಪು ಕಲ್ಪನೆಗಳು ಮೂಡುವ ಸಾಧ್ಯೆತೆಯಿರುತ್ತದೆ. ಆದ್ದರಿಂದ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೆ ಧಕ್ಕೆಯಾಗುವುದರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಸಚಿವರನ್ನು ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ