ಲಕ್ನೊ, ಡಿ.16 www.bengaluruwire.com : ಹಿಂದೂಗಳ ಶ್ರದ್ಧಾಭಕ್ತಿ ಕೇಂದ್ರವಾದ ಪವಿತ್ರ ಸ್ಥಳವಾದ ಅಯೋಧ್ಯೆಯಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದ್ದು ಅದನ್ನು ರಾಮನಗರದಲ್ಲಿರುವ ಪುರಾತನ ರಾಮದೇವರ ಬೆಟ್ಟ (Ramadevara betta)ದ ಮಣ್ಣಿನ ಜೊತೆ ಮಿಶ್ರಣ ಮಾಡಲಾಗುತ್ತದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಅವರ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿರುವ 150 ಯಾತ್ರಾರ್ಥಿಗಳ ತಂಡವು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttarpradesh Chief Minister Yogi Adityanath) ಅವರ ಗೃಹ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿದ ನಂತರ ಈ ವಿಷಯ ತಿಳಿಸಿದರು.
‘ರಾಮನಗರದಲ್ಲಿನ ರಾಮದೇವರ ಬೆಟ್ಟವನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಚಾಲನೆ ನೀಡಲು ರಾಜ್ಯಕ್ಕೆ ಆಗಮಿಸಬೇಕು ಮತ್ತು ಮಾರ್ಗದರ್ಶನ ಮಾಡಬೇಕು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂಗಿತವೂ ಆಗಿದೆ’ ಎಂದು ಯೋಗಿ ಆದಿತ್ಯನಾಥ್ ಅವರನ್ನು ಕೋರಿದರು.
ಈ ಸಂದರ್ಭದಲ್ಲಿ ಸಚಿವರು ರಾಮನಗರ ಮತ್ತು ರಾಮನ ನಡುವಿನ ಬಾಂಧವ್ಯವನ್ನು ವಿವರಿಸಿದರು. ರಾಮನಗರದ ಭಕ್ತರು ಜಯಘೋಷಗಳನ್ನು ಮೊಳಗಿಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಿಯೋಗದ ಜತೆಗಿದ್ದ ಅವರು, ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಂಡು, ಹಲವು ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಯೋಗಿ ಅವರಿಗೆ ರಾಮನಗರದಲ್ಲಿ ತಯಾರಿಸಿದ ರೇಷ್ಮೆ ಶಾಲು, ಹಾರ ಮತ್ತು ಪೇಟಾಗಳನ್ನು ಹಾಕಿ, ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅವರು, ‘ಕರ್ನಾಟಕದ ಆದಿಚುಂಚನಗಿರಿ ಮಠ, ಕಾಲಬೈರವ ಮತ್ತು ಮಂಜುನಾಥ ಸ್ವಾಮಿ ಹಾಗೂ ಉತ್ತರ ಪ್ರದೇಶದ ನಡುವೆ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ಸಂಬಂಧವಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಗಟ್ಟಿ ಆಗುತ್ತಿದೆ’ ಎಂದರು.
‘ಎರಡೂ ರಾಜ್ಯಗಳಲ್ಲಿ ನಾಥ ಸಂಪ್ರದಾಯದ ಪ್ರಭಾವ ಇದೆ. ನಮ್ಮ ನಡುವೆ ಕೊಡುಕೊಳ್ಳುವಿಕೆ ಮತ್ತಷ್ಟು ಹೆಚ್ಚಾಗಬೇಕು’ ಎಂದು ಅವರು ಅಭಿಪ್ರಾಯ ಪಟ್ಟರು.
ರಾಮಲಲ್ಲಾನ ದೇವಳ ನಿರ್ಮಾಣಕ್ಕೆ ರಾಮನಗರದಿಂದ 1.5 ಕೆ.ಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ :
ಇದಕ್ಕೂ ಮುನ್ನ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ರಾಮನಗದ ಯಾತ್ರಾರ್ಥಿಗಳು ಸಚಿವರೊಂದಿಗೆ ಭೇಟಿ ನೀಡಿದರು.
ಇಲ್ಲಿ ಮೈದಾಳುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯಗಳನ್ನು ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿದ 150 ಯಾತ್ರಾರ್ಥಿಗಳ ತಂಡ ಮಂದಿರದ ಆವರಣದಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್ ಮತ್ತು ನ್ಯಾಸದ ಪದಾಧಿಕಾರಿಗಳಿಗೆ ಈ ಕಾಣಿಕೆಗಳನ್ನು ರಾಮನಗರ ಜಿಲ್ಲೆಯ ಪರವಾಗಿ ಸಮರ್ಪಿಸಿತು.
ಇಲ್ಲಿರುವ ಕನ್ನಡಿಗ ಅರ್ಚಕರಾದ ಗೋಪಾಲ್ ಭಟ್ ಮತ್ತು ಅವರ ತಂಡವು ರಾಮನಗರದ ತಂಡವು ಭಕ್ತಿ-ಗೌರವಗಳೊಂದಿಗೆ ತಂದಿದ್ದ ಕಾಣಿಕೆಗಳಿಗೆ ವಿಧಿಬದ್ಧವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಕೂಡ ಶಾಸ್ತ್ರೋಕ್ತವಾಗಿ ಪೂಜಿಸಿ, ಸಚಿವರು ಮತ್ತು ಅವರ ಸಹಯಾತ್ರಾರ್ಥಿಗಳಿಗೆ ವಿತರಿಸಲಾಯಿತು.