ಬೆಂಗಳೂರು, ಡಿ.15 www.bengaluruwire.com : ಮುಂಬರುವ ವಿಧಾನಸಭಾ ಚುನಾವಣೆಗೆ ಸನ್ನದ್ಧಗೊಳ್ಳಲು ಪ್ರದೇಶ ಕಾಂಗ್ರೆಸ್ ನೇತೃತ್ವದಲ್ಲಿ ಚುನಾವಣಾ ಸಮಿತಿ ರಚನೆ ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. 36 ಮಂದಿ ಹಿರಿಯ ನಾಯಕರ ಸಮಿತಿಗೆ ಏಐಸಿಸಿ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ.
ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಎಂ.ಆರ್. ಸೀತಾರಾಂ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್ ಮತ್ತಿತರರು ಸಮಿತಿಯಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಯುವ ಕಾಂಗ್ರೆಸ್, ಎನ್.ಎಸ್.ಯು.ಐ, ಮಹಿಳಾ ಕಾಂಗ್ರೆಸ್, ಸೇವಾದಳ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಸಹ ಸಮಿತಿಯಲ್ಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ತಿಳಿಸಿದ್ದಾರೆ.