ನವದೆಹಲಿ, ಡಿ.14 www.bengaluruwire.com : ದೇಶದಲ್ಲಿ 2030 ಇಸವಿ ವೇಳೆಗೆ 12.33 ಕೋಟಿ ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಸಂಪರ್ಕ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ತಿಳಿಸಿದ್ದಾರೆ.
ದೇಶದಲ್ಲಿ ಪೈಪಿನ ಮೂಲಕ ಮನೆಗಳಿಗೆ ನೇರವಾಗಿ ಅಡುಗೆ ಅನಿಲ ವಿತರಿಸುವ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಈತನಕ ಬೆಂಗಳೂರು ಸೇರಿದಂತೆ ಭಾರತದ 630 ಜಿಲ್ಲೆಗಳಲ್ಲಿ ಗ್ಯಾಸ್ ವಿತರಣೆ ಕೊಳವೆ ಮಾರ್ಗವನ್ನು ಅಳವಡಿಸಿದೆ. ಕರ್ನಾಟಕದ 27 ಜಿಲ್ಲೆಗಳಲ್ಲಿ ಕೊಳವೆ ಮಾರ್ಗದ ಮೂಲಕ ಗ್ಯಾಸ್ ಪೂರೈಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಲೋಕಸಭೆಯಲ್ಲಿ ರಾಜ್ಯದ ಸಂಸದರಾದ ಪ್ರತಾಪ್ ಸಿಂಹ ಹಾಗೂ ಎಲ್.ವಿ.ತೇಜಸ್ವಿ ಸೂರ್ಯ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಈ ಹಿಂದೆ ಮೇ.31ರವೆರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟಾರೆ 2,27,259 ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರ ನೀಡಿದ್ದರು.
ದೇಶದಲ್ಲಿರುವ 28 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಗರ ಅನಿಲ ವಿತರಣೆ (City Gas Distribution – CGD) ಜಾಲದ ಮೂಲಕ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB)ಯು ಅಧಿಕೃತವಾಗಿ ಅನುಮತಿ ನೀಡಿರುವ ಸಂಸ್ಥೆಗಳ ಮೂಲಕ ನೈಸರ್ಗಿಕ ಅಡುಗೆ ಅನಿಲ ಜಾಲವನ್ನು ಹೊಂದಿದೆ. ಇದರ ವ್ಯಾಪ್ತಿಯು ದೇಶದ ಶೇ.98ರಷ್ಟು ಜನಸಂಖ್ಯೆಯನ್ನು ಒಳಗೊಳ್ಳುವ 295 ಭೌಗೋಳಿಕ ಪ್ರದೇಶ (Geographical Areas (GAs) ಹಾಗೂ ದೇಶದ ಒಟ್ಟಾರೆ ಭೌಗೋಳಿಕ ಪ್ರದೇಶದ ಶೇ.88ರಷ್ಟು ವ್ಯಾಪ್ತಿಯನ್ನು ಹೊಂದಿದೆ ಎಂದು ಸಭೆಗೆ ಸಚಿವ ರಾಮೇಶ್ವರ್ ತೇಲಿ ತಿಳಿಸಿದ್ದಾರೆ.
ಸೆ.30ರ ತನಕದ ಮಾಹಿತಿ ಪ್ರಕಾರ ದೇಶದ 295 ಭೋಗೋಳಿಕ ಪ್ರದೇಶದ ಪೈಕಿ 221 ಪ್ರದೇಶದಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಪೂರೈಸುವ ಕಾರ್ಯಾಚರಣೆ ಆರಂಭವಾಗಿದ್ದು, 177 ಭೌಗೋಳಿಕ ಪ್ರದೇಶದಲ್ಲಿ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ (PNG) ಪೂರೈಸಲಾಗುತ್ತಿದೆ. ಪಿಎನ್ ಜಿಆರ್ ಬಿ ನಿಗಧಿಪಡಿಸಿದ ಗುರಿ ಮತ್ತು ಮಾನದಂಡಗಳ ಅನ್ವಯ ಹಾಗೂ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆ ರೀತಿಯಲ್ಲಿ ಗ್ಯಾಸ್ ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಗರ ಅನಿಲ ವಿತರಣೆ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಯಾವುದೇ ಹಣವನ್ನು ನೀಡಿಲ್ಲ. ಬದಲಿಗೆ ನಗರ ಅನಿಲ ವಿತರಣೆ ಜವಾಬ್ದಾರಿ ಹೊಂದಿದ ಸಂಸ್ಥೆಗಳೇ ಕನಿಷ್ಠ ಕಾರ್ಯ ಯೋಜನೆಯಡಿ ಹಾಗೂ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆ ಅನ್ವಯ ಆ ಯೋಜನೆಯ ಹಣವನ್ನು ಭರಿಸುತ್ತಿದೆ.