ಬೆಂಗಳೂರು, ಡಿ.7 www.bengaluruwire.com : ಎದೆ ಝಲ್ಲೆನಿಸುವಂತೆ ಅತಿ ಎತ್ತರದಿಂದ ಹೆಲಿಕಾಪ್ಟರ್ ಗಳಿಂದ ಜಿಗಿದು ಪ್ಯಾರಾಟ್ರೂಪರ್ ಗಳು ಭೂಮಿಯತ್ತ ಬರುತ್ತಿದ್ದರೆ ಪ್ರೇಕ್ಷಕರಿಂದ ಚಪ್ಪಾಳೆಯ ಕರಾಡತನ ಮನೆ ಮಾಡಿತ್ತು. ವಾಯುಪಡೆಯ ಸಾರಂಗ್ ತಂಡದಿಂದ ಆಗಸದಲ್ಲಿ ವೈಮಾನಿಕ ಕಸರತ್ತು ಎಂತಹವರನ್ನೂ ಸೂರೆಗೊಳಿಸುತ್ತಿತ್ತು.
ಈ ದೃಶ್ಯಗಳು ಕಂಡುಬಂದಿದ್ದು, ನಗರದ ಸೇನಾಪಡೆಯ ಭಾಗವಾಗಿರುವ ಎಎಸ್ಸಿ ಸೆಂಟರ್ ಮತ್ತು ಕಾಲೇಜಿನಲ್ಲಿ. ಅಂದಹಾಗೆ ನಾಳೆ ಮತ್ತು ನಾಡಿದ್ದು (ಡಿ.8 & 9) ಎಎಸ್ ಸಿ ಕೇಂದ್ರದ 11 ನೇ ಎಎಸ್ಸಿ ಪುನರ್ಮಿಲನ ಮತ್ತು 262 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂದಿನ ಯುವಜನತೆಗೆ ರಾಷ್ಟ್ರದ ಮಿಲಿಟರಿ ಶಕ್ತಿಯ ಬಗ್ಗೆ ತಿಳಿಸಲು ಹಾಗೂ ಅವರನ್ನು ರಕ್ಷಣಾ ಪಡೆಗಳಿಗೆ ಸೇರುವಂತೆ ಪ್ರೇರೇಪಿಸಲು ಮತ್ತು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರದರ್ಶಿಸಲು ರಕ್ಷಣಾಪಡೆಯ ವಿವಿಧ ರೀತಿಯ ಸಾಹಸ ಪ್ರದರ್ಶನಗಳ ಪೂರ್ವಭ್ಯಾಸವನ್ನು ಬುಧವಾರ ನಡೆಸಲಾಯಿತು.
ಹೇಸರಗತ್ತೆ ಪ್ರದರ್ಶನ (Mule Display), ಬ್ಯಾಂಡ್ ಪ್ರದರ್ಶನ, ಧ್ವಜಾರೋಹಣ, ಧ್ವಜವಂದನೆ, ಈವೆಂಟ್ ಆರ್ಮಿ ಈಕ್ವೆಸ್ಟ್ರಿಯನ್ ಕ್ರೀಡೆಗಳ ಪ್ರಭಾವಶಾಲಿ ಪ್ರದರ್ಶನ, ಪ್ಯಾರಾ ಮೋಟಾರ್ ಡಿಸ್ಪ್ಲೇ ಮತ್ತು ಧೈರ್ಯಶಾಲಿ ಪ್ಯಾರಾಟ್ರೂಪರ್ಗಳಿಂದ ಫ್ರೀ ಫಾಲ್ ಮತ್ತು ಭಾರತೀಯ ವಾಯುಪಡೆಯ ಸಾರಂಗ್ ತಂಡದಿಂದ ಅದ್ಭುತವಾದ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಭಾರತೀಯ ವಾಯುಪಡೆಯ ಸಾರಂಗ್ ತಂಡ ಪ್ರದರ್ಶನ ಮನಮೋಹಕವಾಗಿತ್ತು. ಈ ತಂಡವು ಧೃವ ಹೆಲಿಕಾಪ್ಟರ್ಗಳೊಂದಿಗೆ ಉಸಿರುಕಟ್ಟುವ ಕುಶಲತೆಯನ್ನು ತೋರುತ್ತಾ, ಚಮತ್ಕಾರಿಕ ಹಾರಾಟಗಳನ್ನು ನಡೆಸಿತು. ಟ್ರಿಕ್ ರೈಡಿಂಗ್ ತಂಡದ ಪ್ರದರ್ಶನವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಆಕರ್ಷಕ ಘಟನೆಗಳು ಪ್ರದರ್ಶನದ ಉದ್ದಕ್ಕೂ ಪ್ರದರ್ಶನ ಕಾರ್ಯಕ್ರಮಕ್ಕೆ ಬಂದ ಪ್ರೇಕ್ಷಕರನ್ನು ಆಕರ್ಷಿಸಿದವು. ಜನಸಮೂಹದಿಂದ ಜೋರಾದ ಚಪ್ಪಾಳೆಯು ಮೈದಾನದಲ್ಲಿ ಮಾರ್ಧನಿಸಿತು. ಇದು ಮಿಲಿಟರಿ ಪ್ರದರ್ಶನದ ತಾಕತ್ತಿಗೆ ಸಾಕ್ಷಿಯಾಗಿತ್ತು.
ಇದಕ್ಕೂ ಮುನ್ನ ಪೂರೈಕೆ ಮತ್ತು ಸಾರಿಗೆ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಎಂಕೆಎಸ್ ಯಾದವ್, ಎಎಸ್ ಸಿಯ ಸೀನಿಯರ್ ಕರ್ನಲ್ ಕಮಾಂಡೆಂಟ್ ಮತ್ತು ಲೆಫ್ಟಿನೆಂಟ್ ಜನರಲ್ ಬಿಕೆ ರೆಪ್ಸ್ ವಾಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಬೆಂಗಳೂರಿನ ಎಎಸ್ಸಿ ಸೆಂಟರ್ ಮತ್ತು ಕಾಲೇಜಿನಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಈವೆಂಟ್ ನಂತರ ವಿಶೇಷ ಸೈನಿಕ ಸಮ್ಮೇಳನದಲ್ಲಿ ಡೈರೆಕ್ಟರ್ ಜನರಲ್ ಸಂವಾದ ನಡೆಸಿದರು. ಎಎಸ್ಸಿಯ ಅಧಿಕಾರಿಗಳು, ಜೆಸಿಒಗಳು, ಇತರ ಶ್ರೇಣಿಗಳು ಮತ್ತು ನಾಗರಿಕ ಸಿಬ್ಬಂದಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಈ ಪೂರ್ವಭ್ಯಾಸದ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಕುಟುಂಬಗಳು, ಅರೆಸೇನಾ ಪಡೆಗಳು, ಪೊಲೀಸ್, ಇತರ ರಕ್ಷಣಾ ಸಂಸ್ಥೆಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.