ಬೆಂಗಳೂರು, ನ.28 www.bengaluruwire.com : ರಾಜ್ಯ ಸರ್ಕಾರದ ಇಂಧನ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ‘ಅಮೃತ ಜ್ಯೋತಿ’ ಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಲಾಗುತ್ತಿರುವ 75 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯಲು ರಾಜ್ಯದಾದ್ಯಂತ ಇದುವರೆಗೆ 6.78 (6,78,234) ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಈತನಕ ಕೇವಲ 24,884 ಫಲಾನುಭವಿಗಳಿಗೆ 34 ಲಕ್ಷ ರೂ. ಸಬ್ಸೀಡಿ ಹಣ ತಲುಪಿದೆ.
ಇಂಧನ ಇಲಾಖೆ ಮೂಲಗಳು ತಿಳಿಸಿರುವಂತೆ ಈ ವರ್ಷದ ಮೇ ತಿಂಗಳಲ್ಲಿ ಜಾರಿಗೆ ಬಂದ ‘ಅಮೃತ ಜ್ಯೋತಿ’ ಯೋಜನೆಯಲ್ಲಿ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಹಾಗೂ ಚೆಸ್ಕಾಂ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕುಟುಂಬ ಸಾಫ್ಟ್ ವೇರ್, ಸುವಿಧಾ ಆಂಡ್ರಾಯ್ಡ್ ಆಪ್ ಹಾಗೂ ಸೇವಾಸಿಂಧು ಪೋರ್ಟಲ್ ನಲ್ಲಿ ಎಸ್ ಸಿ- ಎಸ್ ಟಿ ಬಿಪಿಎಲ್ ಕಾರ್ಡ್ ಹೊಂದಿದ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ 6.78 ಲಕ್ಷ ಗ್ರಾಹಕರು ನೋಂದಾವಣಿ ಮಾಡಿಕೊಂಡಿದ್ದರೂ, ಇದುವರೆಗೆ ಕೇವಲ 1,13,015 (1.13 ಲಕ್ಷ) ಗ್ರಾಹಕರನ್ನು ಮಾತ್ರ ವಿವಿಧ ಐದು ಎಸ್ಕಾಂಗಳು ಪರಿಶೀಲನೆ ನಡೆಸಿವೆ. ಆ ಗ್ರಾಹಕರಿಗೆ 1,89,80,388 (1.89 ಕೋಟಿ ರೂ.) ಸಬ್ಸೀಡಿ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ ನ.22ರ ತನಕ ಬೆಂಗಳೂರು ವೈರ್ ಗೆ ಲಭ್ಯವಾದ ಮಾಹಿತಿ ಪ್ರಕಾರ 24,884 ಫಲಾನುಭವಿಗಳ ಬ್ಯಾಂಕ್ ಖಾತೆಗೆ 33,93,884 ರೂ. ಹಣ ಜಮೆಯಾಗಿದೆ.
ಬೆಸ್ಕಾಂ ನಲ್ಲಿ 2.29 ಲಕ್ಷ ಫಲಾನುಭವಿಗಳು – 16 ಸಾವಿರ ಜನರಿಗಷ್ಟೆ ಸಬ್ಸೀಡಿ :
ಇಡೀ ಐದು ಎಸ್ಕಾಂಗಳ ಪೈಕಿ ಬೆಸ್ಕಾಂ ವಿದ್ಯುತ್ ಸರಬರಾಜು ಕಂಪನಿಯಲ್ಲಿ 2,29,811 (2.29 ಲಕ್ಷ) ಎಸ್ ಸಿ-ಎಸ್ ಟಿ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಬೆಸ್ಕಾಂ ಈತನಕ ಕೇವಲ 29,810 ಫಲಾನುಭವಿಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಈ ಅರ್ಹ ಫಲಾನುಭವಿಗಳಿಗೆ ಬೆಸ್ಕಾಂ ಒಟ್ಟು 40,06,387 (40 ಲಕ್ಷ ರೂ.) ಸಬ್ಸೀಡಿ ಹಣ ಪಾವತಿಸಬೇಕಿತ್ತು.
ಚೆಸ್ಕಾಂನಲ್ಲಿ 16 ಸಾವಿರ ಜನರಿಗೆ ತಲುಪಿದೆ ಸಬ್ಸೀಡಿ ಹಣ :
ದುರದೃಷ್ಟವಶಾತ್ ನವೆಂಬರ್ ತಿಂಗಳು ಬಂದರೂ ಕೇವಲ 16,798 ಜನರ ಬ್ಯಾಂಕ್ ಖಾತೆಗಳಿಗೆ 21,93,508 (21.93 ಲಕ್ಷ) ರೂ. ಹಣ ನೇರವಾಗಿ ಜಮೆಯಾಗಿದೆ. ಇದು ಎಸ್ಕಾಂಗಳ ಪೈಕಿ ಅತಿ ಹೆಚ್ಚು ಫಲಾನುಭವಿಗಳಿಗೆ ಸಬ್ಸೀಡಿ ರವಾನೆ ಮಾಡಿದ ಎಸ್ಕಾಂ ಆಗಿದೆ. ಇನ್ನು ಅತಿ ಕಡಿಮೆ ಫಲಾನುಭವಿಗಳು ನೋಂದಣಿಯಾಗಿರುವ ಎಸ್ಕಾಂ ಅಂದರೆ ಅದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (CESC)ಯಾಗಿದೆ. ಇಲ್ಲಿ ಕೇವಲ 71,326 ‘ಅಮೃತ ಜ್ಯೋತಿ’ ಫಲಾನುಭವಿಗಳಿದ್ದರೂ ಕೇವಲ 2,235 ಫಲಾನುಭವಿಗಳ ಪರಿಶೀಲನೆ ನಡೆಸಿ ಅವರಿಗೆ 3,26,451 ರೂ. ಹಣ ಪಾವತಿಯಾಗಬೇಕು ಎಂದು ಹೇಳಿದೆ.
ಹೀಗಿದ್ದರೂ ಕೇವಲ 16,798 ಗ್ರಾಹಕರ ಖಾತೆಗಳಿಗೆ ನೇರ ನಗದು ಪಾವತಿ ವ್ಯವಸ್ಥೆಯಡಿ 21,93,508 (21.93 ಲಕ್ಷ) ರೂ. ಹಣ ಮಾತ್ರ ಪಾವತಿಯಾಗಿದೆ. ಇದೆಲ್ಲವನ್ನು ಗಮನಿಸಿದಾಗ ‘ಅಮೃತ ಜ್ಯೋತಿ’ ಯೋಜನೆ ಇಂಧನ ಸಚಿವ ಸುನಿಲ್ ಕುಮಾರ್ ಅಂದುಕೊಂಡ ವೇಗದಲ್ಲಿ ಕೊಂಡೊಯ್ಯುವಲ್ಲಿ ಎಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಫಲರಾಗಿರುವುದು ಕಂಡುಬರುತ್ತದೆ.
ಅ.15 ರಿಂದ 15 ದಿನಗಳ ಕಾಲ ರಾಜ್ಯದಾದ್ಯಂತ ‘ಅಮೃತ ಜ್ಯೋತಿ’ ಯೋಜನೆಯಡಿ ಫಲಾನುಭವಿಗಳ ನೋಂದಾವಣಿಗೆ ಅಭಿಯಾನ ಹಮ್ಮಿಕೊಳ್ಳುವ ಮುನ್ನ 2.5 ಲಕ್ಷ ಜನರು ಪ್ರತಿ ತಿಂಗಳು ತಮ್ಮ ವಿದ್ಯುತ್ ಬಿಲ್‌ನಲ್ಲಿ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ನೋಂದಾಯಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅಭಿಯಾನ ಪೂರ್ಣಗೊಳ್ಳುವ ವೇಳೆಗೆ 10 ಲಕ್ಷ ಫಲಾನುಭವಿಗಳು ನೋಂದಣಿಯಾಗಬೇಕು ಎಂದ ಎಸ್ಕಾಂ ಅಧಿಕಾರಿಗಳಿಗೆ ಗುರಿ ನೀಡಿದ್ದರು. ಆದರೂ ಆ ಗುರಿಯನ್ನು ತಲುಪುವಲ್ಲೂ ಐದು ಎಸ್ಕಾಂಗಳು ಸೋತಿವೆ.
ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್ ಗಳವರೆಗೆ ವಿದ್ಯುತ್ ಸೌಲಭ್ಯ ನೀಡುವ ಯೋಜನೆ ಇದಾಗಿದೆ.
ಯಾರಿಗೆ? ಎಷ್ಟು ಯೂನಿಟ್ ಗಳವರೆಗೆ ಸಹಾಯಧನ? ಯಾರು ಅರ್ಹರು? :
ಗ್ರಾಮೀಣ ಪ್ರದೇಶದಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ 40 ಯೂನಿಟ್ ಗಳನ್ನು 75 ಯೂನಿಟ್ ಗಳವರೆಗೆ ಹೆಚ್ಚಿಸಲಾಗಿದೆ.
ಗ್ರಾಹಕರು 30-04-2022 ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಅಲ್ಲದೆ ಮಾಸಿಕ ವಿದ್ಯುತ್ ಬಳಕೆ ಗರಿಷ್ಠ 250 ಯೂನಿಟ್ ಮೀರಬಾರದು. ಮಾಪಕ ಅಳವಡಿಕೆ ಮತ್ತು ಮಾಪಕವನ್ನು ಎಸ್ಕಾಂ ಸಿಬ್ಬಂದಿ ಕಡ್ಡಾಯವಾಗಿ ಓದುತ್ತಾರೆ.
ಅಮೃತ ಯೋಜನೆಯಡಿ ಸೌಲಭ್ಯ ಪಡೆಯಲು ಯಾವ ಯಾವ ದಾಖಲೆಗಳು ಬೇಕು? :
ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಸಹಿತ) ದಾಖಲೆ ನೀಡಬೇಕು. 75 ಯೂನಿಟ್ ವರೆಗೆ ಬಳಕೆಯ ವಿದ್ಯುತ್ ಶುಲ್ಕವನ್ನು ಡಿಬಿಟಿ (ನೇರ ನಗದು ಪಾವತಿ ವ್ಯವಸ್ಥೆ) ಮುಖಾಂತರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಸುವಿಧಾ ಆಪ್ ಅಥವಾ ಸಂಬಂಧಿಸಿದ ಜೆಸ್ಕಾಂ, ಮೆಸ್ಕಾಂ, ಬೆಸ್ಕಾಂ, ಹೆಸ್ಕಾಂ, ಚಸ್ಕಾಂ ಉಪ ವಿಭಾಗ ಅಥವಾ ಶಾಖಾ ಕಚೇರಿಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ನೋಂದಾಯಿಸಿ ಈ ಸೌಲಭ್ಯ ಪಡೆಯಬಹುದು.
ಸಬ್ಸೀಡಿ ಸಹಾಯಧನ ಹೇಗೆ ನೀಡಲಾಗುತ್ತದೆ? :
ಈ ಸೌಲಭ್ಯಕ್ಕೆ ಅರ್ಹರಾಗಿರುವ ವಿದ್ಯುತ್ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ ಸದರಿ ಗ್ರಾಹಕರುಗಳಿಗೆ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಸರ್ಕಾರದ ಸಹಾಯಧನವನ್ನು ಮರು ಪಾವತಿಸಲಾಗುವುದು.
ಅಮೃತ ಯೋಜನೆ ಬಗ್ಗೆ ಎಲ್ಲಿ ವಿಚಾರಿಸಬೇಕು?
ಸಾರ್ವಜನಿಕರು ತಮ್ಮ ಮನೆಯ ಲೈಟ್ ಬಿಲ್ ಕಟ್ಟಲು ಹೋಗುವಾಗಿ ಸಂಬಂಧಿಸಿದ ಕಚೇರಿಯಲ್ಲಿ ಅಮೃತ ಜ್ಯೋತಿ ಯೋಜನೆ ಬಗ್ಗೆ ವಿಚಾರಿಸಿದರೆ ಅವರು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ವಿದ್ಯುತ್ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು.
Quote : ಈ ಸರ್ಕಾರದ ಯೋಜನೆ ಘೋಷಣೆಗಷ್ಟೆ ಸೀಮಿತ :
“ಅಮೃತ ಜ್ಯೋತಿ ವಿದ್ಯುತ್ ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕೇವಲ ಘೋಷಣೆಗಷ್ಟೆ ಸೀಮಿತ ಮಾಡಿಕೊಂಡಿದೆ. ಎಸ್ ಸಿ- ಎಸ್ ಟಿ ಬಿಪಿಎಲ್ ಕಾರ್ಡ್ ಹೊಂದಿದ ಬಡ ಜನರಿಗೆ ನೋಂದಣಿ ಮಾಡಿಕೊಂಡರೂ ಸರಿಯಾಗಿ ಸಬ್ಸೀಡಿ ಹಣ ಹಸ್ತಾಂತರಿಸದಿರುವುದನ್ನು ನೋಡಿದರೆ ಸರ್ಕಾರಕ್ಕೆ ಬಡಜನರಿಗೆ ಸಹಾಯ ಮಾಡುವ ಉದ್ದೇಶವನ್ನು ತೋರಿಸುತ್ತಿಲ್ಲ. ಲೆಕ್ಕ ಕೊಡಲು ಘೋಷಣೆಯಾಗುವ ಯೋಜನೆಗಳ ಪಟ್ಟಿಗೆ ಈ “ಅಮೃತ ಜ್ಯೋತಿ” ಯೂ ಸೇರಿಕೊಂಡಿರುವುದು ಸ್ಪಷ್ಟವಾಗಿ ಗೋಚವಾಗುತ್ತಿದೆ. ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗೆ ಮೀಸಲಿಟ್ಟ ಹಣವನ್ನು ಈ ಸರ್ಕಾರ ಬೇರೆಯ ಕೆಲಸಕ್ಕೆ ಬಳಸಿಕೊಂಡಿರುವುದು ಇಂತಹ ಪ್ರಕರಣಕ್ಕೆ ಮತ್ತೊಂದು ಉದಾಹರಣೆ.”
- ಪ್ರಕಾಶ್ ಬಾಬು, ಸಂಚಾಲಕರು, ಜನಾಧಿಕಾರ ಸಂಘರ್ಷ ಪರಿಷತ್