ಬೆಂಗಳೂರು, ನ.23 www.bengaluruwire.com : ಉದ್ಯಾನ ನಗರಿಯಲ್ಲಿ ಭೂಮಿ ಬೆಲೆ ರಾಕೇಟ್ ನಂತೆ ಏರಿಕೆಯಾದಂತೆ ಸಿಕ್ಕ ಸಿಕ್ಕ ಕಾಲಿ ಜಾಗಗಳಲ್ಲೆಲ್ಲಾ ಕಟ್ಟಡಗಳು ತಲೆಎತ್ತಿ ಆಟದ ಮೈದಾನಗಳೇ ಕಾಣಿಯಾಗಿವೆ. ರಾಜರಾಜೇಶ್ವರಿ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಕ್ಕಳೇ ತಮಗೆ ಆಟದ ಮೈದಾನ ಬೇಕೆಂದು ಪ್ರತಿಭಟನೆ ನಡೆಸಿ 10 ದಿನಗಳು ಕಳೆದರೂ ಈ ವಿಚಾರದಲ್ಲಿ ಬಿಬಿಎಂಪಿಯಿಂದ ಸ್ಪಷ್ಟ ನಿರ್ಧಾರ ವ್ಯಕ್ತವಾಗಿಲ್ಲ.
ಒಟ್ಟು 1.6 ಎಕರೆ ವಿಸ್ತೀರ್ಣದ ಈ ಆಟದ ಮೈದಾನವು 155 ಎಕರೆ ರಾಜ ರಾಜೇಶ್ವರ ನಗರದಲ್ಲಿನ ವಸತಿ ಪ್ರದೇಶದಲ್ಲಿನ ಒಂದೇ ಆಟದ ಮೈದಾನವಾಗಿದೆ. ಜೈವಿಕ ವೈವಿಧ್ಯತೆಯನ್ನು ಕಾಯ್ದುಕೊಂಡಿರುವ ಆರ್.ಆರ್.ನಗರ ಪ್ರದೇಶದಲ್ಲಿ ಒಟ್ಟು 1.45 ಲಕ್ಷ ಜನರು ವಾಸಿಸುತ್ತಿದ್ದಾರೆ.
ಇಂತಹ ಪ್ರದೇಶದಲ್ಲಿ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಿಗಾಗಿ ಮೈದಾನವನ್ನು ಬಿಟ್ಟುಕೊಡಬೇಕು. ಈ ಪ್ರದೇಶದಲ್ಲಿ 20ಕ್ಕೂ ಹೆಚ್ಚು ನಾಗರೀಕ ಸೌಲಭ್ಯದ ನಿವೇಶನಗಳಿದ್ದು, ಅಲ್ಲಿ ಎಲ್ಲಾ ಸೌಕರ್ಯಗಳಿರುವ ಆಧುನಿಕ ಶಾಲೆಯನ್ನು ನಿರ್ಮಿಸಲಿ ಎಂದು ಮಕ್ಕಳ ಜೊತೆ ಎಲ್ಲಾ ವಯೋಮಾನದವರು ಪ್ರತಿಭಟನೆಗೆ ಕೈಜೋಡಿಸಿದ್ದರು. ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಎಲ್ಲಾ ವಸತಿ ಪ್ರದೇಶಗಳಲ್ಲಿ ಆಟದ ಮೈದಾನಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಆ ಸಂದರ್ಭದಲ್ಲಿ ಆಗ್ರಹಿಸಿದ್ದರು.
ನ.13ರಂದು ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರ್.ಆರ್.ನಗರ ವಲಯದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಆಗಮಿಸಿ, ಬಿಬಿಎಂಪಿ ವಲಯ ಆಯುಕ್ತರೊಂದಿಗೆ ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಾಣದ ಕುರಿತಂತೆ ಸಭೆ ನಡೆಸಲು ಮಂಗಳವಾರದ ತನಕ ಸಮಯವನ್ನು ಕೋರಿದ್ದರು. ಆನಂತರ ಶಾಲೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧದ ಕುರಿತಂತೆ ಆರ್.ಆರ್.ನಗರ ವಲಯ ಆಯುಕ್ತ ರಾಮಪ್ರಸಾಥ್ ಮನೋಹರ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಆದರೆ ಶಾಲೆ ನಿರ್ಮಾಣವಾಗಬೇಕೇ? ಅಥವಾ ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರವನ್ನು ಪಾಲಿಕೆ ಅಧಿಕಾರಿಗಳು ಇನ್ನೂ ತೆಗೆದುಕೊಂಡಿಲ್ಲ.
“ಕೆಂಪೇಗೌಡ ಕ್ರೀಡಾಂಗಣದಲ್ಲಿ ಬಿಬಿಎಂಪಿ ಶಾಲೆ ನಿರ್ಮಾಣದ ಕುರಿತಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಇತರೆಡೆ ಶಾಲೆ ನಿರ್ಮಿಸುವಂತೆ ಕೋರಿದ್ದಾರೆ. ಈ ಕುರಿತಂತೆ ವಸ್ತುಸ್ಥಿತಿ ವರದಿಯನ್ನು ಸೂಕ್ತ ಕ್ರಮಕ್ಕಾಗಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸಲ್ಲಿಸಲಾಗುವುದು. ಮುಖ್ಯ ಆಯುಕ್ತರು ಸೂಕ್ತ ನಿರ್ಧಾರ ಕೈಗೊಳ್ಳುವ ತನಕ ಆ ಮೈದಾನದಲ್ಲಿ ಶಾಲೆ ನಿರ್ಮಾಣ ಕಾಮಗಾರಿ ನಡೆಯುವುದಿಲ್ಲ. ಯತಾಸ್ಥಿತಿ ಕಾಯ್ದುಕೊಳ್ಳಲಾಗುವುದು.”
–ಡಾ.ರಾಮಪ್ರಸಾತ್ ಮನೋಹರ್, ವಿಶೇಷ ಆಯುಕ್ತರು, ಆರ್.ಆರ್.ನಗರ ಬಿಬಿಎಂಪಿ ವಲಯ
ಅತಂತ್ರದಲ್ಲಿ ಮಕ್ಕಳು :
ಪಾಲಿಕೆ ಇದುವರೆಗೆ ಸೂಕ್ತ ನಿರ್ಧಾರ ಕೈಗೊಳ್ಳದ ಕಾರಣ, 150 ಎಕರೆ ಪ್ರದೇಶದಲ್ಲಿ ವಾಸಿಸುವ ಮಕ್ಕಳು ಯಾವತ್ತಿಗೆ ಇರುವ ಒಂದೇ ಒಂದು ಆಟದ ಮೈದಾನದಲ್ಲಿ ಶಾಲೆ ಎತ್ತುವುದೋ ಎಂದು ಬೇಸರದಲ್ಲಿದ್ದಾರೆ. ಈಗಾಗಲೇ ಆರ್.ಆರ್.ನಗರದಲ್ಲಿನ ಹಲಗೇವಡೇರಹಳ್ಳಿ, ಪಟ್ಟಣಗೆರೆ ಹಾಗೂ ಬಂಗಾರಪ್ಪ ನಗರದಲ್ಲಿನ ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಗಿದ್ದು, ಶಾಲೆಯ ಮಕ್ಕಳ ಸಂಖ್ಯೆ ಕಡಿಮೆಯಿದೆ. ಅಲ್ಲದೆ ಅಲ್ಲಿಯೇ ಸೂಕ್ತ ರೀತಿಯಲ್ಲಿ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇರುವ ಸರ್ಕಾರಿ ಶಾಲೆಗಳಿಗೆ ಸೂಕ್ತ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಿ ಅಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಂಡರೆ ಉತ್ತಮ. ಕೆಂಚನಹಳ್ಳಿಯಲ್ಲಿ ಆರ್.ಆರ್.ನಗರ ಸರ್ಕಾರಿ ಅನುದಾನಿತ ಶಾಲೆಯಿದೆ. ಹೀಗಾಗಿ ಈ ಪ್ರದೇಶದಲ್ಲಿರುವ ಒಂದೇ ಒಂದು ಮೈದಾನವಾದ ಕೆಂಪೇಗೌಡ ಕ್ರೀಡಾಂಗಣದಲ್ಲಿ ಶಾಲೆ ನಿರ್ಮಿಸದಂತೆ ಸಾಮಾಜಿಕ ಕಾರ್ಯಕರ್ತ ಹಾಗೂ ವನ್ಯಜೀವಿ ಹೋರಾಟಗಾರ ಜೋಸೆಫ್ ಹೂವರ್ ಬೆಂಗಳೂರು ವೈರ್ ಗೆ ಅಲ್ಲಿನ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.