ಬೆಂಗಳೂರು, ಜ.23 www.bengaluruwire.com : ರಾಜಧಾನಿಯ ಹೃದಯ ಭಾಗದಲ್ಲಿರುವ ಶಿವಾನದ ವೃತ್ತದ ಉಕ್ಕಿನ ಸೇತುವೆ ಪೂರ್ವ ನಿಗಧಿತ ಸಮಯಕ್ಕಿಂತ 5 ವರ್ಷ ತಡವಾಗಿ ಪೂರ್ಣಗೊಂಡು ಸಾರ್ವಜನಿಕ ವಾಹನಗಳಿಗೆ ಮುಕ್ತವಾದರೂ, ಉಕ್ಕಿನ ಸೇತುವೆಗೆ ಶೇಷಾದ್ರಿಪುರಂ ಹಾಗೂ ರೇಸ್ ಕೋರ್ಸ್ ಕಡೆಯಿಂದ ಬಂದು ಹೋಗುವ ಮಧ್ಯದ ಜಂಕ್ಷನ್ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕಡೆಗೆ ಬಂದು ಹೋಗುವ ವಾಹನಗಳು ಸುಗಮವಾಗಿ ಸಾಗುವಂತೆ ರೇಸ್ ಕೋರ್ಸ್ ರಸ್ತೆಯ ಜಂಕ್ಷನ್ ನಲ್ಲಿನ ಮೀಡಿಯನ್ ಅನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಿಲ್ಲ. ಹೀಗಾಗಿ ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ಕಡೆಗೆ ಬಲಕ್ಕೆ ತಿರುಗಿ ಸಾಗುವ ವಾಹನಗಳು ಹಾವಿನಂತೆ ಬಳಕುತ್ತಾ ಸೇತುವೆಯನ್ನು ಹತ್ತಬೇಕಾಗಿದೆ. ಹೀಗೆ ಹತ್ತುವ ಸಂದರ್ಭದಲ್ಲಿ ಕೊಂಚ ಮಿಸ್ ಆದರೂ ಮೇಲ್ಸೇತುವೆ ರಾಂಪ್ ಹಾಗೂ ಪಕ್ಕದ ಇಂಟರ್ ಮೀಡಿಯೇಟ್ ಸ್ಲಿಪ್ ರಸ್ತೆ ಮಧ್ಯದ ಭಾಗಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆಯಿದೆ.
ರೇಸ್ ಕೋರ್ಸ್ ಕಡೆಯಿಂದ ಬಲಕ್ಕೆ ತಿರುಗಿ ಶೇಷಾದ್ರಿಪುರಂ ಕಡೆಗೆ ಸಾಗುವ ಹಾದಿಯಲ್ಲಿ ಈ ಹಿಂದೆ ಇದ್ದ ಜಂಕ್ಷನ್ ನಲ್ಲಿ ಅಶ್ವಗಳ ಪ್ರತಿಮೆಯಿಂದಾಗಿ ವಾಹನ ಸವಾರರಿಗೆ ಫ್ಲೈಓವರ್ ಹಾಗೂ ಆ ರಸ್ತೆಗೆ ತಾಗಿದಂತೆ ಬಲ ಬದಿಯಲ್ಲಿ ಹಾಕಿರುವ ದೊಡ್ಡ ಸೈನ್ ಬೋರ್ಡ್ (ತಲುಪುವ ದಾರಿಯ ಮಾಹಿತಿ ನೀಡುವ ಫಲಕ) ಸರಿಯಾಗಿ ಕಾಣುವುದಿಲ್ಲ. ಸಾಮಾನ್ಯವಾಗಿ ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳ ಪ್ರಕಾರ ಮೀಡಿಯನ್ ಜಂಕ್ಷನ್ ಗಳಲ್ಲಿ ವಾಹನಗಳ ವೇಗವನ್ನು ಕಡಿಮೆ ಮಾಡಿ ಸುಮಗವಾಗಿ ವಾಹನ ಸಂಚಾರಕ್ಕಾಗಿ ವೃತ್ತಗಳನ್ನು ಮಾಡಿರುತ್ತಾರೆ. ಆದರೆ ರೇಸ್ ಕೋರ್ಸ್ ರಸ್ತೆಯಲ್ಲಿನ ಶಿವಾನಂದ ವೃತ್ತದ ಫ್ಲೈಓವರ್ ಜಂಕ್ಷನ್ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
“ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ಕಡೆಗೆ ಸಾಗುವ ವಾಹನ ಸವಾರರು ಹಾಗೂ ಮಲ್ಲೇಶ್ವರ ಕಡೆಯಿಂದ ಅದೇ ಫ್ಲೈಓವರ್ ದಾಟಿ ಬಲಕ್ಕೆ ತಿರುಗಿ ಮೆಜಿಸ್ಟಿಕ್ ಕಡೆ ಸಾಗುವ ವಾಹನ ಸವಾರರಿಗೆ ಅವೈಜ್ಞಾನಿಕವಾಗಿ ಜಂಕ್ಷನ್ ನಿರ್ಮಾಣದಿಂದ ತೊಂದೆರೆಯಾಗುತ್ತಿದೆ. ಈ ಭಾಗದಲ್ಲಿ ಕುದುರೆ ಪ್ರತಿಮೆಯನ್ನು ಸ್ಥಳಾಂತರಿಸಿ ಜಂಕ್ಷನ್ ಅನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸುವುದು ಒಳಿತು. ಉಕ್ಕಿನ ರಸ್ತೆ ಮಧ್ಯ ಭಾಗದಿಂದ ದಿಂದ ಒಂದು ನೇರ ರೇಖೆ ಎಳೆದು, ರೇಸ್ ಕೋರ್ಸ್ ರಸ್ತೆ ಮಧ್ಯೆ ರೇಖೆ ಎಳೆದು ಅವರೆಡು ಸಂಧಿಸುವ ಸ್ಥಳವನ್ನು ಕೇಂದ್ರವಾಗಿಟ್ಟುಕೊಂಡು ಜಂಕ್ಷನ್ ನಿರ್ಮಿಸಬೇಕು. ಅಲ್ಲದೆ ಸೇತುವೆ ನಿರ್ಮಾಣದ ಗುತ್ತಿಗೆ ಸಂಸ್ಥೆ ಸೇತುವೆ ನಕ್ಷೆ ಮತ್ತು ಯೋಜನೆಯಂತೆ ಸೇತುವೆ ಮಾರ್ಗದ ಮಾದರಿಯನ್ನು ಕಂಪ್ಯೂಟರ್ ನಲ್ಲಿ ಮರು ಸೃಷ್ಟಿಸಿ ಅಲ್ಲಿನ ವಾಹನ ಸಂಚಾರದ ಮಾಡುವ ಮಾದರಿಯನ್ನು ಪರೀಕ್ಷಿಸಿ ನಂತರ ಜಕ್ಷನ್ ಅನ್ನು ಸರಿಪಡಿಸಬೇಕಿತ್ತು. ಅವೈಜ್ಞಾನಿಕ ಜಂಕ್ಷನ್ ನಿಂದ ವಾಹನಗಳ ಅಪಘಾತವಾದರೂ ಆಶ್ಚರ್ಯಪಡಬೇಕಿಲ್ಲ. ಇದನ್ನು ಮೊದಲು ಸರಿಪಡಿಸಬೇಕಿದೆ.”
– ಪ್ರೊ.ಎಂ.ಎನ್.ಶ್ರೀಹರಿ, ಸಂಚಾರಿ ತಜ್ಞರು
2017ರಲ್ಲಿ ಬಿಬಿಎಂಪಿಯು ಶಿವಾನಂದ ವೃತ್ತದಲ್ಲಿ ಸ್ಟೀಲ್ ಬ್ರಿಡ್ಜ್ ಕಾಮಗಾರಿಯನ್ನು ಆರಂಭಿಸಲು ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಸಂಸ್ಥೆಗೆ ಕಾರ್ಯಾದೇಶ ನೀಡಿ ಕೇವಲ 9 ತಿಂಗಳಲ್ಲಿ ಕೆಲಸ ಮುಗಿಸುವಂತೆ ತಿಳಿಸಿತ್ತು. ಆದರೆ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಭೂಮಾಲೀಕರು ಕೋರ್ಟ್ ಮೆಟ್ಟಿಲು ಹತ್ತಿದ್ದು, ಕರೋನಾ ಮತ್ತಿತರ ಕಾರಣದಿಂದ 9 ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸ ಐದು ವರ್ಷದ ಬಳಿಕ ಇತ್ತೀಚೆಗಷ್ಟೆ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಪೂರ್ಣ ರೂಪದಲ್ಲಿ ಲಭ್ಯವಾಗಿದೆ.
326 ಮೀ. ಉದ್ದದ ಸೇತುವೆ 460 ಮೀಟರ್ ಗೆ ಏರಿಕೆಯಾಗಿತ್ತು :
ಈ ಮೊದಲಿಗೆ ಉಕ್ಕಿನ ಸೇತುವೆಯ ಉದ್ದ ಕೇವಲ 326 ಮೀಟರ್ ಉದ್ದವಿದ್ದು, ಪಾಲಿಕೆಯು ಅದರ ಉದ್ದವನ್ನು 460 ಮೀಟರ್ ಗೆ ಹೆಚ್ಚಿಸಿತು. ಇದರಿಂದ 19.85 ಕೋಟಿ ರೂ.ವಿದ್ದ ಕಾಮಗಾರಿಯ ವೆಚ್ಚ 40 ಕೋಟಿ ರೂ. ಏರಿಕೆಯಾಯಿತು. ನಾಲ್ಕು ಲೇನ್ ಗಳ ಈ ಸ್ಟೀಲ್ ಫ್ಲೈಓವರ್ ಒಟ್ಟು 16 ಮೀಟರ್ ಅಗಲವಿದೆ. ಕಾಮಗಾರಿಯ ವಿಳಂಬದಿಂದಾಗಿ ಚಾಲುಕ್ಯ ವೃತ್ತ, ವಿಧಾನ ಸೌಧ, ರೇಸ್ ಕೋರ್ಸ್ ರಸ್ತೆಯ ಕಡೆಗಿನ ವಾಹನ ಸವಾರರು ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರ ಕಡೆಗೆ ಹೋಗಿ ಬರಲು ಸಾಕಷ್ಟು ಪರದಾಡಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡು ವಾಹನಗಳ ಓಡಾಟ ಆರಂಭವಾಗಿ ಎರಡು ತಿಂಗಳಿಗೂ ಹೆಚ್ಚು ಕಾಲವಾಗಿದೆ. ಆದರೆ ಫ್ಲೈಓವರ್ ಕಡೆಗಿನ ರೇಸ್ ಕೋರ್ಸ್ ಜಂಕ್ಷನ್ ನಲ್ಲಿನ ಅವೈಜ್ಞಾನಿಕ ವಿನ್ಯಾಸವನ್ನು ಕೂಡಲೇ ಸರಿಪಡಿಸಿದರೆ ಉತ್ತಮ ಎಂಬ ಅಭಿಪ್ರಾಯ ನಾಗರೀಕ ವಲಯದಿಂದ ಕೇಳಿಬಂದಿದೆ.
ಯಾರೋ ಓಲೈಕೆ – ಅನುಕೂಲಕ್ಕಾಗಿ ಆರಂಭವಾದ ಯೋಜನೆ? :
ಅಧಿಕಾರದಲ್ಲಿದ್ದ ರಾಜಕಾರಣಿಗಳು ಯಾರನ್ನೋ ಓಲೈಸಲು, ಅನುಕೂಲ ಮಾಡಿಕೊಡಲು ಬಿಬಿಎಂಪಿ ಮೂಲಕ ಈ ಯೋಜನೆ ಜಾರಿಗೆ ತಂದಿದೆ ಎಂದು ಸ್ಥಳೀಯರು ದೂರುತ್ತಾರೆ. ಈ ಉಕ್ಕಿನ ಸೇತುವೆಯಿಂದ ಶೇಷಾದ್ರಿಪುರ, ಮಲ್ಲೇಶ್ವರದ ಕಡೆಗೆ ಹೋಗಿರುವ ಬರುವ ವಾಹನ ಸವಾರರಿಗೆ ಶಿವಾನಂದ ಸರ್ಕಲ್ ಸಿಗ್ನಲ್ ಒಂದು ತಪ್ಪಿತು ಅನ್ನೋದು ಬಿಟ್ಟರೆ, ವಾಹನ ದಟ್ಟಣೆ ಅವಧಿಯಲ್ಲಿ ಫ್ಲೈಓವರ್ ಹಾಗೂ ಶೇಷಾದ್ರಿಪುರ ಬಳಿಯ ರೈಲ್ವೆ ಮೇಲ್ಸೇತುವೆ ಮಧ್ಯೆ ವಾಹನಗಳು ಒಂದಕ್ಕೊಂದು ತಾಗಿಕೊಂಡು, ಆಮೆಗತಿಯಲ್ಲಿ ಸಾಗುತ್ತಿರುವುದು ವಿಪರ್ಯಾಸ.