ಬೆಂಗಳೂರು, ನ.21 www.bengaluruwire.com : ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ದೊಡ್ಮನೆ ಕುಡಿ ನಟ ವಿನಯ್ ರಾಜ್ ಕುಮಾರ್ ಅಭಿನಯದ ಆಕ್ಷನ್ ಥ್ರಿಲ್ಲರ್ ‘ಪೆಪೆ’ ಕನ್ನಡ ಸಿನಿಮಾದ ಚಿತ್ರೀಕರಣದ ಮುಕ್ತಾಯಗೊಂಡಿದ್ದು, ಚಿತ್ರದ ಮುಂದಿನ ಹಂತ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ನಡೆಯುತ್ತಿದೆ.
2018ರಲ್ಲಿ ‘ಅನಂತು v/s ನುಸ್ರುತ್’ ಸಿನಿಮಾದ ನಂತರ ವಿನಯ್ ರಾಜಕುಮಾರ್ ಅವರ ಯಾವುದೇ ಸಿನಿಮಾ ತೆರೆ ಕಂಡಿರಲಿಲ್ಲ. ಈ ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ‘ಪೆಪೆ’ ಚಿತ್ರ ಒಂದು ಬ್ರೇಕ್ ಕೊಡಬಹುದೆಂದು ಸ್ಯಾಂಡಲ್ ವುಡ್ ನಿರೀಕ್ಷೆ ಹೊಂದಿದೆ. ‘ಪೆಪೆ’ ಬಹುಕೋಟಿ ಬಜೆಟ್ ನ ಸಿನಿಮಾ ಕೇವಲ ಟೈಟಲ್ ಮೂಲಕವೇ ಸಿನಿರಸಿಕರು ಹಾಗೂ ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದಿನ ಎರಡು ಟ್ರೈಲರ್ ಗಳಲ್ಲೂ ಸಿನಿಮಾ ವಿಭಿನ್ನತೆ ಕಾಯ್ದುಕೊಂಡಿರುವುದಕ್ಕೆ ಸಾಕ್ಷಿ ನೀಡಿದಂತಿದೆ. ಶ್ರೀಲೇಶ್.ಎಸ್.ನಾಯರ್ ನಿರ್ದೇಶನದ ‘ಪೆಪೆ’ ಆಕ್ಷನ್ ಸಿನಿಮಾದಲ್ಲಿ 50ಕ್ಕೂ ಹೆಚ್ಚು ಫೈಟಿಂಗ್ ದೃಶ್ಯಗಳಿವೆ. ಚೇತನ್ ಡಿಸೋಜಾ, ನರಸಿಂಹ ಹಾಗೂ ರವಿ ವರ್ಮ ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಶೂಟಿಂಗ್ ಮಾಡಲಾಗಿದೆ.
ಇಷ್ಟು ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಕಲೇಶಪುರದಲ್ಲಿ ನಡೆದ ಕ್ಲೈಮ್ಯಾಕ್ಸ್ ಫೈಟಿಂಗ್ ಸೀನ್ ಶೂಟಿಂಗ್ ಅನ್ನು ಸಾಹಸ ನಿರ್ದೇಶಕ ರವಿವರ್ಮಾ ನೇತೃತ್ವದಲ್ಲಿ ಮಾಡುವ ಮೂಲಕ ಚಿತ್ರೀಕರಣ ಕಾರ್ಯ ಪೂರ್ಣಗೊಂಡಂತಾಗಿದೆ. ಈವರೆಗೆ ಲವರ್ ಬಾಯ್ ಆಗಿ, ಸಾಮಾಜಿಕ ಕಾಳಜಿಗೆ ಹೋರಾಡುವ ಹೋರಾಟಗಾರನಾಗಿ, ಮನೆ ಮಗನಾಗಿ ವಿಭಿನ್ನಪಾತ್ರಗಳಲ್ಲಿ ಕಾಣಸಿಕೊಂಡಿದ್ದ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸುವ ಮೂಲಕ ಹೊಸ ನಿರೀಕ್ಷೆಯನ್ನು ಹುಟ್ಟಿಸುವ ಹುಮ್ಮಸ್ಸಿನಲ್ಲಿದ್ದಾರೆ. ಕಾಜಲ್ ಕುಂದೆರ್ ನಾಯಕ ನಟಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ನಾಯಕ ನಟ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿನ ಪಾತ್ರದ ಹೆಸರು ಪ್ರದೀಪ್ ಅಂತಿದೆ. ಆತನ ಅಡ್ಡಹೆಸರು ‘ಪೆಪೆ’ ಅಂತಿದೆ. ಅದನ್ನೇ ಚಿತ್ರಕ್ಕೆ ಹೆಸರಿಡಲಾಗಿದೆ.
ಎರಡು ಮನೆತನಗಳ ನಡುವೆ 1970ರಿಂದ ಆರಂಭವಾಗುವ ವೈಷಮ್ಯ 2020ರ ನಡುವಿನ ಐದು ದಶಕಗಳಲ್ಲಿ ಇಡೀ ಊರಿಗೆ ಹಬ್ಬಿ ಅಲ್ಲಿನ ಜನರ ಬದುಕನ್ನು ಇನ್ನಿಲ್ಲದಂತೆ ಕಾಡುವ ಸಂದರ್ಭದಲ್ಲಿ ನಾಯಕ ಹೇಗೆ ತನ್ನನ್ನು, ತನ್ನ ಕುಟುಂಬವನ್ನು ಹಾಗೂ ಇಡೀ ಊರನ್ನು ಉಳಿಸಿಕೊಳ್ಳುತ್ತಾನೆ ಎಂಬ ಕಥಾ ಹಂದರವನ್ನು ಹೊಂದಿದೆ.
ಸಿನಿಮಾ ನಿರ್ಮಾಪಕ ಉದಯ್ ಶಂಕರ್ ಏನು ಹೇಳಿದ್ದಾರೆ ?
‘ಸಕಲೇಶಪುರ, ಮಡಿಕೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಗಾಲ ಹಾಗೂ ಚಳಿಗಾಲದ ವಾತಾವರಣವನ್ನೇ ಕಾದು ಸಿನಿಮಾನ ಎಲೆಮೆಂಟ್ ಗೆ ಅಗತ್ಯವಾದ ದೃಶ್ಯಗಳನ್ನು ಸಿನಿಮಾ ತಂಡ ಶೂಟಿಂಗ್ ಮಾಡಿದೆ. ಕಮರ್ಷಿಯಲ್ ಚಿತ್ರಗಳಿಗೆ ನೀಡುವ ಒತ್ತಿಗಿಂತ ಆರ್ಟಿಸ್ಟಿಕ್ ಆಗಿ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ನಾಯಕನ ಸುತ್ತವಿರುವ ಪ್ರತಿ ಪಾತ್ರಗಳಿಗೂ ಹಾಗೂ ಸಣ್ಣ ಸಣ್ಣ ಅಂಶಗಳಿಗೂ ಒತ್ತು ನೀಡಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿನ ಪ್ರತಿ ದೃಶ್ಯಗಳು ಸಹಜವಾಗಿಯೇ ಪ್ರೇಕ್ಷನ ಮುಂದೆ ಘಟಿಸಿದಂತೆ ಶೂಟಿಂಗ್ ಮಾಡಲಾಗಿದೆ. ಈ ಚಿತ್ರದಲ್ಲಿ ಒಟ್ಟು ಎರಡು ಥೀಮ್ ಸಾಂಗ್ಸ್ ಗಳಿದ್ದು ಅವುಗಳ ಸಂಕಲನ ಕಾರ್ಯ ನಡೆಯುತ್ತಿದೆ’ ಎಂದು ಸಿನಿಮಾದ ನಿರ್ಮಾಪಕ ಎಸ್.ಉದಯ್ ಶಂಕರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
‘ಪೆಪೆ’ ಫಿಲಮ್ ನಲ್ಲಿ ನಟಿಸುವಂತೆ ವಿನಯ್ ಗೆ ಸಲಹೆ ನೀಡಿದ್ದರು ಪುನೀತ್ :
‘ಪೆಪೆ’ ಫಿಲಮ್ ಮಾಡುವ ಮುನ್ನ ನಟ ವಿನಯ್ ರಾಜ್ ಕುಮಾರ್ ಅವರ ಚಿಕ್ಕಪ್ಪ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಒನ್ ಲೈನ್ ಸ್ಟೋರಿ ಹೇಳಿದಾಗ, ಈ ಚಿತ್ರದ ಬಗ್ಗೆ ಆಸಕ್ತಿ ತೋರಿ ಈ ಚಿತ್ರವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ವಿನಯ್ ರಾಜ್ ಕುಮಾರ್ ಉತ್ತಮವಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.’ ಎಂದು ಉದಯ್ ಶಂಕರ್ ಹೇಳಿದ್ದಾರೆ.
ಡೂಪ್ ಇಲ್ಲದೆ ಫೈಟಿಂಗ್ ಶೂಟ್ ಮಾಡಿದ ನಟ ವಿನಯ್ ರಾಜ್ ಕುಮಾರ್ :
‘ಪೆಪೆ’ ಸಿನಿಮಾದಲ್ಲಿ ಮುಂದಿನ ಸೀನ್ ಅಥವಾ ಘಟನೆಯನ್ನು ಪ್ರೇಕ್ಷಕ ಊಹಿಸಲು ಆಗದ ಹಲವು ಟ್ವಿಸ್ಟ್ ಗಳು ಸಿನಿಮಾದಲ್ಲಿದೆ. ಆಕ್ಷನ್ ಪ್ರಧಾನ ಚಿತ್ರವಾಗಿರುವ ಕಾರಣ ನಟ ವಿನಯ್ ರಾಜ್ ಕುಮಾರ್ ರಿಸ್ಕ್ ತೆಗೆದುಕೊಂಡು ಶೇ.100ಕ್ಕೆ ನೂರರಷ್ಟು ಡೂಪ್ ಬಳಸದೇ ತಾವೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಕೂರ್ಗ್ ನಲ್ಲಿ ಸುಮಾರು 300 ವರ್ಷಗಳ ಹಳೆಯದಾದ ಮನೆಯಲ್ಲಿ ಸಿನಿಮಾ ಚಿತ್ರಕರಣ ಮಾಡಲಾಗಿದೆ. ಹಸಿರು, ಮಳೆ, ಮೋಡ, ಮಂಜು ಮತ್ತಿತರ ದೃಶ್ಯಗಳನ್ನು ಕಲಾತ್ಮಕ ರೀತಿಯಲ್ಲಿ ಸೆರೆ ಹಿಡಿಯಲಾಗಿದೆ. ಸಿನಿಮಾ ನಿರ್ದೇಶಕ ಶ್ರೀಲೇಶ್.ಎಸ್.ನಾಯರ್ ಅವರ ನಿರ್ದೇಶನದ ಚಾಕಚಕ್ಯತೆಯೂ ಈ ಚಿತ್ರಕ್ಕೆ ಸಾಕಷ್ಟು ಬಲ ತುಂಬಿದೆ.
ಚಿತ್ರದಲ್ಲಿ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಒಳಗೊಂಡ ತಾರಾ ಬಳಗವಿದೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೈಚಳಕ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಈ ಚಿತ್ರವನ್ನು ಉದಯ್ ಶಂಕರ್ ಜೊತೆಗೆ ಶ್ರೀರಾಮ್ ಎಂಬುವರು ನಿರ್ಮಾಣ ಮಾಡಿದ್ದಾರೆ.