ಬೆಂಗಳೂರು, ನ.20 www.bengaluruwire.com : ಸಿಲಿಕಾನ್ ಸಿಟಿಯ ಐತಿಹಾಸಿಕ ಜಾತ್ರೆ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಭಾನುವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೊಡ್ಡ ಗಣೇಶನಿಗೆ ಹಾಗೂ ದೊಡ್ಡ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದರು. ಈ ಮೂಲಕ ಮೂರು ದಿನಗಳ ಹಳ್ಳಿ ಸೊಗಡಿನ ವಾತಾವರಣದ ಈ ಐತಿಹಾಸಿಕ ಜಾತ್ರೆಗೆ ಕಳೆಕಟ್ಟಿದೆ.
ಶನಿವಾರದಿಂದಲೇ ಕಾಲೇಜು ಯುವಕ, ಯುವತಿಯರು, ಹನುಮಂತನಗರ, ಎನ್.ಆರ್.ಕಾಲೋನಿ, ತ್ಯಾಗರಾಜನಗರ, ಬಸವನಗುಡಿ, ಸುಂಕೇನಹಳ್ಳಿ, ಗುಟ್ಟಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಜನರು ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದ ರಸ್ತೆಯಲ್ಲಿ ಹಾಗೂ ಆಸುಪಾಸಿನ ರಸ್ತೆಯಲ್ಲಿ ಹಾಕಿರುವ ಕಡಲೇಕಾಯಿ ಅಂಗಡಿಗಳಿಗೆ ತೆರಳಿ ಕಡಲೇಕಾಯಿ ಖರೀದಿಸುತ್ತಿದ್ದರು. ಇಂದು ಭಾನುವಾರ ಕಾರಣ ಬೆಳಗ್ಗೆಯಿಂದಲೇ ಕಡಲೇಕಾಯಿ ಪರಿಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಸಂಜೆಯ ಮೇಲಂತೂ ಪರಿಷೆಗೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ 500 ವರ್ಷಗಳ ಇತಿಹಾಸವಿರುವ ಪಾರಂಪರಿಕ ಹಿನ್ನಲೆಯಿರುವ ಕಡಲೇಕಾಯಿ ಪರಿಷೆಯಲ್ಲಿ ಈ ಬಾರಿ ಸಂಚಾರಕ್ಕೆ ತೊಂದರೆಯಾಗದಂತೆ ಪಾದಚಾರಿ ಮಾರ್ಗದಲ್ಲಿ 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆ ಪೈಕಿ 500ಕ್ಕೂ ಹೆಚ್ಚು ಕಡಲೇಕಾಯಿ ಅಂಗಡಿಗಳನ್ನು ವ್ಯಾಪಾರಸ್ತರು ತೆರದಿದ್ದಾರೆ. ಕೋಲಾರ, ಚಿತ್ರದುರ್ಗ, ತಮಿಳುನಾಡು, ಆಂಧ್ರಪ್ರದೇಶ, ರಾಮನಗರ ಸೇರಿದಂತೆ ಹಲವು ಕಡೆಗಳಿಂದ ವಿಧ ವಿಧ ರೀತಿಯ ಕಡಲೆಕಾಯಿಗಳನ್ನು ತಂದು ರೈತರು ಅಂಗಡಿಗಳನ್ನು ಹಾಕಿದ್ದಾರೆ. ಪರಿಷೆ ನಡೆಯುವ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳು ಜಾತ್ರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.
ಹಸಿ ಕಡಲೇಕಾಯಿ ಸೇರಿಗೆ 30 ರೂ. :
ಹುರಿದಿರುವ ಕಡಲೆಕಾಯಿ ಬೆಲೆ ಸೇರಿಗೆ 30 ರೂ. ಇದ್ದರೆ, ಒಂದು ಲೀಟರ್ ಗೆ 60 ರೂ.ನಷ್ಟಿದೆ. ಅದೇ ರೀತಿ ಹಸಿ ಕಡಲೇಕಾಯಿ ಬೆಲೆ ಸೇರಿಗೆ 30 ರೂ. ಹಾಗೂ ಲೀಟರ್ ಗೆ 50 ರೂ. ದರದಲ್ಲಿ ಮಾರಾಟವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಡಲೇಕಾಯಿ ದರ ಹೆಚ್ಚಳವಾಗಿದೆ ಎಂದು ಖರೀದಿದಾರರು ದೂರುತ್ತಿದ್ದರೆ, ಕಡಲೇಕಾಯಿ ಬೆಳೆ, ಸಾಗಣೆ, ಕೂಲಿ ವೆಚ್ಚ ಮತ್ತಿತರ ಕಾರಣಗಳಿಂದ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಸ್ಥರೊಬ್ಬರು ಬೆಂಗಳೂರು ವೈರ್ ಗೆ ಹೇಳಿದ್ದಾರೆ.
ಜಾತ್ರೆಗೆ ಬರುವವರು ಮನೆಯಿಂದ ಕೈಚೀಲ ತನ್ನಿ :
ಪ್ರತಿವರ್ಷದಂತೆ ಈ ವರ್ಷವೂ ಪ್ಲಾಸ್ಟಿಕ್ ಮುಕ್ತ ಪರಿಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಕಡಲೇಕಾಯಿ ಹಾಗೂ ಪರಿಷೆಯಲ್ಲಿ ಖರೀದಿಸುವ ವಸ್ತುಗಳನ್ನು ಮನೆಗೆ ಕೊಂಡೊಯ್ಯಲು ಚೀಲಗಳನ್ನು ತರುವಂತೆ ಬಿಬಿಎಂಪಿ ಮನವಿ ಮಾಡಿದೆ. ಈ ಬಾರಿಯ ಜಾತ್ರೆಯಲ್ಲಿ 3 ರಿಂದ 4 ಲಕ್ಷ ಜನರು ಭೇಟಿ ನೀಡುವ ಸಾಧ್ಯತೆಯಿದೆ. ಪರಿಷೆಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ವಾಹನಗಳ ನಿಲುಗಡೆಗೆ ಎಪಿಎಸ್ ಕಾಲೇಜಿನ ಆಟದ ಮೈದಾನ, ಕೊಹಿನೂರು ಆಟದ ಮೈದಾನ ಹಾಗೂ ಆಶ್ರಮ ವೃತ್ತದಲ್ಲಿ ಜಾಗ ಕಲ್ಪಿಸಲಾಗಿದೆ. ದೊಡ್ಡ ಗಣಪತಿ ಹಾಗೂ ಬೃಹತ್ ನಂದಿ ವಿಗ್ರಹದ ದರ್ಶನಕ್ಕಾಗಿ ಅಲ್ಲಲ್ಲಿ ಎಲ್ಇಡಿ ಪರದೆಯನ್ನು ಹಾಕಲಾಗಿದೆ. ಭದ್ರತೆ ಹಾಗೂ ಮುಂಜಾಗ್ರತೆ ದೃಷ್ಟಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ 30 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಭಕ್ತರಿಗೆ ಮಾರ್ಗದರ್ಶನ ಮಾಡಲು ಹೋಂ ಗಾರ್ಡ್ಸ್ ಮತ್ತು ಧ್ವನಿವರ್ಧಕಗಳ ಮೂಲಕ ಸಂದೇಶ ರವಾನಿಸಲು ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕೆಂಪಾಂಬುಧಿ ಕೆರೆಯಲ್ಲಿ ನ.21ರ ಸಂಜೆ 6ಕ್ಕೆ ತೆಪ್ಪೋತ್ಸವ :
ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆಂಪಾಬುಧಿ ಕೆರೆಯಲ್ಲಿ ಕಡಲೇಕಾಯಿ ಪರಿಷೆಯ ಎರಡನೇ ದಿನವಾದ ಸೋಮವಾರ ಸಂಜೆ 6 ಗಂಟೆಗೆ ತೆಪ್ಪೋತ್ಸವ ನಡೆಸಲು ಬಿಬಿಎಂಪಿಯು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಾತ್ರೆಯ ನಡೆಯುವ ಪ್ರತಿದಿನ ಸಂಜೆ 6ರಿಂದ 7.30ರ ತನಕ ಕಹಳೆ ಬಂಡೆ ಉದ್ಯಾನವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದರೆ. ನರಸಿಂಹ ಸ್ವಾಮಿ ಉದ್ಯಾನವನದಲ್ಲಿ ಸೋಮವಾರ ಮತ್ತು ಮಂಗಳವಾರ ಸಂಜೆ 6ರಿಂದ 7.30ರ ತನಕ ಭರತನಾಟ್ಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಕಾನೂನು ಸುವ್ಯವಸ್ಥೆ ಕಾಪಾಡಲು 400 ಪೊಲೀಸ್ ಸಿಬ್ಬಂದಿ :
ಕಾನೂನು ಸುವ್ಯವಸ್ಥೆ ಕಾಪಾಡಲು 400 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ವಾಹನ, ಆಂಬುಲೆನ್ಸ್, ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ ಎರಡು ವರ್ಷದಿಂದ ಕಳೆಗುಂದಿದ್ದ ಪರಿಷೆ :
2020 ಹಾಗೂ 2021ರಲ್ಲಿ ಕೋವಿಡ್ ಸೋಂಕಿನಿಂದ ಹಾಗೂ ರಾಜ್ಯ ಸರ್ಕಾರದ ಹಲವು ಪರಿಷೆಗೆ ಸಾಕಷ್ಟು ನಿರ್ಬಂಧ ಹಾಗೂ ಷರತ್ತುಗಳನ್ನು ವಿಧಿಸಲಾಗಿತ್ತು. ಹೀಗಾಗಿ ಕಡಲೆಕಾಯಿ, ಆಟಿಕೆ, ಕರಕುಶಲ ವಸ್ತುಗಳು, ತಿಂಡಿ- ತಿನಿಸುಗಳ ವ್ಯಾಪಾರ ನಡೆದಿರಲಿಲ್ಲ. ಆದರೆ ಈ ಬಾರಿ ಕಡಲೇಕಾಯಿ ಪರಿಷೆ ಕೋವಿಡ್ ಸೋಂಕು ಬಹುತೇಕ ಇಲ್ಲದ ಕಾರಣ ಬಸವನಗುಡಿ ರಸ್ತೆ ಹಾಗೂ ಸುತ್ತಮುತ್ತಲ ಬೀದಿಗಳಲ್ಲಿ ಕಡೆಲೆಕಾಯಿ ಮಾರಾಟ, ಆಟಿಕೆ, ತಿಂಡಿ ತಿನಿಸು, ಬಟ್ಟೆ, ಮನೆಯ ಅಡುಗೆ ಸಾಮಾನುಗಳು, ಕರಕುಶಲ ವಸ್ತುಗಳು ಸೇರಿದಂತೆ ನಾನಾ ರೀತಿಯ ವ್ಯಾಪಾರ ಮಳಿಗೆಗಳು ತಲೆ ಎತ್ತಿದ್ದು, ಅದನ್ನು ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಪರಿಷೆಗೆ ಬರುವವರ ಓಡಾಟಕ್ಕಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಲವು ದಿನಗಳ ಕಾಲ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಕಡಲೆಕಾಯಿ ಪರಿಷೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ರವಿಸುಬ್ರಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಆಡಳಿತ ಅಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪಾಲಿಕೆ ವಿಶೇಷ ಆಯುಕ್ತರಾದ ಜಯರಾಮ್ ರಾಯ್ ಪುರ್, ದಕ್ಷಿಣ ವಲಯದ ಜಂಟಿ ಆಯುಕ್ತರಾದ ಜಗದೀಶ್ ನಾಯಕ್ ಪಾಲ್ಗೊಂಡಿದ್ದರು.