ಬೆಂಗಳೂರು, ನ.19 www.bengaluruwire.com : ಸದಾ ದೇಶದ ರಕ್ಷಣೆಯ ಕಾಯಕದಲ್ಲಿರುವ ಸೇನೆ ಹಾಗೂ ಬಿಡುವಿಲ್ಲದ ಕೆಲಸದಲ್ಲಿರುವ ಮಾಧ್ಯಮದವರು ಕೆಲವು ಸಮಯ ಬಿಡುವು ಮಾಡಿಕೊಂಡು ಇದೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಸೌಹಾರ್ದಯುತ ಕ್ರಿಕೆಟ್ ಪಂದ್ಯವನ್ನು ಆಡಿದರು. ಮೀಡಿಯಾ ಇಲೆವೆನ್ ಹಾಗೂ ಆರ್ಮಿ ಇಲೆವೆನ್ ಮಧ್ಯದ ಕ್ರಿಕೆಟ್ ಮ್ಯಾಚ್ ನಲ್ಲಿ ಮಾಧ್ಯಮ ತಂಡ ಗೆಲವು ಸಾಧಿಸಿತು.
ಮಾಣಿಕ್ ಷಾ ಪರೇಡ್ ಮೈದಾನದ ಬಳಿಯ ರಾಜೇಂದ್ರ ಸಿಂಗ್ ಜಿ ಆರ್ಮಿ ಆಫೀಸರ್ಸ್ ಇನ್ಸಿಟ್ಯೂಟ್ (RSAOI) ಮೈದಾನದಲ್ಲಿ ಶನಿವಾರ ಬೆಳಗ್ಗೆ ನಡೆದ 12 ಓವರ್ ಗಳ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಮೀಡಿಯಾ ಇಲೆವೆನ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. 12 ಓವರ್ ಗಳ ಮ್ಯಾಚ್ ನಲ್ಲಿ ಆರ್ಮಿ ಇಲವೆನ್ ತಂಡದ ಕ್ಯಾಪ್ಟನ್ ಆಗಿ ಲೆಫ್ಟಿನೆಂಟ್ ಕರ್ನಲ್ ಜೆ.ಎಸ್.ಕಲ್ಹೋನ್ ನೇತೃತ್ವದಲ್ಲಿ ಬ್ಯಾಟಿಂಗ್ ನಡೆಸಿದ ಆರ್ಮಿ ಇಲೆವೆನ್ 5 ವಿಕೆಟ್ ಗಳ ನಷ್ಟಕ್ಕೆ 107 ರನ್ ಗಳನ್ನು ಗಳಿಸಿತ್ತು. ನಂತರ ಆರ್ಮಿ ಇಲೆವೆನ್ ನೀಡಿದ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಮೀಡಿಯಾ ಇಲೆವೆನ್ ತಂಡದ ನಾಯಕ ಯಾಸಿರ್ ಮುಸ್ತಾಕ್ ನೇತೃತ್ವದಲ್ಲಿ ತಂಡದ ಆಟಗಾರರು, 11 ಓವರ್ ಮೂರು ಬಾಲುಗಳಲ್ಲಿ 5 ವಿಕೆಟ್ ನಷ್ಟಕ್ಕೆ 108 ರನ್ ಗಳನ್ನು ಅನಾಯಾಸವಾಗಿ ಗಳಿಸಿ ವಿಜಯ ದಾಖಲಿಸಿದರು.
ಕೇರಳ ಮತ್ತು ಕರ್ನಾಟಕ ಸಬ್ ಏರಿಯಾ ಸೇನೆಯ ಜನರಲ್ ಕಮಾಂಡಿಂಗ್ ಆಫೀಸರ್ ಆದ ಮೇಜರ್ ಜನರಲ್ ರವಿ ಮುರುಗನ್ ಗೆಲವು ಸಾಧಿಸಿದ ತಂಡಕ್ಕೆ ಟ್ರೋಫಿ ನೀಡಿದರು. ಅಲ್ಲದೆ 39 ರನ್ ಗಳನ್ನು ದಾಖಲಿಸಿದ ಆರ್ಮಿ ಇಲವೆನ್ ತಂಡದ ಲೆಫ್ಟಿನೆಂಟ್ ಕರ್ನಲ್ ಉತ್ತಮ ಬ್ಯಾಟ್ಸ್ ಮೆನ್ ಹಾಗೂ ಮೀಡಿಯಾ ಇಲವೆನ್ ತಂಡದಲ್ಲಿ ಎರಡು ವಿಕೆಟ್ ಗಳಿಸಿದ ಸುಧಾಕರ್ ಉತ್ತಮ ಬೌಲರ್ ಹಾಗೂ ತಲಾ 29 ರನ್ ಗಳನ್ನು ಗಳಿಸಿದ ಸಗಾಯ್ ರಾಜ್ ಹಾಗೂ ಮುತ್ತಪ್ಪ ಲಮಾಣಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು.
ರಕ್ಷಣಾ ಇಲಾಖೆಯ ಡೆಪ್ಯುಟಿ ಜನರಲ್ ಕಮಾಂಡಿಂಗ್ ಆಫೀಸರ್ ಬ್ರಿಗೇಡಿಯರ್ ಎಂಆರ್ ಕೆ ಪಣಿಕ್ಕರ್, ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್ ಮರಿಯೋ ಡಿ ಮೊಂತಿ, ಕರ್ನಾಟಕ ಸಾರ್ವಜನಿಕ ಸಂಪರ್ಕಾಧಿಕಾರಿ ಪುನೀತ ಹಾಗೂ ಮಾಜಿ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಮಧು ನಾಯರ್, ಹಾಗೂ ಹಿರಿಯ ಪತ್ರಕರ್ತರು ಈ ಕ್ರಿಕೆಟ್ ಪಂದ್ಯದಲ್ಲಿ ಪಾಲ್ಗೊಂಡು ಎರಡು ಕಡೆಯ ಆಟಗಾರರನ್ನು ಹುರಿದುಂಬಿಸಿದರು. ಒಟ್ಟಿನಲ್ಲಿ ಈ ಸ್ನೇಹಮಯ ಪಂದ್ಯಾವಳಿ ಮಾಧ್ಯಮ ಮತ್ತು ಸೇನೆಯ ನಡುವಿನ ಉತ್ತಮ ಬಾಂಧವ್ಯಕ್ಕೆ ಕಾರಣವಾಯಿತು.