ಬೆಂಗಳೂರು, ನ.18 www.bengaluruwire.com : ವಿದ್ಯುತ್ ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಪಾವತಿಸದಿದ್ದರೆ, ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸಲು ಬೆಸ್ಕಾಂ ಕ್ರಮ ಕೈಗೊಳ್ಳಲಿದೆ. ಈ ಒಪ್ಪಂದ ರದ್ದಾದ ಬಳಿಕ ಗ್ರಾಹಕರು ಪುನಃ ವಿದ್ಯುತ್ ಸಂಪರ್ಕ ಪಡೆಯಲು ಹೊಸ ಗ್ರಾಹಕರಂತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಬೆಸ್ಕಾಂ ವ್ಯವಸ್ಥಾಪಕ ಮಹಾಂತೇಶ ಬೀಳಗಿಯವರು ಟ್ವೀಟ್ ಮಾಡಿದ್ದಾರೆ.
ವಿದ್ಯುತ್ ಗ್ರಾಹಕರಿಗೆ ಒಂದು ವಿಷಯ ತಿಳಿದಿರಲಿ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಆಗಲಿ ಇತರ ವಿದ್ಯುತ್ ಸರಬರಾಜು ಕಂಪನಿ (ESCOMs)ಗಳಾಗಲಿ ಏಕಾ ಏಕಿ ಕಡಿತಗೊಳಿಸಲು ಅವಕಾಶವಿಲ್ಲ. ಇದಕ್ಕೆ ಬೆಸ್ಕಾಂ ಸೇರಿದಂತೆ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡುವ ಮೆಸ್ಕಾಂ, ಹೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಕಂಪನಿಗಳು ಕೆಇಆರ್ ಸಿ ನಿಯಮಗಳನ್ನು ಅನುಸರಿಸಲೇ ಬೇಕು. ಕರ್ನಾಟಕದಲ್ಲಿ 2020ರ ಮಾಹಿತಿಯಂತೆ ಒಟ್ಟಾರೆ 2,67,89,971 (2.67 ಕೋಟಿ) ವಿದ್ಯುತ್ ಗ್ರಾಹಕರಿದ್ದಾರೆ.
2021ರ ಇಸವಿಯ ತನಕ ರಾಜ್ಯದಲ್ಲಿ ಒಟ್ಟಾರೆ 30.091 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಇಷ್ಟೆಲ್ಲಾ ಇರುವಾಗ ದಿನನಿತ್ಯ ಅನಧಿಕೃತ ವಿದ್ಯುತ್ ಕಡಿತ, ಅಕ್ರಮ ವಿದ್ಯುತ್ ಸಂಪರ್ಕ, ಬಿಲ್ ಪಾವತಿಸದ ಕಾರಣಕ್ಕೆ ವಿದ್ಯುತ್ ಫ್ಯೂಸ್ ಕಿತ್ತುಕೊಂಡು ಹೋಗುವ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ಈ ಕುರಿತಂತೆ ವಿದ್ಯುತ್ ಗ್ರಾಹಕರು ಕಾನೂನಿನಲ್ಲಿ ಇರುವ ಅವಕಾಶಗಳು, ಹಕ್ಕುಗಳ ಹಾಗೂ ಅವರಿಗೆ ಇರಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿದುಕೊಳ್ಳಬೇಕಿದೆ.
ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಪ್ರಾಧಿಕಾರ (KERC) ವಿದ್ಯುತ್ ಶಕ್ತಿ ಸಂಪರ್ಕ ಕಡಿತ ಮತ್ತು ಪುನರ್ ಸ್ಥಾಪನೆ ಕುರಿತಂತೆ ಕೆಇಆರ್ ಸಿ (ವಿದ್ಯುತ್ ಪೂರೈಕೆ) ಕೋಡ್, 2004ರಂತೆ ಬಿಲ್‌ನ ಮೊತ್ತಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಬಹುದಾದ ಸಂದರ್ಭಗಳಿದ್ದಾಗ, ಆ ಬಿಲ್ ಮೊತ್ತವನ್ನು ಪ್ರಶ್ನಿಸುವ ಹಕ್ಕು ಗ್ರಾಹಕನಿಗೆ ಇದೆ. ವಿದ್ಯುತ್ ಸರಬರಾಜುದಾರ ಹಾಗೂ ಗ್ರಾಹಕರ ನಡುವೆ ಯಾವುದೇ ವಿವಾದ ಬಗೆಹರಿಯುವ ತನಕ ವಿದ್ಯುತ್ ಕಡಿತ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಏಕಾ ಏಕಿ ವಿದ್ಯುತ್ ಸಂಪರ್ಕಗೊಳಿಸಲು ಸಾಧ್ಯವಿಲ್ಲ :
ವಿದ್ಯುತ್ ಗ್ರಾಹಕ ಸೂಕ್ತ ಅವಧಿಯಲ್ಲಿ ವಿದ್ಯುತ್ ಬಿಲ್ ಕಟ್ಟದಿದ್ದ ಪಕ್ಷದಲ್ಲಿ ವಿದ್ಯುತ್ ಕಡಿತ ಮಾಡಲು ಕೆಇಆರ್ ಸಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ವಿದ್ಯುತ್ ಸರಬರಾಜುದಾರರು ತಮಗೆ ಇಷ್ಟ ಬಂದಂತೆ ವಿದ್ಯುತ್ ಸಂಪರ್ಕ ಕಡಿತ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಬೆಸ್ಕಾಂ ಸಹಿತ ವಿವಿಧ ವಿದ್ಯುತ್ ಸರಬರಾಜು ಕಂಪನಿ (ESCOMs) ಗಳು ಕೆಲವು ಕಾರ್ಯವಿಧಾನಗಳನ್ನು ಅನುಸರಿಸದೇ ಏಕಾಏಕಿ ವಿದ್ಯುತ್ ಕಡಿತ ಮಾಡಲು ಸಾಧ್ಯವಿಲ್ಲ. ವಿದ್ಯುತ್ ಸಂಪರ್ಕ ಕಡಿತ ಮಾಡುವ ಮೊದಲು ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ :
• ವಿದ್ಯುತ್ ಸರಬರಾಜು ಮಾಡುವ ಕಂಪನಿ, ಗ್ರಾಹಕರಿಗೆ ನೋಟಿಸ್ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು
• ಕೆಇಆರ್ ಸಿ ಕೋಡ್/ಪೂರೈಕೆ ಷರತ್ತುಗಳಿಗೆ ಅನುಗುಣವಾಗಿ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಸರಳವಾಗಿ ಹಾಗೂ ಗ್ರಾಹಕನಿಗೆ ಅರ್ಥವಾಗುವ ರೀತಿಯಲ್ಲಿ ನೋಟೀಸ್ ಇರತಕ್ಕದ್ದು
• ಈ ನೋಟಿಸ್ ನಲ್ಲಿ ಬೆಸ್ಕಾಂ ಅಥವಾ ಇನ್ನಾವುದೇ ವಿದ್ಯುತ್ ಸರಬರಾಜು ಕಂಪನಿಯು ನೋಟಿಸ್ ನಲ್ಲಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಸೂಕ್ತ ಕಾರಣ ಮತ್ತು ಸಂಭವನೀಯ ಕ್ರಮವನ್ನು ನಿರ್ದಿಷ್ಟಪಡಿಸಬೇಕು.
• ನೋಟಿಸ್ ನಲ್ಲಿ ಗ್ರಾಹಕನು ಅಗತ್ಯವಾದರೆ ಸಂಬಂಧಿಸಿದ ಸ್ಥಳೀಯ ಕಚೇರಿಯನ್ನು ಸಂಪರ್ಕಿಸಲು ವಿನಂತಿಸುವ ಅಂಶವನ್ನು ಒಳಗೊಂಡಿರಬೇಕು
• ನೋಟಿಸ್ ಅನ್ನು ಪೋಸ್ಟಿಂಗ್ ಪ್ರಮಾಣಪತ್ರದ ಅಡಿಯಲ್ಲಿ ನೋಂದಾಯಿತ ಅಂಚೆ ಮೂಲಕ, ಕೊರಿಯರ್ ಅಥವಾ ಇತರ ರೀತಿಯ ವಿಧಾನಗಳ ಮೂಲಕ ಕಳಿಸಬಹುದು. ಅಥವಾ ಈ ನೋಟಿಸನ್ನು ಗ್ರಾಹಕರ ವಿಳಾಸದಕ್ಕೆ ವೈಯಕ್ತಿಕವಾಗಿ ಭೇಟಿ ಮಾಡಿ ಸಹ ಹಸ್ತಾಂತರಿಸಬಹುದು
• ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿ ಗ್ರಾಹಕನ ವಿಳಾಸದ ಸ್ಥಳದಲ್ಲಿ, ಎದ್ದುಕಾಣುವ ಭಾಗದಲ್ಲಿ ನೋಟೀಸ್ ಅನ್ನು ಅಂಟಿಸಲು ಅವಕಾಶವಿದೆ.
ಆ ನೋಟಿಸ್ ನಲ್ಲಿ ಏನೇನು ಅಂಶಗಳಿರಬೇಕು?
ಗ್ರಾಹಕರು ಕರೆಂಟ್ ಬಿಲ್‌ಗಳನ್ನು ಪಾವತಿಸಲು ವಿಫಲರಾಗಿದ್ದರೆ ವಿದ್ಯುತ್ ಸರಬರಾಜುದಾರರು, ನಿಗದಿತ ದಿನಾಂಕದ ನಂತರ 15 ದಿನಗಳಿಗಿಂತ ಕಡಿಮೆ ಇಲ್ಲದ ನೋಟಿಸ್ ಅನ್ನು ನೀಡಬೇಕು. ಆ ನೋಟಿಸ್ ನಲ್ಲಿ ಈ ಅಂಶಗಳು ಒಳಗೊಂಡಿರುತ್ತದೆ:-
• ಗ್ರಾಹಕರು ನಿಗದಿತ ದಿನಾಂಕದೊಳಗೆ ಎಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯಿರಬೇಕು. .
• ಬಾಕಿ ಮೊತ್ತವನ್ನು ಪಾವತಿಸಲು ಗ್ರಾಹಕರು ವಿಫಲರಾಗಿದ್ದಾರೆ ಎಂಬುದನ್ನು ನೋಟಿಸ್ ನಲ್ಲಿ ತಿಳಿಸಿರಬೇಕು. ಒಂದು ವೇಳೆ ಬಾಕಿ ಪಾವತಿಸಲು ಗ್ರಾಹಕರು ವಿಫಲರಾದರೆ, ವಿದ್ಯುತ್ ಸರಬರಾಜುದಾರರು ವಿದ್ಯುತ್ ಸಂಪರ್ಕ ಪೂರೈಕೆಯನ್ನು ಕಡಿತಗೊಳಿಸಲು ಅಥವಾ ನಿರ್ಬಂಧಿಸಲು ಅವಕಾಶವಿದೆ ಎಂಬುದನ್ನು ಸೂಚಿಸಿರಬೇಕು.
• ನಿಯಮಗಳ ಪ್ರಕಾರ ಬಿಲ್ ಹಣ ಪಾವತಿ ಮಾಡುವ ಆಯ್ಕೆಗಳನ್ನು ತಿಳಿಸಿರಬೇಕು. ಅಲ್ಲದೆ ಕಂತುಗಳ ಆಯ್ಕೆಗಳ ಲಭ್ಯತೆಯನ್ನು ವಿವರಿಸಿರಬೇಕು.
ಮರು ವಿದ್ಯುತ್ ಸಂಪರ್ಕ ಪಡೆಯುವ ವಿಧಾನಗಳೇನು ? :
ಒಂದೊಮ್ಮೆ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಅಥವಾ ಇನ್ನಾವುದೇ ವಿದ್ಯುತ್ ಸರಬರಾಜು ಕಂಪನಿಗಳು ಕಡಿತಗೊಳಿಸಿದಾಗ ಅಂತಹ ಸಂಪರ್ಕವನ್ನು ಪುನಃ ಪಡೆಯಲು ಕೆಇಆರ್ ಸಿ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಬಿಲ್ ಪಾವತಿಯಾಗದ ಕಾರಣ ಅಥವಾ ಅಗತ್ಯ ಭದ್ರತಾ ಠೇವಣಿ ಕೊರತೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ ಅವುಗಳನ್ನು ಗ್ರಾಹಕರು ಪಾವತಿಸಿದರೆ, KERC (ಕಾರ್ಯಕ್ಷಮತೆಯ ಮಾನದಂಡಗಳು) ನಿಯಮಗಳು 2004 ರ ಪ್ರಕಾರ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಗ್ರಾಹಕರು ಬಿಲ್ ಪಾವತಿ ಅಥವಾ ಅಗತ್ಯ ಭದ್ರತಾ ಠೇವಣಿ ಪಾವತಿಸಿದ ಅದೇ ದಿನದಂದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಸ್ಕಾಂಗಳು ಹಣ ಸ್ವೀಕರಿಸಿದ 24 ಗಂಟೆಗಳ ಒಳಗೆ ವಿದ್ಯುತ್ ಮರು ಸಂಪರ್ಕವನ್ನು ಒದಗಿಸಬೇಕಿದೆ.