ಬೆಂಗಳೂರು, ನ.17 www.bengaluruwire.com : ಸ್ವದೇಶಿ ನಿರ್ಮಿತ ಕಾವೇರಿ ಡೆರಿವೇಟಿವ್ ಎಂಜಿನ್ (Kaveri Derivative Engine) ಸದ್ಯದಲ್ಲೇ ದೇಶೀಯ ಮಾನವರಹಿತ ಯುದ್ಧ ವಿಮಾನ ವ್ಯವಸ್ಥೆಗೆ ಇನ್ನು ಎರಡು ವರ್ಷದಲ್ಲಿ ಸೇರ್ಪಡೆಯಾಗಲು ಅಂತಿಮ ಹಂತದ ಪರೀಕ್ಷಾ ಹಂತದಲ್ಲಿದೆ. ಇದರಿಂದಾಗಿ ಭಾರತೀಯ ರಕ್ಷಣಾ ವ್ಯವಸ್ಥೆಯ ವಾಯು ಬಲವನ್ನು ಹೆಚ್ಚಾಗಲಿದೆ.
1969ರಲ್ಲಿ ದೇಶೀಯವಾಗಿ ವಿಮಾನ ಹಾಗೂ ಯುದ್ಧ ವಿಮಾನಗಳಿಗೆ ದೇಶೀಯವಾಗಿ ಬಹಳ ದುಬಾರಿಯಾಗಿರುವ ಎಂಜಿನ್ ಗಳನ್ನು ಉತ್ಪಾದಿಸಲು ವಿನ್ಯಾಸ, ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳು ಆರಂಭವಾದವು. ಅಲ್ಲಿಂದ ಇಲ್ಲಿಯವರೆಗೆ ಕಾವೇರಿ ವಿಮಾನ ಹಲವು ಮಾದರಿಗಳನ್ನು ಉತ್ಪಾದಿಸುತ್ತಾ ನಿರಂತರವಾಗಿ ಅದರ ಕಾರ್ಯ ಸಾಮರ್ಥ್ಯವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಗ್ಯಾಸ್ ಟರ್ಬೈನ್ ಸಂಶೋಧನಾ ವಿಭಾಗ (GTR) ನಡೆಸುತ್ತಾ ಬಂದಿದೆ.
ಈ ನಿಟ್ಟಿನಲ್ಲಿ ಜಿಟಿಆರ್ ವಿಭಾಗವು ಸಮರದ ಸಂದರ್ಭದಲ್ಲಿ ಅಥವಾ ಶತ್ರು ಪಾಳೇಯದ ಮೇಲೆ ಮಾನವ ರಹಿತ ಯುದ್ಧ ವಿಮಾನ (UAV)ಗಳಿಗೆ ಬಳಸುವ ಕಾವೇರಿ ಡೆರಿವೇಟಿವ್ ಎಂಜಿನ್ ಅನ್ನು ಸಿದ್ಧಪಡಿಸಿದೆ. ಈ ಎಂಜಿನ್ ಮುಂಭಾಗಕ್ಕೆ ಹೊಸ ರೀತಿಯ ಅತ್ಯಾಧುನಿಕ ಎಂಜಿನ್ ಫ್ಯಾನ್‌ಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಿದೆ. ಈ ಕುರಿತ ಮಾದರಿಯನ್ನು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಿಟ್ (Bangalore Tech Summit -2022) ಡಿಆರ್ ಡಿಒ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಮಾಡೆಲ್ ತಂತ್ರಜ್ಞಾನ ಸಮಾವೇಶಕ್ಕೆ ಭೇಟಿ ಕೊಟ್ಟವರ ಗಮನ ಸೆಳೆಯುತ್ತಿದೆ.
ರಷ್ಯಾದಲ್ಲಿ ನಡೆಯುತ್ತಿದೆ ಎತ್ತರದ ಪರೀಕ್ಷೆ :
ಕಾವೇರಿ ಡೆರಿವೇಟಿವ್ ಎಂಜಿನ್ ಬಗ್ಗೆ ಭಾರತದಲ್ಲಿ ಅಗತ್ಯವಾದ ಎಂಜಿನ್ ಸಾಮರ್ಥ್ಯ ಹಾಗೂ ನಿಯಂತ್ರಣ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ ರಷ್ಯಾದ ಮಾಸ್ಕೊ ಬಳಿಯ ಗ್ರೊಮೋವ್ ಫ್ಲೈಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ವಿವಿಧ ಎತ್ತರದಲ್ಲಿ (ಆಲ್ಟಿಟ್ಯೂಡ್ ಟೆಸ್ಟ್) ಸಿಮ್ಯುಲೇಶನ್ ಸೃಷ್ಟಿಸಿ, ಆ ಪರಿಸರದಲ್ಲಿ ಯುದ್ಧ ವಿಮಾನದಲ್ಲಿ ಈ ಎಂಜಿನ್ ಕಾರ್ಯವೈಖರಿಯ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟಾರೆ 1180 ಕೆಜಿ ಗರಿಷ್ಠ ತೂಕವನ್ನು ಹೊಂದಿರುವ ಈ ಎಂಜಿನ್ ಆಲ್ಟಿಟ್ಯೂಡ್ ಟೆಸ್ಟ್ ನಡೆಸಿದ ಬಳಿಕ ಮುಂದಿನ ಹಂತದಲ್ಲಿ ಯುದ್ಧ ವಿಮಾನದ ನಾಲ್ಕು ಎಂಜಿನ್ ಗಳ ಪೈಕಿ ಒಂದು ಎಂಜಿನ್ ಸ್ಥಾನದಲ್ಲಿ ಕಾವೇರಿ ಡೆರಿವೇಟಿವ್ ಎಂಜಿನನ್ನು ವಿಮಾನಕ್ಕೆ ಅಳವಡಿಸಿ ನೈಜ ಸಮಯದಲ್ಲಿ 40 ರಿಂದ 50,000 ಸಾವಿರ ಅಡಿ ಎತ್ತರದಲ್ಲಿ ವಿಮಾನದಲ್ಲಿ ಪ್ರಾಯೋಗಿಕ ಹಾರಾಟ ಪರೀಕ್ಷೆ (Flight Test Bed) ನಡೆಸಲಾಗುತ್ತದೆ.
“ಆಧುನಿಕ ಯುದ್ಧ ಮಾದರಿಯಲ್ಲಿ ವಾಯುಪಡೆಯಲ್ಲಿ ಅಮೂಲ್ಯವಾದ ಪೈಲೆಟ್ ಜೀವವನ್ನು ಉಳಿಸಲು ಅವರ ಬದಲಿಗೆ ಶತ್ರು ಸ್ಥಳದ ಮೇಲೆ ದಾಳಿ ನಡೆಸಲು ಮಾನವ ರಹಿತ ಯುದ್ಧ ವಿಮಾನ ಬಳಕೆ ಮುಂದಿಮ ದಿನಗಳಲ್ಲಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಡಿಆರ್ ಡಿಒನ ಜಿಟಿಆರ್ ವಿಭಾಗ ಕಾವೇರಿ ಡೆರಿವೇಟಿವ್ ಎಂಜಿನ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ” ಎಂದು ಡಿಆರ್ ಟಿಯ ವಿಜ್ಞಾನಿ ರಶ್ಮಿರಾವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“2024ರ ಇಸವಿಯ ಅಂತ್ಯದ ವೇಳೆಗೆ ಕಾವೇರಿ ಡೆರಿವೇಟಿವ್ ಎಂಜಿನ್ ಯುದ್ಧ ವಿಮಾನಕ್ಕೆ ಅಳವಡಿಸುವ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಹಿಂದೂಸ್ತಾನ್ ಏರೊನಾಟಿಕಲ್ ಲಿ. (HAL) ಸಂಸ್ಥೆಯು ತಯಾರಿಸಲು ಮುಂದಾದ ತೇಜಸ್ ಹಗುರ ಯುದ್ಧ ವಿಮಾನಕ್ಕೆ ಕಾವೇರಿ ಎಂಜಿನ್ ಅಳವಡಿಸಲು ನಿರ್ಧರಿಸಲಾಗಿತ್ತು. ಆದರೆ ವಿಮಾನದ ವಿನ್ಯಾಸ ಬದಲಾಗಿದ್ದರಿಂದ ಅಮೆರಿಕ ಮೂಲದ ಸಂಸ್ಥೆಯ ಎಂಜಿನ್ ಅಳವಡಿಸಲಾಗುತ್ತಿದೆ.
ಅರೆ ಸೇನಾಪಡೆಗೆ ಸಹಾಯಕ ದಿವ್ಯಚಕ್ಷು ರಾಡಾರ್ :
ಡಿಆರ್ ಡಿಒ ಎಲೆಕ್ಟ್ರಾನಿಕ್ಸ್ ರಾಡಾರ್ ಅಭಿವೃದ್ಧಿ ವಿಭಾಗ (LRDA) ವು ಲಘ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲು ಅನುಕೂಲವಾಗುವಂತಹ ದಿವ್ಯ ಚಕ್ಷು ರಾಡಾರ್ (Through Wall Imaging Radar – TWIR) ಅನ್ನು ಅಭಿವೃದ್ಧಿಪಡಿಸಿದೆ. 6 ಕೆಜಿ ತೂಕದ ಹೊತ್ತೊಯ್ಯಬಹುದಾದ ರಾಡಾರ್ ಬಳಸಿ, ಉಗ್ರಗಾಮಿಗಳು ಅಡಗುದಾಣಗಳಿಗೆ ತೆಳಿದಾಗ ಕಟ್ಟದ ಹೊರಭಾಗದಲ್ಲಿ ಸೇನಾಪಡೆಗಳು ನಿಂತು ಕಟ್ಟೆದ ಗೋಡೆಯೊಳಗೆ ಶಸ್ತ್ರಾಸ್ತ್ರದೊಂದಿಗೆ ಅವಿತು ಕುಳಿತ ಭಯೋತ್ಪಾದಕರನ್ನು ಉಪಕರಣದ ಸಹಾಯದಿಂದ ಕಂಡು ಹಿಡಿಯಲು ಈ ರಾಡಾರ್ ಬಹು ಉಪಯುಕ್ತವಾಗಿದೆ ಎಂದು ಡಿಆರ್ ಡಿಒ ನ ದೀಪಕ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕಟ್ಟಡದ ಒಳಗಿರುವ ಭಯೋತ್ಪಾದಕರ ಪತ್ತೆಗೆ ಸಹಾಯಕ :
ಈ ತಾಂತ್ರಿಕ ಉಪಕರಣವನ್ನು ನಿಯೋಜಿತ ಕಟ್ಟಡದ ಸ್ಥಳದ ಗೋಡೆಯ ಭಾಗದಲ್ಲಿ ಹಿಡಿದು ದಿವ್ಯ ಚಕ್ಷು ರಾಡಾರ್ ಉಪಕರಣವನ್ನು ಬಳಸಿ 20 ಮೀಟರ್ ದೂರದ ವ್ಯಾಪ್ತಿಯೊಳಗೆ ಗೋಡೆ ಒಳ ಆವರಣದಲ್ಲಿನ ವಸ್ತು (ಬೂದು ಬಣ್ಣ) ಹಾಗೂ ಮನುಷ್ಯರ ಇರುವಿಕೆ (ಕೆಂಪು ಬಣ್ಣ)ಯನ್ನು ಕಂಡು ಹಿಡಿದು ಶತ್ರುಗಳನ್ನು ಸದೆಬಡಿಯಬಹುದು. ಈ ಉಪಕರಣವನ್ನು ಖಾಸಗಿಯವರು ಉತ್ಪಾದಿಸಲು ಅನುವಾಗುವಂತೆ ಡಿಆರ್ ಡಿಒ ಅದರ ತಂತ್ರಜ್ಞಾನವನ್ನು ಹಸ್ತಾಂತರ ಮಾಡಿದೆ.
ಸೇನಾಪಡೆ, ಗಡಿ ಭದ್ರತಾ ಪಡೆ, ಐಟಿಬಿಪಿ, ಸಿಆರ್ ಪಿಎಫ್, ಪೊಲೀಸ್ ಸೇರಿದಂತೆ ಅರೆಸೇನಾಪಡೆಗಳಿಗೆ ಉಪಯುಕ್ತವಾಗಿದೆ. ಭಾರತೀಯ ಸೇನೆಯು ಈ TWIR ರಾಡಾರನ್ನು ಖರೀದಿಸಲು ಆಸಕ್ತಿ ತೋರಿದೆ.
ಬೆಂಗಳೂರು ಟೆಕ್ ಸಮಿಟ್ ಸಮ್ಮೇಳನದ ಮಳಿಗೆಯಲ್ಲಿ ಯುವ ಜನರು ಬಹಳ ಹುಮ್ಮಸ್ಸಿನಿಂದ ಈ ಎರಡು ಮಳಿಗೆಗಳ ಬಳಿ ಜಮಾಯಿಸಿ ಮಾಹಿತಿ ಪಡೆಯುತ್ತಿದ್ದರು.