ಬೆಂಗಳೂರು, ನ.16 www.bengaluruwire.com : ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿಯಿದೆ. ಆಗಲೇ ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು, ಕಾರ್ಯಕರ್ತರು, ಬೆಂಬಲಿಗರನ್ನು ಚುನಾವಣೆ ಅಖಾಡಕ್ಕೆ ಸಕ್ರಿಯವಾಗಿ ಸನ್ನದ್ಧಗೊಳಿಸಲು ಉಡುಗೊರೆ ನೀಡುವುದನ್ನು ಆರಂಭಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕ ಸ್ಥಾನದ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುವ ಕೆಲವನ್ನು ಸದ್ದಿಲ್ಲದೆ ಆರಂಭಿಸಿದ್ದಾರೆ. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾಗಿರುವ ಕೆ.ಜೆ.ಜಾರ್ಜ್ ತಮ್ಮ ಕ್ಷೇತ್ರದ ಪಕ್ಷದ 1,060 ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ 3 ಲಕ್ಷ ಮೊತ್ತದ ಆರೋಗ್ಯ ವಿಮೆಯನ್ನು ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡಿಸಿದ ಮೊದಲ ಶಾಸಕರೆನ್ನಲಾಗಿದೆ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಬೂತ್ ಘಟಕಗಳ ಅಧ್ಯಕ್ಷರು, ಬೂತ್ ಮಟ್ಟದ ಏಜೆಂಟರ್ (ಬಿಎಲ್ಎ), ಪದಾಧಿಕಾರಿಗಳು, ಮುಂಚೂಣಿ ಘಟಕಗಳು, ಬ್ಲಾಕ್, ವಾರ್ಡ್ ಮತ್ತು ಬೂತ್ ಸಮಿತಿ ಸದಸ್ಯರಿಗೆ ಆರೋಗ್ಯ ಕಾರ್ಡ್ ವಿತರಿಸುವ ಕೆಲಸ ಶಾಸಕರ ಕಚೇರಿಯ ಮೂಲಕ ಈಗಾಗಲೇ ಆರಂಭವಾಗಿದೆ. 330 ಬೂತ್ ಅಧ್ಯಕ್ಷರು, ಬಿಎಲ್ಎಗಳು ಸೇರಿದಂತೆ 600 ಮಂದಿ ಹಾಗೂ ಇತರ ಸಮಿತಿಗಳ 400 ಜನರು ಸೇರಿದಂತೆ ಒಟ್ಟು 1060 ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಕಾರ್ಡ್ ವಿತರಿಸಲಾಗುತ್ತಿದೆ. ಈತನಕ 400 ಕಾರ್ಯಕರ್ತರಿಗೆ ಕಾರ್ಡ್ ಹಂಚಿಕೆಯಾಗಿದೆ ಎಂದು ಕೆ.ಜೆ.ಜಾರ್ಜ್ ಆಪ್ತರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ರಿಲಯನ್ಸ್ ಹೆಲ್ತ್ ಇನ್ಶುರೆನ್ಸ್ ಕಂಪನಿಯ ಗ್ರೂಪ್ ಹೆಲ್ತ್ ಇನ್ಶುರೆನ್ಸ್ ಯೋಜನೆಯಡಿ ಆರೋಗ್ಯ ವಿಮೆಯ ಪ್ರಿಮಿಯಂ ಹಣವನ್ನು ಕೆ.ಜೆ.ಜಾರ್ಜ್ ಸ್ವತಃ ಭರಿಸುತ್ತಾರೆ. ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡಿಸಲು ಅವರ ಹೆಸರು, ಜನ್ಮ ದಿನಾಂಕ ಹಾಗೂ ಮೊಬೈಲ್ ನಂಬರ್ ಪಡೆದು ಈ ಹೆಲ್ತ್ ಕಾರ್ಡ್ ಮಾಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2008ರಲ್ಲಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಸತತ ಮೂರು ಬಾರಿ ಶಾಸಕರಾಗಿ ಆರಿಸಿಬಂದ ಕೆ.ಜೆ.ಜಾರ್ಜ್ ಈ ಬಾರಿಯೂ ಇದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಆಸ್ಪತ್ರೆಗೆ ಸೇರಿ ದುಬಾರಿ ವೆಚ್ಚ ಹೊಂದಿಸಲು ಪರದಾಡುವುದನ್ನು ತಪ್ಪಿಸುವ ಸಲುವಾಗಿ ಪಕ್ಷದ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡಿಸುತ್ತಿದ್ದಾರೆ.