ಬೆಂಗಳೂರು, ನ.16 www.bengaluruwire.com : ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (HAL) ಸಂಸ್ಥೆಯು ಭಾರತೀಯ ಕರಾವಳಿ ಕಾವಲು ಪಡೆಗೆ (India Coast Guard) ಮಂಗಳವಾರ ಎಂಕೆ3 ಸುಧಾರಿತ ಹಗುರ ಹೆಲಿಕಾಪ್ಟರ್ (ALH) 16 ಹೆಲಿಕಾಪ್ಟರ್ ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್ ಅನ್ನು ಹಸ್ತಾಂತರ ಮಾಡಿತು.
ಕರಾವಳಿ ಕಾವಲು ಪಡೆಗೆ 16 ಹೆಲಿಕಾಪ್ಟರ್ ಗಳನ್ನು ಪೂರೈಸಲು ಎಚ್ ಎಎಲ್ ಜೊತೆ 2017ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಸರಣಿಯ ಕೊನೆಯ ಭಾಗವಾಗಿ ಕೊನೆಯ ಹೆಲಿಕಾಪ್ಟರ್ ಅನ್ನು ಎಚ್ಎಎಲ್, ಕಾವಲು ಪಡೆಗೆ ನೀಡಿದೆ.
ನಗರದಲ್ಲಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ್ ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ಪಥಾನಿಯಾ, ಎಚ್ಎಎಲ್ ಜೊತೆ ಎಂಕೆ3 ಹೆಲಿಕಾಪ್ಟರ್ ಪೂರೈಕೆ ಸಂಬಂಧ ಮಾಡಿಕೊಂಡ ಒಪ್ಪಂದ ಹಾಗೂ ಅದರ ಸಹಯೋಗ ತಮಗೆ ಖುಷಿ ನೀಡಿದೆ. ಇದೊಂದು ಹೆಮ್ಮೆಯ ವಿಷಯ. ಯಶಸ್ವಿಯಾಗಿ 16 ಹೆಲಿಕಾಪ್ಟರ್ ಗಳನ್ನು ಎಚ್ಎಎಲ್ ತಮ್ಮ ಪಡೆಗೆ ನೀಡಿದೆ. ಇನ್ನು ಒಂಭತ್ತು ಹೆಲಿಕಾಪ್ಟರ್ ಗಳನ್ನು ಒದಗಿಸುವಂತೆ ಖರೀದಿ ಆಶಯ ಪತ್ರವನ್ನು ನೀಡಲಾಗಿದೆ ಎಂದರು.
ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿರುವಾಗಲೂ ಅತಿ ಕಡಿಮೆ ಅವಧಿಯಲ್ಲಿ ಎಎಲ್ಎಚ್ ಹೆಲಿಕಾಪ್ಟರ್ ಗಳನ್ನು ನಮಗೆ ಪೂರೈಕೆ ಮಾಡಿದ್ದರಿಂದ ಭಾರತದ ಕರಾವಳಿ ತೀರದ ಭದ್ರತೆ ಹಾಗೂ ರಕ್ಷಣೆಯ ಬಲವನ್ನು ಹೆಚ್ಚಿಸಲು ಸಹಕಾರಿಯಾಯಿತು ಎಂದು ಅವರು ಹೇಳಿದರು.
ಎಚ್ಎಎಲ್ ದೇಶೀಯವಾಗಿಯೇ ಈ ಎಂಕೆ3 ಎಎಲ್ ಎಚ್ ಹೆಲಿಕಾಪ್ಟರನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಈ ತನಕ ಎಚ್ಎಎಲ್ ಒಟ್ಟಾರೆ 330 ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಿದೆ. ಬಹುಪಯೋ ಉದ್ದೇಶದ ಈ ಹೆಲಿಕಾಪ್ಟರ್ ಗಳು ಈವರೆಗೆ 3.74 ಲಕ್ಷ ಗಂಟೆಗಳಷ್ಟು ಹಾರಾಟವನ್ನು ನಡೆಸಿದೆ.
ಈ ಕಾರ್ಯಕ್ರಮದಲ್ಲಿ ಎಚ್ಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್, ಹೆಲಿಕಾಪ್ಟರ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅನ್ಬುವೇಲನ್ ಉಪಸ್ಥಿತರಿದ್ದರು.