ಬೆಂಗಳೂರು, ನ.15 www.bengaluruwire.com :
ಜಮೀನಿಗೆ ಖಾತೆ ಮಾಡಿಕೊಡಲು ಮಧ್ಯವರ್ತಿಗಳ ಮೂಲಕ ಐದು ಲಕ್ಷ ರೂ. ಲಂಚ ಪಡೆಯುವ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತರ ಪೊಲೀಸರು ಬೀಸಿದ ಬಲೆಗೆ ಮಂಗಳವಾರ ಸಂಜೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ 2014 ರ ಬ್ಯಾಚಿನ ಮಹಿಳಾ ಕೆಎಎಸ್ ಅಧಿಕಾರಿ ವರ್ಷಾ ಒಡೆಯರ್ ಮತ್ತು ಮಧ್ಯವರ್ತಿ ರಮೇಶ್ ಅವರುಗಳೇ ಲೊಕಾಯುಕ್ತ ಟ್ರ್ಯಾಪ್ ಗೆ ಒಳಗಾದವರು.
ಬೆಂಗಳೂರು ಉತ್ತರ ತಾಲೂಕು ವಿಶೇಷ ತಹಶೀಲ್ದಾರ್ ವರ್ಷ ಒಡೆಯರ್ ಮತ್ತು ಮಧ್ಯವರ್ತಿ ರಮೇಶ್ ಅವರು ಬೆಂಗಳೂರಿನ ದಾಸನಪುರ ಹೋಬಳಿಯ ಕೆಂಗನಹಳ್ಳಿ ಗ್ರಾಮದಲ್ಲಿನ ಜಮೀನೊಂದಕ್ಕೆ ಖಾತಾದಲ್ಲಿ ಹೆಸರು ಬದಲಾವಣೆಗೆ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಕಾಂತರಾಜು ಎಂಬುವರು ಲೋಕಾಯುಕ್ತಕ್ಕೆ ದೂರುನೀಡಿದ್ದರು. ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸಿಆರ್ ನಂ 74/2022 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಉನ್ನತ ಮೂಲಗಳು ಬೆಂಗಳೂರ ವೈರ್ ಗೆ ಖಚಿತಪಡಿಸಿವೆ.
ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮೈಸೂರು ಬ್ಯಾಂಕ್ ಬಳಿಯ ಕಂದಾಯ ಭವನದ ಕಚೇರಿಯಲ್ಲಿ ಖಾತೆ ಮಾಡಿಸುವ ವಿಚಾರವಾಗಿ 5 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಈ ಮಹಿಳಾ ಕೆಎಎಸ್ ಅಧಿಕಾರಿ ವರ್ಷಾ ಒಡೆಯರ್ ಮತ್ತು ಬ್ರೋಕರ್ ರಮೇಶ್ ಸಿಕ್ಕಿಬಿದ್ದಿದ್ದಾರೆ.
ವರ್ಷಾ ಒಡೆಯರ್ ಈ ಹಿಂದೆ ಕನಕಪುರದಲ್ಲಿ ತಹಸೀಲ್ದಾರ್ ಆಗಿದ್ದರು. ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರದ ಹಾಟ್ ಸ್ಪಾಟ್. ಕೋಟ್ಯಾಂತರ ರೂ. ದುಬಾರಿ ಮೌಲ್ಯದ ಭೂ ವ್ಯವಹಾರ ನಡೆಯುವ ಉತ್ತರ ತಾಲೂಕು ವಿಶೇಷ ತಹಸೀಲ್ದಾರ್ ಹುದ್ದೆ ಸಾಕಷ್ಟು ಬೇಡಿಕೆ ಇರುವ ಆಯಕಟ್ಟಿನ ಜಾಗವೆಂದೇ ಹೇಳಲಾಗುತ್ತೆ. ವರ್ಷಾ ಒಡೆಯರ್ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹೊಸಬರು. ವರ್ಷಾ ಒಡೆಯರ್ ತಮ್ಮ ಕಚೇರಿಯಲ್ಲಿ ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳು ಈ ಮಹಿಳಾ ಕೆಎಎಸ್ ಅಧಿಕಾರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೆಂದು ಮಾಹಿತಿ ಲಭ್ಯವಾಗಿದೆ.
ಇದಲ್ಲದೇ ಈ ಮಹಿಳಾ ಅಧಿಕಾರಿ ತಮ್ಮ “ದೈನಂದಿನ” ಕಚೇರಿ ಕೆಲಸ ಕಾರ್ಯಗಳಿಗಾಗಿ ಬರೋಬ್ಬರಿ 8 ಖಾಸಗಿ ಕೆಲಸಗಾರರನ್ನು ಹೊಂದಿದ್ದರು. ಕಚೇರಿಯಲ್ಲಿ ಅಥವಾ ಇತರ ಹಿರಿಯ ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ದರ್ಪ ತೋರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಇಬ್ಬರನ್ನು ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.