ಬೆಂಗಳೂರು, ನ.14 www.bengaluruwire.com : ಪೊಲೀಸ್ ಅಂದರೆ ಸೈಡಿಗೆ ಕರೆದು ಟೋಕನ್ ಹಾಕೋರು ಅನ್ನೋ ತೀರಾ ಸಾಮಾನ್ಯದ ಮಾತಿದೆ. ಇದಕ್ಕೆ ಅಪವಾದವೆಂಬಂತೆ ನಿಷ್ಟಾವಂತ ಪೊಲೀಸರು ಇಲಾಖೆಯಲ್ಲಿ ಸಾಕಷ್ಟಿದ್ದಾರೆ. ಅಂತಹವರಲ್ಲೊಬ್ಬ ಪ್ರಮಾಣಿಕ ಪೊಲೀಸಪ್ಪ ಹಾಗೂ ಆತನ ಮಗಳು ಇವತ್ತಿನ ಕಥಾ ನಾಯಕರು.
ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆ ಆಗಿರೋ ಹೊಸದುರ್ಗ ಮೂಲದ ನಾಗರಾಜಪ್ಪ ಹಾಗೂ ಅವರ ಮಗಳು ನಾಲ್ಕನೇ ತರಗತಿಯ ಮಗಳು ನಾಗಲಕ್ಷ್ಮಿ ಇವತ್ತೊಂದು ಒಳ್ಳೆಯ ಕೆಲವನ್ನು ಸದ್ದಿಲ್ಲದೇ ಮಾಡಿ ಮುಗಿಸಿದ್ದಾರೆ. ತಂದೆ ನಾಗರಾಜಪ್ಪ ಕರ್ತವ್ಯದ ಮೇಲೆ ಬೆಂಗಳೂರಿನಲ್ಲಿ ನೆಲಸಿದ್ದರೆ, ಮಗಳು ತಾಯಿ ಜೊತೆ ಶಿವಮೊಗ್ಗದಲ್ಲಿ ನೆಲಸಿದ್ದಾರೆ.
ವಿಷ್ಯ ಏನಪ್ಪಾ ಅಂದರೆ, ಶಿವಮೊಗ್ಗದಲ್ಲಿ ಮಹಿಳೆಯೊಬ್ಬರು ಪರ್ಸ್ ಕಳೆದುಕೊಂಡಿದ್ದರು. ಇದನ್ನು ದಾರಿಯಲ್ಲಿ ನಡೆದು ಬರುತ್ತಿದ್ದ ನಾಗಲಕ್ಷ್ಮಿ ಎಂಬ ಪುಟ್ಟ ಬಾಲಕಿ ಅಚಾನಕ್ಕಾಗಿ ಕಂಡು, ಈ ವಿಷಯವನ್ನು ತನ್ನ ತಾಯಿಯ ಮೂಲಕ ಬೆಂಗಳೂರಿನಲ್ಲಿದ್ದ ನಾಗರಾಜಪ್ಪನವರಿಗೆ ಫೋನ್ ಮಾಡಿ ತಿಳಿಸಿದಾಗ, ಕರ್ತವ್ಯದಲ್ಲಿದ್ದ ನಾಗರಾಜಪ್ಪ ಆ ಲೇಡಿಸ್ ಪರ್ಸ್ ನಲ್ಲಿ ಯಾವುದಾದರೂ ವಿಳಾಸ ಅಥವಾ ಫೋನ್ ನಂಬರ್ ಇದೆಯಾ ಎಂಬುದನ್ನು ಪರಿಶೀಲಿಸಲು ತಿಳಿಸಿದ್ದರು. ಅದರಂತೆ ಪರ್ಸ್ ನಲ್ಲಿ ಹುಡುಕಾಟ ನಡೆಸಿದಾಗ ಅದರಲ್ಲಿ ಶಿವಮೊಗ್ಗದ ಸೇಂಟ್ ಜೋಸೆಫ್ ಶಾಲೆಯಲ್ಲಿ ಓದುತ್ತಿದ್ದ ಗೌರಿ ಎಂಬ ವಿದ್ಯಾರ್ಥಿನಿಯ ಶಾಲೆಯ ಶುಲ್ಕದ ರಶೀದಿಯಾಗಿತ್ತು. ಅದರ ಸಹಾಯದಿಂದ ಆ ಬಾಲಕಿಯ ಪೋಷಕಿ ಮಂಜುಳಾ ಎಂಬುವರ ಮೊಬೈಲ್ ಪಡೆದು ಸಂಪರ್ಕಿಸಿದಾಗ ಆಕೆಯೇ ಪರ್ಸ್ ಕಳೆದು ಕೊಂಡಿರುವುದು ಪತ್ತೆಯಾಯಿತು.
ಹೀಗೆ ಮಂಜುಳಾ ಅವರ ಕಳೆದು ಹೋದ ಪರ್ಸ್ ನಲ್ಲಿ ಮೂರು ಆರೋಗ್ಯ ಕಾರ್ಡ್ ಗಳು, ಎರಡು ಎಟಿಎಂ ಕಾರ್ಡ್ ಹಾಗೂ ಎರಡೂವರೆ ಸಾವಿರ ನಗದು ಹಣವಿತ್ತು. ಆ ವಸ್ತು ಹಾಗೂ ನಗದು ಹಣ ಪೊಲೀಸಪ್ಪನ ಮಗಳು ನಾಗಲಕ್ಷ್ಮಿಯ ಸಮಯ ಪ್ರಜ್ಞೆಯಿಂದ ಪುನಃ ಮಂಜುಳಾ ಅವರ ಪಾಲಾಯಿತು.