ಬೆಂಗಳೂರು, ನ.13 www.bengaluruwire.com : ನಗರದ ಉಲ್ಲಾಳ ವಾರ್ಡಿನ ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (SMVRWA) ಹಾಗೂ ಬಡಾವಣೆ ನಿವಾಸಿಗಳು ಭಾನುವಾರ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇತಿಹಾಸ ತಜ್ಞ ಹಾಗೂ ವಾಗ್ಮಿ ಧರ್ಮೇಂದ್ರ ಕುಮಾರ್ ಕನ್ನಡ ಬಾವುಟ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಈ ತಿಂಗಳು 67ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬದುಕು ಕಟ್ಟಿಕೊಳ್ಳಲು ಇಲ್ಲಿ ಬಂದು ನೆಲೆಸಿರುವ ಕನ್ನಡೇತರ ಭಾಷಿಗರು ಖಡ್ಡಾಯವಾಗಿ ಕನ್ನಡವನ್ನು ಕಲಿಯಬೇಕಿದೆ. ಅಂತಹವರಿಗೆ ಪ್ರೀತಿಯಿಂದ ನಾವು ಕನ್ನಡ ಕಲಿಯುವಂತೆ ಹೇಳಿ, ಸುಮಧುರ ಕನ್ನಡವನ್ನು ಕಲಿಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯಪೂರ್ವದಲ್ಲಿ ಬೆಂಗಳೂರಿಗೆ ಇಂಗ್ಲೀಷ್ ಭಾಷೆ ಕಲಿಸಲು ಲಂಡನ್ ನಿಂದ ಇಲ್ಲಿಗೆ ಆಗಮಿಸಿದ ರೆವರೆಂಡ್ ಬೆಂಜಿಮಿನ್ ಹಾಲ್ಟ್ ರೈಸ್ ಎಂಬ ಕ್ರೈಸ್ತ ಪಾದ್ರಿ ಕನ್ನಡದ ಮೇಲಿನ ಅಭಿಮಾನಕ್ಕೆ ಮನಸೋತು ಕನ್ನಡ ಕಲಿತು ಸುಲಲಿತವಾಗಿ ಕನ್ನಡ ಮಾತನಾಡಿದ. ಲಂಡನ್ ನಲ್ಲಿ ಹಡಗು ಹತ್ತುವಾಗ ಕನ್ನಡ ಪುಸ್ತಕ ಹಿಡಿದುಕೊಂಡು ಕೂತವನು ಬೆಂಗಳೂರಿಗೆ ಬರುವಷ್ಟರಲ್ಲಿ ನಮ್ಮ ನಿಮ್ಮಂತೆ ಕನ್ನಡ ಮಾತನಾಡಲು ಆರಂಭಿಸಿದ್ದ. ಆತ ಕಾಲವಾದ ನಂತರ ಇಂದಿನ ಅವೆನ್ಯೂ ರಸ್ತೆಯಲ್ಲಿ ಆತನ ಹೆಸರಿನಲ್ಲಿ ರೈಸ್ ಮೆಮೊರಿಯಲ್ ಚರ್ಚ್ ಅನ್ನು ಕಟ್ಟಲಾಗಿತ್ತು. ಇನ್ನು 35 ವರ್ಷಗಳ ಕಾಲ ಇಲ್ಲಿ ರಾಜ್ಯಭಾರ ಮಾಡಿದ ಲಾರ್ಡ್ ಕಬ್ಬನ್ ಕನ್ನಡದಲ್ಲೇ ಅಧಿಕಾರ ಚಲಾಯಿಸಿದ ಮೊದಲ ಇಂಗ್ಲೀಷ್ ಅಧಿಕಾರಿಯಾಗಿದ್ದ ಎಂದು ಇತರ ಭಾಷಿಗರಿಗೆ ಕನ್ನಡ ಕಲಿಯುವ ಹಾಗೂ ಕಲಿಸುವ ಅನಿವಾರ್ಯತೆ ಬಗ್ಗೆ ಉದಾಹರಣೆಯೊಂದಿಗೆ ಸೊಗಸಾಗಿ ವಿವರಿಸಿದರು.
ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆಯ ಮಕ್ಕಳು ಹಾಗೂ ನಿವಾಸಿಗಳಿಂದ ಇದೇ ಸಂದರ್ಭದಲ್ಲಿ ಕನ್ನಡ ಗಾಯನ ಕಾರ್ಯಕ್ರಮ ನಡೆಯಿತು. ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವೆಂಕಟರಮಣ ಪಡ್ಪು, ಅಧ್ಯಕ್ಷ ವಿ.ಎಂ.ವಿಶ್ವನಾಥ್, ಉಪಾಧ್ಯಕ್ಷರುಗಳಾದ ಟಿ.ನಾಗರಾಜ್, ಜಿ.ಎಸ್.ಅಶೋಕ್ ಕುಮಾರ್, ಸಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್.ಪಿ.ವೆಂಕಟೇಶ್, ಜಂಟಿ ಕಾರ್ಯದರ್ಶಿ ಬಿ.ಎಸ್.ವಿನೋದ್, ಖಜಾಂಚಿ ವಿ.ಸುರೇಶ್ ಕುಮಾರ್, ಕಾರ್ಯಕಾರಿಣಿ ಸದಸ್ಯರುಗಳಾದ ಎಸ್.ಶ್ಯಾಮ್, ಚನ್ನಪ್ಪ ಎಂ.ಚಕ್ರಸಾಲಿ, ಬಿ.ವಿ.ಮಹೇಶ್, ಸಂಘದ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.