ಎಚ್.ಡಿ.ಕೋಟೆ, ನ.13 www.bengaluruwire.com : ಇಲ್ಲಿನ ನಾಗರಹೊಳೆಯ ಅಂತರಸಂತೆ ವ್ಯಾಪ್ತಿಯ ತಾರಕ ಅಣೆಕಟ್ಟು ಪ್ರದೇಶದ ಕಾಡಿನಲ್ಲಿ ಹೆಣ್ಣು ಹುಲಿಯೊಂದು ಕೆಲವು ದಿನಗಳ ಹಿಂದೆ ಸಾವನ್ನಪ್ಪಿರುವ ಘಟನೆ ಶನಿವಾರ ಪತ್ತೆಯಾಗಿದೆ. ಕಳ್ಳ ಬೇಟೆಗಾರರು ಹಾಕಿದ ಬಲೆಗೆ ಬಿದ್ದು ಹುಲಿ ಮೃತಪಟ್ಟಿರಬಹುದೆಂದು ಮೂಲಗಳು ತಿಳಿಸಿವೆ.
ಸಾವನ್ನಪ್ಪಿದೆ ಎಂದು ಹೇಳಲಾದ ಹೆಣ್ಣು ಹುಲಿಯು ತಾರಕ ಅಣೆಕಟ್ಟು ಪ್ರದೇಶದಲ್ಲಿ ಮೂರು ಹುಲಿ ಮರಿಗಳೊಂದಿಗೆ ಇರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಈ ಹಿಂದೆ ನೋಡಿದ್ದರು. ಇದೀಗ ಆ ತಾಯಿ ಹುಲಿಯು ಸಾವನ್ನಪ್ಪಿರುವುದರಿಂದ ತಾವೇ ಸ್ವತಃ ಬೇಟೆಯಾಡಲು ಸಾಧ್ಯವಾಗದಿರುವ ಹುಲಿ ಮರಿಗಳು ತೀವ್ರ ಹಸಿವಿನಿಂದ ಸಾವಿನಂಚಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಉರುಳಿಗೆ ಸಿಕ್ಕಿ ಸತ್ತಿರುವ ಹೆಣ್ಣು ಹುಲಿಯನ್ನು ನಯಂಜಿಕಟ್ಟೆ ರಾಣಿ ಎಂತಲೇ ವನ್ಯಜೀವಿ ಛಾಯಾಗ್ರಾಹಕರು ಕರೆಯುತ್ತಾರೆ. ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ದಮ್ಮನಕಟ್ಟೆ ಸಫಾರಿಯಲ್ಲಿ ಪ್ರವಾಸಿಗರು, ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ನಯಂಜಿಕಟ್ಟೆ ಕೆರೆ ಬಳಿ ನೀರು ಕುಡಿಯಲು ಬರುತ್ತಿದ್ದ ಹುಲಿಯು ಆಗಾಗ ಕಾಣಿಸಿಕೊಳ್ಳುತ್ತಿದ್ದರಿಂದ ಇದೇ ಹೆಸರಿನಿಂದ ಕರೆಯಲಾಗುತ್ತಿತ್ತು. ಆ ನಯಂಜಿಕಟ್ಟೆ ಹುಲಿಯು ತನ್ನ ಮರಿಗಳನ್ನು ತನ್ನೊಂದಿಗೆ ಕರೆದುಕೊಂಡು ಬರುತ್ತಿದ್ದ ದೃಶ್ಯವನ್ನು ಹವ್ಯಾಸಿ ವನ್ಯಜೀವಿ ಫೋಟೊಗ್ರಾಫರ್ ಗಳು ಸೆರೆ ಹಿಡಿದಿದ್ದಾರೆ. ಈ ಹುಲಿಯ ಸಾವಿನ ಬಗ್ಗೆ ವನ್ಯಜೀವಿ ಪ್ರೇಮಿಗಳು ಅತ್ಯಂತ ದುಖಃ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಮೂಕಪ್ರಾಣಿಯ ದಾರುಣ ಹತ್ಯೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ಹುಲಿಮರಿಗಳ ಮೇಲೆ ಕಳೆದ ಮೂರ್ನಾಲ್ಕು ತಿಂಗಳಿನಿಂದಲೇ ಕಣ್ಗಾವಲು ಇರಿಸಿದ್ದು, ಆ ಮೂರು ಹುಲಿ ಮರಿಗಳ ಪತ್ತೆ ಕಾರ್ಯ ಆರಂಭಿಸಿದೆ. ಆ ಹುಲಿಮರಿಗಳು ಹೆಣ್ಣು ಹುಲಿ ಸಾವನ್ನಪ್ಪಿದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಓಡಾಟ ನಡೆಸಿರುವುದನ್ನು ಅರಣ್ಯ ಸಿಬ್ಬಂದಿ ನೋಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಯಂಜಿಕಟ್ಟೆ ರಾಣಿ ಹುಲಿ 2016ರಲ್ಲಿ ಮೊದಲ ಬಾರಿಗೆ ಗರ್ಭಿಣಿಯಾಗಿತ್ತು. 2017ರಲ್ಲಿ ಮೊದಲ ಬಾರಿಗೆ ಎರಡು ಹುಲಿ ಮರಿಗಳಿಗೆ ಜನ್ಮ ನೀಡಿತ್ತು. ಆನಂತರ 2019ರಲ್ಲಿ ಮೂರು ಹುಲಿ ಮರಿಗಳು ಹುಟ್ಟಿದವು. ಹುಲಿಗಳ ಸಂತತಿ ಹೆಚ್ಚಳಕ್ಕೆ ಕಾರಣವಾಗುವ ಹೆಣ್ಣು ಹುಲಿ ಮೃತಪಟ್ಟಿರುವುದು ಕಾಡಿನ ರಕ್ಷಣೆಯ ದೃಷ್ಟಿಯಿಂದ ನಷ್ಟವೆಂದೇ ವನ್ಯಜೀವಿ ಪ್ರೇಮಿಗಳು ನೋಂದು ನುಡಿದಿದ್ದಾರೆ.
ನಯಂಜಿಕಟ್ಟೆ ರಾಣಿ ಲೋಹದ ಉರುಳಿಗೆ ಸಿಲುಕಿ ಸಾವು :
ಶನಿವಾರ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವ ಹೆಣ್ಣು ಹುಲಿಗೆ 12-13 ವರ್ಷ ವಯಸ್ಸಾಗಿತ್ತು. ಇದು ವಯಸ್ಸಾದ ಹುಲಿ. ನಾಗರಹೊಳೆ ಹುಲಿ ರಕ್ಷಿತಾರಣ್ಯ ವಿಭಾಗದ ಅಂತರಸಂತೆ ವನ್ಯಜೀವಿ ವಲಯದಲ್ಲಿ ವಾಸವಿದ್ದ ಈ ಹೆಣ್ಣು ಹುಲಿಯು ತನ್ನ ಮರಿಗಳೊಂದಿಗೆ ತಾರಕ ಪ್ರದೇಶದ ಕಾಡಿನಲ್ಲಿ ಓಡಾಡಿಕೊಂಡಿತ್ತು. ಊರಿನವರು ದನಗಳನ್ನು ಕೊಂದು ತಿಂದಿತ್ತು. 10 ದಿನಗಳ ಹಿಂದಷ್ಟೇ ಕಾಡಿನ ಅಂಚಿನಿಂದ 100-200 ಮೀಟರ್ ದೂರದಲ್ಲಿ ರೈತರು ಜಮೀನಿಗೆ ವನ್ಯಜೀವಿಗಳು ಬಾರದಂತೆ ಹಾಕಿದ ಲೋಹದ ಉರುಳಿಗೆ ಸಿಕ್ಕಿ ಈ ಹೆಣ್ಣು ಹುಲಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯ ತನಿಖೆಯಿಂದ ತಿಳಿದು ಬಂದಿದೆ ಎಂದು ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಾಧಿಕಾರಿ ಕುಮಾರ್ ಪುಷ್ಕರ್ ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಹುಲಿ ಮರಿಗಳನ್ನು ಶೀಘ್ರವೇ ಹಿಡಿದು ಸಂರಕ್ಷಣೆ ಬಳಿಕ ಸ್ಥಳಾಂತರ :
ಈ ರೀತಿ ಉರುಳು ಹಾಕಿದ ರೈತರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ತಾಯಿಯಿಂದ ಬೇರೆಯಾದ 3 ಹುಲಿ ಮರಿಗಳು ಹೆಣ್ಣು ಹುಲಿ ಸಾವನ್ನಪ್ಪಿದ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲೇ ಓಡಾಟ ನಡೆಸಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಕಂಡಿದ್ದಾರೆ. ಅರಣ್ಯ ಇಲಾಖೆಯ ಕ್ಯಾಮರಾ ಟ್ರಾಪ್ ನಲ್ಲೂ ಆ ಹುಲಿ ಮರಿಗಳ ಓಡಾಟವು ದಾಖಲಾಗಿದೆ. ಈ ಹುಲಿ ಮರಿಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಬೇಟೆಯಾಡಲು ಕಲಿಯದಿರುವುದರಿಂದ ಇವುಗಳನ್ನು ಆದಷ್ಟು ಶೀಘ್ರವಾಗಿ ಹಿಡಿದು, ಬೇರೆಡೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಇಲ್ಲವಾದಲ್ಲಿ ಬೇಟೆಯಾಡಲು ಇನ್ನು ಕಲಿಯದ ಈ ಹುಲಿ ಮರಿಗಳು ಜನರ ಮೇಲೆ ಹಾಗೂ ದನ, ಜಾನವಾರುಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿರುತ್ತದೆ ಎಂದು ಪರಿಸ್ಥಿತಿಯ ಕುರಿತಂತೆ ತಿಳಿಸಿದ್ದಾರೆ.
ಹೆಣ್ಣು ಹುಲಿಯ ಕಳೇಬರ ಎಲ್ಲವೂ ಸರಿಯಲ್ಲ ಎಂಬುದರ ಸೂಚನೆ :
ಕಳೆದ ವರ್ಷ ನಾಗರಹೊಳೆ ಹುಲಿ ಸಂರಕ್ಷಣಾ ವಿಭಾಗ (Nagrahole Tiger Reserve Division) ನುಗು ವನ್ಯಜೀವಿ ವಲಯದಲ್ಲಿ ಹೆಣ್ಣು ಹುಲಿಯೊಂದು ನಿಗೂಢವಾಗಿ ನಾಪತ್ತೆಯಾಗಿತ್ತು. ಆ ಹೆಣ್ಣು ಹುಲಿ 3 ಹುಲಿ ಮರಿಗಳನ್ನು ಬಿಟ್ಟು ಹೋಗಿತ್ತು. ಆ ಪೈಕಿ ಒಂದು ಹುಲಿ ಮರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿತ್ತು ಮತ್ತೊಂದು ಹುಲಿ ಮರಿ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು. ಮತ್ತೊಂದು ಹುಲಿ ಮರಿಯ ಪರಿಸ್ಥಿತಿ ಬಗ್ಗೆ ತಿಳಿದು ಬರಲಿಲ್ಲ. ಇದೀಗ ಅದಾಗಿ ಒಂದೇ ವರ್ಷದಲ್ಲಿ ಹೆಣ್ಣು ಹುಲಿ ಕೊಳೆತ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ಉಳಿದ ಮೂರು ಹುಲಿಮರಿಗಳು ನಾಪತ್ತೆಯಾಗಿರುವ ವಿಷಯ ತಿಳಿದು ಬಂದಿದೆ. ಹೆಣ್ಣು ಹುಲಿಗಳು ಹೀಗೆ ಅನುಮನಾಸ್ಪದವಾಗಿ ನಾಪತ್ತೆಯಾಗುವುದು, ಅಸುನೀಗುವುದು ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಣಾ ವಿಭಾಗದಲ್ಲಿನ ಪರಿಸ್ಥಿತಿಯ ವಿಷಮತೆಯನ್ನು ಸೂಚಿಸುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವನ್ಯಜೀವಿ ತಜ್ಞರು ಬೆಂಗಳೂರು ವೈರ್ ಗೆ ವಿವರಿಸಿದ್ದಾರೆ.
ಹೊಸದಾಗಿ ಈ ಭಾಗಗಳಲ್ಲಿ ಸಫಾರಿ ಆರಂಭಿಸಲು ತಜ್ಞರ ಸಲಹೆ :
ನಾಗರಹೊಳೆ ಹುಲಿ ಸಂರಕ್ಷಣಾ ವ್ಯಾಪ್ತಿಯ ಮೇತಿಕುಪ್ಪೆ ಉಪವಿಭಾಗದ ಅಂತರಸಂತೆ ರೇಂಜ್ ನಲ್ಲಿ ದಮ್ಮನಕಟ್ಟೆಯಲ್ಲಿ ಈಗಾಗಲೇ ಅರಣ್ಯ ಇಲಾಖೆ ಹಾಗೂ ಸುಂಕದಕಟ್ಟೆ ಬಳಿ ಜಂಗಲ್ ಲಾಡ್ಜಸ್ ಎಂಡ್ ರೆಸಾರ್ಟ್ (JLR) ನವರು ಈಗಾಗಲೇ ಪ್ರತ್ಯೇಕವಾಗಿ ವನ್ಯಜೀವಿ ಸಫಾರಿ ನಡೆಸುತ್ತಿದ್ದಾರೆ. ಅದೇ ವೀರನಹೊಸಹಳ್ಳಿಯಲ್ಲೂ ಅರಣ್ಯ ಇಲಾಖೆ ಸಫಾರಿ ನಡೆಸುತ್ತಿದೆ. ಹುಣಸೂರು ಉಪವಿಭಾಗದಲ್ಲಿ ಆನೆಚೌಕೂರು ವಲಯ ವ್ಯಾಪ್ತಿಯಲ್ಲಿ ದಕ್ಷಿಣ ಕೂರ್ಗ್ ಪ್ರದೇಶದಿಂದ ಅರಣ್ಯ ಇಲಾಖೆಯು ಸಫಾರಿ ಆರಂಭಿಸಲು ಯೋಜಿಸಿದ್ದು ಆದಷ್ಟು ಶೀಘ್ರವಾಗಿ ಟೈಗರ್ ಸಫಾರಿ ಆರಂಭಿಸಬೇಕಿದೆ.
ಅದೇ ರೀತಿ ಬಂಡೀಪುರ ಹುಲಿ ಸಂರಕ್ಷಣಾ ವಿಭಾಗದಲ್ಲಿ (Bandipur Tiger Reserve Division) ಮದ್ದೂರು ಉಪವಿಭಾಗದಲ್ಲಿ ಹೊಸದಾಗಿ ಮತ್ತು ಹೆಡಿಯಾಲ ಉಪವಿಭಾಗದ ನುಗು ವನ್ಯಜೀವಿ ವಲಯದಲ್ಲಿ ಈ ಹಿಂದೆ ಸಫಾರಿ ಆರಂಭಿಸಿ 15 ದಿನಗಳಲ್ಲೇ ನಿಲ್ಲಿಸಿದ್ದ ಸಫಾರಿಯನ್ನು ಪುನಃ ಪ್ರಾರಂಭಿಸಿದರೆ ಪ್ರವಾಸಿಗರು ಬಂದು ಹೋಗುತ್ತಾರೆ ಹಾಗೂ ಅರಣ್ಯ ಇಲಾಖೆಯ ವಾಹನಗಳು ಓಡಾಟ ಆರಂಭಿಸಿದರೆ ನೆರೆಯ ಕೇರಳ ರಾಜ್ಯದಿಂದ ಬರುವ ಕಳ್ಳಬೇಟೆಗಾರರು ಹುಲಿ ಹಾಗೂ ಇತರೆ ವನ್ಯಜೀವಿಗಳಿಗಾಗಿ ಉರುಳು ಹಾಕಿಡುವುದು ಸಾಕಷ್ಟು ಕಡಿಮೆಯಾಗಲಿದೆ. ಅಲ್ಲದೆ ನೆರೆಯ ಕೇರಳದ ಜನರು ಬಂಡೀಪುರ ಟೈಗರ್ ರಿಸರ್ವ್ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಸ ತಂದು ಸುರಿಯುವುದು ಆದಷ್ಟು ನಿಯಂತ್ರಣಕ್ಕೆ ಬರಲಿದೆ ಎಂದು ವನ್ಯಜೀವಿ ತಜ್ಞರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕಳ್ಳಬೇಟೆ ತಡೆಯಲು ವನ್ಯಜೀವಿ ಸ್ವಯಂಸೇವಕರ ತಂಡ ರಚಿಸಿ :
ನಾಗರಹೊಳೆ ಮತ್ತು ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆಯು ತುರ್ತಾಗಿ ವನ್ಯಜೀವಿ ಸ್ವಯಂಸೇವಕರ ತಂಡವನ್ನು ರಚಿಸಿ ಕಾಡಿನೊಳಗೆ ಕಳ್ಳ ಬೇಟೆಗಾರರು ಅಕ್ರಮವಾಗಿ ಹಾಕಿರುವ ಉರುಳು, ಬಲೆ ಸೇರಿದಂತೆ ವನ್ಯಜೀವಿಗಳನ್ನು ಹಿಡಿಯಲು ಬಳಸುವ ವಸ್ತುಗಳನ್ನು ಕಂಡು ಹಿಡಿಯುವ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಿದರೆ ಉತ್ತಮ ಎಂದು ಮತ್ತೊಬ್ಬ ವನ್ಯಜೀವಿ ತಜ್ಞರು ಅರಣ್ಯ ಇಲಾಖೆಗೆ ಸಲಹೆ ನೀಡಿದ್ದಾರೆ.
ಆನೆಚೌಕೂರಿನ ಸಫಾರಿಗೆ ಸ್ಥಳೀಯರ ವಿರೋಧ :
ಹುಣಸೂರು ಉಪವಿಭಾಗದಲ್ಲಿ ಆನೆಚೌಕೂರು ವಲಯ ವ್ಯಾಪ್ತಿಯಲ್ಲಿನ ತಿತಿಮತಿ- ವಿರಾಜಪೇಟೆ ಕಾಡಿನ ಪ್ರದೇಶವನ್ನು ನಾಗರಹೊಳೆ ಹುಲಿ ಸಂರಕ್ಷಣಾ ವ್ಯಾಪ್ತಿಯ ಬಫರ್ ಜೋನ್ ಗೆ ಸೇರ್ಪಡೆ ಮಾಡಿ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಇಲ್ಲಿ ಸಫಾರಿ ಮಾಡದಂತೆ ಪ್ರತಿರೋಧ ತೋರುತ್ತಿದ್ದಾರೆ. ಇಲ್ಲಿ ಸಫಾರಿ ನಡೆಸಿದರೆ ಕಾಡಿನೊಳಗಿಂದ ವನ್ಯಜೀವಿಗಳು ತಮ್ಮ ಜಮೀನು ಮತ್ತು ತೋಟಗಳಿಗೆ ನುಗ್ಗಿ ಬೆಳೆ ನಾಶ ಹಾಗೂ ಮಾನವರ ಮೇಲೆ ಪ್ರಾಣಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ದೂರುತ್ತಿದ್ದಾರೆ. ಸ್ಥಳೀಯರ ಜನರ ಮನವೊಲಿಸಿ ಸಫಾರಿ ಆರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಟೈಗರ್ ರಿಸರ್ವ್ ಪ್ರದೇಶ ಕಾಡಿನ ಮಧ್ಯ ಭಾಗದಲ್ಲಿ (Core Area) ಯಾವುದೇ ರೀತಿಯಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡದೆ, ಕಾಡಿನ ಬಫರ್ ವಲಯ ಹಾಗೂ ಕಾಡಂಚಿನ ಭಾಗದಲ್ಲಿ ಜಂಗಲ್ ಸಫಾರಿ ಆರಂಭಿಸುವಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ರಾಜ್ಯ ಸರ್ಕಾರವು ಕೂಡ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಊರಿನಲ್ಲಿ ಪರಿಸರ ಪ್ರವಾಸೋದ್ಯಮ (Eco Tourism) ಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಂಡಿದೆ. ಇದರಿಂದ ಆ ಊರಿನ ಸ್ಥಳೀಯರಿಗೆ ಉದ್ಯೋಗ, ಆದಾಯ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ದೇಶದ ಹುಲಿಗಣತಿಯಲ್ಲಿ 2-3ನೇ ಸ್ಥಾನದಲ್ಲಿದೆ ನಾಗರಹೊಳೆ- ಬಂಡೀಪುರ :
2018ರಲ್ಲಿ ಹುಲಿ ಗಣತಿಯಲ್ಲಿ ನಾಗರಹೊಳೆಯಲ್ಲಿ 127 ಹುಲಿಗಳು ಹಾಗೂ ಬಂಡೀಪುರದ ಟೈಗರ್ ರಿಸರ್ವ್ ನಲ್ಲಿ 126 ಹುಲಿಗಳನ್ನು ಹೊಂದಿ ದೇಶದಲ್ಲೇ ಇರುವ 50 ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಅತಿಹೆಚ್ಚು ಹುಲಿಗಳಿರುವ ಸ್ಥಳವೆಂಬ ಖ್ಯಾತಿಗೆ ಒಳಗಾದ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳದಲ್ಲಿ ಪ್ರಮುಖ ಪಾತ್ರವಹಿಸುವ ಹೆಣ್ಣು ಹುಲಿಗಳು ಉರುಳಿಗೆ ಸಿಲುಕಿ ಸಾಯಿಸುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರಾಜ್ಯ ಅರಣ್ಯ ಇಲಾಖೆ ತುರ್ತಾಗಿ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ.
2022ರ ವರ್ಷದಲ್ಲಿ 2 ಟೈಗರ್ ರಿಸರ್ವ್ ಕಾಡಿನಲ್ಲಿ 11 ಹುಲಿ ಸಾವು :
ನಾಗರಹೊಳೆ ಮತ್ತು ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ 2022ರ ನವೆಂಬರ್ 5ರ ತನಕ ಒಟ್ಟು 11 ಹುಲಿಗಳು ಸಾವನ್ನಪ್ಪಿದೆ. ಆ ಪೈಕಿ 6 ಹುಲಿಗಳು ನಾಗರಹೊಳೆಯಲ್ಲಿ ಹಾಗೂ 5 ಹುಲಿಗಳು ಬಂಡೀಪುರ ಟೈಗರ್ ರಿಸರ್ವ್ ಪ್ರದೇಶದಲ್ಲಿ ಮೃತಪಟ್ಟಿದೆ. ದೇಶದ 22 ಹುಲಿ ರಕ್ಷಿತಾರಣ್ಯವಿರುವ ರಾಜ್ಯಗಳ ಪೈಕಿ ಹುಲಿಗಳು ಮರಣವಾಗುತ್ತಿರುವ ಪ್ರಮಾಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2012ರಿಂದ 2022ರ ಜುಲೈ ತನಕದ ಅಂಕಿ- ಅಂಶದ ಪ್ರಕಾರ 10 ವರ್ಷದಲ್ಲಿ 150 ಹುಲಿಗಳು ನೈಸರ್ಗಿಕವಾಗಿ ಮತ್ತಿತರ ಕಾರಣಗಳಿಗಾಗಿ ಮೃತಪಟ್ಟಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority )ದ ವರದಿಯಲ್ಲಿ ತಿಳಿಸಿದೆ.