ತಿರುಪತಿ, ನ.6 www.bengaluruwire.com : ಏಳು ಬೆಟ್ಟದ ಒಡೆಯ ವೆಂಕಟೇಶ್ವರನ ತಿರುಮಲ ತಿರುಪತಿ ದೇವಸ್ಥಾನಂ (TTD) ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ಟಿಟಿಡಿಯ ಒಟ್ಟು ಆಸ್ತಿ ಮೌಲ್ಯ 2.26 ಲಕ್ಷ ಕೋಟಿ ರೂ.ನಂತೆ. ಜಗತ್ತಿನ ಅತಿ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಸೇರಿದ ಟಿಟಿಡಿ ಟ್ರಸ್ಟ್ ತನ್ನ ಸ್ಥಿರಾಸ್ತಿ, ಬ್ಯಾಂಕ್ ಠೇವಣಿ, ಚಿನ್ನದ ಠೇವಣಿ ಕುರಿತಂತೆಯೂ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ದೇವಸ್ಥಾನ ಟ್ರಸ್ಟ್ ನ ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿಯ ಪಟ್ಟಿಯನ್ನು ಘೋಷಿಸಿದೆ. ಪ್ರಸ್ತುತ ಟ್ರಸ್ಟ್ ಬೋರ್ಡ್ ತನ್ನ ಹೂಡಿಕೆ ಮಾರ್ಗಸೂಚಿಗಳನ್ನು 2019 ರಿಂದ ಬಲಪಡಿಸಿದೆ ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿಯು ತನ್ನಲ್ಲಿನ ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳನ್ನು ಟ್ರಸ್ಟ್ ತಳ್ಳಿಹಾಕಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ಹೆಚ್ಚುವರಿ ಮೊತ್ತವನ್ನು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ಸ್ಟೇಟಸ್ ನೋಟ್‌ನಲ್ಲಿ ಟಿಟಿಡಿ ನಿಯಮಗಳ ಪ್ರಕಾರ, ಅದು ಎಚ್ 1 ಬಡ್ಡಿದರದಲ್ಲಿ ಮಾತ್ರ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದೆ. 30.06.2019 ಮತ್ತು 30.09.2022 ರ ಅವಧಿಯಲ್ಲಿ ಮಾಡಿದ ಹೂಡಿಕೆಗಳು ಮತ್ತು ಚಿನ್ನದ ಠೇವಣಿಗಳ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿದೆ.
ಶ್ರೀವಾರಿ ಹುಂಡಿಯ ಎಲ್ಲಾ ಚಿನ್ನದ ದೇಣಿಗೆಗಳನ್ನು 12 ವರ್ಷಗಳ ಲಿಂಗ್ ಗೋಲ್ಡ್ ಠೇವಣಿ ಮಾಡಬಹುದಾದ ಹಣಗಳಿಸುವ ಯೋಜನೆಯ ಅಡಿಯಲ್ಲಿ ಸರ್ಕಾರಿ ಟಂಕಸಾಲೆಗೆ ಕಳುಹಿಸಲಾಗಿದೆ. ಮತ್ತು ಟಿಟಿಡಿ ಖಾತೆಯ ಬ್ಯಾಂಕ್ ನಿಂದ ಸ್ವೀಕರಿಸಿದ ಎಲ್ಲಾ ದೇಣಿಗೆಗಳನ್ನು ಅದೇ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಯಾವುದೇ ಬ್ಯಾಂಕ್ ಸಂಗ್ರಹಿಸಿದ ಪರಕಾಮಣಿಯ ನಾಣ್ಯಗಳನ್ನೂ ಅದೇ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿದೆ ಎಂದು ಟಿಟಿಡಿ ನ್ಯೂಸ್ ನಲ್ಲಿ ತಿಳಿಸಿದೆ.
24 ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ನಿಶ್ಚಿತ ಠೇವಣಿ :
24 ಬ್ಯಾಂಕ್ ಗಳಲ್ಲಿ 30 ಜೂನ್ 2019ರಲ್ಲಿ 13,025 ಕೋಟಿ ಹೂಡಿಕೆಗಳು ಹಾಗೂ 30 ಸೆಪ್ಟೆಂಬರ್ 2022ರಲ್ಲಿ ಆ ನಿಶ್ಚಿತ ಠೇವಣಿಗಳ ಹೂಡಿಕೆಯು 15,938 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಟಿಟಿಡಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ. ಅದೇ ರೀತಿ ಟ್ರಸ್ಟ್ ಹಂಚಿಕೊಂಡ ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019 ರಲ್ಲಿ 7339.74 ಟನ್ ಚಿನ್ನದ ಠೇವಣಿ ಹೊಂದಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ಗಳಷ್ಟು ಚಿನ್ನಾಭರಣ ಸೇರ್ಪಡೆಯಾಗಿ ಪ್ರಸ್ತುತ ಟಿಟಿಡಿ ಬಳಿ ಬರೋಬ್ಬರಿ 10,258.37 ಕೆಜಿ (10.25 ಟನ್) ನಷ್ಟು ನೂರಾರು ಕೋಟಿ ರೂ. ಮೌಲ್ಯದ ಚಿನ್ನಾಭರಣ ಬ್ಯಾಂಕ್ ನಲ್ಲಿ ಚಿನ್ನದ ಠೇವಣಿಯಾಗಿ ಹೊಂದಿದೆ ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ.
ತಿರುಮಲದ ಶ್ರೀ ವೆಂಕಟೇಶ್ವೇರ ದೇವಾಲಯದ ಆಸ್ತಿಗಳು ಭಾರತದಾದ್ಯಂತ 960 ಆಸ್ತಿಗಳನ್ನು ಹೊಂದಿದ್ದು, ಅವುಗಳ ವಿಸ್ತೀರ್ಣ 7,123 ಎಕರೆಗಳಷ್ಟಾಗಿದೆ.