ಬೆಂಗಳೂರು, ನ.5 www.bengaluruwire.com : ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೆ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವ ಯೋಜನೆ ಜಲಜೀವನ್ ಮಿಷನ್ ಅನುಷ್ಟಾನದಲ್ಲಿ ಕರ್ನಾಟಕ ಕಳಪೆ ಸಾಧನೆ ಮಾಡಿದೆ ಎಂಬ ಬೆಂಗಳೂರು ವೈರ್ ವರದಿ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಚ್ಚೆತ್ತುಕೊಂಡು ಆ ನಿಟ್ಟಿನಲ್ಲಿ ಯೋಜನೆ ಅನುಷ್ಟಾನದಲ್ಲಿ ನಿರ್ಲಕ್ಷ್ಯ ತೋರಿದ ಎಂಜಿನಿಯರ್ ಒಬ್ಬರನ್ನು ಅಮಾನತು ಮಾಡಿದೆ.
ಈ ವರದಿಯಿಂದ ಎಚ್ಚೆತ್ತುಕೊಂಡ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕರ್ತವ್ಯಲೋಪ ಎಸಗಿದ ತೀರ್ಥಹಳ್ಳಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಿರಿಯ ಎಂಜಿನಿಯರ್ ಕೆ.ಮುರಗೇಶ್ ಅವರನ್ನು ನ.2ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಈ ಕುರಿತಂತೆ ಗ್ರಾಮಗಳಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ ಬೆಂಗಳೂರು ವೈರ್ ಪರಿಶೀಲಿಸಿ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು, ಕುಡುಮಲ್ಲಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಹೂಗಲವಳ್ಳಿ ಹಳ್ಳಿಯಲ್ಲಿ ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿ ಹಲವು ಮನೆಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಟ್ಯಾಪ್ ಹಾಕಿ 9 ತಿಂಗಳಾದರೂ ನೀರಿನ ಸಂಪರ್ಕ ಬಂದಿಲ್ಲದಿರುವುದನ್ನು ಸಾಕ್ಷಿ ಸಮೇತ “ನಲ್ಲಿಯಿದೆ ನೀರಿಲ್ಲ ; ‘ಮನೆ ಮನೆಗೆ ಬಾರದ ಗಂಗೆ’ – ರಾಜ್ಯದ ಜಲಜೀವನ್ ದುಸ್ಥಿತಿ” ಬಗ್ಗೆ ಅಕ್ಟೋಬರ್ 31ರಂದು “ಬೆಂಗಳೂರು ವೈರ್” ಕನ್ನಡ ವೆಬ್ ನ್ಯೂಸ್ ಪೋರ್ಟಲ್ ನಲ್ಲಿ ವಿಶೇಷ ವರದಿ ಪ್ರಕಟಮಾಡಿತ್ತು. ಅಲ್ಲದೆ ಆ ಊರಿನ ರಸ್ತೆಯ ದುಸ್ಥಿತಿಯ ಬಗ್ಗೆಯೂ ಚಿತ್ರ ಸಮೇತ ವರದಿ ಮಾಡಿತ್ತು.
“ಬೆಂಗಳೂರು ವೈರ್” ವರದಿ ಪ್ರಕಟವಾದ ಮರುದಿನ (ನ.1) ಈ ವರದಿಯಿಂದ ಎಚ್ಚೆತ್ತುಕೊಂಡ ಶಿವಮೊಗ್ಗ ಜಿಲ್ಲಾ ಪಂಚಾಯತ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO), ಉಪ ಕಾರ್ಯದರ್ಶಿ (ಆಡಳಿತ), ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲ್ಯ ತೀರ್ಥ ಉಪವಿಭಾಗದ ಕಿರಿಯ ಎಂಜಿನಿಯರ್ ಮುರುಗೇಶ್, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ 7 ಮನೆಗಳು ಹಾಗೂ ಒಂದು ದೇವಸ್ಥಾನಕ್ಕೆ ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳ (FHTC)ನ್ನು ಅಳವಡಿಸಿದ್ದು, ನಲ್ಲಿಗಳಿಗೆ ನೀರಿನ ಸಂಪರ್ಕ ಕಲ್ಪಿಸದಿರುವುದನ್ನು ಮನವರಿಕೆ ಮಾಡಿಕೊಂಡರು. ಅಲ್ಲದೆ ಕೆಲವು ಮನೆಗಳಿಗೆ ಮುಖ್ಯ ನೀರು ಸರಬರಾಜು ಪೈಪ್ ಲೈನ್ ನಿಂದ ಎಫ್ ಎಚ್ ಟಿಸಿ ಸಂಪರ್ಕ ಕಲ್ಪಿಸಿರುವ ಕಡೆಗಳಿಗೆ ಪೈಪ್ ಸಂಪರ್ಕ ಮಾಡದಿರುವುದನ್ನು ಕಂಡು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ : BW EXCLUSIVE | #Jala jeevanMission | ನಲ್ಲಿಯಿದೆ ನೀರಿಲ್ಲ ; ‘ಮನೆ ಮನೆಗೆ ಬಾರದ ಗಂಗೆ’ – ರಾಜ್ಯದ ಜಲಜೀವನ್ ದುಸ್ಥಿತಿ
ಕೂಡಲೇ ನೀರಿನ ಪೈಪ್ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಮಾಡಲು ಸೂಚಿಸಿ ಕಾಮಗಾರಿಯು ಆರಂಭಗೊಂಡಿತು. ಅಲ್ಲದೆ ತಾತ್ಕಾಲಿಕವಾಗಿ ಅಕ್ಸಲ್ ಕೊಪ್ಪದಿಂದ ಹುಗಲವಳ್ಳಿಗೆ ಎಫ್ ಎಚ್ ಟಿಸಿ ಸಂಪರ್ಕ ನೀಡಿದ ಮನೆಗಳಿಗೆ ಬೋರ್ ವೆಲ್ ನೀರು ಹರಿಯುವಂತೆ ಕ್ರಮ ಕೈಗೊಂಡರು. ಸದ್ಯದಲ್ಲೇ ಹುಗಲವಳ್ಳಿ ಪ್ರದೇಶದ ಸುತ್ತಮುತ್ತ ಬೋರ್ ವೆಲ್ ಕೊರೆಸಿ ಶಾಶ್ವತವಾಗಿ ನೀರು ಸಂಪರ್ಕ ಕಲ್ಪಿಸಲು ಹಿರಿಯ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ ಬಿಳುವೆ ಗ್ರಾಮದ ಹುಗಲವಳ್ಳಿ-ಕಲ್ಲತ್ತಿ-ಅಕ್ಸಾಲ್ ಕೊಪ್ಪದ ಲಿಂಕ್ ರಸ್ತೆಯಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆ ಡಾಂಬರು ಹಾಕದೆ ಹಾಳಾದ 750 ಮೀಟರ್ ಉದ್ದದ ರಸ್ತೆಯ ದುಸ್ಥಿತಿಯನ್ನು ಕಂಡು ಅವುಗಳಿಗೆ ಹೊಸದಾಗಿ ಟಾರ್ ಹಾಕಲು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಇಇಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
“ಬೆಂಗಳೂರು ವೈರ್” ನಲ್ಲಿ ಸುದ್ದಿ ಪ್ರಕಟವಾದ ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಹಿತ ಹಲವು ಅಧಿಕಾರಿಗಳು. ನ.1ರಂದು ಹುಗಲವಳ್ಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಲ ಜೀವನ್ ಅಭಿಯಾನದಡಿ 7 ಮನೆಗಳಿಗೆ ನೀರು ಸಂಪರ್ಕ ನೀಡಿದ್ದರೂ ಹಲವು ತಿಂಗಳಿನಿಂದ ನೀರು ಸರಬರಾಜು ಮಾಡಿರಲಿಲ್ಲ. ಹಾಗೂ ಕೆಲವೆಡೆ ನೀರಿನ ಪೈಪ್ ಹಾಕದೆ ಕಾಮಗಾರಿ ಅಪೂರ್ಣವಾಗಿತ್ತು. ಈ ಕಾಮಗಾರಿಯನ್ನು ಈಗ ಪೂರ್ಣಗೊಳಿಸಲಾಗಿದೆ. ಹೊಸದಾಗಿ ಜನವರಿವೊಳಗೆ ಬೋರ್ ವೆಲ್ ಕೊರೆಸುವ ತನಕ ತಾತ್ಕಾಲಿಕವಾಗಿ ಅಕ್ಸಲ್ ಕೊಪ್ಪದಿಂದ ಹುಗಲವಳ್ಳಿಗೆ ನೀರು ಸರಬರಾಜಾಗುತ್ತಿದೆ. ಬಿಳುವೆ ಗ್ರಾಮದ ಹುಗಲವಳ್ಳಿ-ಕಲ್ಲತ್ತಿ-ಅಕ್ಸಾಲ್ ಕೊಪ್ಪದ ಲಿಂಕ್ ರಸ್ತೆಗೆ ಸೂಕ್ತ ಯೋಜನೆಯಡಿ ಹಣ ಹೊಂದಿಸಿ ರಸ್ತೆಗೆ ಹೊಸದಾಗಿ ಡಾಂಬರ್ ಹಾಕುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ಈ ಸ್ಥಳಕ್ಕೆ ಟಾರ್ ಹಾಕುತ್ತಾರೆ.”
–ಸೀನಪ್ಪ.ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ (ತೀರ್ಥಹಳ್ಳಿ)
“ಬೆಂಗಳೂರು ವೈರ್” ವರದಿ ಬಳಿಕ ತಾತ್ಕಾಲಿಕವಾಗಿ ನೀರಿನ ಸಂಪರ್ಕ ದೊರೆಕಿದ್ದಕ್ಕೆ ಹಾಗೂ ರಸ್ತೆಗೆ ಹೊಸದಾಗಿ ಡಾಂಬರ್ ಹಾಕಲು ಅಧಿಕಾರಿಗಳಿಂದ ಭರವಸೆ ದೊರೆತಿರುವುದಕ್ಕೆ ಸ್ಥಳೀಯರು “ಬೆಂಗಳೂರು ವೈರ್” ಕನ್ನಡ ವೆಬ್ ನ್ಯೂಸ್ ಪೋರ್ಟಲ್ ಗೆ ಧನ್ಯವಾದ ತಿಳಿಸಿದ್ದಾರೆ.