ಬೆಂಗಳೂರು, ನ.3 www.bengaluruwire.com : ತುಮಕೂರು ಜಿಲ್ಲಾಸ್ಪತ್ರೆ ಮತ್ತು ಅಲ್ಲಿನ ವೈದ್ಯೆಯ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಆಕೆಯ ಇಬ್ಬರು ನವಜಾತ ಶಿಶುಗಳು ಸಾವನ್ನಪ್ಪಿರುವ ಬಗ್ಗೆ ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ದುರಂತಕ್ಕೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ. ಕೂಡಲೇ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು, ಇಲ್ಲವೇ ಸ್ವತಃ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ ರಾಜಕೀಯ, ಚುನಾವಣೆ, ಪ್ರಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಬಿಜೆಪಿ ಸರಕಾರದ ಆಡಳಿತದ ಕರಾಳ ಮುಖದ ಬಗ್ಗೆ (ಮಂಡ್ಯದ ಘಟನೆ) ಸ್ವಲ್ಪ ಹೊತ್ತಿನ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಆದರೆ, ಅದಕ್ಕಿಂತ ಭಯಾನಕ ಹಾಗೂ ಕರುಳು ಹಿಂಡುವ, ಇಡೀ ಕರ್ನಾಟಕವೇ ತಲೆ ತಗ್ಗಿಸುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆ ಅದೆಷ್ಟು ಹಾಳಾಗಿ ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದುರಂತ ಸಾಕ್ಷಿ ಇನ್ನೊಂದಿಲ್ಲ. ಈ ಹದಗೆಟ್ಟ ಆರೋಗ್ಯ ವ್ಯವಸ್ಥೆ ತುಮಕೂರಿನಲ್ಲಿ ಅನಾಥ ಬಾಣಂತಿಯ ಜತೆಗೇ ಹುಟ್ಟಿದೊಡನೆ ಎರಡು ಹಸುಗೂಸುಗಳನ್ನು ಬಲಿ ತೆಗೆದುಕೊಂಡಿದೆ. ಅಭಿವೃದ್ಧಿ, ಆವಿಷ್ಕಾರ ಎಂದೆಲ್ಲ ಬೀಗುವ ಈ ಸರಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರಸವ ವೇದನೆಯಿಂದ ಬಳಲುತ್ತಿದ್ದ ತುಮಕೂರಿನ ಭಾರತೀನಗರದ ಶ್ರೀಮತಿ ಕಸ್ತೂರಿ (30) ಎಂಬ ಮಹಿಳೆಯನ್ನು ನಿನ್ನೆ ತಡರಾತ್ರಿ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಕರ್ತವ್ಯದಲ್ಲಿದ್ದ ವೈದ್ಯೆ, ಆ ಗರ್ಭಿಣಿಗೆ ಹೆರಿಗೆ ಮಾಡಿಸುವ ಬದಲು ತಾಯಿ ಕಾರ್ಡ್ ಮಾಡಿಸಿಲ್ಲ ಎನ್ನುವ ನೆಪ ಹೇಳಿ ನಿರ್ದಯವಾಗಿ ವಾಪಸ್ ಕಳಿಸಿದ್ದಾರೆ.
ಹೆರಿಗೆ ಮಾಡಿಸಲು ಬೇಡಿದರೂ ವೈದ್ಯೆ ಮನಃ ಕರಗಲಿಲ್ಲ
ಹೆರಿಗೆ ನೋವಿನಿಂದ ನರಳುತ್ತಿದ್ದ ಆ ಮಹಿಳೆ, ತನಗೆ ಹೆರಿಗೆ ಮಾಡಿಸಿ ಎಂದು ಆ ವೈದ್ಯೆಯನ್ನು ಪರಿಪರಿಯಾಗಿ ಅಂಗಲಾಚಿದ್ದಾರೆ. ಆದರೆ, ದರ್ಪದಿಂದ ವರ್ತಿಸಿದ ವೈದ್ಯೆ, ಹೆರಿಗೆ ಮಾಡಿಸದೆ ಮಾನವೀಯತೆಯನ್ನೇ ಮರೆತು ಆಕೆಯನ್ನು ವಾಪಸ್ ಕಳಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಹೆರಿಗೆ ಮಾಡಿಸಿಕೋ ಎಂದು ತಾಕೀತು ಮಾಡಿದ್ದಾರೆ.
ಬೇರೆ ದಾರಿ ಇಲ್ಲದೆ, ಹಣವೂ ಇಲ್ಲದೆ ಹೊಟ್ಟೆ ನೋವಿನಲ್ಲೇ ಮನೆಗೆ ವಾಪಸ್ ಬಂದಿದ್ದ ಆ ಮಹಿಳೆ, ಇಡೀ ರಾತ್ರಿ ನರಳಿ -ನರಳಿ ಬೆಳಗಿನಜಾವ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಎರಡು ಮಕ್ಕಳ ಜತೆಗೆ ತಾನೂ ಸಾವನ್ನಪ್ಪಿದ್ದಾರೆ. 6 ವರ್ಷದ ಇನ್ನೊಂದು ಹೆಣ್ಣು ಮಗು ತಬ್ಬಲಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಸರ್ಕಾರ ಮತ್ತು ವೈದ್ಯೆಯೇ ಬಾಣಂತಿ- ಹಸುಗೂಸುಗಳ ಸಾವಿಗೆ ಕಾರಣ :
ಬಾಣಂತಿ ಮತ್ತು ಅವಳಿ ಹಸುಗೂಸುಗಳ ಧಾರುಣ ಸಾವಿಗೆ ಆ ವೈದ್ಯೆ ಮತ್ತು ಸರಕಾರವೇ ನೇರ ಹೊಣೆ. ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಉಸ್ತುವಾರಿಯಲ್ಲಿ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಹಳ್ಳಹಿಡಿದು ಹೋಗಿದೆ ಎನ್ನುವುದಕ್ಕೆ ಈ ಸಾವುಗಳೇ ಸಾಕ್ಷಿ. ಮಾನವೀಯತೆ ಇಲ್ಲದ ವೈದ್ಯೆ ಹಾಗೂ ಸರಕಾರವೇ ಮಾಡಿದ ಕೊಲೆಗಳಿವು ಎಂದು ಹೆಚ್ ಡಿಕೆ ಕಿಡಿಕಾರಿದ್ದಾರೆ.
ವೈದ್ಯೆಯನ್ನು ಸೇವೆಯಿಂದ ವಜಾಗೊಳಿಸಲು ಆಗ್ರಹ :
ಕೂಡಲೇ ಆ ವೈದ್ಯೆಯನ್ನು ಸೇವೆಯಿಂದ ವಜಾ ಮಾಡಬೇಕು. ಕರ್ತವ್ಯಲೋಪ ಎಸಗಿದ ಇತರೆ ಸಿಬ್ಬಂದಿಗೂ ತಕ್ಕಶಾಸ್ತಿ ಮಾಡಬೇಕು. ಜಿಲ್ಲಾಸ್ಪತ್ರೆಯ ಅಧಿಕ್ಷರನ್ನೂ ಇದಕ್ಕೆ ಹೊಣೆ ಮಾಡಿ ಮನೆಗೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸರಕಾರಿ ಕೊಲೆಗಳಿಗೆ ಆರೋಗ್ಯ ಸಚಿವರು ನೈತಿಕ ಹೊಣೆ ಹೊರಲೇಬೇಕು, ಡಾ.ಕೆ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಲೇಬೇಕು, ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ತಬ್ಬಲಿಯಾದ ಮಗುವಿನ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಚುನಾವಣೆಗಳು, ಮುಖ್ಯಮಂತ್ರಿಗಳ ಬದಲಾವಣೆ, ಅಬ್ಬರದ ಪ್ರಚಾರವೇ ಸುದ್ದಿಯಾಗುತ್ತಿದೆ. ಆದರೆ, ಅಭಿವೃದ್ಧಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಬಾಣಂತಿ ಮತ್ತು ಹಸುಗೂಸುಗಳ ದುರಂತ ಸಾವು ಕರ್ನಾಟಕದ ಆತ್ಮಸಾಕ್ಷಿಯನ್ನು ಕಲುಕಿದೆ. ಆ ನತದೃಷ್ಟ ಮಹಿಳೆ, ಆಕೆಯ ಮಕ್ಕಳಿಬ್ಬರಿಗೂ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.