ಬೆಂಗಳೂರು, ಅ.30 www.bengaluruwire.com : ನಗರದ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ ಒ) ಶನಿವಾರ ಸಂಜೆ ಖಾಸಗಿ ಆಸ್ಪತ್ರೆಯ ಉದ್ಯೋಗಿಯೊಬ್ಬರಿಂದ 40,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ನಗರ ಡಿಎಚ್‌ಒ ಡಾ.ಬಿ ನಿರಂಜನ್ 40,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಕನ್ನಮಂಗಲದಲ್ಲಿ ಹೊಸ ಆಸ್ಪತ್ರೆಯ ಕಾರ್ಯನಿರ್ವಹಣೆಗೆ ಅನುಮತಿ ನೀಡಲು ನಿರಂಜನ್ 1.25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 17ರಂದು ಆಸ್ಪತ್ರೆಯವರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಲ್ಲಿಸಿದ ಆಸ್ಪತ್ರೆಯವರು ಸಾಕಷ್ಟು ಚೌಕಾಸಿ ಮಾಡಿದ ನಂತರ, ನಿರಂಜನ್ ಲಂಚದ ಮೊತ್ತವನ್ನು 40 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಆಗ ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ದೂರುದಾರರು ಡಾ.ನಿರಂಜನ್ ಅವರಿಗೆ ಅವರ ಕಚೇರಿಯಲ್ಲಿ ಲಂಚದ ಹಣ ನೀಡುವುದಾಗಿ ಹೇಳಿದಾಗ, ಡಿಎಚ್ ಒ ಅವರು ವಿಜಯನಗರದಲ್ಲಿರುವ ತಮ್ಮ ಮನೆಗೆ ಹಿಂದಿರುಗುವಾಗ ಸಂಜೆ ಇಸ್ಕಾನ್ ದೇವಸ್ಥಾನದ ಬಳಿ ಭೇಟಿಯಾಗಲು ದೂರುದಾರರಿಗೆ ಹೇಳಿದರು. ರಾತ್ರಿ 7.40ರ ಸುಮಾರಿಗೆ ದೂರುದಾರರು ನಿರಂಜನ್ ಅವರನ್ನು ರಸ್ತೆಯಲ್ಲಿ ಭೇಟಿಯಾಗಿ ಲಂಚದ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.