ಬೆಂಗಳೂರು, ಅ.28 www.bengaluruwire.com : ರಾಜ್ಯದಲ್ಲಿ ನಾನಾ ಜಿಲ್ಲೆಗಳಲ್ಲಿ ಇಂದು ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಯಾವುದೇ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜುಗಳನ್ನು ನೋಡಿದರೂ ಏಕ ಕಾಲಕ್ಕೆ ಕನ್ನಡದ ಹಾಡುಗಳು ಮೊಳಗಿದವು.
ಹೌದು ರಾಜ್ಯದ 67ನೆಯ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಕನ್ನಡದ ಹಾಡುಗಳನ್ನು ಏಕ ಕಾಲಕ್ಕೆ ಹಾಡುವ ಮೂಲಕ ಕನ್ನಡದ ಅಸ್ಮಿತೆಯನ್ನು, ಕನ್ನಡಾಭಿಮಾನವನ್ನು ಎತ್ತಿಹಿಡಿದರು.
ರಾಜಧಾನಿ ಬೆಂಗಳೂರಿನ ವಿಧಾನಸೌಧದ ಬೃಹತ್ ಮೆಟ್ಟಿಲು ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಇದಾದ ಬಳಿಕ ಮುಖ್ಯಮಂತ್ರಿಗಳು ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕುರಿತಂತೆ ಸಭೆ ನಡೆಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2,000 ವೃತ್ತಿಪರ ಗಾಯಕರು ಸೇರಿದಂತೆ 50 ಸಾವಿರ ಜನರು ಪಾಲ್ಗೊಂಡಿದ್ದರು.
ಎಲ್ಲೆಡೆ ಪಸರಿಸಿತು ಕನ್ನಡದ ಉತ್ಸವದ ಸಂಭ್ರಮ :
ಶುಕ್ರವಾರ ಬೆಳಗ್ಗೆ 11ಗಂಟೆಗೆ ಸರಿಯಾಗಿ ಆರಂಭವಾದ ಕನ್ನಡ ಗಾಯನವು 27 ನಿಮಿಷದವರೆಗೆ ನಡೆಯಿತು. 46 ದೇಶಗಳು, 26 ರಾಜ್ಯಗಳು, 2 ವಿಮಾನಗಳಲ್ಲೂ ಕನ್ನಡದ ಕಂಪು ಕೇಳಿ ಬಂದಿತು. ರಾಷ್ಟ್ರಕವಿ ಕುವೆಂಪು ವಿರಚಿತ “ಜಯಭಾರತ ಜನನಿಯ ತನುಜಾತೆ” ನಾಡಗೀತೆ, ಹುಯಿಲಗೊಳ ನಾರಾಯಣರಾವ್ ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”, ಚನ್ನವೀರ ಕಣವಿ ವಿರಚಿತ ” ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ”, ಕುವೆಂಪು ಅವರ ರಚನೆಯ ಮತ್ತೊಂದು ಸೊಗಸಾದ ಹಾಡು “ಬಾರಿಸು ಕನ್ನಡ ಡಿಂಡಿಮವ”, ಡಾ.ಡಿ.ಎಸ್.ಕರ್ಕಿಯವರ ” ಹಚ್ಚೇವು ಕನ್ನಡದ ದೀಪ” ಹಾಗೂ ಹಂಸಲೇಖ ರಚಿಸಿದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡುಗಳನ್ನು ಹಾಡಿ ಕನ್ನಡದ ಉತ್ಸವವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿದರು.
ಇನ್ನೊಂದೆಡೆ ಬಿಬಿಎಂಪಿ ಕೇಂದ್ರ ಕಛೇರಿ ಆವರಣ, ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ, ಮೆಟ್ರೊ, ವಿಮಾನ ನಿಲ್ದಾಣ, ಐಟಿ ಬಿಟಿ ಸಂಸ್ಥೆಗಳು, ಕೆಐಎಎಲ್ ವಿಮಾನ ನಿಲ್ದಾಣ, ಹೈಕೋರ್ಟ್ ಆವರಣ ಸೇರಿದಂತೆ ನಾನಾ ಕಡೆಗಳಲ್ಲಿ ಯಶಸ್ವಿಯಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನೆರವೇರಿತು.
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ, ಏರ್ಪಡಿಸಿದ್ದ “ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಾಯಿ ಭುವನೇಶ್ವರಿ ಮಾತೆಗೆ ಪುಷ್ಪನಮನ ಅರ್ಪಿಸುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ 1000ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ 250 ನುರಿತ ಸಂಗೀತಗಾರರು ಪಾಲ್ಗೊಂಡು ಕೋಟಿ ಕಂಠ ಗಾನ ಮೊಳಗಿಸಿದರು ಹಾಗೂ ಕೊನೆಯಲ್ಲಿ ಭಾಗವಹಿಸಿದವರೆಲ್ಲರೂ ಸಂಕಲ್ಪವಿಧಿ ತೆಗೆದುಕೊಂಡರು.
ಈ ವೇಳೆ ವಿಶೇಷ ಆಯುಕ್ತರಾದ ಎಸ್. ರಂಗಪ್ಪ,
ರವೀಂದ್ರ, ಹಾಗೂ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲೂ ಕನ್ನಡದ ಕಲರವ :
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲೂ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ನಿಗಮದ ಕೇಂದ್ರ ಕಛೇರಿ, ಘಟಕಗಳು, ವಿಭಾಗಗಳು, ಕಾರ್ಯಾಗಾರಗಳು ಮತ್ತು ಬಸ್ ನಿಲ್ದಾಣಗಳಲ್ಲಿ “ನನ್ನ ನಾಡು ನನ್ನ ಹಾಡು” ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿಗಮದ ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತ) ಡಾ. ನವೀನ್ ಭಟ್ ವೈ ಸೇರಿದಂತೆ ಅಧಿಕಾರಿಗಳು ಹಾಗೂ ಕೇಂದ್ರ ಕಛೇರಿಯ ಎಲ್ಲಾ ಸಿಬ್ಬಂದಿಗಳು ಸಂಭ್ರಮದಿಂದ ಭಾಗವಹಿಸಿದರು.