ಬೆಂಗಳೂರು, ಅ.27 www.bengaluruwire.com : ಹಿರಿಯ ಪತ್ರಕರ್ತ ರಾಮಯ್ಯ ಅವರ ವರದಿ ಹಾಗೂ ಬರಹದಿಂದ ನಾವು ಬಹಳಷ್ಟು ಕಲಿಯಬಹುದು. ಅವರ ಸಾವಿರ ಹೆಜ್ಜೆಗಳಲ್ಲಿ ನಾವು ಎರಡು ಹೆಜ್ಜೆಯನ್ನಾದರೂ ಇಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು.
ಗಾಂಭವನದಲ್ಲಿಂದು ಅಭಿಮಾನಿ ಪ್ರಕಾಶನ ಹೊರತಂದಿರುವ “ನಾನು ಹಿಂದೂ ರಾಮಯ್ಯ” ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಮಯ್ಯ ಅವರ ಕೃತಿಯಲ್ಲಿ ಸಮಾಜ, ರಾಜಕೀಯ ಹಾಗೂ ಜನರ ಬದುಕನ್ನು ಚಿತ್ರಿಸಲಾಗಿದೆ. ರಾಮಯ್ಯ ಅವರ ಮಾರ್ಗದರ್ಶನ ಸಮಾಜಕ್ಕೆ, ಸರ್ಕಾರಕ್ಕೆ ಅವಶ್ಯಕ. ಅಪರೂಪದ ವ್ಯಕ್ತಿಯಾದ ಇವರು ಅಂದಿನಿಂದ ಇಂದಿನವರೆಗೂ ಮುಗ್ಧತೆಯನ್ನು ಉಳಿಸಿಕೊಂಡ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದವರು. ಯಾವುದಕ್ಕೂ ರಾಜಿ ಆಗದೆ ಸತ್ಯ ಬರೆದಿದ್ದಾರೆ. ಅವರದು ತಪಸ್ವಿ ಬದುಕು. ರಾಮಯ್ಯ ಅವರಿಗೆ ಸತ್ಯವೇ ಐಡಿಯಾ, ಐಡಿಯಾಲಜಿ. ಸತ್ಯದ ಹೂರಣವನ್ನು ಬರೆಯುತ್ತಿದ್ದರು ಎಂದರು.
ಎಲ್ಲರ ಪ್ರೀತಿ ವಿಶ್ವಾಸವೇ ನನ್ನ ಆಸ್ತಿ ; ಪಿ.ರಾಮಯ್ಯ :
ನನ್ನ 45 ವರ್ಷಗಳ ಸುದೀರ್ಘ ಪತ್ರಿಕಾ ವೃತ್ತಿಯಲ್ಲಿ ಸಮಾಜದ ಎಲ್ಲ ವರ್ಗಗಳ ಪ್ರೀತಿ-ವಿಶ್ವಾಸ ಗಳಿಸಿರುವುದೇ ನನ್ನ ದೊಡ್ಡ ಆಸ್ತಿ ಎಂದು ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಹೇಳಿದರು.
ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾ ವಲಯದಲ್ಲಿ ಮರೆಯಲಾರದಂತಹ ಕ್ಷಣಗಳನ್ನು ನಾನು ಸಾಕಷ್ಟು ನೋಡಿದ್ದೇನೆ. ವಿಧಾನಸೌಧದ 4ನೆ ದರ್ಜೆ ನೌಕರನಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೂ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ. ಅದು ನಾನೆಂದೂ ಮರೆಯಲಾರದಂತಹ ಮತ್ತು ಸಂಪಾದಿಸಿದ ದೊಡ್ಡ ಆಸ್ತಿ ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಪತ್ರಿಕಾ ಕ್ಷೇತ್ರದಲ್ಲಿ ಹಲವರ ಜತೆ ಕೆಲಸ ಮಾಡಿದ್ದೇನೆ. ಅದರಂತೆಯೇ ಶಾಸಕಾಂಗದಲ್ಲೂ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಕೆಲಸ ಮಾಡುವ ಸದಾವಕಾಶ ಸಿಕ್ಕಿತ್ತು. ಅದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಹೇಳಿದರು.
ನಾನು ಕನ್ನಡದಲ್ಲಿ ಓದಿದ್ದರೂ ಕೂಡ ಆಂಗ್ಲ ಪತ್ರಿಕೋದ್ಯಮದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಇವರೆಲ್ಲರ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಪತ್ರಕರ್ತನಾಗಿ ನಾನು ಕೃಷಿ, ವಿಜ್ಞಾನ, ನ್ಯಾಯಾಂಗ, ತನಿಖಾ ವರದಿಗಳನ್ನು ಹೆಚ್ಚಾಗಿ ಮಾಡುತ್ತಿದ್ದೆ. ನನ್ನ ಪತ್ರಿಕೆಯ ಮುಖ್ಯಸ್ಥರಿಗೆ ಇಂತಹ ಅಸೈನ್‍ಮೆಂಟ್‍ಗಳನ್ನೇ ಹಾಕಿ ಎಂದು ಕೇಳಿಕೊಳ್ಳುತ್ತಿದ್ದೆ. ಇದು ನನಗೆ ಸಾಕಷ್ಟು ಕಲಿಸಿತು ಎಂದರು.
ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ತನಿಖಾ ಪತ್ರಿಕೋದ್ಯಮ ಎರಡನ್ನೂ ಸೇರಿಸಿ ಈ ಪುಸ್ತಕವನ್ನು ನಾನು ಬರೆದಿದ್ದೇನೆ. ಇದರಲ್ಲಿ ಕೆಲವು ಲೋಪದೋಷಗಳಿರಬಹುದು. ಅವುಗಳನ್ನು ಮನ್ನಿಸಬೇಕು. ಅನುಭವಗಳ ಬುತ್ತಿಯ ಈ ಕೃತಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ನನ್ನೆಲ್ಲ ಸ್ನೇಹಿತರನ್ನು ಇಲ್ಲಿ ನೋಡುತ್ತಿದ್ದೇನೆ. ಇದು ನಾನು ಜೀವವಿರುವವರೆಗೂ ಮರೆಯಲಾರದಂತಹ ಕ್ಷಣ ಎಂದರು.
ವಿದೇಶದಲ್ಲಿ ಪತ್ರಿಕೆ ಓದುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ಎಂಟು-ಹತ್ತು ಲಕ್ಷ ಪ್ರಸರಣ ಸಂಖ್ಯೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಒಂದು ಪತ್ರಿಕೆಯಲ್ಲಿ ಐದರಿಂದ ಆರು ಜನ ಓದುತ್ತಾರೆ. ಇದು ಬದಲಾಗಬೇಕು. ಪತ್ರಿಕೆಗಳನ್ನು ಹೆಚ್ಚಾಗಿ ಓದುವಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರಿಕೆಗಳ ಬೆಳವಣಿಗೆ ಕುರಿತ ಶಿಫಾರಸು ಅನುಷ್ಠಾನಕ್ಕೆ ಮನವಿ:
ಜಿಲ್ಲಾ ಹಾಗೂ ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗಿ ನೀಡಿರುವ ವರದಿಯನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಎಂದು ಹಿರಿಯ ಪತ್ರಕರ್ತ ಪಿ.ರಾಮಯ್ಯ ಸಿಎಂ ಬಳಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿರುವ ಸಣ್ಣ ಹಾಗೂ ಜಿಲ್ಲಾ ಪತ್ರಿಕೆಗಳು ತಾವಾಗಿಯೇ ಬೆಳೆಯಬೇಕು ಎಂಬುದಿದ್ದರೂ ಇದಕ್ಕೆ ಸರ್ಕಾರಗಳು ಕೂಡ ಪೂರಕವಾಗಿ ಸ್ಪಂದಿಸಬೇಕಿದೆ. ಈಗಾಗಲೇ ನೀಡಲಾಗಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ, ಕೃತಿಯ ಲೇಖಕ ಪಿ. ರಾಮಯ್ಯ, ಅಭಿಮಾನಿ ಪ್ರಕಾಶನದ ಟಿ. ವೆಂಕಟೇಶ್, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಬಿ. ದಿನೇಶ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.