ಬೆಂಗಳೂರು, ಅ.27 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇದೇ ನವೆಂಬರ್ 2, 3 ಹಾಗೂ 4 ರಂದು ಮೂರು ದಿನಗಳ ಕಾಲ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ(Global Investors Meet) ನಡೆಯಲಿದೆ. ಹೀಗಾಗಿ ದೇಶ- ವಿದೇಶಗಳ ಹೂಡಿಕೆದಾರರು ಆಗಮಿಸುವ ಹಿನ್ನಲೆಯಲ್ಲಿ ನಗರದ ರಸ್ತೆ, ಪಾದಚಾರಿ ಮಾರ್ಗ, ರೋಡ್ ಮೀಡಿಯನ್ ಗಳನ್ನು ಸುಸ್ಥಿತಿಯಲ್ಲಿಡಲು ಪಾಲಿಕೆ ನಿರ್ಧರಿಸಿದೆ.
ವಿವಿಧ ದೇಶಗಳ ಹೂಡಿಕೆದಾರರ ಮುಂದೆ ನಗರದ ಮಾನ ಕಾಪಾಡಲು ಬಿಬಿಎಂಪಿ ಅಧಿಕಾರಿಗಳು ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ತೀವ್ರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.
ಬೆಂಗಳೂರು ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣದ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಕೆಳಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ಪಾಲಿಕೆಯ 8 ವಲಯಗಳಲ್ಲೂ ವಲಯ ಆಯುಕ್ತರುಗಳ ನೇತೃತ್ವದಲ್ಲಿ ತೀವ್ರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅದರಂತೆ, ನಗರದಾದ್ಯಂತ ರಸ್ತೆಗಳ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ರಸ್ತೆ ಬದಿ ಬಿದ್ದಿರುವ ತ್ಯಾಜ್ಯ ಅಥವಾ ಕಟ್ಟಡ ಭಗ್ನಾವಶೇಷಗಳ ತೆರವುಗೊಳಿಸಲಾಗುತ್ತಿದೆ. ರಸ್ತೆ ಬದಿಯಿರುವ ಮರಗಳ ಕೊಂಬೆಗಳನ್ನು ಕಟಾವು ಮಾಡುವುದು, ಫ್ಲೆಕ್ಸ್ ಗಳ ತೆರವು, ಬೀದಿ ದೀಪಗಳನ್ನು ಸರಿಪಡಿಸುವುದು. ಪ್ರಮುಖ ರಸ್ತೆ ಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ಮೀಡಿಯನ್ ಗಳ ಅಭಿವೃದ್ಧಿಪಡಿಸಿ ಸುಂದರ ಸಸಿಗಳನ್ನು ನೆಡಲಾಗುತ್ತಿದೆ.
ಮುಖ್ಯ ಆಯುಕ್ತರಿಂದ ವಿವಿಧ ಸ್ಥಳಗಳ ಪರಿಶೀಲನೆ :
ಬಿಬಿಎಂಪಿಯ 8 ವಲಯ ಆಯುಕ್ತರುಗಳ ನೇತೃತ್ವದಲ್ಲಿ ಪ್ರತಿದಿನ ನಿಗದಿತ ಸ್ಥಳಗಳನ್ನು ಗುರುತಿಸಿಕೊಂಡು ತೀವ್ರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಪೈಕಿ ನಗರದ ಪೂರ್ವ ವಲಯದ ಹೆಬ್ಬಾಳ ರಸ್ತೆ, ಮೇಕ್ರಿ ವೃತ್ತ, ಜಯಮಹಲ್ ರಸ್ತೆ, ದಕ್ಷಿಣ ವಲಯದ ಬನಶಂಕರಿ ವೃತ್ತ, ಕನಕಪುರ ರಸ್ತೆ, ಬೊಮ್ಮನಹಳ್ಳಿ ವಲಯದ ಕನಕಪುರ ಮುಖ್ಯ ರಸ್ತೆ, ಚುಂಚನಘಟ್ಟ ಮುಖ್ಯ ರಸ್ತೆ ಹಾಗೂ ಕೋಣನಕುಂಟೆ ರಸ್ತೆಯ ವಿವಿಧ ಸ್ಥಳಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೇಲಿನ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರಸ್ತೆ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ, ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ ರಸ್ತೆ ಬದಿಯ ಚರಂಡಿಗಳ ಸ್ವಚ್ಛತೆ ಮಾಡಲು ನಿರ್ದೇಶನ ನೀಡಿದರು.
ಆಯಾ ವಲಯ ವ್ಯಾಪ್ತಿಯ ವಲಯ ಆಯುಕ್ತರು ವಲಯದ ತಂಡದ ಜೊತೆ ಪ್ರತಿನಿತ್ಯ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಬೇಕು. ಜೊತೆಗೆ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ರಸ್ತೆಗಳನ್ನು ಅಗೆದಿರುವ ಕಡೆ ಪಾಲಿಕೆ ಅಧಿಕಾರಿಗಳು ಸಮನ್ವಯ ಮಾಡಿಕೊಂಡು ಕೂಡಲೆ ದುರಸ್ತಿಪಡಿಸುವ ಕೆಲಸ ಮಾಡಲು ಸೂಚನೆ ನೀಡಿದರು.
ಆಡಳಿತಗಾರರು – ಮುಖ್ಯ ಆಯುಕ್ತರು ವಾರ್ಡ್ ರಸ್ತೆ ಗಮನಿಸಿಲ್ಲ ಏಕೆ?
ಬೆಂಗಳೂರಿನಲ್ಲಿ 90 ಸಾವಿರಕ್ಕೂ ಹೆಚ್ಚು ರಸ್ತೆಗಳಿದ್ದು ಬಹುತೇಕ ವಾರ್ಡ್ ಗಳ ರಸ್ತೆಗಳು ಕುಲಗೆಟ್ಟು ಕೂತಿವೆ. 243 ವಾರ್ಡ್ ಗಳ ಪೈಕಿ ಬಹುತೇಕ ರಸ್ತೆಗಳು ಹಾಳಾಗಿವೆ. ವಾರ್ಡ್ ರಸ್ತೆ ಅಭಿವೃದ್ಧಿಯಾಗದೆ ಬಹಳ ಕಾಲ ಆಗಿವೆ. ರಸ್ತೆ ಬದಿ ಕಸ ಹಾಕುವ ಪರಿಪಾಟಕ್ಕೆ ಲಗಾಮು ಬಿದ್ದಿಲ್ಲ. ಬೀದಿ ದೀಪ ಹಲವು ಕಡೆ ಹಾಳಾಗಿದೆ. ಇವುಗಳ ಬಗ್ಗೆ ಪಾಲಿಕೆ ಆಡಳಿತಗಾರರು, ಮುಖ್ಯ ಆಯುಕ್ತರು ಗಮನಹರಿಸಲು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡುತ್ತಿಲ್ಲ ಏಕೆ? ಎಂದು ನಗರದ ನಾಗರೀಕರು, ಕ್ಷೇಮಾಭಿವೃದ್ಧಿ ಸಂಘದವರು ಪ್ರಶ್ನಿಸುತ್ತಿದ್ದಾರೆ.
ಪ್ರಮುಖ ರಸ್ತೆ ವಿಭಜಕಗಳ ಅಭಿವೃದ್ಧಿ:
ಪಾಲಿಕೆ ತೋಟಗಾರಿಕೆ ವಿಭಾಗದಿಂದ ನಗರದ ಪ್ರಮುಖ ರಸ್ತೆ ಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ಮೀಡಿಯನ್ ಗಳ ಅಭಿವೃದ್ಧಿ ಹಾಗೂ ಸುಂದರ ಸಸಿಗಳನ್ನು ನಡೆಲಾಗುತ್ತಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅದರಂತೆ ಬಳ್ಳಾರಿ ರಸ್ತೆ, ಸಿ.ವಿ ರಾಮನ್ ರಸ್ತೆ, ಭಾಷ್ಯಂ ವೃತ್ತ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲುಸೇತುವೆ, ಜಯನಗರ ಮುಖ್ಯ ರಸ್ತೆ, ಪ್ಯಾಲೆಸ್ ರಸ್ತೆ, ರಾಜಾಜಿನಗರ ಮೇಲುಸೇತುವೆ, ಸುಭೇದಾರ್ ಚತ್ರಂ ರಸ್ತೆ, ಮೆಜೆಸ್ಟಿಕ್ ರಸ್ತೆ, ಕೆ.ಆರ್.ರಸ್ತೆ, ಮೈಸೂರು ಬ್ಯಾಂಕ್ ರಸ್ತೆ, ಜೆ.ಪಿ ನಗರ ರಸ್ತೆ, ಗೊರಗುಂಟೆಪಾಳ್ಯ ರಸ್ತೆ, ಜಕ್ಕೂರು ರಸ್ತೆ, ಜಿಕೆವಿಕೆ ರಸ್ತೆ, ಹೆಬ್ಬಾಳ-ಬಿಇಎಲ್ ರಸ್ತೆ, ಎಂಎಸ್ ಪಾಳ್ಯ ರಸ್ತೆ, ದೊಡ್ಡಬಳ್ಳಾಪುರ ಮಾರ್ಗದ ರಸ್ತೆ ಮಿಡಿಯನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಜಿಮ್ ಸಮಾವೇಶದ ನಂತರ ಬಯಲಾಗುವುದೇ ಪಾಲಿಕೆ ಬಂಡವಾಳ? :
ನಗರದ ಪ್ರಮುಖ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆ ಮಧ್ಯದ ರಸ್ತೆವಿಭಜಕ ಅಭಿವೃದ್ಧಿ ಪಡಿಸಿ ಗಡಿಬಿಡಿಯಲ್ಲಿ ಸಸಿಗಳನ್ನೇನೊ ಹಾಕಿದ್ದಾರೆ. ಬಂಡವಾಳ ಹೂಡಿಕೆದಾರರು ಓಡಾಡುವ ರಸ್ತೆಗಳಲ್ಲಿನ ರಸ್ತೆಗುಂಡಿ ಮುಚ್ಚುವ, ರಸ್ತೆಗೆ ಹೊಸದಾಗಿ ಡಾಂಬರು ಹಾಕುವ ಕೆಲಸ ಭರದಿಂದೇನೊ ಸಾಗಿದೆ. ರಸ್ತೆ ಬದಿಯ ಫುಟ್ ಪಾತ್ ಮೇಲಿನ ತ್ಯಾಜ್ಯ ಸಾಮೂಹಿಕ ಸ್ವಚ್ಛತೆಯಡಿ ಶುಚಿಗೊಳಿಸಲಾಗುತ್ತಿದೆ. ಆದರೆ ಬಂಡವಾಳ ಹೂಡಿಕೆದಾರ ಸಮಾವೇಶ ಮುಗಿಯುವ ತನಕ ನಿರ್ವಹಣೆಯಾಗಿ ಆನಂತರ ಇವುಗಳ ಪರಿಸ್ಥಿತಿ ಏನಾಗುವುದೋ ಎಂದು ನಾಗರೀಕರು ಮಾತನಾಡುತ್ತಿದ್ದಾರೆ.