ಬೆಂಗಳೂರು, ಅ.25 www.bengaluruwire.com : ಭಾರತೀಯ ಸೇನೆಯ ಫಿರಂಗಿ ಶಸ್ತ್ರಾಸ್ತ್ರ ಕೇಂದ್ರ ತನ್ನ 60 ವರ್ಷಗಳ ಆಚರಣೆ ಹಾಗೂ ಭಾರತೀಯ ಸೇನೆಯ ಯೋಧರು ಮತ್ತು ಅವರ ಅವಲಂಬಿತರ ಸೇವೆಯ ಸ್ಮರಣಾರ್ಥವಾಗಿ ಹೈದರಾಬಾದ್‌ನಿಂದ ಧನುಷ್ಕೋಟಿಗೆ 3,000 ಕಿಮೀ ದೂರದ ಮೋಟಾರ್ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದ್ದ ತಂಡ ಸೋಮವಾರ ನಗರಕ್ಕೆ ಆಗಮಿಸಿತು.
ಕಮಾಂಡೆಂಟ್ ಸಿಎಂಪಿ ಸೆಂಟರ್ ಮತ್ತು ಶಾಲೆಯ ಬ್ರಿಗೇಡಿಯರ್ ಜೋಸ್ ಅಬ್ರಹಾಂ ತಂಡದ ನೇತೃತ್ವವಹಿಸಿದ್ದು, ಈ ಸಂದರ್ಭದಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪೋಷಕರು ಅವರನ್ನು ಇಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಅಲ್ಲದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಟ್ರಸ್ಟ್‌ಗೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಮೋಟಾರ್ ಸೈಕಲ್ ಯಾತ್ರೆಯ ಸಮಯದಲ್ಲಿ 12 ಸದಸ್ಯರ ತಂಡವು ಸೇನೆ ಸೇರುವ ಆಸಕ್ತಿಯುಳ್ಳ ಯುವಕರಿಗೆ ಅಗ್ನಿಪಥ್ ನೇಮಕಾತಿ ಯೋಜನೆ, ರಸ್ತೆ ಸುರಕ್ಷತೆ ಹಾಗೂ ಭಾರತೀಯ ಸೇನೆಯ ಬಗ್ಗೆ ಅರಿವು ಮೂಡಿಸುತ್ತದೆ. ವೀರ ನಾರಿಯರು, ಯುದ್ಧ ಯೋಧರು ಮತ್ತು ಮಾಜಿ ಸೈನಿಕರನ್ನು ಭೇಟಿ ಮಾಡಿ ಅವರನ್ನು ಅಭಿನಂದಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿನ ನಾಗರೀಕರಲ್ಲಿ ದೇಶದ ಏಕತೆ ಮತ್ತು ಭ್ರಾತೃತ್ವ ಕುರಿತಂತೆ ಅರಿವು ಮೂಡಿಸಲಿದೆ.
ಹೈದರಾಬಾದ್ ನಲ್ಲಿರುವ ಆರ್ಟಿಲರಿ ಸೆಂಟರ್ ಭಾರತೀಯ ಸೇನೆಯ ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಒಂದಾಗಿದೆ. ಈ ಕೇಂದ್ರವು ತೆಲಂಗಾಣ ರಾಜ್ಯದ ಗೋಲ್ಕೊಂಡ ಕೋಟೆಯ ಬಳಿ ಹೈದರಾಬಾದ್ ನಲ್ಲಿದ್ದು, ಈ ಕೇಂದ್ರದಲ್ಲಿ ಫಿರಂಗಿದಳ ರೆಜಿಮೆಂಟ್‌ನ ಅಡಿ ನೇಮಕಾತಿಗೊಂಡವರಿಗೆ ತರಬೇತಿ ನೀಡಲಾಗುತ್ತದೆ.