ಚಾಮರಾಜನಗರ, ಅ.23 www.bengaluruwire.com : ತನಗೊಂದು ನೆಲೆ ಕಲ್ಪಿಸಬೇಕೆಂದು ಮನವಿ ಮಾಡಲು ಬಂದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ನಿವೇಶನದ ಹಕ್ಕುಪತ್ರ ಸಿಗದೇ ಬೇಸರಗೊಂಡಿದ್ದ ಮಹಿಳೆ ಕೆಂಪಮ್ಮ ಎಂಬುವರು ಏರುಧ್ವನಿಯಲ್ಲಿ ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ಸಚಿವ ಸೋಮಣ್ಣ ಅವರನ್ನು ಕೇಳಿದರು. ಆ ಸಂದರ್ಭದಲ್ಲಿ ಕೋಪಗೊಂಡ ಸಚಿವರು ಮಹಿಳೆ ಕಪಾಳಕ್ಕೆ ಬಾರಿಸಿದರು. ಹೀಗೆ ಕೆನ್ನಗೆ ಹೊಡೆಸಿಕೊಂಡ ಮಹಿಳೆ ಸಚಿವರ ಕಾಲಿಗೆ ಬಿದ್ದು ಸಮಸ್ಯೆ ಬಗ್ಗೆ ವಿವರಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಕುರಿತಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಬ್ಬರು (@arjundsage1)ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪಲೋಡ್ ಮಾಡಿದ್ದಾರೆ. ಆ ಟ್ವಿಟರ್ ಸಂದೇಶದಲ್ಲಿ ‘ಬಿಜೆಪಿ ಕರ್ನಾಟಕದ ಸಂಸ್ಕಾರಿ ಸಚಿವ ಸೋಮಣ್ಣ ತಮ್ಮ ಬಳಿ ಸಹಾಯ ಕೇಳಲು ಬಂದ ಮಹಿಳೆಗೆ ಹಲ್ಲೆ ನಡೆಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಸಚಿವರ ಆಪ್ತರಿಂದ ಕಪಾಳಮೋಕ್ಷವಾಗದ ಬಗ್ಗೆ ಸ್ಫಷ್ಟನೆ :
ಸಚಿವರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ತಾಪಕವಾಗಿ ವೈರಲ್ ಆಗಿದ್ದು ಸಚಿವರ ವಿರುದ್ದ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಈ ಬಗ್ಗೆ ಸಚಿವ ಸೋಮಣ್ಣ ಕಡೆಯವರಿಂದ ಸ್ಪಷ್ಟನೆ ಲಭಿಸಿದ್ದು, ‘ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಂಡು ಕಾಲಿಗೆ ಬೀಳಲು ಮುಂದಾದಾಗ ಅವರನ್ನು ತಡೆಯುವ ಸಂದರ್ಭದಲ್ಲಿ ಮಹಿಳೆ ಕೆನ್ನಗೆ ಕೈ ತಗುಲಿದೆ. ಅವರು ಮಹಿಳೆಗೆ ಕಪಾಳಮೋಕ್ಷ ಮಾಡಿಲ್ಲ’ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ. ಆದರೆ ಸಚಿವರನ್ನು ಈ ಬಗ್ಗೆ ಸ್ಪಷ್ಟನೆ ಕೇಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸಚಿವರು ಕೆನ್ನೆಗೆ ಹೊಡೆದಿಲ್ಲ ಎಂದು ಹೇಳಿಕೆ ನೀಡಿರುವ ಮಹಿಳೆ :
ಈ ಕುರಿತಂತೆ ಸಚಿವರಿಂದ ಕೆನ್ನಗೆ ಹೊಡೆಸಿಕೊಂಡರೆಂದು ಹೇಳಲಾದ ಮಹಿಳೆಯು ಸ್ವತಃ ವಿಡಿಯೋವೊಂದರಲ್ಲಿ, ‘ಹಂಗಳ ಗ್ರಾಮದಲ್ಲಿ ಫಂಕ್ಷನ್ ಗೆ ಬಂದಿದ್ದೆ ಸಾರ್. ಅಲ್ಲಿ ಹೋಗಿ ಎಲ್ಲಾ ಕೇಳ್ತಿದ್ದೆ ಸರ್. ನಾನು ತುಂಬಾ ಬಡವಿ. ಸಹಾಯ ಮಾಡಿ. ಜಾಗ ಕೊಡಿ ಅಂತ ಕಾಲಿಗೆ ಬಿದ್ದೆ ಸರ್. ಕಾಲಿಗೆ ಬಿದ್ದಾಗ ಅವರು, ನೀನು ಕಾಲಿಗೆ ಬೀಳಬೇಡ ಅಂತ ಹೇಳಿ ನನ್ನ ಎತ್ತಿ ಸಮಾಧಾನ ಮಾಡಿದ್ರು. ಸಮಾಧಾನ ಮಾಡೋಕೆ ಬಂದ ಅವರನ್ನು ಕಪಾಳಕ್ಕೆ ಹೊಡೆದರು ಅಂತ ಅವರ ಮೇಲೆ ತಪ್ಪು ಆಪಾದನೆ ಹೊರೆಸಿದ್ದಾರೆ. ಅಂತದ್ದೇನಿಲ್ಲ. ನನಗೆ ಒಳ್ಳೇದು ಮಾಡಿದ್ದಾರೆ. ಪುಣ್ಯಾತ್ಮ ನನಗೆ ಜಾಗ ಕೊಡಿಸಿದ್ದಾರೆ. ನಾಲ್ಕು ಸಾವಿರ ಕೊಟ್ಟಿದ್ದನ್ನ ನನಗೆ ವಾಪಸ್ ಕೊಡಿಸಿದ್ದಾರೆ. ನನ್ನ ಮಕ್ಕಳಿಗೆ ದಾರಿ ಮಾಡಿಕೊಟ್ಟಿದ್ದಾರೆ.’ ಎಂದು ಹೇಳಿಕೆ ನೀಡಿರುವುದು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಈ ನಡುವೆ ಮಹಿಳೆ ಮೇಲೆ ಹಲ್ಲೆ ಮಾಡಿರುವ ಸಚಿವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸಿದ್ದಾರೆ.