ಬೆಂಗಳೂರು, ಅ.21 www.bengaluruwire.com : ಪ್ರಧಾನಿ ನರೇಂದ್ರ ಮೋದಿಯವರ ಹಳ್ಳಿ ಹಳ್ಳಿಗಳಲ್ಲಿ ಡಿಜಿಟಲ್ ನೆಟ್ ವರ್ಕ್ ಸ್ಥಾಪಿಸಿ ದೇಶವನ್ನು ಸಬಲಗೊಳಿಸುವ ಡಿಜಿಟಲ್ ಇಂಡಿಯಾ ಕನಸನ್ನು ರಾಜ್ಯ ಸರ್ಕಾರ ಮಣ್ಣುಪಾಲು ಮಾಡಿರುವುದು 2022ರ ಮಹಾಲೆಕ್ಕಪರಿಶೋಧಕ(CAG)ರ ವರದಿಯಿಂದ ಬಹಿರಂಗಗೊಂಡಿದೆ.
ರಾಜ್ಯದ 2,650 ಗ್ರಾಮ ಪಂಚಾಯಿತಿಗಳಲ್ಲಿ ವೈ-ಫೈ ಹಾಟ್ ಸ್ಪಾಟ್ ಮೂಲಕ ಇಂಟರ್ ನೆಟ್ ಸೌಲಭ್ಯ ಕಲ್ಪಿಸುವ ಆಶಯಕ್ಕೆ ಕಿಯೋನಿಕ್ಸ್ ಮತ್ತು ಐಸಿಟಿ ಕೌಶಲ್ಯಾಭಿವೃದಧಿ ಸೊಸೈಟಿಗಳ ಅಸಮರ್ಪಕ ಯೋಜನೆ ಕಾರ್ಯಗತಗೊಳಿಸಿದ್ದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 29.58 ಕೋಟಿ ರೂ. ನಷ್ಟವಾಯಿತು. ಅಲ್ಲದೆ ಎರಡೂ ಸಂಸ್ಥೆಗಳ ಪ್ರಕರಣದಲ್ಲಿ ವೈ-ಫೈ ಯೋಜನೆಯನ್ನು ಮೊದಲ ವರ್ಷದ ಕಾರ್ಯಾಚರಣೆಯ ನಂತರ ಕೈಬಿಡಲಾಯಿತು ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ಈ ದಾಖಲೆಗಳು ‘ಬೆಂಗಳೂರು ವೈರ್’ ಗೆ ಲಭ್ಯವಾಗಿದೆ.
ರಾಜ್ಯ ಸರ್ಕಾರದ ಉದ್ಯಮವಾದ ಕಿಯೋನಿಕ್ಸ್ 500 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಐಸಿಟಿ ಕೌಶಲ್ಯಾಭಿವೃದ್ಧಿ ಸೊಸೈಟಿ 2,150 ಗ್ರಾಮ ಪಂಚಾಯಿತಿಗಳಲ್ಲಿ ವೈ-ಫೈ ಹಾಟ್ ಸ್ಪಾಟ್ ಅನ್ನು ಸ್ಥಾಪಿಸಲು ಸರ್ಕಾರವು ಅನುಮೋದನೆ ನೀಡಿತ್ತು. ಆದರೆ ಈ ಯೋಜನೆಯ ಪ್ರಾರಂಭದಿಂದ ಆ ಯೋಜನೆ ಏಕಾಏಕಿ ನಿಂತು ವಿಫಲವಾಗುವ ತನಕ ಪ್ರತಿಯೊಂದು ಹಂತದಲ್ಲೂ ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸದ ಕಾರಣ ಹಾಗೂ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡದ ಕಾರಣ ಸಂಪೂರ್ಣ ಯೋಜನೆಯು ನೆಲಕಚ್ಚಿತು. ಅಲ್ಲದೆ ಗ್ರಾಮೀಣ ಭಾಗದಲ್ಲಿ ವೈ-ಫೈ ಹಾಟ್ ಸ್ಪಾಟ್ ಮೂಲಕ ಇಂಟರ್ ನೆಟ್ ಅಳವಡಿಸುವ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ರಾಜ್ಯದಲ್ಲಿ ಹಿನ್ನಡೆಯಾಗಿರುವುದನ್ನು ಆಡಿಟ್ ರಿಪೋರ್ಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ವೈ-ಫೈ ಹಾಟ್ ಸ್ಪಾಟ್ ಸೌಲಭ್ಯ ಕಲ್ಪಿಸುವ ಯೋಜನೆಗೆ ಮೂರು ವರ್ಷಗಳವರೆಗೆ ರಾಜ್ಯ ಸರ್ಕಾರವು ಕಾರ್ಯಸಾಧ್ಯತೆಯ ಅಂತರದ ಹಣಕಾಸು ಒದಗಿಸುವಿಕೆ (VGF)ಗಾಗಿ ಆಯವ್ಯಯ ಬೆಂಬಲವಾಗಿ ಮೊದಲ ವರ್ಷ 50.50 ಕೋಟಿ ರೂ., ಎರಡನೇ ವರ್ಷ 26.50 ಕೋಟಿ ರೂ. ಹಾಗೂ ಮೂರನೇ ವರ್ಷದಲ್ಲಿ 2.50 ಕೋಟಿ ರೂ. ಸೇರಿದಂತೆ ಒಟ್ಟು 79.50 ಕೋಟಿ ರೂ. ಹಣವನ್ನು ಕೊಡುಗೆಯಾಗಿ ಈ ಯೋಜನೆಗೆ ಕೊಡಬೇಕಿತ್ತು. ವರ್ಷಕ್ಕೆ 62.50 ಕೋಟಿ ರೂ. ಯೋಜನಾ ವೆಚ್ಚವಾಗುತ್ತದೆಂದು ಲೆಕ್ಕ ಹಾಕಲಾಗಿತ್ತು. ಈ ಹಣವನ್ನು ವೈ-ಫೈ ಹಾಟ್ ಸ್ಪಾಟ್ ಸೇವೆ ಒದಗಿಸಿ ಅದರಿಂದ ಬರುವ ಆದಾಯದಿಂದ ಕ್ರಮೇಣ ಸರಿದೂಗಿಸಿ ಆ ಮೂಲಕ ಚಂದಾದಾರರ ಸಂಖ್ಯೆ ಹೆಚ್ಚಳದ ಆಧಾರದ ಮೇಲೆ ನಾಲ್ಕನೇ ವರ್ಷಕ್ಕೆ ಸ್ವಾವಲಂಬನೆ ಸಾಧಿಸಬೇಕಿತ್ತು. ಆದರೆ ಅಸಮರ್ಪಕವಾಗಿ ಯೋಜನೆ ರೂಪಿಸಿದ್ದರಿಂದ ಉದ್ದೇಶವೇ ವಿಫಲವಾಯಿತು.
ವೈ-ಫೈ ಹಾಟ್ ಸ್ಪಾಟ್ ಸೌಲಭ್ಯ ಒದಗಿಸುವ ಯೋಜನೆ ಜಾರಿಗಾಗಿ ಕಿಯೋನಿಕ್ಸ್ ಸಂಸ್ಥೆಯು ಕೇಂದ್ರ ಸರ್ಕಾರದ ಉದ್ಯಮವಾದ ಬಿಎಸ್ ಎನ್ ಎಲ್ (BSNL) ಅನ್ನು ಆಯ್ದುಕೊಂಡಿತ್ತು. ಅಲ್ಲದೆ ವೈ-ಫೈ ಹಾಟ್ ಸ್ಪಾಟ್ ಸೌಲಭ್ಯ ಕಲ್ಪಿಸಲು ವೈರ್ ಲೆಸ್ ಸಲ್ಯೂಷನ್ಸ್ ಐಎನ್ ಸಿಯನ್ನು ಚಾನಲ್ ಪಾಲುದರಾರರನ್ನಾಗಿ ಮಾಡಿಕೊಂಡಿತ್ತು. ಇನ್ನು 2,150 ಗ್ರಾಮ ಪಂಚಾಯಿತಿಗಳನ್ನು ವೈ-ಫೈ ಹಾಟ್ ಸ್ಪಾಟ್ ಸೌಲಭ್ಯ ಕಲ್ಪಿಸಲು ಐಸಿಟಿ ಕೌಶಲ್ಯಾಭಿವೃದ್ಧಿ ಸೊಸೈಟಿಯು ಯೋಜನೆ ಜಾರಿಗಾಗಿ ಸಿಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ (CSC) ತನ್ನ ಸೇವಾ ಪೂರೈಕೆದಾರರನ್ನಾಗಿ ಆಯ್ದು ಕೊಂಡಿತ್ತು.
ವೈ-ಫೈ ಲೈವ್ ಎಂಬುದು ಬರೀ ಬಾಯಿಮಾತಿಗಷ್ಟೆ :
ಬಿಎಸ್ ಎನ್ ಎಲ್ ಪ್ರಕರಣದಲ್ಲಿ ವೈ-ಫೈ ಹಾಟ್ ಸ್ಪಾಟ್ ಕಲ್ಪಿಸಲು ಹಾಕಲಾಗಿದ್ದ ಮೂಲಸೌಕರ್ಯವನ್ನೇ ತೆಗೆದು ಹಾಕಲಾಗಿತ್ತು. ಈ ಯೋಜನೆ ಕಾರ್ಯಗತಗೊಳಿಸಲು ಒಪ್ಪಂದದ ಪ್ರಕಾರ 14.75 ಕೋಟಿ ರೂ. ಮೊತ್ತಕ್ಕೆ ಬಿಎಸ್ ಎನ್ ಎಲ್ 2019ರ ಜನವರಿ 19ರಂದು ಹಕ್ಕು ಮಂಡಿಸಿದ್ದರೂ 10.10 ಕೋಟಿ ರೂ. ಹಣವನ್ನು ಮಾತ್ರ ಪಾವತಿಸಲಾಗಿದೆ. ಇನ್ನು ಸಿಎಸ್ ಸಿ ಪ್ರಕರಣದಲ್ಲಿ 2018ರ ಸೆಪ್ಟೆಂಬರ್ 5ರಲ್ಲಿದ್ದಂತೆ 1,782 ಗ್ರಾಮ ಪಂಚಾಯಿತಿಗಳಲ್ಲಿ ವೈ-ಫೈ ಹಾಟ್ ಸ್ಪಾಟ್ ಲೈವ್ ಆಗಿತ್ತು ಎಂದು ಹೇಳಲಾಗಿತ್ತು. ಆದರೂ ಲೈವ್ ಆದ ಗ್ರಾಮ ಪಂಚಾಯಿತಿಗಳ ಸ್ಥಿತಿಯ ಬಗ್ಗೆ ದಾಖಲೆಗಳು ಲಭ್ಯವಿರಲಿಲ್ಲ ಎಂದಿರುವ ಭಾರತೀಯ ಲೆಕ್ಕಪರಿಶೋಧಕರು, ಸಿಎಸ್ ಸಿ ಸಂಸ್ಥೆಗೆ 2017ರ ಡಿಸೆಂಬರ್ ನಿಂದ 2019ರ ಫೆಬ್ರವರಿ ತನಕ ಒಟ್ಟಾರೆ 19.48 ಕೋಟಿ ರೂ.ಗಳನ್ನು ಪಾವತಿಸಲಾಗಿತ್ತು. ಒಟ್ಟಾರೆ ಎರಡು ಪ್ರಕರಣಗಳಲ್ಲಿ 29.58 ಕೋಟಿ ರೂ.ಗಳನ್ನು ವ್ಯರ್ಥವಾಗಿ ಕರ್ಚು ಮಾಡಲಾಗಿದೆ ಎಂದು ತಿಳಿಸಿದೆ.
ಯೋಜನೆಗೆ ಅಸಮರ್ಪಕವಾಗುವುದಕ್ಕೆ ಕಾರಣಗಳೇನು?
ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಂಶಗಳೇನು?
ಲೆಕ್ಕಪರಿಶೋಧನೆಯಲ್ಲಿ ಯೋಜನೆಗಾಗಿ ಗ್ರಾಮ ಪಂಚಾಯಿತಿಗಳ ಆರ್ಥಿಕ ಕಾರ್ಯಾ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳದೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದಲ್ಲದೆ ಸರ್ಕಾರವು ನಿಗಧಿಪಡಿಸಿದ್ದರೂ ಬಿಎಸ್ ಎನ್ ಎಲ್ ಮತ್ತು ಸಿಎಸ್ ಸಿ ಸಂಸ್ಥೆಗಳೊಂದಿಗೆ ಕಿಯೋನಿಕ್ಸ್ ಹಾಗೂ ಐಸಿಟಿ ಕೌಶಲ್ಯಾಭಿವೃದಧಿ ಸೊಸೈಟಿ ವಿವರವಾದ ಸೇವಾ ಮಟ್ಟದ ಒಪ್ಪಂದ (SLA)ವನ್ನು ಮಾಡಿಕೊಂಡಿರಲಿಲ್ಲ. ಇದರಿಂದ ಎಷ್ಟು ಸಮಯದೊಳಗೆ ಯೋಜನೆ ಪೂರ್ಣಗೊಳಿಸಬೇಕು, ಹಣ ಪಾವತಿ ವೇಳಪಟ್ಟಿ, ಮೇಲ್ವಿಚಾರಣಾ ವರದಿಗಳು, ಒಂದೊಮ್ಮೆ ಯೋಜನೆ ಸೂಕ್ತ ರೀತಿ ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಷರತ್ತುಗಳು, ಭದ್ರತೆ ಇತ್ಯಾದಿಗಳ ಯಾವುದೇ ಸ್ಪಷ್ಟತೆ ಇರಲಿಲ್ಲ.
ಕಳಪೆ ಯೋಜನೆ ರೂಪಿಸಿದ ಕಾರಣ ಕೋಟ್ಯಾಂತರ ರೂ. ನಷ್ಟ :
ವಿವರವಾದ ಸೇವಾ ಮಟ್ಟದ ಒಪ್ಪಂದ ಇಲ್ಲದ ಕಾರಣ ಸೇವಾ ಪೂರೈಕೆದಾರರಾದ ಬಿಎಸ್ ಎನ್ ಎಲ್ ಮತ್ತು ಸಿಎಸ್ ಸಿ ಸಂಸ್ಥೆಗಳ ಜೊತೆ ಪತ್ರ ವ್ಯವಹಾರ ಮತ್ತು ವಿವಾದಗಳ ಸರಣಿಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿಲ್ಲ. ಇದರಿಂದಾಗಿ ಸೇವಾ ಪೂರೈಕೆದಾರರೊಂದಿಗಿನ ಸಂಬಂಧದಲ್ಲಿ ಘರ್ಷಣೆಗಳಾಗಿ ಮತ್ತು ಅವರ ವ್ಯಾಪಾರದ ಕಾರ್ಯಾ ಸಾಧ್ಯತೆಯ ಕೊರತೆಯಿಂದಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ಅಂತ್ಯಗೊಳಿಸಿದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಯಿತು ಎಂದು ಸಿಎಜಿಯು ಸರ್ಕಾರದ ನೀಡಿರುವ ಅನುಪಾಲನಾ ವರದಿ ಮೇಲೆ ಕೈಗೊಂಡ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿದೆ.
ಅಲ್ಲದೇ ಸರ್ಕಾರವೂ ಕೂಡ ವೈ-ಫೈ ಹಾಟ್ ಸ್ಪಾಟ್ ಯೋಜನೆಗೆ ಅನುಮೋದನೆ ನೀಡುವ ಮುನ್ನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಕಿಯೋನಿಕ್ಸ್ ಸಂಸ್ಥೆಯಿಂದ ಪ್ರಾಯೋಗಿಕ ಅಧ್ಯಯನವನ್ನು ನಡೆಸುವಂತೆ ಒತ್ತಾಯಿಸಿರಲಿಲ್ಲ. ಹೀಗಾಗಿ ಸರಿಯಾದ ಕಾರ್ಯ ಸಾಧ್ಯತೆಯ ಅಧ್ಯಯನ ನಡೆಸದೆ ಮತ್ತು ವಿವರವಾದ ಷರತ್ತುಗಳ ಒಪ್ಪಂದಗಳಿಲ್ಲದೆ ಗ್ರಾಮ ಪಂಚಾಯಿತಿಗಳಲ್ಲಿ ವೈ-ಫೈ ಒದಗಿಸುವ ಕಳಪೆಯಾಗಿ ರೂಪಿಸಿದ ಯೋಜನೆಯಿಂದ ಬೊಕ್ಕಸಕ್ಕೆ ಸರ್ಕಾರಕ್ಕೆ ಕೋಟ್ಯಾಂತರ ರೂ. ಹಣ ವ್ಯರ್ಥವಾಯಿತು. ಒಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ರಾಜ್ಯದಲ್ಲಿ ಹಿನ್ನಡೆಯಾಗಿರುವುದು ಈ ಸಿಎಜಿ ವರದಿಯಿಂದ ಬಹಿರಂಗವಾಗಿದೆ. ಸರ್ಕಾರಕ್ಕೆ ಯೋಜನೆ ಜಾರಿಗೆ ತೋರುವ ಆಸಕ್ತಿ ಅದನ್ನು ಅನುಷ್ಠಾನ ಮಾಡುವುದರಲ್ಲಿ ಇರಲ್ಲ ಎಂಬುದಕ್ಕೆ ಇದೊಂದು ನಿದರ್ಶನವಷ್ಟೆ.