ಮೈಸೂರು, ಅ.21 www.bengaluruwire.com : ಭಾರೀ ಮಳೆಗೆ ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದೆ. ಘಟನೆಯ ಸಂದರ್ಭದಲ್ಲಿ ಕೂದಲೆಳೆ ಅಂತರದಲ್ಲಿ ಇಬ್ಬರು ಅಧ್ಯಾಪಕರು ಪಾರಾಗಿದ್ದಾರೆ.
ಮೈಸೂರಿನ ಮಹಾರಾಣಿ ಪದವಿ ಕಾಲೇಜು ಕಟ್ಟಡದ ರಸಾಯನ ವಿಜ್ಞಾನದ ಪ್ರಯೋಗಾಲಯದ ಎರಡು ಲ್ಯಾಬ್ ಗಳು ಕುಸಿದಿದೆ. ಘಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರೀ ದುರಂತ ತಪ್ಪಿದೆ. ಕುಸಿದು ಬಿದ್ದ ಕಟ್ಟಡದ ಕೆಳಗೆ ಯಾರೂ ಇಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದಾರೆ. ಕಾಲೇಜಿನ ಇತರೆ ಕಟ್ಟಡ ಕೂಡ ಇದೇ ಪರಿಸ್ಥಿತಿ ಇದ್ದು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಗಳು 10.30ರ ವೇಳೆಗೆ ಬರಬೇಕಾಗಿತ್ತು. ಈ ಸಂದರ್ಭದಲ್ಲಿ ಕಟ್ಟಡದಲ್ಲಿ ಬಿರುಕು ಮೂಡಿದ್ದನ್ನು ಗಮನಿಸಿದ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ ಸುಮಾರು 10.15ರ ವೇಳೆ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಕೂಡಲೇ ಕೊಠಡಿಗೆ ಬಂದ ಪ್ರಾಂಶುಪಾಲ ಡಾ.ಡಿ.ರವಿ ಅವರು ಕೊಠಡಿಗೆ ಬೀಗ ಹಾಕಿಸಿದ್ದಲ್ಲದೆ, ಎಲೆಕ್ಟ್ರಿಕ್ ಸಂಪರ್ಕವನ್ನು ಕಡಿತಗೊಳಿಸಿ ಕಟ್ಟಡದ ಒಳಗೆ ಯಾರೂ ಪ್ರವೇಶಿಸದಂತೆ ಸೂಚನೆ ನೀಡಿದ್ದಾರೆ.
ಇದರಿಂದ ಕಟ್ಟಡ ಕುಸಿತವಾದ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕುಸಿದು ಬಿದ್ದ ಕಟ್ಟಡದ ಕೆಳಗೆ ಯಾರೂ ಇಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದಾರೆ.